ADVERTISEMENT

ವಿಶ್ಲೇಷಣೆ | ದೆಹಲಿ ಮತದಾರರ ಚಿತ್ತ ಎತ್ತ?

ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ

ಬಿ.ಎಸ್‌.ಅರುಣ್‌
Published 27 ಜನವರಿ 2025, 22:30 IST
Last Updated 27 ಜನವರಿ 2025, 22:30 IST
   

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂದಿನ ತಿಂಗಳ 5ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಜಯ ಗಳಿಸಬೇಕು ಎಂಬ ಗುರಿಯೊಂದಿಗೆ ಬಿಜೆಪಿ ಹಾಗೂ ಆಮ್‌ ಆದ್ಮಿ ಪಕ್ಷ (ಎಎಪಿ)‌ ಭಾರಿ ಪ್ರಯತ್ನ ನಡೆಸಿವೆ. ಎಎಪಿ ಈ ಹಣಾಹಣಿಯನ್ನು ಒಂದು ರೀತಿಯ ‘ಮಾಡು ಇಲ್ಲವೆ ಮಡಿ’ ಕದನವಾಗಿ ಪರಿಗಣಿಸಿದಂತಿದೆ. ಎಲ್ಲ ಚುನಾವಣೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಬಿಜೆಪಿ, 27 ವರ್ಷಗಳ ನಂತರ ಈ ಬಾರಿಯಾದರೂ ಇಲ್ಲಿ ಗೆಲ್ಲಬೇಕು ಎಂದು ಜಿದ್ದಿಗೆ ಬಿದ್ದಿದೆ.

ಅಂತೆಯೇ, ಈ ಚುನಾವಣೆಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಜೆಪಿ ಹಾಗೂ ಎಎಪಿ ನಡುವಿನ ತೀವ್ರ ಪೈಪೋಟಿಯ ನಡುವೆ ಯಾರು ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ? ಎಎಪಿ ಸತತ ಮೂರನೇ ಬಾರಿಗೆ ಭಾರಿ ಬಹುಮತದಿಂದ ಗೆಲುವು ಸಾಧಿಸುವುದೇ? ಈ ಹಿಂದಿನ ಎರಡು ಸಲವೂ ಖಾತೆ ತೆರೆಯುವುದಕ್ಕೂ ಸಾಧ್ಯವಾಗದಿದ್ದ ಕಾಂಗ್ರೆಸ್‌ಗೆ ಈ ಬಾರಿ ಬೆರೆಳಣಿಕೆಯಷ್ಟಾದರೂ ಸ್ಥಾನ ಸಿಗಬಹುದೇ? ಕಾಂಗ್ರೆಸ್‌ ನಿರೀಕ್ಷೆಗಿಂತಲೂ ಹೆಚ್ಚು ಮತ ಗಳಿಸಿ, ಎಎಪಿಯ ಗೆಲುವಿನ ಸಾಧ್ಯತೆಗಳಿಗೆ ಆ ಮೂಲಕ ತೊಡರುಗಾಲಾಗಿ ಪರಿಣಮಿಸುವುದೇ? ನವದೆಹಲಿ ಕ್ಷೇತ್ರದಲ್ಲಿ ತಮ್ಮ ಜನಪ್ರಿಯತೆಯನ್ನು ಪಣಕಿಟ್ಟಿರುವ ಎಎಪಿ ನೇತಾರ ಅರವಿಂದ ಕೇಜ್ರಿವಾಲ್‌ ಅವರು ನಾಲ್ಕನೇ ಬಾರಿಯೂ ಗೆಲುವಿನ ಪತಾಕೆ ಹಾರಿಸುವರೇ? ಒಂದಾದರ ಮೇಲೊಂದರಂತೆ ಎಲ್ಲಾ ಪಕ್ಷಗಳೂ ನೀಡಿರುವ ಭರವಸೆಗಳ ಮಹಾಪೂರವನ್ನು ಮತದಾರ ನಂಬುತ್ತಾನೆಯೇ ಅಥವಾ ಉಚಿತ ವಿದ್ಯುತ್‌, ಮಹಿಳೆಯರಿಗೆ ಬಸ್‌ ಹಾಗೂ ಮೆಟ್ರೊದಲ್ಲಿ ಉಚಿತ ಪ್ರಯಾಣ, ಮೊಹಲ್ಲಾ ಕ್ಲಿನಿಕ್‌, ಗುಣಮಟ್ಟದ ಶಾಲೆಗಳನ್ನು ದೆಹಲಿ ನಿವಾಸಿಗಳಿಗೆ ಕೊಟ್ಟಿರುವ ಆಮ್‌ ಆದ್ಮಿ ಪಕ್ಷವನ್ನು ಪುನಃ ಜನ ಕೈಹಿಡಿಯುವರೇ? 

ಈ ಹಿಂದಿನ ಕೆಲವು ಚುನಾವಣೆಗಳ ಅಂಕಿ-ಅಂಶಗಳನ್ನು ಗಮನಿಸಿದರೆ ದೆಹಲಿಯ ಮತದಾರ ಎಷ್ಟು ಪ್ರಬುದ್ಧ ಎಂದು ಗೊತ್ತಾಗುತ್ತದೆ. 2014, 2019 ಹಾಗೂ 2024ರ ಲೋಕಸಭೆ ಚುನಾವಣೆಗಳಲ್ಲಿ ದೆಹಲಿಯ ಎಲ್ಲಾ 7 ಸ್ಥಾನಗಳನ್ನು ಗೆದ್ದ ಬಿಜೆಪಿ, 2015 ಹಾಗೂ 2020ರಲ್ಲಿ ಕೇವಲ 7-8 ತಿಂಗಳ ಅಂತರದಲ್ಲಿ ನಡೆದ ವಿಧಾನಸಭೆ ಹಣಾಹಣಿಯಲ್ಲಿ ಹೀನಾಯ ಸೋಲು ಅನುಭವಿಸಿತು. ಭಾರಿ ಹುಮ್ಮಸ್ಸಿನಲ್ಲಿದ್ದ ಬಿಜೆಪಿಯನ್ನು ಮಣಿಸಿ ಎಎಪಿ 70 ಸ್ಥಾನಗಳ ಪೈಕಿ 67 ಹಾಗೂ 62 ಸ್ಥಾನ ಗಳಿಸಿತು.

ADVERTISEMENT

2013ರಲ್ಲಿ ಬಿಜೆಪಿ 31 ಸ್ಥಾನ ಗಳಿಸಿತ್ತು, ಆಗ ತಾನೇ ಮೇಲೇಳುತ್ತಿದ್ದ ‘ಇಂಡಿಯಾ ಎಗೆನ್ಸ್ಟ್‌ ಕರಪ್ಷನ್‌’ ಎನ್ನುವ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹೊರಹೊಮ್ಮಿದ್ದ, 2012ರಲ್ಲಿ ಸ್ಥಾಪನೆಗೊಂಡ ಎಎಪಿಯು 38 ಸ್ಥಾನ ಗಳಿಸಿ, 8 ಕ್ಷೇತ್ರಗಳಲ್ಲಿ ಜಯಿಸಿದ್ದ ಕಾಂಗ್ರೆಸ್‌ ಜೊತೆಗೂಡಿ ಸರ್ಕಾರ ರಚಿಸಿತು. ಬಿಜೆಪಿ ಶೇಕಡ 33, ಎಎಪಿ ಶೇ 39.50 ಹಾಗೂ ಕಾಂಗ್ರೆಸ್‌ ಶೇ 24.50ರಷ್ಟು ಮತ ಗಳಿಸಿದ್ದವು. ನವದೆಹಲಿ ಕ್ಷೇತ್ರದಲ್ಲಿ ಆಗಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಅವರನ್ನು ಸೋಲಿಸಿದ ಕೇಜ್ರಿವಾಲ್‌ ಅಧಿಕಾರದ ಚುಕ್ಕಾಣಿ ಹಿಡಿದರೂ ಸರ್ಕಾರಕ್ಕೆ 14 ತಿಂಗಳು ತುಂಬುವಷ್ಟರಲ್ಲಿ ರಾಜೀನಾಮೆ ನೀಡಿದರು.

2015ರಲ್ಲಿ ಅಚ್ಚರಿಯ ಫಲಿತಾಂಶದಲ್ಲಿ ಎಎಪಿಯು 67‌ ಸ್ಥಾನ ಗಳಿಸಿ ಭಾರಿ ಗೆಲುವು ಸಾಧಿಸಿತು. 3 ಸ್ಥಾನ ಗಳಿಸಿದ್ದ ಬಿಜೆಪಿಗೆ ಅತೀವ ಮುಖಭಂಗ. ಎಎಪಿಗೆ ಶೇ 54.30, ಬಿಜೆಪಿಗೆ ಶೇ 32 ಹಾಗೂ ಕಾಂಗ್ರೆಸ್‌ಗೆ ಶೇ 9.65ರಷ್ಟು ಮತಗಳು ಬಂದವು. 2020ರ ಚುನಾವಣೆಯಲ್ಲಿ ಭಾರಿ ಬದಲಾವಣೆಯೇನೂ ಆಗಲಿಲ್ಲ. ಎಎಪಿಗೆ 62 ಹಾಗೂ ಬಿಜೆಪಿಗೆ 8 ಸ್ಥಾನಗಳು ದಕ್ಕಿದವು. ಪೊರಕೆ ಚಿಹ್ನೆಯ ಪಕ್ಷಕ್ಕೆ ಶೇ 53.70, ಕಮಲಕ್ಕೆ ಶೇ 38.50 ಹಾಗೂ ಕೈಗೆ ಬರೀ ಶೇ 4.20ರಷ್ಟು ಮತಗಳು ದಕ್ಕಿದ್ದವು. ಅಂದರೆ, ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್‌ ಮತಗಳು ಎಎಪಿಗೆ ಹರಿದುಹೋಗಿದ್ದವು.

ದೆಹಲಿ ಒಂದು ಚಿಕ್ಕ ರಾಜ್ಯವಾದರೂ (ವಾಸ್ತವವಾಗಿ ದೆಹಲಿ ಪೂರ್ಣ ರಾಜ್ಯವೂ ಅಲ್ಲ, ಏಕೆಂದರೆ ಒಂದು ರಾಜ್ಯಕ್ಕಿರಬೇಕಾದ ಎಲ್ಲಾ ಅಧಿಕಾರಗಳು ಅದರ ಕೈಯಲ್ಲಿ ಇಲ್ಲ, ಕೆಲವು ಕೇಂದ್ರದ ಬಳಿ ಇವೆ) ಇಲ್ಲಿ ಆಡಳಿತ ನಡೆಸುವ 3 ಸ್ಥಳೀಯ ಸಂಸ್ಥೆಗಳಿವೆ. 250 ಸದಸ್ಯಬಲದ ದೆಹಲಿ ಮುನಿಸಿಪಲ್‌ ಕಾರ್ಪೊರೇಷನ್ (ಎಂಸಿಡಿ) ಹಾಗೂ ಚುನಾವಣೆ ನಡೆಯದ ನ್ಯೂ ಡೆಲ್ಲಿ ಮುನಿಸಿಪಲ್ ಕಾರ್ಪೊರೇಷನ್‌ ಮತ್ತು ಮಿಲಿಟರಿ ಆಡಳಿತಕ್ಕೆ ಒಳಪಟ್ಟಿರುವ ದೆಹಲಿ ಕಂಟೋನ್ಮೆಂಟ್. 2022ರಲ್ಲಿ ನಡೆದ ಎಂಸಿಡಿ ಚುನಾವಣೆಯಲ್ಲಿ ಎಎಪಿ 134 (ಶೇ 42.05), ಬಿಜೆಪಿ 104 (ಶೇ 39.09) ಹಾಗೂ ಕಾಂಗ್ರೆಸ್‌ 9 (ಶೇ 11.68) ಸ್ಥಾನ ಗಳಿಸಿದವು. 

ಜನಸಾಮಾನ್ಯರ ಪಕ್ಷ ಎಂದು ಹೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿದು, ಸ್ಥಾಪನೆಗೊಂಡ 12 ವರ್ಷಗಳಲ್ಲೇ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ ಎಎಪಿ, ಕೆಲವು ವರ್ಷಗಳಿಂದ ಭಾರಿ ಏರುಪೇರುಗಳನ್ನು ಕಂಡಿದೆ. ಆ ಪಕ್ಷದ ಭ್ರಷ್ಟಾಚಾರವಿರೋಧಿ ಬ್ರ್ಯಾಂಡ್‌ ಇಮೇಜಿಗೆ ಮಸಿ ಅಂಟಿಕೊಂಡಿದೆ. ಅಬಕಾರಿ ಇಲಾಖೆಯಲ್ಲಿ ಆಗಿದೆ ಎನ್ನಲಾದ ಅಕ್ರಮಗಳಿಗಾಗಿ ಕೇಜ್ರಿವಾಲ್‌ ಸೇರಿದಂತೆ ಮೂವರು ಮಂತ್ರಿಗಳು ಹಾಗೂ ಒಬ್ಬ ಸಂಸದ ಸೆರೆವಾಸ ಅನುಭಿವಿಸಿದರು. ಒಬ್ಬ ಮಂತ್ರಿಯೂ ಸೇರಿದಂತೆ ನಾಲ್ವರು ಶಾಸಕರು ಪಕ್ಷ ಬಿಟ್ಟು ಬಿಜೆಪಿ ಸೇರಿದರು. ಇದರ ಜೊತೆಗೆ ಕೇಜ್ರಿವಾಲ್‌ ಅವರು ವಾಸಕ್ಕೆ ಸರ್ಕಾರದಿಂದ ಪಡೆದಿರುವ ಮನೆಯನ್ನು ಜನಸಾಮಾನ್ಯರ ಹಣದಲ್ಲಿ ಐಷಾರಾಮಿ ಬಂಗಲೆಯಾಗಿ ಪರಿವರ್ತಿಸಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ಹಲವು ನಾಯಕರು ಆರೋಪ ಹೊರೆಸಿದ್ದಾರೆ. 

ಐಐಟಿ ಪದವೀಧರ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಆದಾಯ ತೆರಿಗೆ ಅಧಿಕಾರಿಯಾಗಿದ್ದು ರಾಜೀನಾಮೆ ನೀಡಿ ಆರ್‌ಟಿಐ ಕಾರ್ಯಕರ್ತರಾದ, ಆಮ್‌ ಆದ್ಮಿ ಪಕ್ಷ ಕಟ್ಟಿದ ಕೇಜ್ರಿವಾಲ್‌ ಅವರು ಜೈಲು ಸೇರಿದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಜಾಮೀನಿನ ಮೇಲೆ ಹೊರಬಂದ ನಂತರ ಶಾಸಕಿ ಆತಿಶಿ ಸಿಂಗ್‌ ಅವರನ್ನು ಮುಖ್ಯಮಂತ್ರಿ ಮಾಡಿದರು. ಕೇಜ್ರಿವಾಲ್‌ ಅವರ ‘ಮಿಸ್ಟರ್‌ ಕ್ಲೀನ್‌’ ಇಮೇಜ್‌ಗೆ ಧಕ್ಕೆಯಾಗಿದ್ದರೂ ಅವರ ಜನಪ್ರಿಯತೆಯಲ್ಲಿ ಬಹಳ ವ್ಯತ್ಯಾಸವೇನೂ ಆಗಿಲ್ಲ. ಮಧ್ಯಮ ವರ್ಗದ ಜನರಿಗೆ ಸಹಾಯವಾಗಲೆಂದು ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರಕ್ಕೆ 7 ಅಂಶಗಳ ವಿಶೇಷ ಬೇಡಿಕೆ ಸಲ್ಲಿಸಿರುವುದು ಈ ವರ್ಗದ ಮತಗಳನ್ನು ಗಳಿಸುವುದರಲ್ಲಿ ಪಾತ್ರ ವಹಿಸಬಹುದು. 

ಈ ಚುನಾವಣೆ ಗೆಲ್ಲುವುದು ಎಎಪಿಗೆ ಬಹು ಮುಖ್ಯ. ಸೋತರೆ ಆ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಕೂಡ ಎದುರಾಗಬಹುದು. ಪಕ್ಷ ಒಡೆದು ಹೋಳಾಗಬಹುದು. ಅಷ್ಟೇ ಅಲ್ಲ, ಅಲ್ಪ ಬಹುಮತದಿಂದ ಗೆದ್ದರೂ ಸಂಕಷ್ಟ ಎದುರಾಗಬಹುದು. ಹಾಗಾಗಿ 50 ಸ್ಥಾನಗಳಿಂದ ಹೆಚ್ಚು ಗಳಿಸುವುದು ಎಎಪಿ ಹಿತದೃಷ್ಟಿಯಿಂದ ಅಗತ್ಯ ಎಂಬ ಸ್ಥಿತಿ ಇದೆ.

ಚುನಾವಣಾ ನಿರ್ವಹಣೆಯಲ್ಲಿ ಅದರಲ್ಲೂ ಬೂತ್‌ ಮಟ್ಟದಲ್ಲಿ ಬಿಜೆಪಿ ಯಾವಾಗಲೂ ಮುಂದಿರುತ್ತದೆ. ಆದರೂ ದೆಹಲಿ ವಿಧಾನಸಭೆ ಮಟ್ಟಿಗೆ ಅದಕ್ಕೆ ಒಬ್ಬ ಸಮರ್ಥ ನಾಯಕ ಇಲ್ಲದಿರುವುದು ಬಹುದೊಡ್ಡ ಕೊರತೆ (ಕಾಂಗ್ರೆಸ್‌ಗೂ ಇದೇ ಸಮಸ್ಯೆ). ಈ ಹಿಂದೆ ಬಿಜೆಪಿಗೆ ಬೆನ್ನೆಲುಬಾಗಿದ್ದ ಮದನ್‌ ಲಾಲ್‌ ಖುರಾನ, ಸಾಹಿಬ್‌ ಸಿಂಗ್‌ ವರ್ಮಾ, ವಿಜಯಕುಮಾರ್‌ ಮಲ್ಹೋತ್ರ ಅವರಂಥ ನಾಯಕರು ಈಗ ಇಲ್ಲ. 1998ರಲ್ಲಿ ಸುಷ್ಮಾ ಸ್ವರಾಜ್‌ ಅವರನ್ನು ಹರಿಯಾಣದಿಂದ ಕರೆತಂದಂತೆ ಈ ಬಾರಿ ಸ್ಮೃತಿ ಇರಾನಿ ಅವರನ್ನು ಕರೆತರುವ ಯೋಚನೆ ಪಕ್ಷಕ್ಕೆ ಇತ್ತು. ಆದರೆ, ಸ್ಥಳೀಯ ನಾಯಕರ ವಿರೋಧದಿಂದ ಇದು ಸಾಧ್ಯವಾಗಲಿಲ್ಲ ಎಂಬ ಮಾತುಗಳಿವೆ.  

ಎಎಪಿ ಒಳಗೊಂಡಂತೆ ಬಿಜೆಪಿಯೇತರ ಪಕ್ಷಗಳ ಉಚಿತ ಯೋಜನೆಗಳನ್ನು ಈ ಹಿಂದೆ ‘ರೇವ್ಡಿ’ ಎಂದು ಗೇಲಿ ಮಾಡಿದ್ದ ಬಿಜೆಪಿ, ಈಗ ತಾನು ಕೂಡ ಅದೇ ರೀತಿಯ ಯೋಜನೆಗಳ ಭರವಸೆ ಕೊಟ್ಟಿದೆ. ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಹಿಂದುತ್ವದ ವಿಷಯವನ್ನು ಮುನ್ನೆಲೆಗೆ ತಂದ ರೀತಿಯಲ್ಲಿ ಎಎಪಿ ಎದುರು ತರಲಾಗುವುದಿಲ್ಲ. ಏಕೆಂದರೆ, ಕೇಜ್ರಿವಾಲ್‌ ಹನುಮನ ಪರಮಭಕ್ತ ಮತ್ತು ತಮ್ಮ ಎಲ್ಲ ಭಾಷಣಗಳಲ್ಲೂ ಆಂಜನೇಯನ ಸ್ಮರಣೆ ಮಾಡುತ್ತಾರೆ. ಮುಸ್ಲಿಂ ಮತದಾರರು ಎತ್ತ ಕಡೆ ವಾಲುತ್ತಾರೋ ಎಂಬುದು ಈ ಕ್ಷಣಕ್ಕೆ ಕುತೂಹಲ ಕಾಯ್ದುಕೊಂಡಿರುವ ಪ್ರಶ್ನೆ.

ದೆಹಲಿಯ ಸುಮಾರು ಶೇ 25ರಷ್ಟು ಮತದಾರರು ಪೂರ್ವಾಂಚಲದಿಂದ (ಪೂರ್ವ ಉತ್ತರಪ್ರದೇಶ- ಪಶ್ಚಿಮ ಬಿಹಾರ) ಬಂದ ವಲಸಿಗರು ಎಂದು ಅಂದಾಜು ಮಾಡಲಾಗಿದೆ. ಹೆಚ್ಚಾಗಿ ಪೂರ್ವ ದೆಹಲಿಯಲ್ಲಿ ನೆಲಸಿರುವ ಇವರ ಮತ ಗಳಿಸಲು ಎಲ್ಲ ಪಕ್ಷಗಳು ಕಸರತ್ತು ನಡೆಸಿವೆ.

ದೆಹಲಿಯ ಮೂರು ಕ್ಷೇತ್ರಗಳ ಫಲಿತಾಂಶವನ್ನು ಜನ ಕುತೂಹಲದಿಂದ ನೋಡುತ್ತಿದ್ದಾರೆ. ನವದೆಹಲಿಯಲ್ಲಿ ಕೇಜ್ರಿವಾಲ್‌ ಅವರು ಬಿಜೆಪಿಯ ಪರ್ವೇಶ್‌ ವರ್ಮಾ ಹಾಗೂ ಕಾಂಗ್ರೆಸ್‌ನ ಸಂದೀಪ್‌ ದೀಕ್ಷಿತ್‌ ಅವರನ್ನು ಎದುರಿಸುತ್ತಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ ಅವರು ಜಂಗ್‌ಪುರದಲ್ಲಿ ಹಾಗೂ ಕಲ್ಕಾಜಿಯಲ್ಲಿ ಆತಿಶಿ ಮತ್ತೆ ಜಯ ಗಳಿಸುವ ವಿಶ್ವಾಸದಲ್ಲಿದ್ದಾರೆ. 

ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಗುಂಪು ‘ಇಂಡಿಯಾ’ ಮೈತ್ರಿಕೂಟದ ಮುಖ್ಯ ಪಕ್ಷವಾದ ಕಾಂಗ್ರೆಸ್‌ಗೆ ಮಿತ್ರಪಕ್ಷಗಳಾದ ಎಸ್‌ಪಿ, ಟಿಎಂಸಿ ಮತ್ತು ಎನ್‌ಸಿಪಿ ಬೆಂಬಲ ನೀಡುತ್ತಿಲ್ಲ. ಬದಲಾಗಿ ಈ ಪಕ್ಷಗಳು ಎಎಪಿಗೆ ಬೆಂಬಲ ನೀಡುತ್ತಿವೆ. ದೆಹಲಿ ಚುನಾವಣೆ ಬೇರೆ ಬೇರೆ ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ಇದು, ರಾಷ್ಟ್ರ ರಾಜಧಾನಿ ಆಗಿರುವುದು ಅದರಲ್ಲಿ ಮುಖ್ಯವಾದ ಅಂಶ. ಈ ಕಾರಣಕ್ಕಾಗಿ ಈ ಚುನಾವಣೆ ಮತ್ತು ಅದರ ಫಲಿತಾಂಶ ಮಹತ್ವ ಪಡೆದುಕೊಂಡಿವೆ.

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.