
ಸ್ವಸಹಾಯ ಗುಂಪುಗಳು ಆವಿಷ್ಕಾರಗೊಂಡ ಬಗೆಗಿನ ಹಲವು ಕಥೆಗಳಲ್ಲಿ ಮುಖ್ಯವಾದುದು ಕರ್ನಾಟಕದ ಕಥನ. ‘ಮೈರಾಡ’ ಎನ್ನುವ ಸ್ವಾಯತ್ತ ಸ್ವಯಂಸೇವಾ ಸಂಸ್ಥೆಯೊಂದಿಗೆ ಜೊತೆಗೂಡಿದ್ದ ಮಹಿಳೆಯರು ಆ ಸಂಸ್ಥೆಯ ಮುಖ್ಯಸ್ಥರಾದ ಅಲೋಶ್ಯಿಯಸ್ ಫರ್ನಾಂಡಿಸ್ (ಆ್ಯಲ್) ಅವರ ಬಳಿಗೆ ಬಂದು– ‘ನಾವು ನಮ್ಮ ಸ್ಥಳೀಯ ಸಹಕಾರ ಸಂಘದಲ್ಲಿ ಸಾಲ ಮಾಡಿದ್ದೆವು. ಅದನ್ನು ಹಿಂತಿರುಗಿಸಬೇಕೆಂದರೆ ಸಂಸ್ಥೆ ಮುಚ್ಚಿಹೋಗಿದೆ. ಆದರೆ, ಆ ಸಾಲದ ಹಣವನ್ನು ನಾವು ಕಟ್ಟಿ, ಮುಂದಿನ ಕೆಲಸಕ್ಕೆ ಹೆಚ್ಚಿನ ಸಾಲ ಪಡೆಯಬೇಕು. ಆ ಸಂಸ್ಥೆ ಇಲ್ಲವಾದ್ದರಿಂದ ಮೈರಾಡಕ್ಕೇ ಹಣ ಕಟ್ಟುತ್ತೇವೆ. ಮುಂದಿನ ಸಾಲವನ್ನು ನೀವೇ ಕೊಡಿ’ ಎಂದು ಹೇಳಿದರಂತೆ. ಆ್ಯಲ್ ಅದಕ್ಕೆ ಪ್ರತಿಕ್ರಿಯಿಸಿ, ‘ನಮ್ಮ ಸಂಸ್ಥೆಗೆ ಕಟ್ಟುವುದಕ್ಕೆ ಬದಲಾಗಿ ನೀವುಗಳೇ ಒಂದು ಗುಂಪಾಗಿ, ನಿಮ್ಮಲ್ಲೇ ಅದನ್ನು ಉಳಿತಾಯವಾಗಿ ಕಟ್ಟಿಕೊಳ್ಳಿ, ಅವಶ್ಯಕತೆ ಇದ್ದವರಿಗೆ ಸಾಲವಾಗಿ ಕೊಡಿ. ಹೀಗೆ ಸ್ವಸಹಾಯ ಪದ್ಧತಿಯಲ್ಲಿ ಗುಂಪು ಮುಂದುವರಿಸಿಕೊಂಡು ಹೋಗಿ’ ಎಂದು ಹೇಳಿದರಂತೆ. ಹೀಗೆ ಆರಂಭವಾದ ಸ್ವಸಹಾಯ ಗುಂಪುಗಳು ಅಲ್ಲಿಂದ ಮುಂದಕ್ಕೆ ಬೆಳೆದವು.
ನೋಂದಣಿಯಾಗದ ಈ ಸ್ವಸಹಾಯ ಗುಂಪುಗಳು ಬ್ಯಾಂಕಿನ ಖಾತೆ ತೆರೆಯಬಹುದಲ್ಲದೇ, ಬ್ಯಾಂಕಿನಿಂದ ಸಾಮೂಹಿಕವಾಗಿ ಸಾಲವನ್ನೂ ಪಡೆಯಬಹುದು ಎನ್ನುವ ಒಂದು ಸುತ್ತೋಲೆಯನ್ನು 1992ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಜಾರಿ ಮಾಡಿದವು. ಇದರೊಂದಿಗೆ ಈ ಗುಂಪುಗಳಿಗೆ ಒಂದು ರೀತಿಯ ಅಧಿಕೃತ ಮಾನ್ಯತೆ ದೊರೆಯಿತು. ಅಲ್ಲಿಂದ ಮುಂದಕ್ಕೆ ಅನೇಕ ಸ್ವಯಂಸೇವಾ ಸಂಸ್ಥೆಗಳೂ, ರಾಜ್ಯ ಸರ್ಕಾರಗಳೂ, ಈ ರೀತಿಯ ಗುಂಪುಗಳನ್ನು ಅನೇಕ ಯೋಜನೆಗಳಡಿಯಲ್ಲಿ ಪ್ರೋತ್ಸಾಹಿಸುತ್ತಾ ಮುಂದುವರಿದವು.
ಪರಂಪರಾಗತವಾಗಿದ್ದ ಉಳಿತಾಯ–ಸಾಲದ ಪದ್ಧತಿಯನ್ನು ಈ ಗುಂಪುಗಳು ಮುರಿದಿದ್ದವು. ಅಷ್ಟೇ ಅಲ್ಲ, ಅನೇಕ ಹಳೆಯ ಪಡಿಯಚ್ಚುಗಳನ್ನೂ ಈ ಗುಂಪುಗಳು ಮುರಿದವು. ಪುರುಷ ಕೇಂದ್ರಿತವಾಗಿದ್ದ ಆರ್ಥಿಕ ವ್ಯವಹಾರಗಳಲ್ಲಿ ಮಹಿಳೆಯರಿಗೂ ಒಂದು ಪಾತ್ರವನ್ನು ಈ ಸ್ವಸಹಾಯ ಗುಂಪುಗಳು ತಂದುಕೊಟ್ಟಿದ್ದವು. ಸಾಲಕೇಂದ್ರಿತವಾದ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಉಳಿತಾಯ ಕೇಂದ್ರಿತವಾಗಿ ಮಾಡಿ, ಅವಶ್ಯಕತೆಯಿದ್ದಾಗ ಮಾತ್ರ ವಿತ್ತೀಯ ವ್ಯವಹಾರಗಳನ್ನು ನಡೆಸುವುದಕ್ಕೆ ಬದಲಾಗಿ– ಪ್ರತಿ ವಾರ ಅಥವಾ ತಿಂಗಳಿಗೊಮ್ಮೆ ಗುಂಪುಗಳು ಒಂದೆಡೆ ಸೇರಿ ವ್ಯವಹರಿಸುವ, ತಮ್ಮ ಲೆಕ್ಕವನ್ನು ತಾವೇ ಬರೆದಿಟ್ಟುಕೊಳ್ಳುವ, ತಮ್ಮಲ್ಲೇ ಸಾಲಗಳನ್ನು ಕೊಟ್ಟುಕೊಳ್ಳುವ, ವ್ಯವಹಾರಕ್ಕೂ ಮಿಗಿಲಾಗಿ ಮಿಕ್ಕ ವಿಚಾರಗಳನ್ನೂ ಚರ್ಚಿಸುವ ಹಾಗೂ ಬ್ಯಾಂಕಿನೊಂದಿಗೆ ವ್ಯವಹರಿಸುವ ಅವಕಾಶಗಳನ್ನು ಈ ಸ್ವಸಹಾಯ ಗುಂಪಿನ ಪದ್ಧತಿ ಉಂಟುಮಾಡಿತ್ತು.
ಇದು ಮಹಿಳಾ ಸಬಲೀಕರಣದ ಒಂದು ಪ್ರತೀಕವಾಗಿಯೂ ಕಾಣುತ್ತಿತ್ತು. ಉದಾಹರಣೆಗೆ, ಆಂಧ್ರಪ್ರದೇಶದ ಸ್ವಸಹಾಯ ಗುಂಪನ್ನು ಸಂದರ್ಶಿಸಲು ಹೋದಾಗ, ಅಲ್ಲಿನ ಮಹಿಳೆಯರು ಸಭೆಯ ನಂತರ ಬಂದು ಅಲ್ಲಿದ್ದ ಪುರುಷರ ಕೈಗಳನ್ನು ಕುಲುಕಿದ್ದನ್ನು ಗಮನಿಸಿದ್ದೆ. ಒಂದು ಸಂಕೇತವಾಗಿ ಇದು ಮಹತ್ವದ ವಿಷಯವಾಗಿತ್ತು. ಪಿತೃಪ್ರಧಾನ ಮತ್ತು ಅಸ್ಪೃಶ್ಯತೆ ಇರುವ ಸಮಾಜದಲ್ಲಿ, ಗ್ರಾಮೀಣ ಮಹಿಳೆಯರು ಆತ್ಮವಿಶ್ವಾಸದೊಂದಿಗೆ ನಗರದಿಂದ ಬಂದ ಪುರುಷರ ಕೈಕುಲುಕಿದ ಘಟನೆ, ಅನೇಕ ಹಳೆಯ ನಂಬಿಕೆ ಮತ್ತು ಪಡಿಯಚ್ಚುಗಳ ಸೀಮೋಲ್ಲಂಘನದಂತೆ ಹಾಗೂ ಮಹಿಳೆಯರ ಆತ್ಮವಿಶ್ವಾಸದ ಪ್ರತೀಕದಂತೆ ಕಾಣಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಮಹಿಳೆಯರಲ್ಲಿದ್ದ ಪರಸ್ಪರ ನಂಬಿಕೆ ಮತ್ತು ಶಿಸ್ತು ಮುಖ್ಯವಾಗಿತ್ತು.
ಮಹಿಳೆಯರು ತಮ್ಮದೇ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದ ನಿದರ್ಶನಗಳನ್ನು ಬೇರೆಡೆಯೂ ಪ್ರಸಾರ ಮಾಡಲು ಸರ್ಕಾರಗಳು ಆ ಸ್ವಸಹಾಯ ಗುಂಪುಗಳ ಮಾದರಿಯನ್ನು ತಮ್ಮದಾಗಿಸಿಕೊಂಡು, ಹೊಸ ಯೋಜನೆಗಳನ್ನು ರೂಪಿಸಿದವು. ಗುಂಪುಗಳನ್ನು ಏರ್ಪಡಿಸಲು ಬೇಕಾದ ಸಮುದಾಯಕರ್ಮಿಗಳ ಖರ್ಚಿಗಾಗಿ ಅನುದಾನ ಕೊಡುವುದು, ಗುಂಪುಗಳು ಪ್ರಾರಂಭ ಆಗುವುದಕ್ಕೆ ಮೂಲಧನವನ್ನು ದೇಣಿಗೆಯಾಗಿ ನೀಡುವುದರೊಂದಿಗೆ ಪ್ರಾರಂಭವಾದ ಪ್ರಕ್ರಿಯೆ, ಕ್ರಮೇಣ ಸರ್ಕಾರಿ ಕಾರ್ಯಕ್ರಮವಾಗುತ್ತಾ ಹೋಯಿತು. ಮೊದಲಿಗೆ, ತಮಿಳುನಾಡಿನ ‘ಮಗಳೀರ್ ತಿಟ್ಟಂ’ ಕಾರ್ಯಕ್ರಮದಲ್ಲಿ ಇದರ ಸರ್ಕಾರೀಕರಣ ಕಂಡೆವು. ಕೇರಳದ ‘ಕುಡುಂಬಶ್ರೀ’ ಕಾರ್ಯಕ್ರಮ ಮಾತ್ರ ತುಸು ಭಿನ್ನ ದಾರಿ ಹಿಡಿದು– ರಾಜ್ಯ ಸರ್ಕಾರದ ಕಾರ್ಯಕ್ರಮವಾದರೂ, ಪಂಚಾಯಿತಿಗಳ ಮಟ್ಟದಲ್ಲಿ ಸರ್ಕಾರದ ಯಂತ್ರಾಂಗದೊಂದಿಗೆ ಕೂಡಿದ್ದರಿಂದ ಒಂದು ವಿಕೇಂದ್ರೀಕೃತ ಕಾರ್ಯಕ್ರಮವಾಗಿ ರೂಪುಗೊಂಡಿತು.
ಒಂದು ಯಶಸ್ವೀ ಸ್ವಾಯತ್ತ, ಸ್ವಯಂಸೇವಾ ಕಾರ್ಯಕ್ರಮದ ಸರ್ಕಾರೀಕರಣ ಕ್ರಮೇಣವಾಗಿ ಆದರೂ, ಕಡೆಗೆ ವ್ಯಾಪಕವಾಗಿ ಪಸರಿಸಿದ್ದನ್ನು ನಾವು ನೋಡಬಹುದು. ಮಹಿಳೆಯರು, ಸ್ವ–ಸಹಾಯ, ಅಲ್ಲಿಂದ ಬ್ಯಾಂಕ್‌ಗಳೊಂದಿಗೆ ವ್ಯವಹಾರ, ಅಲ್ಲಿಂದ ಮುಂದಕ್ಕೆ ಸರ್ಕಾರಿ ಕಾರ್ಯಕ್ರಮದಡಿ ತಮ್ಮನ್ನು ಒಳಗೊಳ್ಳುತ್ತಿರುವುದನ್ನು ನಾವು ಕಾಣಬಹುದು. ಪರಸ್ಪರ ನಂಬಿಕೆ ಮತ್ತು ಶಿಸ್ತು ಇದ್ದ ಕಾರಣವಾಗಿ ಸರ್ಕಾರಿ ಯೋಜನೆಗಳನ್ನು– ಅದರಲ್ಲೂ ಮಹಿಳಾ ಕೇಂದ್ರಿತ ಯೋಜನೆಗಳನ್ನು– ರೂಪಿಸುವಾಗ ಈ ಗುಂಪುಗಳನ್ನು ಮನಸ್ಸಿನಲ್ಲಿಟ್ಟು ಕೆಲಸ ಮಾಡುತ್ತಿದ್ದುದನ್ನು ಕಂಡಿದ್ದೇವೆ.
ಸರ್ಕಾರದ ಯೋಜನೆಗಳ ಪಾಲಾದ ಗುಂಪುಗಳಿಗೆ ಬಹುಶಃ ಮೊದಲಿಗೆ ರಾಜಕೀಯ ಲೇಪ ಬಂದದ್ದು ಅವಿಭಜಿತ ಆಂಧ್ರಪ್ರದೇಶದಲ್ಲಿ. ವಿಶ್ವಬ್ಯಾಂಕಿನ ಸಾಲ ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅಪ್ಪಿಕೊಂಡದ್ದನ್ನು ನಾವು ಅಲ್ಲಿನ ‘ವೆಲುಗು’ ಕಾರ್ಯಕ್ರಮದಲ್ಲಿ ಕಂಡೆವು. ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆ ಗುಂಪುಗಳನ್ನು ವಿಶೇಷ ಮುತುವರ್ಜಿಯಿಂದ ಬೆಳೆಸಿ, ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ತಲಪಿಸುವ ಮಾಧ್ಯಮವನ್ನಾಗಿ ಉಪಯೋಗಿಸಿದರು. ಆದರೆ, ಅದನ್ನು ಚುನಾವಣಾ ರಾಜಕೀಯಕ್ಕೆ ಎಳೆದು ತಂದದ್ದು ನಂತರದ ಮುಖ್ಯಮಂತ್ರಿಯಾದ ವೈ.ಎಸ್. ರಾಜಶೇಖರ ರೆಡ್ಡಿಯವರು. ಸ್ವಸಹಾಯ ಗುಂಪುಗಳ ಸಾಲಗಳ ಮೇಲೆ ಸಬ್ಸಿಡಿ ಕೊಟ್ಟು, ಗುಂಪಿನ ಮೂಲಮಂತ್ರವಾದ ಪರಸ್ಪರತೆಯಲ್ಲಿ ಅವರು ದಾಖಲು ಅಂದಾಜು ಮಾಡಿದರು. ‘ಪಾವಲಾ ವಡ್ಡಿ’ ಯೋಜನೆಯಲ್ಲಿ ಸ್ವಸಹಾಯ ಗುಂಪುಗಳಿಗೆ ತಿಂಗಳಿಗೆ ನಾಲ್ಕಾಣೆಯ ಬಡ್ಡಿಯಲ್ಲಿ (ವರ್ಷಕ್ಕೆ ಶೇ 3ರ) ಸಾಲ ಕೊಡಮಾಡುವ ಯೋಜನೆ ರೂಪಿಸಿದಾಗ, ಸ್ವಸಹಾಯ ಗುಂಪುಗಳ ಮೂಲ ಮಂತ್ರದ ಮೇಲೆ ಪ್ರಹಾರವಾಗಿತ್ತು. ಸಾಲ ಬೇಕಿದ್ದರೂ ಇಲ್ಲದಿದ್ದರೂ, ಎಲ್ಲರೂ ಈ ಅಗ್ಗದ ಬಡ್ಡಿಯ ಸಾಲಗಳನ್ನು ವ್ಯಾಪಕವಾಗಿ ಪಡೆದದ್ದರಿಂದ, ಗುಂಪಿನ ಧನ, ಅದರಲ್ಲಿದ್ದ ಪರಸ್ಪರತೆಗೆ ಪೆಟ್ಟು ಬಿದ್ದಿತು. ಅಲ್ಲಿನ ಅಧಿಕಾರಿಯೊಬ್ಬರು ಮಹಿಳೆಯರನ್ನು ಉದ್ದೇಶಿಸಿ, ‘ಡಬ್ಬುಲು ಪೆಂಚುಕೋಂಡಿ ಅಂಟೇ ಪಂಚುಕುಂಟುತುನ್ನಾರು (ಧನವರ್ಧನೆ ಮಾಡಿಕೊಳ್ಳಿ ಅಂದರೆ ಹಂಚಿಕೊಳ್ಳುತ್ತಿದ್ದೀರಿ) ಎಂದು ವಿಷಾದದಿಂದ ಹೇಳಿದ್ದರು.
ಆಂಧ್ರಪ್ರದೇಶದ ಯಶಸ್ಸಿನೊಂದಿಗೆ, ಇದೇ ಕಾರ್ಯಕ್ರಮವನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವಾಗಿ ರೂಪಿಸಿ, ಗುಂಪುಗಳ ಅಡಿಪಾಯದ ಮೇಲೆ ಒಂದು ಭವ್ಯ ಇಮಾರತನ್ನು ಕೇಂದ್ರ ಸರ್ಕಾರ ನಿರ್ಮಿಸಿತು. ಆಂಧ್ರಪ್ರದೇಶದ ಮಾದರಿಯನ್ನು ಕರ್ನಾಟಕದಲ್ಲಿ ‘ಸಂಜೀವಿನಿ’ ಹೆಸರಿನಲ್ಲಿಯೂ, ಬಿಹಾರದಲ್ಲಿ ‘ಜೀವಿಕಾ’ ಹೆಸರಿನಲ್ಲಿಯೂ ರೂಪಿಸಲಾಯಿತು. ಆರಂಭದ ದಿನಗಳಲ್ಲಿ ಆಂಧ್ರಪ್ರದೇಶದ ಮಹಿಳೆಯರು ಬಿಹಾರಕ್ಕೆ ಹೋಗಿ ಅಲ್ಲಿನ ಮಹಿಳೆಯರನ್ನು ಒಟ್ಟುಗೂಡಿಸುವ, ಗುಂಪುಗಳನ್ನು ಕಟ್ಟಿ ತರಬೇತಿ ನೀಡುವ ಕೆಲಸವನ್ನು ಸರ್ಕಾರದ ಯೋಜನೆಯ ವತಿಯಿಂದ ಮಾಡಿದರು.
ಈ ಬಾರಿಯ ಬಿಹಾರ ಚುನಾವಣೆಯಲ್ಲಿ ‘ಜೀವಿಕಾ’ ಸ್ವಸಹಾಯ ಗುಂಪುಗಳ ದೊಡ್ಡ ಪಾತ್ರವನ್ನು ಅನೇಕ ತಜ್ಞರು ಗುರುತಿಸಿದ್ದಾರೆ. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಮತದಾರರನ್ನು ಒಲಿಸಿ ಮತಪೆಟ್ಟಿಗೆಯತ್ತ ಒಯ್ಯುವ ಕೆಲಸಕ್ಕೆ ಚುನಾವಣಾ ಆಯೋಗ ಈ ಮಹಿಳೆಯರನ್ನು ಬಳಸುತ್ತಿತ್ತು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ, ಈಚೆಗೆ ನಡೆದ ಚುನಾವಣೆಗೆ ಮುನ್ನ ಈ ಗುಂಪುಗಳ ಸದಸ್ಯರ ವೈಯಕ್ತಿಕ ಖಾತೆಗೆ ತಲಾ ₹10,000 ಮೊತ್ತವನ್ನು ಸರ್ಕಾರ ಪಾವತಿಸಿದ್ದು ಎಲ್ಲರಿಗೂ ತಿಳಿದದ್ದೇ. ಪಾವಲಾ ವಡ್ಡಿಯಲ್ಲಿ ಸರ್ಕಾರ ಸಾಲದ ಬಡ್ಡಿಯ ದರವನ್ನು ನಿರ್ಧರಿಸಿದರೆ, ಇಲ್ಲಿ ಗುಂಪಿನ ಖಾತೆಗಲ್ಲದೇ ವೈಯಕ್ತಿಕ ಖಾತೆಗಳಿಗೆ ಹಣವನ್ನು ಹಾಕಿ ಗುಂಪುಗಳ ಪರಸ್ಪರತೆಗೆ ಧಕ್ಕೆ ತರಲಾಯಿತು. ಇಲ್ಲಿ ಅದಷ್ಟು ಮುಖ್ಯವಾದ ವಿಷಯವಲ್ಲ. ಅದಕ್ಕಿಂತ ಮುಖ್ಯವಾದ ವಿಷಯವೆಂದರೆ, ಈ ದುಡ್ಡು ಖಾತೆಗೆ ಬಿದ್ದ ಹಿನ್ನೆಲೆಯಲ್ಲಿ ಜೀವಿಕಾ ಯೋಜನೆಯ ಮಹಿಳೆಯರು ತಮ್ಮ ಚುನಾವಣಾ ಕರ್ತವ್ಯವನ್ನೂ ಉತ್ಸಾಹದಿಂದ ಮಾಡಿ ಮತದಾರರನ್ನು ಮತಗಟ್ಟೆಗೆ ಕರೆತಂದದ್ದಲ್ಲದೇ, ಕಿವಿಯಲ್ಲಿ ಸರ್ಕಾರದ ಪರವಾಗಿ ಹಲವು ಮಾತುಗಳನ್ನು ಉಲಿದಿರಬಹುದು ಎನ್ನುವುದನ್ನು ವಿಶ್ಲೇಷಕರು ಚರ್ಚಿಸುತ್ತಿದ್ದಾರೆ.
ಸ್ವಸಹಾಯದಿಂದ, ಬ್ಯಾಂಕ್‌ಗಳೊಂದಿಗೆ ವ್ಯವಹಾರ; ಅಲ್ಲಿಂದ ಮುಂದಕ್ಕೆ ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಯೋಜನೆಗಳನ್ನು ಧರೆಗಿಳಿಸುವ ಮಾರ್ಗ; ಅಲ್ಲಿಂದ ಓಟುಗಳನ್ನು ಪಡೆಯಲು ರಾಜಕೀಯ ಪಕ್ಷಗಳು ಮಹಿಳೆಯರನ್ನು ಒಂದು ಓಟ್ ಬ್ಯಾಂಕ್ ಆಗಿ ಉಪಯೋಗಿಸಿದ್ದು. ಈಗ ಚುನಾವಣೆಯಲ್ಲಿ ಮತದಾರರನ್ನು ಮನವೊಲಿಸುವ ಕಾರ್ಯವನ್ನು ಮಹಿಳೆಯರು ಸಶಕ್ತವಾಗಿ ಮಾಡಿದ್ದಾರೆ. ಇದು ನಿಧಾನವಾಗಿ ಅಲ್ಲಲ್ಲಿ ಬೆಳೆದಿರುವ ಮಹಿಳಾ ಸಬಲೀಕರಣ ಮತ್ತು ಸಶಕ್ತೀಕರಣದ ಸಂಕೇತವಾಗಿ ನಾವು ಪರಿಗಣಿಸಿದರೆ ಮುಂದಿನ ಮಾರ್ಗ ಏನಿರಬಹುದು? ಮುಂದೊಂದು ದಿನ ಈ ಮಹಿಳೆಯರೇ ನೇರವಾಗಿ ಚುನಾವಣಾ ಕಣಕ್ಕಿಳಿಯಬಹುದೇ? ಈಗಾಗಲೇ, ಚುನಾವಣೆಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂಡಿರುವವರಲ್ಲಿ ಇದೂ ಒಂದು ಮಹತ್ವದ ಮತಘಟಕವಾಗುವುದು ಸಹಜವೇ ಇರಬಹುದು. 35 ವರ್ಷಗಳ ತಾಳ್ಮೆಯಿಂದ ನೋಡಿರುವ ಈ ಕಾರ್ಯಕ್ರಮವನ್ನು ಇನ್ನೆರಡು ದಶಕಗಳ ಕಾಲ ಗಮನಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.