ADVERTISEMENT

ವಿಶ್ಲೇಷಣೆ: ಆರ್ಥಿಕತೆಯ ಆ ಮುಖ, ಈ ಮುಖ

ಆರ್ಥಿಕ ಸಮೃದ್ಧಿ ಕೆಲವರ ಪಾಲಾಗುತ್ತಿರುವ ಕಾರಣ ಅಸಮಾನತೆ ಮಿತಿಮೀರುತ್ತಿದೆ

ಟಿ.ಆರ್.ಚಂದ್ರಶೇಖರ
Published 25 ಡಿಸೆಂಬರ್ 2024, 23:39 IST
Last Updated 25 ಡಿಸೆಂಬರ್ 2024, 23:39 IST
   

ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಜಿಡಿಪಿ ಐದು ಟ್ರಿಲಿಯನ್ ಡಾಲರ್‌ ಮುಟ್ಟುವ ಸಾಧ್ಯತೆ ಇದೆ. ಸರ್ಕಾರವು ವಿಕಸಿತ ಭಾರತದ ಬಗ್ಗೆ, ಅಭಿವೃದ್ಧಿ ‘ಹೊಂದಿದ’ ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದೆ. ಇದು, ನಮ್ಮ ಆರ್ಥಿಕತೆಯ ಒಂದು ಮುಖ. ಮತ್ತೊಂದು ಮುಖ ಇದೆ. ಅದು ಕರಾಳವಾಗಿದೆ. ರೈತರು, ಕಾರ್ಮಿಕರು, ಅಸಂಘಟಿತ ವಲಯದ ದಿನಗೂಲಿಗಳು, ಸಣ್ಣಪುಟ್ಟ ವ್ಯಾಪಾರ, ವ್ಯವಹಾರ ಮಾಡುತ್ತಿರುವವರ ಬದುಕು ದುಃಸ್ಥಿತಿಯಲ್ಲಿದೆ.

ಜಿಡಿಪಿ ಲೆಕ್ಕದಲ್ಲಿ ನಮ್ಮದು ಜಗತ್ತಿನಲ್ಲಿ ಐದನೆಯ ಬೃಹತ್ ಆರ್ಥಿಕತೆಯಾಗಿದೆ. ಆದರೆ ತಲಾ ವರಮಾನದ  ಲೆಕ್ಕದಲ್ಲಿ ಜಗತ್ತಿನ 192 ದೇಶಗಳ ಪೈಕಿ ಭಾರತದ ಸ್ಥಾನ 141ನೆಯದು. ಪ್ರಸಕ್ತ ವರ್ಷದಲ್ಲಿ ದೇಶದ ತಲಾ ವರಮಾನ 2,698 ಡಾಲರ್‌ ಆಗಿದೆ. ಚೀನಾದ್ದು 12,969 ಡಾಲರ್‌. ಜಗತ್ತಿನ ಸರಾಸರಿ ತಲಾ ವರಮಾನ 13,900 ಡಾಲರ್‌. ಜಿಡಿಪಿ ಲೆಕ್ಕದಲ್ಲಿ ಭಾರತದ ಆರ್ಥಿಕತೆ
ಸಮೃದ್ಧವಾಗಿದೆಯಾದರೂ ತಲಾ ವರಮಾನ ಅತ್ಯಂತ ಕೆಳಮಟ್ಟದಲ್ಲಿದೆ. ಹೀಗಿರುವಾಗ ಜನರ ಬದುಕು
ಸಮೃದ್ಧವಾಗಿರುವುದು ಸಾಧ್ಯವಿಲ್ಲ.

ನಮ್ಮ ಯುವಜನರ ಬದುಕನ್ನು ನಿರುದ್ಯೋಗ ಹೈರಾಣ ಮಾಡುತ್ತಿದೆ. ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರವು ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ. ಬೇಡಿಕೆಯ ಕೊರತೆಯಿಂದ ಉದ್ದಿಮೆ ರಂಗದಲ್ಲಿ ಉತ್ಪಾದನೆ ಕುಸಿದಿದೆ. ಖಾಸಗಿ ಹಾಗೂ ಸರ್ಕಾರಿ ಬಂಡವಾಳ ಹೂಡಿಕೆಯಲ್ಲಿ ಏರಿಕೆಯಾಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ 2024- 25ರ ಎರಡನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಆರ್‌ಬಿಐನ ಅಂದಾಜು ಆದ ಶೇಕಡ 7ಕ್ಕೆ ಪ್ರತಿಯಾಗಿ ಶೇ 5.4ಕ್ಕೆ ಇಳಿದಿದೆ. ನಮ್ಮ ಮಾರುಕಟ್ಟೆಯನ್ನು ನಿರಾಶೆಯ ಛಾಯೆ ಆವರಿಸಿಕೊಂಡಿದೆ. ಇದರಿಂದ ನಮ್ಮ ಆರ್ಥಿಕತೆಯ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ.

ADVERTISEMENT

ಯುವಜನರನ್ನು ಕಾಡುತ್ತಿರುವ ಇಂದಿನ ನಿರುದ್ಯೋಗ ಪ್ರಮಾಣವು 45- 50 ವರ್ಷಗಳ ಅವಧಿಯಲ್ಲೇ ಅತ್ಯಧಿಕವಾದುದು ಎನ್ನಲಾಗಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‍ಒ) ಪ್ರಕಟಿಸಿರುವ ‘ಇಂಡಿಯಾ ಎಂಪ್ಲಾಯ್‍ಮೆಂಟ್ ರಿಪೋರ್ಟ್– 2024’ರ ಪ್ರಕಾರ, 2022ರಲ್ಲಿ ಉದ್ಯೋಗಕ್ಕೆ ಅರ್ಹರಾದ ಒಟ್ಟು ದುಡಿಮೆಗಾರರ ಸಂಖ್ಯೆ ಇದ್ದದ್ದು 54.45 ಕೋಟಿ. ಆದರೆ ಉದ್ಯೋಗದಲ್ಲಿದ್ದ ಮತ್ತು ಉದ್ಯೋಗವನ್ನು ಅರಸುತ್ತಿದ್ದ ಕಾರ್ಮಿಕರ ಒಟ್ಟು ಸಂಖ್ಯೆ 56.74 ಕೋಟಿ. ಇವೆರಡರ ನಡುವಿನ ವ್ಯತ್ಯಾಸ 2.29 ಕೋಟಿ. ಅಂದರೆ, 2022ರಲ್ಲಿದ್ದ ನಿರುದ್ಯೋಗಿಗಳ ಸಂಖ್ಯೆ 2.29 ಕೋಟಿ. ಇದರ ಒಳಾರ್ಥವಿಷ್ಟು. ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗಗಳ ಸಂಖ್ಯೆ ಹೆಚ್ಚುತ್ತಿಲ್ಲ. ಒಂದು ನೆಲೆಯಲ್ಲಿ, ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗಗಳ ಬೆಳವಣಿಗೆಯ ನಡುವಿನ ಸಂಬಂಧ ಕಡಿದುಹೋಗಿರುವಂತೆ ಕಾಣುತ್ತದೆ. ಉದ್ಯೋಗದ ಸ್ಥಿತಿ ಎಷ್ಟು ಆತಂಕಕಾರಿಯಾಗಿದೆ ಎಂಬುದನ್ನು ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ನೀಡುವ ಜಾಹೀರಾತಿಗೆ ಎಷ್ಟೊಂದು ಯುವಕರು, ಯುವತಿಯರು ಅರ್ಜಿ ಹಾಕುತ್ತಾರೆ ಎಂಬುದರಿಂದ ತಿಳಿದುಕೊಳ್ಳಬಹುದು. ಕೆಲವು ವಿದ್ಯಮಾನಗಳನ್ನು ಇದಕ್ಕೆ ನಿದರ್ಶನವಾಗಿ ನೀಡಬಹುದು. ಉತ್ತರಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಇದ್ದ 62 ಜವಾನರ ಹುದ್ದೆಗಳಿಗೆ 3,700 ಮಂದಿ ಪಿಎಚ್.ಡಿ ಪದವೀಧರರು, 28,000 ಮಂದಿ ಸ್ನಾತಕೋತ್ತರ ಪರವೀಧರರು ಮತ್ತು 5,000 ಪದವೀಧರರನ್ನು ಒಳಗೊಂಡು 92,000 ಮಂದಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.

ರೈಲ್ವೆಯ 1.5 ಲಕ್ಷ ಹುದ್ದೆಗಳಿಗೆ ಬಿಹಾರವೊಂದರಿಂದಲೇ 10 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಆದರೆ ವಿವಿಧ ಕಾರಣಗಳಿಂದ ಈ ಪರೀಕ್ಷೆಯನ್ನು ರದ್ದುಪಡಿಸಲಾಯಿತು. ಇದೇ ರೀತಿ ಮಧ್ಯಪ್ರದೇಶದ
ಗ್ವಾಲಿಯರ್‌ನಲ್ಲಿ ಜವಾನ, ವಾಹನ ಚಾಲಕ ಮತ್ತು ಕಾವಲುಗಾರರ 15 ಹುದ್ದೆಗಳಿಗೆ 11,000 ಯುವಕರು ಅರ್ಜಿ ಸಲ್ಲಿಸಿದ್ದರೆ, ಗುಜರಾತಿನಲ್ಲಿ 10ನೇ ತರಗತಿ ವಿದ್ಯಾರ್ಹತೆಯ 3,400 ಹುದ್ದೆಗಳಿಗೆ
17 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು.

ಒಟ್ಟು ಉದ್ಯೋಗಿಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಪ್ರಮಾಣ ಶೇ 90ಕ್ಕಿಂತ ಅಧಿಕವಾಗಿದೆ.  ಇಂಡಿಯಾ ಎಂಪ್ಲಾಯ್‍ಮೆಂಟ್ ರಿಪೋರ್ಟ್‌– 2024ರ ಪ್ರಕಾರ, ಒಟ್ಟು ಉದ್ಯೋಗಿಗಳಲ್ಲಿ ಸ್ವಉದ್ಯೋಗಿಗಳ
ಪ್ರಮಾಣ ಶೇ 55.8ರಷ್ಟು ಇದ್ದರೆ, ಕಾಯಂ ಉದ್ಯೋಗಿಗಳ ಪ್ರಮಾಣ ಶೇ 21.5ರಷ್ಟು. ಅರೆಕಾಲಿಕ ಕಾರ್ಮಿಕರ ಪ್ರಮಾಣ ಶೇ 22.7ರಷ್ಟು. ಅಂದರೆ, ಉದ್ಯೋಗ ಅಭದ್ರತೆಯನ್ನು ಎದುರಿಸುತ್ತಿರುವ
ಸ್ವ ಉದ್ಯೋಗಿಗಳು ಮತ್ತು ಅರೆಕಾಲಿಕ ಉದ್ಯೋಗಿಗಳ ಪ್ರಮಾಣ ಶೇ 78ರಷ್ಟು. ಈ ವರ್ಗದ ಕಾರ್ಮಿಕರಿಗೆ ಉದ್ಯೋಗ ಭದ್ರತೆಯಿಲ್ಲ, ವಿಮಾ ಸೌಲಭ್ಯ ಹಾಗೂ ಪಿಂಚಣಿಯ ಖಾತರಿ ಇಲ್ಲ, ಕೂಲಿ ಅಥವಾ ಸಂಬಳ ಅತ್ಯಂತ ಕಡಿಮೆ. ಉದಾಹರಣೆಗೆ, ಸ್ವಉದ್ಯೋಗಿಗಳ ಮಾಸಿಕ ವರಮಾನ ₹11,973 ಮತ್ತು ಅರೆಕಾಲಿಕ ಉದ್ಯೋಗಿಗಳ ಮಾಸಿಕ ವರಮಾನ ₹ 8,267. ಅಂದರೆ ಸ್ವಉದ್ಯೋಗಿಗಳ ದಿನದ ಗಳಿಕೆ ₹ 400ರಷ್ಟಾದರೆ, ಅರೆಕಾಲಿಕ ಉದ್ಯೋಗಿಗಳ ದಿನದ ದುಡಿಮೆ ₹276. ಈ ಆದಾಯದಲ್ಲಿ ಅವರು ತಮ್ಮ ಕುಟುಂಬಗಳನ್ನು ಹೇಗೆ ನಿರ್ವಹಿಸುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ.

ದೇಶದ ಒಟ್ಟು ನಿರುದ್ಯೋಗಿಗಳಲ್ಲಿ ಯುವಕ–ಯುವತಿ ಯರ, ಅಂದರೆ 15-29 ವರ್ಷ ವಯೋಮಾನದವರ ಪ್ರಮಾಣ ಅಧಿಕವಾಗಿದೆ. ಗ್ರಾಮೀಣ ಪ್ರದೇಶದ ಯುವಕರಿ ಗಿಂತ ನಗರ ಪ್ರದೇಶದ ಯುವಕರಲ್ಲಿ ನಿರುದ್ಯೋಗ ಅಧಿಕ. ಅದರಲ್ಲಿಯೂ ವಿದ್ಯಾವಂತ ಯುವಕರು, ಯುವತಿಯರಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಒಟ್ಟು ನಿರುದ್ಯೋಗಿಗಳಲ್ಲಿ ಯುವಕರ ಪ್ರಮಾಣವೇ ಶೇ 82.9ರಷ್ಟಿದೆ. ವಿದ್ಯಾವಂತ ಯುವಕರ ಪ್ರಮಾಣವು 2000ದಲ್ಲಿ ಶೇ 54.2ರಷ್ಟಿದ್ದುದು 2022ರಲ್ಲಿ ಶೇ 65.7ಕ್ಕೆ ಏರಿದೆ. ಇಲ್ಲಿ
ಮತ್ತೊಂದು ವಿಚಿತ್ರವೆಂದರೆ, ವಿದ್ಯಾವಂತ ನಿರುದ್ಯೋಗಿಗಳಲ್ಲಿ ಯುವತಿಯರ ಪ್ರಮಾಣ ಹೆಚ್ಚು.

ಒಟ್ಟು ನಿರುದ್ಯೋಗಿಗಳಲ್ಲಿ ವಿದ್ಯಾವಂತ ಯುವಜನರ ಪ್ರಮಾಣ ಅಧಿಕವಾಗಿದೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ, ಉದ್ಯೋಗಕ್ಕೆ ಯುವಜನರನ್ನು ಅರ್ಹರನ್ನಾಗಿಸುವ ಸಾಮರ್ಥ್ಯ ನಮ್ಮ ಶಿಕ್ಷಣ ವ್ಯವಸ್ಥೆಗಿಲ್ಲ.
ಈ ಕಾರಣದಿಂದ ನಿರುದ್ಯೋಗವು ಉನ್ನತ ಶಿಕ್ಷಣ ಪಡೆದವರಲ್ಲಿ ಅಧಿಕವಾಗಿದೆ. ಇತ್ತೀಚೆಗೆ ಕಂಡು ಬರುತ್ತಿರುವ ಮತ್ತೊಂದು ಸಂಗತಿಯೆಂದರೆ, ಅಪಾರ ಸಂಖ್ಯೆಯ ಯುವಕರು ಉದ್ಯೋಗದಲ್ಲಿ ಇಲ್ಲ, ಉದ್ಯೋಗವನ್ನು ಅರಸುತ್ತಿಲ್ಲ, ಶಿಕ್ಷಣ ಪಡೆಯುತ್ತಿಲ್ಲ ಮತ್ತು ತರಬೇತಿ ನಿರತರಾಗಿಯೂ ಇಲ್ಲ. ಇಂತಹವರ ಪ್ರಮಾಣ ಅಧಿಕವಾಗುತ್ತಿದೆ.

‘ನರೇಗಾ’ ಬಿಟ್ಟರೆ ದೇಶದಲ್ಲಿ ಉದ್ಯೋಗ ನೀಡುವ ಅಥವಾ ಸೃಷಿಸುವ ಕಾರ್ಯಕ್ರಮಗಳೇ ಇಲ್ಲ.
ನಿರುದ್ಯೋಗಿಗಳಿಗಾಗಿ ಕೆಲವು ಕಾರ್ಯಕ್ರಮಗಳೇನೋ ಇವೆ. ಆದರೆ ಅವು ಸಬ್ಸಿಡಿ-ಬ್ಯಾಂಕ್ ಸಾಲದಂತಹವನ್ನು ಒಳಗೊಂಡಿವೆಯೇ ವಿನಾ ಉದ್ಯೋಗ ನೀಡುವ ಕಾರ್ಯಕ್ರಮಗಳಲ್ಲ. ಹಣಕಾಸು ಸಚಿವರು 2024- 25ರ ಬಜೆಟ್ಟಿನಲ್ಲಿ ಹೇಳಿರುವಂತೆ, ನಮ್ಮಲ್ಲಿ ಇರುವುದು ‘ಇನ್‍ಸೆಂಟಿವ್ ಲಿಂಕ್ಡ್ ಎಂಪ್ಲಾಯ್‍ಮೆಂಟ್’ ಕಾರ್ಯಕ್ರಮ ಗಳಾಗಿವೆ. ‘ಯುವಕರು, ಯುವತಿಯರು ಉದ್ಯೋಗಕ್ಕೆ
ಪ್ರಯತ್ನಪಡುವುದಕ್ಕೆ ಬದಲಾಗಿ ಉದ್ಯೋಗ ನೀಡುವವ ರಾಗಬೇಕು’ ಎಂದು ಪ್ರಧಾನಮಂತ್ರಿ ಕರೆ ನೀಡುತ್ತಿದ್ದಾರೆ.

ಆಹಾರ ಹಣದುಬ್ಬರವು 2024ರ ಅಕ್ಟೋಬರ್ ತಿಂಗಳಲ್ಲಿ ಶೇ 10.87ರಷ್ಟಾಗಿದೆ. ಇದರಿಂದ ಒಟ್ಟಾರೆ  ಬೇಡಿಕೆಯು ದುರ್ಬಲಗೊಂಡಿದೆ. ಸರ್ಕಾರಿ ವೆಚ್ಚದ ಪ್ರಮಾಣವೂ ಇಳಿಕೆಯಾಗಿದೆ ಎನ್ನಲಾಗಿದೆ. ಬಜೆಟ್ಟಿನಲ್ಲಿ ಸರ್ಕಾರಿ ವೆಚ್ಚದಲ್ಲಿ ರೆವಿನ್ಯೂ ವೆಚ್ಚದ ಪ್ರಮಾಣ 2020- 21ರಲ್ಲಿ ಶೇ 86.45ರಷ್ಟಿದ್ದುದು 2024- 25ರಲ್ಲಿ
ಶೇ 76.95ಕ್ಕೆ ಇಳಿದಿದೆ.

ಆರ್ಥಿಕ ಸಮೃದ್ಧಿಯು ಹಲವರ ಪಾಲಾಗುವ ಬದಲು ಕೆಲವರ ಪಾಲಾಗುತ್ತಿದೆ. ವರ್ಲ್ಡ್‌ ಇ‌ನೀಕ್ವಾಲಿಟಿ ಲ್ಯಾಬಿನ ಸಾಂಖ್ಯಿಕ ವಿವರಗಳ ಅನುಸಾರ, ಭಾರತದಲ್ಲಿನ ಒಟ್ಟು ವಯಸ್ಕ ಜನಸಂಖ್ಯೆಯಲ್ಲಿ ಶೇ 10ರಷ್ಟು ಮಂದಿ ಅತಿ ಶ್ರೀಮಂತರಾಗಿದ್ದಾರೆ. ಇವರು 2022ರ ಒಟ್ಟು ವರಮಾನದಲ್ಲಿ ಶೇ 57.7ರಷ್ಟನ್ನು ಹೊಂದಿದ್ದು, ಒಟ್ಟು
ಸಂಪತ್ತಿನಲ್ಲಿ ಶೇ 65ರಷ್ಟು ಇವರ ಪಾಲಾಗಿದೆ. ಉಳಿದ ಶೇ 90ರಷ್ಟು ಜನರಿಗೆ ಅದರಲ್ಲಿ ಅರ್ಧದಷ್ಟೂ ಪಾಲು ದೊರೆಯುತ್ತಿಲ್ಲ. ಆರ್ಥಿಕ ಸಮೃದ್ಧಿ ಕೆಲವರ ಪಾಲಾಗುತ್ತಿರುವ ಕಾರಣ ಅಸಮಾನತೆ ಮಿತಿಮೀರಿ ಬೆಳೆಯುತ್ತಿದೆ.

ನಿರುದ್ಯೋಗ ಮತ್ತು ಅಸಮಮಾನತೆಯಿಂದ ಯುವಜನ ಕಡುಕಷ್ಟವನ್ನು ಅನುಭವಿಸುವಂತಾಗಿದೆ.
ಸರ್ಕಾರಗಳು ನೇರವಾಗಿ ಉದ್ಯೋಗ ನೀಡುವ ಅಥವಾ ಸೃಷ್ಟಿಸುವ ಕಾರ್ಯಕ್ರಮಗಳನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.