ADVERTISEMENT

ವಿಶ್ಲೇಷಣೆ: ಪ್ರಯಾಸದ ಪರ್ವತ ಪ್ರವಾಸ

ಪರ್ವತಗಳನ್ನು ಸಂರಕ್ಷಿಸುವ ಕ್ರಮವನ್ನು ನೇಪಾಳದಿಂದ ಕಲಿಯೋಣ

ಗುರುರಾಜ್ ಎಸ್.ದಾವಣಗೆರೆ
Published 10 ಡಿಸೆಂಬರ್ 2021, 19:43 IST
Last Updated 10 ಡಿಸೆಂಬರ್ 2021, 19:43 IST
ಪ್ರಯಾಸದ ಪರ್ವತ ಪ್ರವಾಸ
ಪ್ರಯಾಸದ ಪರ್ವತ ಪ್ರವಾಸ   

ನಮ್ಮ ಪಶ್ಚಿಮ ಘಟ್ಟ, ಹಿಮಾಲಯ ಪರ್ವತ, ಅರಾವಳಿ ಬೆಟ್ಟ ಸಾಲುಗಳನ್ನು ಚಿತ್ರಗಳಲ್ಲಿ ಕಂಡಾಗ, ಪ್ರವಾಸ ಮಾಡಿ ಖುದ್ದಾಗಿ ನೋಡಿದಾಗ ಆಗುವ ಆನಂದ ಹೇಳತೀರದು. ಟ್ರೆಕ್ಕಿಂಗ್, ಕ್ಲೈಂಬಿಂಗ್, ತೀರ್ಥಯಾತ್ರೆ ಮತ್ತು ರಜೆಯ ಮೋಜಿಗಾಗಿ ಪರ್ವತ ಪ್ರದೇಶಗಳಿಗೆ ನಾವೆಲ್ಲ ಆಗಾಗ ಭೇಟಿ ನೀಡುತ್ತೇವೆ. ಜಲಪಾತಗಳ ವೈಭವ, ವನರಾಶಿ, ಚಿಟ್ಟೆ, ಕೀಟ, ಪಕ್ಷಿ- ಪ್ರಾಣಿ- ಮರ, ಝರಿ, ತಂಗಾಳಿ,
ಕುಳಿರ್ಗಾಳಿ, ಮಳೆ, ವಿಹಂಗಮ ನೋಟ, ಒಡಲೊಳಗಿನ ಸತ್ವಶಾಲಿ ಅದಿರು, ಗಿಡಮೂಲಿಕೆ, ಬುಡಕಟ್ಟು ಜನರ ಜೀವನವೈವಿಧ್ಯ, ಕಟ್ಟುಪಾಡು, ಔಷಧಕ್ರಮ, ನೆಲಮೂಲದ ಜ್ಞಾನಗಳನ್ನು ಕಂಡು ಜೀವನ ಸಾರ್ಥಕ ವಾಯಿತು ಎಂದುಕೊಳ್ಳುತ್ತೇವೆ. ಅಲ್ಲಿನ ಅಧ್ವಾನಗಳನ್ನು ನೋಡಿ ಕೆಂಡಾಮಂಡಲ ಕೋಪ ಬರುವುದೂ ಇದೆ.

ಗಿರಿಶ್ರೇಣಿಗಳನ್ನು ತೆರೆದಿಟ್ಟ ತಿಜೋರಿಗಳೆಂದು ಪರಿಗಣಿಸಿ, ನಿರಂತರ ದಾಳಿ ಮಾಡಿ ಸಂಪನ್ಮೂಲ
ಗಳನ್ನೆಲ್ಲಾ ಮನಬಂದಂತೆ ಲೂಟಿ ಮಾಡಿಯಾದ ಮೇಲೆ ಅವುಗಳ ತಪ್ಪಲಿನಲ್ಲಿ ಮನೆ ಕಟ್ಟಿ, ಬೆಟ್ಟ ಕುಸಿತಕ್ಕೆ ಸಿಲುಕಿ ನಲುಗಿದಾಗ ‘ಅಯ್ಯೋ ಎಲ್ಲ ನಾಶವಾಯಿತಲ್ಲ’ ಎಂದು ಪರಿತಪಿಸುತ್ತೇವೆ. ಪರ್ವತಗಳ ಪ್ರಾಮುಖ್ಯ ತಿಳಿಸಲೆಂದೇ ಈ ಸಲದ ಅಂತರರಾಷ್ಟ್ರೀಯ ಪರ್ವತ ದಿನಾಚರಣೆಯನ್ನು (ಡಿ. 11) ‘ಸಸ್ಟೇನಬಲ್ ಮೌಂಟನ್ ಟೂರಿಸಂ’ (ಸುಸ್ಥಿರ ಪರ್ವತ ಪ್ರವಾಸೋದ್ಯಮ) ಎಂಬ ಘೋಷವಾಕ್ಯ ದೊಂದಿಗೆ ಆಚರಿಸಲಾಗುತ್ತಿದೆ.

ಅನ್ಯ ಪ್ರದೇಶಗಳಿಗೆ ಹೋಲಿಸಿದರೆ ಪರ್ವತ ಪ್ರದೇಶಗಳ ಜೀವವೈವಿಧ್ಯ ಅತ್ಯಂತ ಸೂಕ್ಷ್ಮ ಮತ್ತು ಕಿರಿದು.
ಮುನ್ನೂರು ಮೀಟರ್ ಎತ್ತರವಿರುವ ಬೆಟ್ಟ ಪ್ರದೇಶವನ್ನು ಪರ್ವತ ಎನ್ನುತ್ತಾರೆ. ಜಗತ್ತಿನ ಮುಕ್ಕಾಲು ಪಾಲು ಸಿಹಿನೀರಿನ ಮೂಲಗಳು ಪರ್ವತದಲ್ಲೇ ಇವೆ. ವಿಶ್ವ ಜನಸಂಖ್ಯೆಯ ಕಾಲು ಭಾಗ ಪರ್ವತಗಳಲ್ಲಿ ಮತ್ತು ಆಸುಪಾಸಿನಲ್ಲಿ ನೆಲೆ ನಿಂತಿದೆ. ವಿಶ್ವಪರಂಪರೆಯ ತಾಣವೆಂಬ ಹೆಗ್ಗಳಿಕೆಯೂ ಪರ್ವತಗಳಿಗೆ ಸಂದಿದೆ. ದಕ್ಷಿಣ ಭಾರತದ ಜಲಶಿಖರವೆಂದೇ ಕರೆಯಲಾಗುವ ಅಸಾಧಾರಣ ಜೀವವೈವಿಧ್ಯ ಮತ್ತು ಸ್ಥಳೀಯ ಪ್ರಭೇದಗಳಿಂದ ತುಂಬಿರುವ ಪಶ್ಚಿಮ ಘಟ್ಟಗಳು ತಮಿಳುನಾಡಿನಿಂದ ಗುಜರಾತಿನ ಗಡಿಯಂಚಿನವರೆಗೆ ಹಬ್ಬಿದ್ದು, ಕಳೆದ ನಾಲ್ಕು ದಶಕಗಳಿಂದ ಗಣಿಗಾರಿಕೆ, ಸುರಂಗ ಮಾರ್ಗ, ರೈಲು ಮಾರ್ಗ, ಜಲವಿದ್ಯುತ್ ಯೋಜನೆ, ಮರಳು ಸಾಗಣೆ, ಅಣುಸ್ಥಾವರದ ಯೋಜನೆಗಳಿಂದ ತತ್ತರಿಸಿ ಹೋಗಿವೆ. ಥಾರ್‌ ಮರುಭೂಮಿಯ ವಿಸ್ತರಣೆಗೆ ತಡೆಗೋಡೆಯಾಗಿ ನಿಂತು ತನ್ನ ವ್ಯಾಪ್ತಿಯ 20ಕ್ಕೂ ಹೆಚ್ಚು ಅಭಯಾರಣ್ಯಗಳ ಲಕ್ಷೋಪಲಕ್ಷ ಜೀವಜಂತುಗಳಿಗೆ ನೆಲೆ ನೀಡಿರುವ ಅರಾವಳಿ ತನ್ನೊಳಗಿನ ಗುಲಾಬಿ ಗ್ರಾನೈಟ್, ಡೋಲೋಮೈಟ್, ಫಾಸ್ಫೋರೈಟ್‍ಗಳಿಂದ ಸಿಡಿಮದ್ದಿನ ಪಾಲಾಗಿ ಛಿಧ್ರವಾಗಿ ನೆಲಕ್ಕುರುಳುತ್ತಿದೆ.

ADVERTISEMENT

ಪರ್ವತ ಪ್ರವಾಸೋದ್ಯಮ ವಾರ್ಷಿಕ ಲಕ್ಷಾಂತರ ಕೋಟಿ ರೂಪಾಯಿ ಆದಾಯ ತರುತ್ತದೆ. ವಿಶ್ವದ ಪ್ರವಾಸ ವಿಧಗಳಲ್ಲಿ ಪರ್ವತ ಪ್ರವಾಸದ ಪಾಲು ಶೇ 20ರಷ್ಟಿದ್ದು, ಹೆಚ್ಚಿನ ರಂಜನೆ ನೀಡುವ ಪ್ರವಾಸ ಎಂದು ನಂಬಲಾಗಿದೆ. ಜನರ ಬಳಿ ದುಡ್ಡು ಮತ್ತು ಸಮಯ ಎರಡೂ ಇವೆ, ಸರ್ಕಾರಗಳಿಗೆ ಆದಾಯವೂ ಹೆಚ್ಚು ಎಂಬ ಕಾರಣದಿಂದ ಅದಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡಲಾಗುತ್ತಿದೆ.

ತೀರ ಮತ್ತು ದ್ವೀಪ ಪ್ರದೇಶಗಳ ಪ್ರವಾಸ ನಂಬರ್ ಒನ್ ಸ್ಥಾನದಲ್ಲಿದ್ದರೆ, ಪರ್ವತ ಪ್ರವಾಸ ಎರಡನೆಯ ಸ್ಥಾನದಲ್ಲಿದೆ. ಪರ್ವತ ಪ್ರವಾಸ ಕೆಲ ತಾಸುಗಳಿಂದ ಹಿಡಿದು ತಿಂಗಳವರೆಗೂ ವಿಸ್ತರಿಸಿಕೊಳ್ಳುತ್ತದೆ. ನೇಚರ್ ವಾಕ್, ಸೈಕಲ್, ಮೌಂಟನ್ ಬೈಕ್ ಓಡಿಸುವವರು, ಕಲ್ಲು ಬಂಡೆ, ಹಿಮಕೋಡುಗಳನ್ನು ಏರುವವರು, ಹ್ಯಾಂಗ್ ಗ್ಲೈಡಿಂಗ್, ಗ್ಲೇಸಿಯರ್ ಸ್ಕೀಯಿಂಗ್, ಸ್ನೊ ಸ್ಕೂಟರಿಂಗ್, ಸ್ನೊ ಬೋರ್ಡಿಂಗ್, ಕ್ರಾಸ್ ಕಂಟ್ರಿ ಓಡುವವರು, ಸಿನಿಮಾ ಶೂಟಿಂಗ್, ಕೇವಿಂಗ್ (ಗುಹೆವಾಸ) ಮಾಡುವವರೆಲ್ಲರಿಗೂ ಪರ್ವತಗಳು ಬೇಕು. ಪ್ರವಾಸಿಗರಲ್ಲದೇ ಪರ್ವತ ಜೀವಿಪರಿಸ್ಥಿತಿ ಅಧ್ಯಯನ ಮಾಡಲು ತಜ್ಞರ ತಂಡಗಳೂ ಬರುತ್ತವೆ. ಪ್ರತೀ ಬೆಟ್ಟದ ತುದಿಯ ದೇವಸ್ಥಾನಗಳಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ರಾತ್ರಿ ಅಲ್ಲಿಯೇ ಕ್ಯಾಂಪ್ ಮಾಡುತ್ತಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಜನ ಸೇರುತ್ತಾರೆ. ಟನ್‌ಗಟ್ಟಲೇ ಕಸ ಹುಟ್ಟುತ್ತದೆ. ಅಲ್ಲಿನ ಪರಿಸರ ನಾಶ ನಮ್ಮ ದುರಂತದ ಮುನ್ನುಡಿ ಎಂಬುದು ಅರಿವಾಗುವುದೇ ಇಲ್ಲ.

‘ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ’ ಎಂಬ ಕವಿಗೀತೆಯನ್ನು ಕೇಳಿ- ಹಾಡುತ್ತ ಬೆಳೆದವರು ನಾವು. ಬೆಟ್ಟ ಏರಿ ಚಿತ್ರ ಕ್ಲಿಕ್ಕಿಸುವಾಗ ಇರುವ ಪ್ರೀತಿ ಬೆಟ್ಟ
ಇಳಿಯುತ್ತಿದ್ದಂತೆ ಕರಗಿ ಹೋಗಿರುತ್ತದೆ. ಎಸೆದ ಕಸದ ನೆನಪಾಗುವುದೇ ಇಲ್ಲ.

ಭೂಕಂಪ, ನೆಲಕುಸಿತ, ಲಾವಾ ಹರಿವು, ಬಂಡೆ ಕುಸಿತ, ಹಿಮಪಾತಗಳು ವಿಶ್ವದಾದ್ಯಂತ ಸಂಭವಿಸುತ್ತಿವೆ. ತ್ವರಿತವಾಗಿ ಬೆಳೆಯುತ್ತಿರುವ ವಿಶ್ವ ಪ್ರವಾಸೋದ್ಯಮ ಈಗಾಗಲೇ ಭೂಮಿ ಬಿಸಿಗೆ ಶೇ 5ರಷ್ಟು ಇಂಗಾಲದ ಡೈ ಆಕ್ಸೈಡ್‍ ಅನ್ನು ಸೇರಿಸುತ್ತಿದ್ದು ಮುಂದಿನ ದಶಕಗಳಲ್ಲಿ ಇದು ಇನ್ನೂ ಹೆಚ್ಚಲಿದೆ. ಬೆಟ್ಟದ ದಾರಿ ನಿರ್ಮಾಣ, ಆಟದ ಇಳಿಜಾರಿಗೆ ಕಟ್ಟೆ ಕಟ್ಟುವ ಚಟುವಟಿಕೆಗಳಿಂದ ಅಲ್ಲಿನ ಪ್ರಶಾಂತ ವಾತಾವರಣವು ಕಸ ಹಾಗೂ ಶಬ್ದಮಾಲಿನ್ಯಕ್ಕೆ ಈಡಾಗುತ್ತದೆ. ಎಲ್ಲೆಲ್ಲಿಂದಲೋ ಬರುವ ಜನ ತಮ್ಮ ಚಪ್ಪಲಿ, ಆಹಾರಗಳ ಮೂಲಕ ವಾತಾವರಣಕ್ಕೆ ಹೊಂದದ, ಆಕ್ರಮಣಕಾರಿ ಸಸ್ಯಪ್ರಭೇದಗಳನ್ನೂ ತರು ತ್ತಾರೆ. ಕಳೆ ಬೆಳೆದು ಸ್ಥಳೀಯ ಪ್ರಭೇದಗಳು ಒತ್ತಡಕ್ಕೆ ಸಿಲುಕುತ್ತವೆ ಇಲ್ಲವೆ ನಾಶವಾಗಿಬಿಡುತ್ತವೆ.

ನೀತಿ ಆಯೋಗ ತನ್ನ ವರದಿಯಲ್ಲಿ ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ಹಿಮಾಲಯದ ಬೇರೆ ಭಾಗಗಳಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಸಾಧ್ಯ ಎಂದಿದೆ. ಇಂಡಿಯನ್ ಹಿಮಾಲಯನ್ ರೀಜನ್‌ನ (ಐಎಚ್‌ಆರ್‌) ಪ್ರವಾಸೋದ್ಯಮವನ್ನು ಸರಿಯಾಗಿ ಅಭಿವೃದ್ಧಿಪಡಿಸಿದರೆ ದೇಶದ ಜಿಡಿಪಿಗೆ ದೊಡ್ಡ ಮೊತ್ತದ ಆದಾಯ ಸಿಗಲಿದೆ. ಸ್ಥಳೀಯ ಸಂಸ್ಕೃತಿಗೆ ಪ್ರೋತ್ಸಾಹ, ಉದ್ಯೋಗ ಸೃಷ್ಟಿ ಮತ್ತು ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥಿತ ಹಾಗೂ ಪರಿಣಾಮಕಾರಿ ಯೋಜನೆ ಜಾರಿಗೆ ತಂದರೆ ವಿಶ್ವಸಂಸ್ಥೆ ಹೇಳಿರುವ ಸುಸ್ಥಿರ ಅಭಿವೃದ್ಧಿ ಗುರಿ 8 (ಯೋಗ್ಯ ಕೆಲಸ, ಆರ್ಥಿಕ ಪ್ರಗತಿ) ಹಾಗೂ 12 (ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ) ಎರಡನ್ನೂ ಸಾಧಿಸಬಹುದು.

ಪರ್ವತಗಳನ್ನು ಸಂರಕ್ಷಿಸುವ ಕ್ರಮವನ್ನು ನೇಪಾಳ ದೇಶದಿಂದ ಕಲಿಯಬೇಕು. ವರ್ಲ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌ (ಡಬ್ಲ್ಯುಡಬ್ಲ್ಯುಎಫ್‌) ಮತ್ತು ನೇಪಾಳ ಜಂಟಿಯಾಗಿ ಕೈಗೊಂಡಿರುವ ‘ಗ್ರೀನ್ ಹೈಕರ್’ ಅಭಿಯಾನದಲ್ಲಿ ನಿಸರ್ಗಸ್ನೇಹಿ ಪ್ರವಾಸ ಹೇಗಿರಬೇಕು ಎಂಬುದರ ಬಗ್ಗೆ ಅಲ್ಲಿಗೆ ಬಂದವರಿಂದಲೇ ಚಿತ್ರ– ವಿಡಿಯೊ ಪಡೆದು ಸಂವಾದ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಯಾಣಿಕ ವಾಹನ ಹಾಗೂ ಸರಕುಸಾಗಣೆ ವಾಹನಗಳು ಉಗುಳುವ ಹೊಗೆ ಹಾಗೂ ದಟ್ಟಣೆಯು ಬೆಟ್ಟದ ಪ್ರಶಾಂತ ಪರಿಸರಕ್ಕೆ ದೊಡ್ಡ ಧಕ್ಕೆ ತರುತ್ತವೆಯಾದ್ದರಿಂದ ಖಾಸಗಿ ಟೂರ್ ಆಪರೇಟರ್ ಹಾಗೂ ಇತರ ವಾಹನಗಳನ್ನು ಬೆಟ್ಟದ ತಳದಲ್ಲಿಯೇ ತಡೆದು ಜನರನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಕಳಿಸಿಕೊಡಲಾಗುತ್ತಿದೆ. ಅಲ್ಲಿಗೆ ತೆರಳುವ ಪ್ರತಿಯೊಬ್ಬರೂ ಒಂದು ಗಿಡ ನೆಡಬೇಕು ಇಲ್ಲವೆ ಬೆಳೆದು ನಿಂತ ಮರಗಳನ್ನು ದತ್ತು ತೆಗೆದುಕೊಂಡು ಪೋಷಿಸಬೇಕು. ಜನ ತರುವ ಆಹಾರ, ಪಾನೀಯದ ಪ್ಯಾಕೆಟ್- ಬಾಟಲಿಗಳಿಗೆ ಬೆಟ್ಟ ಪ್ರದೇಶಕ್ಕೆ ಪ್ರವೇಶವೇ ಇಲ್ಲ. ಅಲ್ಲದೆ ಬಳಸಿದ ಪೊಟ್ಟಣಗಳನ್ನು ಹಿಂತಿರುಗಿ ಬೇಸ್ ಸ್ಟೇಷನ್‍ಗೆ ತರಲೇಬೇಕು ಇಲ್ಲವೆ ಅಲ್ಲಲ್ಲೇ ನಿಗದಿ ಮಾಡಿರುವ ಜಾಗಗಳಲ್ಲಿ ವಿಲೇವಾರಿ ಮಾಡಿದ್ದಕ್ಕೆ ದಾಖಲೆ ತರಬೇಕು. ಆಗಮಾತ್ರ ಅವರವರ ಸಾಮಾನು ಪ್ರವಾಸಿಗರಿಗೆ ಸಿಗುತ್ತದೆ! ಇಂಥ ಕ್ರಮ ನಮ್ಮಲ್ಲೂ ಬರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.