ವಿಶ್ಲೇಷಣೆ
ಕರ್ನಾಟಕ ಸರ್ಕಾರದ ಮುಂದೆ ಎರಡು ಆಯೋಗಗಳ ವರದಿಗಳಿವೆ. ಮೊದಲನೆಯದು, ಎಚ್. ಕಾಂತರಾಜ ಅಧ್ಯಕ್ಷತೆಯ ಆಯೋಗ ನೀಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಒಂದು ವರದಿ ಮತ್ತು ಈ ವರದಿಯನ್ನು ಆಧರಿಸಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಶಿಫಾರಸು ಮಾಡಿರುವ ಪರಿಷ್ಕೃತ ಮೀಸಲಾತಿ ಪಟ್ಟಿಯ ಇನ್ನೊಂದು ವರದಿ.
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಮಾಹಿತಿಗಳನ್ನು ಮುಂದಿಟ್ಟುಕೊಂಡು, ಈ ಎರಡು ಆಯೋಗಗಳ ವರದಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡರಲ್ಲಿ ಹೆಚ್ಚು ವಿವಾದಗಳನ್ನು ಸೃಷ್ಟಿಸಿರುವುದು ಕಾಂತರಾಜ ಅಧ್ಯಕ್ಷತೆಯ ಆಯೋಗದ ವರದಿ. ಇದರಲ್ಲಿ ನಮೂದಿಸಲಾಗಿರುವ ಜಾತಿವಾರು ಜನಸಂಖ್ಯೆಯೇ ಈಗಿನ ವಿವಾದದ ಮುಖ್ಯ ವಿಷಯ. ಈ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವವರು ಮುಖ್ಯವಾಗಿ ಮೂರು ಆಕ್ಷೇಪಗಳನ್ನು ಎತ್ತಿದ್ದಾರೆ. ವರದಿಯು ಮಂಡನೆಯ ಪೂರ್ವದಲ್ಲಿಯೇ ಸೋರಿಕೆಯಾಗಿದೆ, ಸಮೀಕ್ಷೆಯು ರಾಜ್ಯದ ಸಂಪೂರ್ಣ ಜನಸಂಖ್ಯೆಯನ್ನು ಒಳಗೊಂಡಿಲ್ಲ ಮತ್ತು ಸಮೀಕ್ಷೆಯು ವೈಜ್ಞಾನಿಕವಾಗಿ ನಡೆದಿಲ್ಲ ಎನ್ನುವುದು ಈ ಮೂರು ಆರೋಪಗಳು.
ಈಗ ಮಾಧ್ಯಮಗಳಲ್ಲಿ ಸೋರಿಕೆಯಾಗಿ ಚರ್ಚೆಯಾಗುತ್ತಿರುವ ವರದಿಗಳ ಮುಖ್ಯಾಂಶಗಳ ಜೊತೆ ಹಳೆಯ ಸೋರಿಕೆಯನ್ನು ಆಧರಿಸಿದ ವರದಿಗಳನ್ನು ಹೋಲಿಸಿ ನೋಡಿದರೆ, ಹಿಂದೆ ಜಾತಿ ಜನಗಣತಿಯ ಮಾಹಿತಿ ಸೋರಿಕೆಯಾಗಿತ್ತು ಎಂಬ ಆರೋಪವೇ ನಿರಾಧಾರವಾದುದು ಎಂದು ಮನವರಿಕೆಯಾಗಬಹುದು.
ಸಮೀಕ್ಷೆಯಲ್ಲಿ ಒಂದಷ್ಟು ಕುಟುಂಬಗಳು ಬಿಟ್ಟುಹೋಗಿವೆ ಎನ್ನುವ ಎರಡನೇ ಆರೋಪವನ್ನು ಖಂಡಿತ ನಿರಾಕರಿಸಲಾಗದು. ಜಾತಿ-ಉಪಜಾತಿಗಳ ಮಾಹಿತಿಯೇ ಒಂದು ಗೊಂದಲದ ಗೂಡು. ಈಗ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಮೀಸಲಾತಿ ಪಟ್ಟಿಯನ್ನು ಅವಲೋಕಿಸಿದರೆ, ನಿಖರ ಮಾಹಿತಿ ಸಂಗ್ರಹ ಎಷ್ಟು ಕಷ್ಟದ್ದು ಎನ್ನುವುದು ಅರಿವಾಗಬಹುದು. ಉದಾಹರಣೆಗೆ, ವೀರಶೈವ-ಲಿಂಗಾಯತ ಸಮುದಾಯಗಳಿಗೆ ಪ್ರವರ್ಗ 3ಬಿಯಲ್ಲಿ ನೀಡಲಾಗಿರುವ ಮೀಸಲಾತಿ ಪಟ್ಟಿಯಲ್ಲಿ ಹೆಳವ, ಅಂಬಿಗ, ಬೋಯಿ, ಸುಣಗಾರ, ಹೂಗಾರ, ಕುರುಬ, ಕುಂಬಾರ, ಹಡಪದ ಸೇರಿದಂತೆ 23 ಉಪಜಾತಿಗಳ ಹೆಸರುಗಳಿವೆ. ಇವುಗಳಲ್ಲಿ ಕೆಲವು ಉಪಜಾತಿಗಳ ಹೆಸರುಗಳು ಪ್ರವರ್ಗ 1ರಲ್ಲಿ ಮತ್ತು ಇನ್ನು ಕೆಲವು ಪ್ರವರ್ಗ 2ಎಯಲ್ಲಿ ಹಿಂದುಳಿದ ಜಾತಿಗಳಿಗೆ ನೀಡಲಾಗಿರುವ ಮೀಸಲಾತಿ ಪಟ್ಟಿಯಲ್ಲಿಯೂ ಇವೆ.
ಈ ಬಾರಿಯ ಸಮೀಕ್ಷೆಯ ಕಾಲದಲ್ಲಿ ಈ 23 ಉಪಜಾತಿಗಳಲ್ಲಿ ಬಹಳಷ್ಟು ಮಂದಿ ತಮ್ಮನ್ನು ಲಿಂಗಾಯತರೆಂದು ಕರೆದುಕೊಳ್ಳದೆ (ಲಿಂಗಾಯತ ಹಡಪದ, ಲಿಂಗಾಯತ ಹೂಗಾರ ಇತ್ಯಾದಿ) ಬರೀ ಉಪಜಾತಿಗಳನ್ನು ನಮೂದಿಸಿದ್ದಾರೆ ಎನ್ನುವ ಅಭಿಪ್ರಾಯ ಇದೆ. 3ಬಿಯಲ್ಲಿ ಶೇಕಡ ಐದರಷ್ಟು ಮೀಸಲಾತಿ ಇದ್ದರೆ, ಪ್ರವರ್ಗ 2ಎಯಲ್ಲಿ ಶೇಕಡ 15ರಷ್ಟು ಮೀಸಲಾತಿ ಇರುವುದು ಇದಕ್ಕೆ ಮುಖ್ಯ ಕಾರಣ. ಇದರಿಂದಾಗಿ ಲಿಂಗಾಯತರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆಯಾಗಿರುವ ಎಲ್ಲ ಸಾಧ್ಯತೆಗಳಿವೆ.
ಈ ಗೊಂದಲಕ್ಕೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡುವುದಾದರೆ ಅಣ್ಣ ಬಸವಣ್ಣನವರನ್ನು ಮಾಡಬೇಕು. ವಚನ ಚಳವಳಿಯ ಕಾಲದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿದ ಲಕ್ಷಾಂತರ ಕುಟುಂಬಗಳವರು ಲಿಂಗಧಾರಣೆ ಮಾಡಿ ಲಿಂಗಾಯತರಾದರು, ಉಳಿದವರು ತಮ್ಮ ಮೂಲಜಾತಿಗಳಲ್ಲಿಯೇ ಉಳಿದುಕೊಂಡಿದ್ದರು. ಆದರೆ ಎರಡೂ ಕಡೆಯವರು ತಮ್ಮ ಉಪಜಾತಿಗಳ ಹೆಸರುಗಳನ್ನು ಕೈಬಿಡದೆ ಇರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಇದನ್ನು ಸರಿಪಡಿಸುವುದು ಹೇಗೆ ಎನ್ನುವುದನ್ನು ಲಿಂಗಾಯತ ಸಮಾಜದ ನಾಯಕರು ಕೂತು ಪರಸ್ಪರ ವಿಚಾರವಿನಿಮಯ ಮಾಡಿಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕು. ಇದರಲ್ಲಿ ಸರ್ಕಾರಕ್ಕೆ ಹೆಚ್ಚಿನ ಪಾತ್ರ ಇಲ್ಲ.
ಒಂದಷ್ಟು ಕುಟುಂಬಗಳ ಮಾಹಿತಿ ಬಿಟ್ಟುಹೋಗಿರುವುದನ್ನು ಎರಡೂ ಆಯೋಗಗಳ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. ಅವರ ಪ್ರಕಾರ, ರಾಜ್ಯದ 5.98 ಕೋಟಿ ಜನರ ಸಮೀಕ್ಷೆಯಾಗಿದೆ, ಸುಮಾರು 40 ಲಕ್ಷ ಜನರ ಮಾಹಿತಿಯನ್ನು ಸಮೀಕ್ಷೆ ಒಳಗೊಂಡಿಲ್ಲ.
ಶೇಕಡ 5ರಷ್ಟು ಜನರ ಮಾಹಿತಿ ಇಲ್ಲ ಎನ್ನುವ ಕಾರಣಕ್ಕಾಗಿ ಸಂಪೂರ್ಣವಾಗಿ ಸಮೀಕ್ಷಾ ವರದಿಯನ್ನು ತಿರಸ್ಕರಿಸುವುದು ಸರಿಯೇ ಎನ್ನುವುದು ಈಗಿನ ಪ್ರಶ್ನೆ. ರಾಜ್ಯದ ಮಿಲ್ಲರ್, ನಾಗನಗೌಡ, ಹಾವನೂರು, ವೆಂಕಟಸ್ವಾಮಿ ಮತ್ತು ಚಿನ್ನಪ್ಪ ರೆಡ್ಡಿ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗಗಳು ಮತ್ತು ಕೇಂದ್ರದಲ್ಲಿ ಮೀಸಲಾತಿ ಶಿಫಾರಸು ಮಾಡಿರುವ ಕಾಕಾಕಾಲೇಲ್ಕರ್ ಮತ್ತು ಮಂಡಲ್ ಆಯೋಗಗಳು ಮೀಸಲಾತಿಯನ್ನು ಶಿಫಾರಸು ಮಾಡಿರುವುದು ಮಾದರಿ ಸಮೀಕ್ಷೆಗಳ ಆಧಾರದಲ್ಲಿ. ಇದು ಹೆಚ್ಚು ಕಡಿಮೆ ಶೇಕಡ ಒಂದೆರಡರಷ್ಟು ಜನಸಂಖ‍್ಯೆಯ ಮಾದರಿಗಳನ್ನು ಆಧರಿಸಿದ್ದು.
ಇಷ್ಟು ವರ್ಷಗಳ ಕಾಲ ಶೇಕಡ ಒಂದೆರಡರಷ್ಟು ಜನಸಂಖ್ಯೆಯ ಮಾದರಿಗಳ ಆಧಾರದ ಮೀಸಲಾತಿಯನ್ನು ಸರ್ಕಾರ ಮತ್ತು ನ್ಯಾಯಾಲಯ ಒಪ್ಪಿಕೊಂಡಿರುವಾಗ ಶೇಕಡ 95ರಷ್ಟು ಜನರಿಂದ ಸಂಗ್ರಹಿಸಿದ ಮಾಹಿತಿಯನ್ನು ಒಳಗೊಂಡ ಸಮೀಕ್ಷೆ ಆಧಾರಿತ ಮೀಸಲಾತಿಯನ್ನು ಒಪ್ಪಿಕೊಳ‍್ಳಲು ಏನು ಅಡ್ಡಿ ಇದೆ ಎನ್ನುವ ಪ್ರಶ್ನೆ ಕೂಡಾ ಇದೆ. ನಮ್ಮ ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಒಂದಲ್ಲ ಹತ್ತು ಸಮೀಕ್ಷೆಗಳನ್ನು ನಡೆಸಿದರೂ ಶೇಕಡ 100ರಷ್ಟು ನಿಖರತೆಯನ್ನು ಪಡೆಯುವುದು ಅಸಾಧ್ಯ. ಆದ್ದರಿಂದ ಕಾಂತರಾಜ ಆಯೋಗದ ವರದಿಯ ಬಗೆಗಿನ ವಿರೋಧಗಳನ್ನು ಮುಕ್ತ ಮನಸ್ಸಿನ ಮತ್ತು ಪೂರ್ವಗ್ರಹರಹಿತ ಸಮಾಲೋಚನೆಯಿಂದ ಬಗೆಹರಿಸಿಕೊಳ‍್ಳಬೇಕಾಗಿದೆ. ಇದು ಸರ್ಕಾರ ಮತ್ತು ಕಾನೂನಿನ ವ್ಯಾಪ್ತಿಯನ್ನು ಮೀರಿದ್ದಾಗಿದೆ.
ಸದ್ಯ ರಾಜ್ಯ ಸರ್ಕಾರದ ಮುಂದೆ ಇವೆಲ್ಲಕ್ಕಿಂತಲೂ ದೊಡ್ಡ ಸವಾಲು ಇದೆ. ಅದು ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧರಿಸಿ ಶಿಫಾರಸು ಮಾಡಿರುವ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡು ಯಶಸ್ವಿಯಾಗಿ ಜಾರಿಗೊಳಿಸುವುದು. ಈ ವಿಷಯದ ಮೇಲೆ ಇಂದು ನಿಜವಾದ ಚರ್ಚೆ ನಡೆಯಬೇಕಾಗಿದೆ.
ಮಂಡಲ್ ವರದಿಗೆ ಸಂಬಂಧಿಸಿದ ಇಂದಿರಾ ಸಹಾನಿ ಪ್ರಕರಣದಲ್ಲಿ, ಮೀಸಲಾತಿಯು ಶೇಕಡ 50 ಮೀರಬಾರದೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 1990ರಲ್ಲಿಯೇ ತಮಿಳುನಾಡು ಸರ್ಕಾರ ಮೀಸಲಾತಿಯನ್ನು ಶೇಕಡ 69ಕ್ಕೆ ಹೆಚ್ಚಿಸಿ ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಿರುವುದನ್ನು ಬಿಟ್ಟರೆ 1992ರ ನಂತರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಇತ್ತೀಚಿನ ವರ್ಷಗಳವರೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿಲ್ಲ. ಆದರೆ ಹಿಂದಿನ ಕೆಲವು ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳನ್ನು ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನ್ಯಾಯಾಲಯದ ಅಂಗೀಕಾರ ಪಡೆಯುವುದು ಹೆಚ್ಚ ಕಷ್ಟವಾಗಲಾರದು. ಎನ್‌ಡಿಎ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮೂಲಕ ಮೀಸಲಾತಿಯ ಶೇಕಡ 50ರ ಮಿತಿಯನ್ನು ಮುರಿಯಲಾಗಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇಕಡ 7ಕ್ಕೆ ಹೆಚ್ಚಿಸುವ ಮೂಲಕ ಕರ್ನಾಟಕದಲ್ಲಿ ಕೂಡ ಶೇಕಡ 50ರ ಮಿತಿಯನ್ನು ಮೀರಲಾಗಿದೆ. ಇದೇ ರೀತಿ ಜಾರ್ಖಂಡ್ ರಾಜ್ಯವೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕದ ಮೀಸಲಾತಿ ಪ್ರಮಾಣವನ್ನು ಶೇಕಡ 81ಕ್ಕೆ ಹೆಚ್ಚಿಸಲು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡುವುದು ಕಷ್ಟವಾಗಲಾರದು. ಇದಕ್ಕಾಗಿ ಇಡೀ ರಾಜ್ಯದ ಜನ ತಮ್ಮೊಳಗಿನ ಜಾತಿ ಪೈಪೋಟಿಯ ಒಳಜಗಳಗಳನ್ನು ಕೈಬಿಟ್ಟು, ಎಲ್ಲರೂ ಒಗ್ಗೂಡಿ ಮೀಸಲಾತಿ ಏರಿಕೆಗಾಗಿ ಪ್ರಯತ್ನಿಸಿದರೆ ರಾಜ್ಯ ಸರ್ಕಾರದ ಕೆಲಸ ಇನ್ನೂ ಸುಲಭವಾಗಬಹುದು.
ತಮ್ಮ ತಮ್ಮ ಜಾತಿಯ ಜನರ ಸಂಖ್ಯೆಯನ್ನು ಮುಂದಿಟ್ಟುಕೊಂಡು ವಾದ-ವಿವಾದ ಮಾಡುತ್ತಿರುವವರೆಲ್ಲರೂ ತಮ್ಮನ್ನು ತಾವು ಕೇಳಬೇಕಾದ ಒಂದು ಮುಖ್ಯ ಪ್ರಶ್ನೆ ಇದೆ. ಅದು, ತನ್ನ ಜಾತಿಯ ಜನಸಂಖ್ಯೆ ಹೆಚ್ಚಿದೆ ಎನ್ನುವ ಕೀರ್ತಿ ಕಿರೀಟ ಮುಖ್ಯವೋ ಇಲ್ಲವೇ ತನ್ನ ಜಾತಿಯ ಯುವಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಲಭ್ಯವಾಗುವ ಮೀಸಲಾತಿ ಪ್ರಮಾಣದ ಹೆಚ್ಚಳ ಮುಖ್ಯವೋ ಎನ್ನುವ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಂಡರೆ ಬೆಟ್ಟದಷ್ಟು ಭಾರದ ಸಮಸ್ಯೆಯನ್ನು ಹೂವನ್ನು ಎತ್ತಿಕೊಂಡಷ್ಟು ಸುಲಭದಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.