ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ಉಪರಾಷ್ಟ್ರಪತಿ ಸ್ಥಾನ ತೆರವಾಗಿದ್ದು, ಸೆಪ್ಟೆಂಬರ್ ಎರಡನೇ ವಾರದಲ್ಲಿ ಚುನಾವಣೆ ನಡೆಯಲಿದೆ. ಉಪರಾಷ್ಟ್ರಪತಿಗಳ ಇತಿಹಾಸ ಗಮನಿಸಿದರೆ, ಸರ್ಕಾರದೊಂದಿಗೆ ಭಿನ್ನಮತ ಹೊಂದಿದ್ದ ಉಪರಾಷ್ಟ್ರಪತಿಗಳ ಪರಂಪರೆಯೇ ಇದೆ ಹಾಗೂ ಆ ಪರಂಪರೆಯಲ್ಲಿ ಸಾಕಷ್ಟು ಸ್ವಾರಸ್ಯಕರ ಸಂಗತಿಗಳಿವೆ.
ಉಪರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಆಯೋಗವು ಸೆಪ್ಟೆಂಬರ್ 9ರ ದಿನಾಂಕ ಪ್ರಕಟಿಸಿದೆ. ಈಗ ಎಲ್ಲರ ಗಮನ ಆ ಮಹತ್ವದ ಸ್ಥಾನದ ಆಯ್ಕೆಯತ್ತ ನೆಟ್ಟಿದೆ. ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ಇತ್ತೀಚೆಗೆ ದಿಢೀರನೆ ರಾಜೀನಾಮೆ ನೀಡಿದ ಪ್ರಕರಣದ ಹಿನ್ನೆಲೆಯಿಂದ, ರಾಜಕಾರಣದ ವಿಶಾಲ ದೃಷ್ಟಿಕೋನದ ಮಸೂರದಲ್ಲಿ ಈ ಬೆಳವಣಿಗೆಯನ್ನೀಗ ನಾವು ನೋಡಬೇಕಿದೆ. ಜಗದೀಪ್ ಧನಕರ್ ರಾಜೀನಾಮೆ ನೀಡಿದ ತಕ್ಷಣ ಅನೇಕರು ಸಾಕಷ್ಟು ಸಂಗತಿಗಳನ್ನು ಚರ್ಚಿಸಿದರು. ಉಪರಾಷ್ಟ್ರಪತಿ ಸ್ಥಾನ ತೆರವಾಗಿ ಸುಮಾರು ಮೂರು ವಾರಗಳೇ ಆಗುತ್ತಿರುವ ಸಂದರ್ಭದಲ್ಲಿ, ಈಗ ಕೆಲವು ಸಮಸ್ಯೆಗಳನ್ನು ಮತ್ತೆ ಕೆದಕಿ ನೋಡುವ ಅವಕಾಶ ನಮ್ಮೆದುರಲ್ಲಿದೆ.
ಭಾರತ ತನ್ನ 15ನೇ ಉಪರಾಷ್ಟ್ರಪತಿಯನ್ನು ಮುಂದಿನ ತಿಂಗಳು ಹೊಂದಲಿದೆ. ಇದುವರೆಗೆ ಈ ಸ್ಥಾನವನ್ನು 14 ಮಂದಿ ಅಲಂಕರಿಸಿದ್ದಾರೆ. ಅವರಲ್ಲಿ ಇಬ್ಬರು, ಎರಡು ಅವಧಿಗೆ ಉಪರಾಷ್ಟ್ರಪತಿ ಸ್ಥಾನದಲ್ಲಿ (ರಾಧಾಕೃಷ್ಣನ್ ಹಾಗೂ ಹಮೀದ್ ಅನ್ಸಾರಿ) ಕಾರ್ಯ ನಿರ್ವಹಿಸಿದ್ದಾರೆ. ಉಪರಾಷ್ಟ್ರಪತಿ ಆಗಿದ್ದವರಲ್ಲಿ ಆರು ಮಂದಿ ಮುಂದೆ ರಾಷ್ಟ್ರಪತಿ ಸ್ಥಾನಕ್ಕೂ ಸಂದವರು. ಒಬ್ಬರು (ಭೈರೋನ್ ಸಿಂಗ್ ಶೆಖಾವತ್) ಆ ಸ್ಥಾನಕ್ಕೆ ಸ್ಪರ್ಧಿಸಿ, ಸೋಲು ಕಂಡಿದ್ದರು. ಹಿಂದಿನ ಐವರು ಉಪರಾಷ್ಟ್ರಪತಿಗಳು (ಕೃಷ್ಣಕಾಂತ್ ಅವರ ನಂತರ) ಮುಂದೆ ರಾಷ್ಟ್ರಪತಿಗಳಾಗಲಿಲ್ಲ ಎನ್ನುವುದು ಆಸಕ್ತಿಕರವೂ, ಗಮನಿಸಬೇಕಾದ ಸಂಗತಿಯೂ ಆಗಿದೆ.
ಮೂವರು ಉಪರಾಷ್ಟ್ರಪತಿಗಳು ಅವಿರೋಧವಾಗಿ ಆಯ್ಕೆ ಆಗಿದ್ದುದನ್ನೂ ನಾವೀಗ ನೆನಪಿಸಿಕೊಳ್ಳಬೇಕಿದೆ. ರಾಧಾಕೃಷ್ಣನ್ ಅವರು ಎರಡು ಅವಧಿಗೆ (1952, 1957) ಹಾಗೂ ಶಂಕರ್ ದಯಾಳ್ ಶರ್ಮ (1987) ಒಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಪರಾಷ್ಟ್ರಪತಿ ಚುನಾವಣೆಯ ಸ್ವರೂಪವನ್ನು (ಸಂಸತ್‌ನ ಎರಡೂ ಸದನಗಳಲ್ಲಿ) ನೋಡಿದರೆ, ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷದ ಅಭ್ಯರ್ಥಿಯ ಆಯ್ಕೆಗೇ ಮಣೆ ಎನ್ನುವುದು ಖಚಿತ. ಚಂದ್ರಶೇಖರ್ ನೇತೃತ್ವದ ಸರ್ಕಾರ (ಜನತಾ ಪಕ್ಷ– ಎಸ್) ಅಧಿಕಾರದಲ್ಲಿ ಇದ್ದಾಗ, ಕಾಂಗ್ರೆಸ್‌ನಿಂದ ಬಾಹ್ಯ ಬೆಂಬಲ ಪಡೆದುಕೊಂಡು ಹಿದಾಯತ್ ಉಲ್ಲಾ ಅವರು ಉಪರಾಷ್ಟ್ರಪತಿ ಆಗಿದ್ದರು. ಹಾಗೆಯೇ, ಕೃಷ್ಣಕಾಂತ್ ಅವರು ಉಪರಾಷ್ಟ್ರಪತಿ ಆದಾಗ, ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಎರಡನೇ ಅವಧಿಯ ಯುನೈಟೆಡ್ ಫ್ರಂಟ್ ಸರ್ಕಾರದ ಪ್ರಧಾನಿಯಾಗಿ ಐ.ಕೆ. ಗುಜ್ರಾಲ್ ಅಧಿಕಾರದಲ್ಲಿ ಇದ್ದರು.
ಪ್ರಸಕ್ತ ಉಪರಾಷ್ಟ್ರಪತಿ ಚುನಾವಣಾ ಕಣಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಎನ್‌ಡಿಎ ಯಾರನ್ನು ಇಳಿಸಲಿದೆ ಎಂದು ಈಗಾಗಲೇ ಊಹೆಗಳು ಶುರುವಾಗಿವೆ (ಧನಕರ್ ಅವರು ರಾಜೀನಾಮೆ ಕೊಟ್ಟ ದಿನದಿಂದಲೇ ಇಂತಹ ಊಹೆಗಳು ಶುರುವಾಗಿದ್ದವು). ಉಪರಾಷ್ಟ್ರಪತಿ ವಿಷಯದ ಇತ್ತೀಚಿನ ಬೆಳವಣಿಗೆಗಳು ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ಅನುಭವವು, ಎರಡು ಭಿನ್ನ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತವೆ. ಒಂದು, ರಾಜಕಾರಣದ ಒತ್ತಡಗಳ ಮೇಲೆ ಕನ್ನಡಿ ಹಿಡಿದರೆ; ಇನ್ನೊಂದು, ‘ಬಲವಂತದ ರಾಜಕಾರಣ’ಕ್ಕೆ ಮಸೂರ ಹಿಡಿದಿದೆ.
ಮೊದಲಿಗೆ, ರಾಜಕಾರಣದ ಒತ್ತಡಗಳ ಕುರಿತು ಗಮನಿಸೋಣ. ಧನಕರ್ ಪ್ರಕರಣದಿಂದ ಆಡಳಿತಾರೂಢ ಪಕ್ಷವು ಏನನ್ನಾದರೂ ಕಲಿಯುವು ದಿದ್ದರೆ, ಅದು– ಈಗಾಗಲೇ ನಡೆಸಿದ ತನ್ನ ಪ್ರಯೋಗ– ಪರೀಕ್ಷೆಗಳ ಮೇಲೆ ನಂಬಿಕೆ ಇಡುವುದು ಹಾಗೂ ನಂಬಿಕಸ್ಥರಾದ ನಿಷ್ಠಾವಂತರನ್ನು ನೆಚ್ಚಿಕೊಳ್ಳುವುದು ಎನ್ನುವುದಾಗಿದೆ. ವಿರೋಧ ಪಕ್ಷಗಳ ರಾಜಕಾರಣ ದಲ್ಲಿ ಬಲಗುಂದಿ ರಾಜೀನಾಮೆ ನೀಡುವ ಪರಿಸ್ಥಿತಿ ಯನ್ನು ಧನಕರ್ ಅವರು ತಂದುಕೊಳ್ಳಬೇಕಾಯಿತು ಎನ್ನುವ ಆರೋಪದಲ್ಲಿ ಸಮಸ್ಯೆಯ ಬೇರು ಅಡಗಿದೆ. ಎರಡನೆಯದಾಗಿ, ‘ಬಲವಂತದ ರಾಜಕಾರಣ’ವನ್ನು ಗಮನಿಸೋಣ; ವಿಶೇಷವಾಗಿ, 2014ರ ನಂತರದ ಅವಧಿಯಲ್ಲಿ ಬಿಜೆಪಿ ನಡೆಸುತ್ತಾ ಬಂದಿರುವ ರಾಜಕಾರಣವನ್ನು. ಆಡಳಿತಾರೂಢ ಪಕ್ಷವು ಮಾಡುತ್ತಾ ಬಂದಿರುವ ಎಲ್ಲ ಪ್ರಮುಖ ರಾಜಕೀಯ ನಾಮ ನಿರ್ದೇಶನಗಳಲ್ಲೂ ದೊಡ್ಡಮಟ್ಟದ ಅಚ್ಚರಿಯ ಅಂಶವೊಂದು ಇರುವುದು ಸ್ಫಟಿಕ ಸ್ಪಷ್ಟ. ಈ ಹಿಂದೆ ನಡೆದಿದ್ದ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಲೀ (ರಾಮ್‌ನಾಥ್ ಕೋವಿಂದ್), ರಾಜೀನಾಮೆ ನೀಡಿದ ಉಪರಾಷ್ಟ್ರಪತಿ ಧನಕರ್ ಅವರಾಗಲೀ, ಬಿಜೆಪಿ ಆಡಳಿತವಿರುವ ರಾಜ್ಯಗಳ ಲ್ಲಿನ ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳು... ಈ ಎಲ್ಲವುಗಳಲ್ಲಿ ಬಹುತೇಕ ಆಯ್ಕೆಗಳು ಅಚ್ಚರಿಯದ್ದಾಗಿದ್ದವು. ‘ಚೌಕಟ್ಟಿನಾಚೆಗೆ ಆಲೋಚಿಸಬೇಕು’ ಎನ್ನುವ ಆಯ್ಕೆಯ ವಿಧಾನವನ್ನೇ ಬಿಜೆಪಿ ನಾಯಕತ್ವವು ಉಪರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲೂ ಅನುಸರಿಸುವ ಸಾಧ್ಯತೆಯೇ ಹೆಚ್ಚು. ಉಪರಾಷ್ಟ್ರಪತಿ ಸ್ಥಾನದ ಆಯ್ಕೆಗೆ ಅನಿರೀಕ್ಷಿತವಾದ ಹೆಸರು ಕೇಳಿಬರಬಹುದು. ಆದರೆ, ಇತ್ತೀಚಿನ ವಿದ್ಯಮಾನದ ಕಾರಣದಿಂದಾಗಿ, ತನ್ನ ಆಯ್ಕೆಯ ಅಭ್ಯರ್ಥಿ ವಿಶ್ವಾಸಾರ್ಹ ಹಾಗೂ ನಿಷ್ಠಾವಂತ ಆಗಿರಬೇಕು ಎನ್ನುವ ಮಾನದಂಡವನ್ನು ಬಿಜೆಪಿ ನಾಯಕತ್ವ ಅನುಸರಿಸುವುದರಲ್ಲಿ ಅನುಮಾನವಿಲ್ಲ.
ಧನಕರ್ ಅವರ ದಿಢೀರ್ ರಾಜೀನಾಮೆ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗಳು ನಡೆದವಷ್ಟೇ. ಆ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಕರು ಹಲವು ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದರು. ಆ ಪೈಕಿ ಒಂದು, ವಿರಳವಾದ ವಿದ್ಯಮಾನವೂ ಹಾಗೂ ಈಗಿನ ಬೆಳವಣಿಗೆಗೆ ಪೂರಕವೂ ಆಗಿದೆ. ಧನಕರ್ ಅವರೊಬ್ಬರೇ ವಿವಾದಕ್ಕೆ ಗುರಿಯಾದ ಉಪರಾಷ್ಟ್ರಪತಿ ಅಲ್ಲ ಎನ್ನುವುದೇ ಆ ಅಂಶ. ರಾಧಾಕೃಷ್ಣನ್ ಅವರು ಕೂಡ, ಉಪರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಆ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿತ್ತು.
ಬಿ.ಡಿ. ಜತ್ತಿ ಅವರು ಉಪರಾಷ್ಟ್ರಪತಿ ಆಗಿದ್ದಾಗ, ಹಂಗಾಮಿ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಇದ್ದರು. ಇಬ್ಬರ ನಡುವೆ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಆ ಜಾಗದಲ್ಲಿ ಜನತಾ ಪಕ್ಷ ಅಧಿಕಾರ ಹಿಡಿದಿತ್ತು. ಫಕ್ರುದ್ದೀನ್ ಅಲಿ ಅಹಮದ್ ಅವರು ನಿಧನರಾದ ಕಾರಣ ಹಂಗಾಮಿ ರಾಷ್ಟ್ರಪತಿಯಾಗಿ ಜತ್ತಿ ಅಧಿಕಾರ ಸ್ವೀಕರಿಸಿದ್ದರು. 1977ರ ಏಪ್ರಿಲ್ 30ರಂದು ಪ್ರಧಾನಿ ಹಾಗೂ ರಾಷ್ಟ್ರಪತಿ ನಡುವೆ ಮುಖಾಮುಖಿ ವಾಗ್ವಾದ ನಡೆದಿತ್ತು. ಎಂಟು ರಾಜ್ಯಗಳಲ್ಲಿ ವಿಧಾನಸಭೆಗಳನ್ನು ವಿಸರ್ಜಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂದು ಅದಕ್ಕೂ ಒಂದು ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿದ್ದ ಮಂತ್ರಿಮಂಡಲ ಶಿಫಾರಸು ಮಾಡಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೂ, ಸ್ಥಳೀಯ ಆಡಳಿತದ ಚುಕ್ಕಾಣಿಯನ್ನು ಆ ಪಕ್ಷದವರೇ ಹಿಡಿದಿದ್ದ ರಾಜ್ಯಗಳು ಅವಾಗಿದ್ದವು. ಶಿಫಾರಸಿನ ಅಂಶಗಳು ತಮಗೆ ಸಂಪೂರ್ಣ ಒಪ್ಪಿತವಾಗಿಲ್ಲ ಎನ್ನುವ ಕಾರಣ ನೀಡಿ, ಜತ್ತಿ ಅವರು ಸಹಿ ಹಾಕುವುದಕ್ಕೆ ವಿಳಂಬ ಮಾಡಿದ್ದರು. ಎಂಟು ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜಿಸುವ ಘೋಷಣಾ ಪತ್ರಕ್ಕೆ ಸಹಿ ಹಾಕಲು ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಹಂಗಾಮಿ ರಾಷ್ಟ್ರಪತಿಗೆ ಗಡುವು ನೀಡಿದ್ದರು. ಒಂದು ವೇಳೆ ನಿಗದಿತ ಅವಧಿಯೊಳಗೆ ಸಹಿ ಹಾಕದೇ ಇದ್ದಲ್ಲಿ, ತಮ್ಮ ಮಂತ್ರಿಮಂಡಲದ ಅಷ್ಟೂ ಸದಸ್ಯರಿಂದ ರಾಜೀನಾಮೆ ಕೊಡಿಸಿ, ಮತ್ತೆ ಲೋಕಸಭಾ ಚುನಾವಣೆಗೆ ಹೋಗುವುದಾಗಿ ಮೊರಾರ್ಜಿ ದೇಸಾಯಿ ಬೆದರಿಕೆ ಒಡ್ಡಿದ್ದರು. ಸಾಕಷ್ಟು ಹಿಂಜರಿಕೆಯ ನಂತರ ಜತ್ತಿ ಅನಿವಾರ್ಯವಾಗಿ ಸಹಿ ಹಾಕಿದ್ದರು.
ಹಮೀದ್ ಅನ್ಸಾರಿ ಅವರು ಎರಡನೇ ಅವಧಿಗೆ ಉಪರಾಷ್ಟ್ರಪತಿ ಆಗಿದ್ದಾಗ (2012–17), ಸರ್ಕಾರ ಹಾಗೂ ಅವರ ನಡುವೆ ಎಲ್ಲವೂ ಸರಿ ಇರಲಿಲ್ಲ. ರಾಜ್ಯಸಭೆಯಲ್ಲಿ ಆ ಕಾಲಘಟ್ಟದಲ್ಲಿ ಮುಖಂಡರು ನಡೆಸಿದ ವಾಗ್ವಾದದ ಒಳಮರ್ಮ ಬಲ್ಲವರಿಗೆ ಆ ತಿಕ್ಕಾಟದ ಸ್ವರೂಪ ಚೆನ್ನಾಗಿಯೇ ತಿಳಿದಿದೆ. ಅಂದಿನ ತಿಕ್ಕಾಟವನ್ನು ಮಾಧ್ಯಮಗಳು ಕೂಡ ವರದಿ ಮಾಡಿದ್ದವು. ಕೆ.ಆರ್. ನಾರಾಯಣನ್, ಕೃಷ್ಣಕಾಂತ್ ಹಾಗೂ ಭೈರೋನ್ ಸಿಂಗ್ ಶೆಖಾವತ್ ಅವರು ಉಪರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸುವಾಗ, ಅವರನ್ನು ಆಯ್ಕೆ ಮಾಡಿದ ಪಕ್ಷಗಳು ಅಧಿಕಾರದಲ್ಲಿ ಇರಲಿಲ್ಲ. ಆದರೂ ಆಡಳಿತ ನಿರ್ವಹಣೆ ಸುಗಮವಾಗಿ ಸಾಗಿದ್ದ ಉದಾಹರಣೆಯೂ ನಮ್ಮ ಮುಂದಿದೆ.
ಧನಕರ್ ಅವರ ರಾಜೀನಾಮೆ ಬಗ್ಗೆ ಮತ್ತೊಂದು ಮಾತು. ಕೇಂದ್ರ ಸರ್ಕಾರ ಹಾಗೂ ಉಪರಾಷ್ಟ್ರಪತಿ ನಡುವೆ ದೀರ್ಘಕಾಲದಿಂದ ಜಮೆಯಾಗಿದ್ದ ಸಮಸ್ಯೆಯ ಸಿಕ್ಕುಗಳು ಧನಕರ್ ಅವರು ರಾಜೀನಾಮೆ ನೀಡಿದ ದಿನ ಬಹಿರಂಗಗೊಂಡಿತಷ್ಟೆ. ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ, ಉಪರಾಷ್ಟ್ರಪತಿ ಅವರು ಜನರ ಹಾಗೂ ಮಾಧ್ಯಮಗಳ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದರು. ರಾಜ್ಯಸಭೆಯಲ್ಲಿ ಕೇಳಿಬರುತ್ತಿದ್ದ ನಿರ್ಣಯಗಳ ಮಂಡನೆಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ವಿಷಯದಲ್ಲಿ ಅವರು ನಡೆದುಕೊಂಡ ರೀತಿಯೂ ಸರ್ಕಾರದೊಟ್ಟಿಗೆ ಭಿನ್ನಾಭಿಪ್ರಾಯ ದಟ್ಟವಾಗಲು ಇನ್ನೊಂದು ಕಾರಣ. ವಿಪಕ್ಷಗಳ ಮೂಲಕ ಸಮಸ್ಯೆ ಬಗೆಹರಿಸುವ ಯತ್ನವನ್ನು ಅವರು ನಡೆಸಿದರಾದರೂ, ಆ ವೇಳೆಗೆ ಧನಕರ್ ಪಕ್ಷದ ವಿಶ್ವಾಸಾರ್ಹತೆ ಕಳೆದುಕೊಂಡು ಆಗಿತ್ತು. ಹೊಸ ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಆಡಳಿತಾರೂಢ ಪಕ್ಷವು ಈ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡೇ ಹೆಜ್ಜೆ ಇಡುವುದರಲ್ಲಿ ಅನುಮಾನ ಬೇಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.