ADVERTISEMENT

ವಿಶ್ಲೇಷಣೆ: ಈ ತಾಯಂದಿರ ಸಾವಿಗೆ ಯಾರು ಹೊಣೆ?

ಕಳಪೆಯೆಂದು ಗೊತ್ತಿದ್ದೂ ಅದೇ ಔಷಧಗಳನ್ನು ಖರೀದಿಸಿ ನಮ್ಮ ಜನಕ್ಕೆ ಕುಡಿಸಿದ್ದು ಘೋರ ಅಪರಾಧವೇ ಸರಿ

ಡಾ.ಗೋಪಾಲ ದಾಬಡೆ
Published 13 ಡಿಸೆಂಬರ್ 2024, 19:14 IST
Last Updated 13 ಡಿಸೆಂಬರ್ 2024, 19:14 IST
<div class="paragraphs"><p>ವಿಶ್ಲೇಷಣೆ: ಈ ತಾಯಂದಿರ ಸಾವಿಗೆ ಯಾರು ಹೊಣೆ?</p></div>

ವಿಶ್ಲೇಷಣೆ: ಈ ತಾಯಂದಿರ ಸಾವಿಗೆ ಯಾರು ಹೊಣೆ?

   

ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಪ್ರಕರಣ ನಾಡಿನಲ್ಲಿ ತಲ್ಲಣ ಮೂಡಿಸಿತು. ಇದಾದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದು, ರಾಜ್ಯದ ಮುಖ್ಯ ಔಷಧ ನಿಯಂತ್ರಣಾಧಿಕಾರಿಯನ್ನು ಈ ಸಾವಿಗೆ ಹೊಣೆ ಮಾಡಿ ಅವರನ್ನು ಅಮಾನತು ಮಾಡಿದ ಸುದ್ದಿಯೂ ಹೊರಬಿತ್ತು. ಆದರೆ ಇಷ್ಟು ಮಾತ್ರಕ್ಕೆ, ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಟ್ಟಂತೆ ಆಯಿತೇ?

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್‌) ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಎಲ್ಲಾ ರೀತಿಯ ಔಷಧ ಹಾಗೂ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಲೆಂದು ಇರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ತಮಿಳುನಾಡಿನ ಆರೋಗ್ಯ ವ್ಯವಸ್ಥೆಯ ಮಾದರಿಯಲ್ಲೇ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ ಸಲಹೆಯನ್ನೂ ನೀಡಿದರು.

ADVERTISEMENT

ಹಾಗಾದರೆ ತಮಿಳುನಾಡಿನ ಮಾದರಿ ಎಂದರೆ ಏನದು? ತಮಿಳುನಾಡು ವೈದ್ಯಕೀಯ ಸೇವಾ ನಿಗಮಕ್ಕೆ (ತಮಿಳುನಾಡು ಮೆಡಿಕಲ್‌ ಸರ್ವೀಸಸ್‌ ಕಾರ್ಪೊರೇಷನ್‌ ಲಿಮಿಟೆಡ್‌– ಟಿಎನ್‌ಎಂಎಸ್‌ಸಿ) ಭೇಟಿ ನೀಡುವ ಅವಕಾಶ ಇತ್ತೀಚೆಗೆ ನನಗೆ ಒದಗಿತ್ತು. ಈ ನಿಗಮದ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಕೇಳಿದ್ದಕ್ಕೆ ಆ ಸಂಸ್ಥೆಯು ಚೆನ್ನೈಗೆ ಕರೆದಿತ್ತು. ಸಂಸ್ಥೆಯ ಖರೀದಿ ವಿಭಾಗದ ವ್ಯವಸ್ಥಾಪಕರ ಜೊತೆ ನೇರವಾಗಿ ಮಾತನಾಡಿ, ಅದರ ಕಾರ್ಯವೈಖರಿಯನ್ನು ತಿಳಿಯಲು ಇದರಿಂದ ಸಾಧ್ಯವಾಯಿತು.

ತಮಿಳುನಾಡು ವೈದ್ಯಕೀಯ ಸೇವಾ ನಿಗಮ ಸ್ಥಾಪನೆಯಾಗಿದ್ದು 1990ರಲ್ಲಿ, ಅಂದರೆ ಅದು ಅಸ್ತಿತ್ವಕ್ಕೆ ಬಂದು ಇದೀಗ 34 ವರ್ಷಗಳಾಗಿವೆ. ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಯಾದ ಈ ನಿಗಮವು ಸಂಪೂರ್ಣ ಸ್ವಾಯತ್ತವಾದ ಒಂದು ಸಂಸ್ಥೆ. ಔಷಧ ಮತ್ತು ವೈದ್ಯಕೀಯ ವಸ್ತುಗಳನ್ನು ಕಂಪನಿಗಳಿಂದ ಖರೀದಿಸಿ, ಸರ್ಕಾರದ ಎಲ್ಲಾ ಆಸ್ಪತ್ರೆಗಳಿಗೆ ಒದಗಿಸುವ ಕೆಲಸವನ್ನು ಈ ಸಂಸ್ಥೆಯು ಮಾಡುತ್ತದೆ. ಆದರೆ ಅದರ ಕಾರ್ಯನಿರ್ವಹಣೆಯಲ್ಲಿ ಯಾವ ಮಂತ್ರಿಯಾಗಲೀ ರಾಜಕೀಯ ಪಕ್ಷದವರಾಗಲೀ ಹಸ್ತಕ್ಷೇಪ ಮಾಡುವಂತೆ ಇಲ್ಲ. ಅಷ್ಟು ಸ್ವತಂತ್ರವಾದ ಸಂಸ್ಥೆ ಇದು. ಅದೆಷ್ಟು ನಿಷ್ಠೆಯಿಂದ ಈ ಸಂಸ್ಥೆ ಕೆಲಸ ಮಾಡುತ್ತಿದೆಯೆಂದರೆ, ಅದನ್ನು ನೋಡಿಯೇ ತಿಳಿಯಬೇಕು. ಸರ್ಕಾರಿ ಸಂಸ್ಥೆಯೊಂದು ಇಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಡುವಂತೆ ಆಗುತ್ತದೆ.

ಬೇರೆ ಬೇರೆ ಕಂಪನಿಗಳಿಂದ ಜನೆರಿಕ್‌ ಔಷಧಗಳು ಪ್ರತಿ ಜಿಲ್ಲೆಯಲ್ಲಿಯೂ ಇರುವ ಉಗ್ರಾಣಗಳಿಗೆ ಬಂದು ಬೀಳುತ್ತವೆ. ಔಷಧಗಳು ಬರುತ್ತಲೇ ಕಂಪನಿಗಳಿಗೆ ತಡವಿಲ್ಲದೆಯೇ ಹಣ ಪಾವತಿಯಾಗುತ್ತದೆ. ಆದರೆ ಔಷಧಗಳು ಮಾತ್ರ ತಕ್ಷಣ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಬದಲಿಗೆ ಅವುಗಳ ಪ್ರತಿ ಬ್ಯಾಚ್‌ನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿ, ಒಂದು ವಾರ ಅವನ್ನು ಕ್ವಾರಂಟೈನ್‌ ಮಾಡಿ ಇಡಲಾಗುತ್ತದೆ. ಅಕಸ್ಮಾತ್‌ ಈ ಪರೀಕ್ಷೆಯಲ್ಲಿ ಔಷಧವೇನಾದರೂ ಫೇಲಾದರೆ ಅಲ್ಲಿಗೆ ಮುಗಿಯಿತು. ಅತ್ತಿಂದತ್ತಲೇ ಆ ಎಲ್ಲ ಔಷಧದ ಡಬ್ಬಿಗಳೂ ಮರಳಿ ಕಂಪನಿಗೆ ಹೋಗುತ್ತವೆ. ಒಂದುವೇಳೆ ಕಂಪನಿಯು ಕಳುಹಿಸುವ ಔಷಧಗಳು ಗುಣಮಟ್ಟದ ಪರೀಕ್ಷೆಯಲ್ಲಿ ಮೂರು ಬಾರಿ ಫೇಲಾದವೆಂದರೆ ಆ ಕಂಪನಿಯನ್ನು ಕಪ್ಪುಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಡಿಜಿಟಲೀಕರಣದ ಕಾರಣದಿಂದ ಈ ಕಪ್ಪುಪಟ್ಟಿಯು ಸಾರ್ವತ್ರಿಕವಾಗಿ ಪ್ರದರ್ಶನಗೊಳ್ಳುತ್ತಿರುತ್ತದೆ.

ಇಲ್ಲಿ ಇಡೀ ಔಷಧ ಸರಬರಾಜು ವ್ಯವಸ್ಥೆಯನ್ನೇ ಡಿಜಿಟಲೀಕರಣ ಮಾಡಲಾಗಿದೆ. ಯಾವ ಜಿಲ್ಲೆಯ ಉಗ್ರಾಣದಲ್ಲಿ ಯಾವ ಔಷಧವಿದೆ, ಅದರಲ್ಲಿ ಎಷ್ಟು ಖರ್ಚಾಗಿದೆ, ಇನ್ನೂ ಎಷ್ಟು ಬಾಕಿ ಉಳಿದಿದೆ ಎಂಬುದರ ಮಾಹಿತಿಯು ಚೆನ್ನೈನಲ್ಲಿರುವ ನಿಯಂತ್ರಣಾಧಿಕಾರಿಗೆ ಕ್ಷಣಕ್ಷಣಕ್ಕೂ ಸಿಗುತ್ತಿರುತ್ತದೆ. ಹಾಗೆಯೇ ಖರ್ಚಾದಂತೆ ನಿಗಮದ ಉಗ್ರಾಣಗಳಿಗೆ ಔಷಧಗಳ ಮರುಪೂರಣಕ್ಕಾಗಿ ಟೆಂಡರ್ ಕರೆಯುವ ಕೆಲಸ ನಡೆಯುತ್ತಲೇ ಇರುತ್ತದೆ. ಆಯಾ ಜಿಲ್ಲೆಯ ಉಗ್ರಾಣಗಳಿಂದಲೇ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಆಗುತ್ತದೆ. ಈ ವಿಷಯದಲ್ಲಿ ಮಧ್ಯೆ ಮೂಗು ತೂರಿಸುವುದಾಗಲೀ ರಾಜಕೀಯ ಹಸ್ತಕ್ಷೇಪವನ್ನಾಗಲೀ ಯಾರೂ ಮಾಡುವಂತಿಲ್ಲ. ಈ ನಿಗಮದ ಕಾರ್ಯವೈಖರಿಯನ್ನು ನೋಡಲು ಇಡೀ ದೇಶದಿಂದ ಜನ, ಅಧಿಕಾರಿಗಳು ಬರುತ್ತಲೇ ಇರುತ್ತಾರೆ. ನಾವೂ ಇಂಥದ್ದೇ ವ್ಯವಸ್ಥೆಯನ್ನು ಹೊಂದಬೇಕಾಗಿದೆ ಎಂದು ಹೇಳಿ ಹೋಗುತ್ತಾರೆ. ಆದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದವರು ಯಾರೂ ಇಲ್ಲ.

ಕರ್ನಾಟಕದ ಹಲವು ಅಧಿಕಾರಿಗಳು ಹತ್ತು ವರ್ಷಗಳ ಹಿಂದೆಯೇ ತಮಿಳುನಾಡಿನ ಈ ನಿಗಮಕ್ಕೆ ಭೇಟಿ ನೀಡಿ, ನಮ್ಮಲ್ಲೂ ಅಂಥ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ನಮ್ಮ ಸರ್ಕಾರವನ್ನು ಒತ್ತಾಯಿಸಿದ್ದರು. ಬಳಿಕ ಅದೇ ಮಾದರಿಯಲ್ಲಿ ನಮ್ಮಲ್ಲೂ ಕೆಎಸ್‌ಎಂಎಸ್‌ಸಿಎಲ್‌ ಅಥವಾ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನು ಅಸ್ತಿತ್ವಕ್ಕೆ ತರಲಾಯಿತು.

ನಮ್ಮ ನಿಗಮಕ್ಕೆ ಔಷಧಗಳು ಬಂದ ತಕ್ಷಣ ಕಂಪ‍ನಿಗಳಿಗೆ ಹಣ ಪಾವತಿಯಾಗುವುದಿಲ್ಲ. ರಾಜ್ಯದಲ್ಲಿರುವ ಜಿಲ್ಲಾ ಉಗ್ರಾಣಗಳಲ್ಲಿ ಔಷಧಗಳು ಖರ್ಚಾಗುತ್ತಿದ್ದಂತೆಯೇ ಡಿಜಿಟಲೀಕರಣ ಪ್ರಕ್ರಿಯೆಯ ಮೂಲಕ ಅವುಗಳನ್ನು ಮರುಪೂರಣ ಮಾಡುವ ವ್ಯವಸ್ಥೆ ಇಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ‘ಇಲ್ಲಿ ಈ ಔಷಧ ಸಪ್ಲೈ ಇಲ್ಲ’ ಎನ್ನುತ್ತಾ, ಹೊರಗಡೆಯಿಂದ ಅದನ್ನು ಖರೀದಿಸಿ ತರುವಂತೆ ಚೀಟಿ ಬರೆದುಕೊಡುತ್ತಾರೆ.

ಇಂತಹ ವ್ಯವಸ್ಥೆಯನ್ನು ನೋಡಿದಾಗ, ಬಾಣಂತಿಯರ ಸಾವಿಗೆ ರಾಜ್ಯದ ಮುಖ್ಯ ಔಷಧ ನಿಯಂತ್ರಣಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡುವುದರ ಬದಲು ಕೆಎಸ್‌ಎಂಎಸ್‌ಸಿಎಲ್‌ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. 2002ರಲ್ಲೇ ಸ್ಥಾಪಿತವಾಗಿ, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಗೆ ಪ್ರತಿ ಜಿಲ್ಲೆಯಲ್ಲೂ ಉಗ್ರಾಣವಿದೆ. ಸರ್ಕಾರದ ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಔಷಧಗಳನ್ನು ಒದಗಿಸುವ ಜವಾಬ್ದಾರಿ ಇದರದ್ದು. ಹಾಗಿದ್ದಾಗ ಅದರ ಮುಖ್ಯಸ್ಥರನ್ನೇಕೆ ಮುಖ್ಯಮಂತ್ರಿಯವರು ಅಮಾನತು ಮಾಡಲಿಲ್ಲ?

ರಕ್ತನಾಳದೊಳಕ್ಕೆ ಕೊಡುವ ಔಷಧವನ್ನು ಬಂಗಾಳದ ಪಶ್ಚಿಮ್‌ ಬಂಗಾ ಫಾರ್ಮಾಸ್ಯೂಟಿಕಲ್‌ ಲಿಮಿಟೆಡ್‌ ಕಂಪನಿಯು ಬಳ್ಳಾರಿ ಜಿಲ್ಲಾಸ್ಪತ್ರೆಗೆ ಸರಬರಾಜು ಮಾಡಿತ್ತು. ಈ ಔಷಧವು ಗುಣಮಟ್ಟದಿಂದ ಕೂಡಿರಲಿಲ್ಲವೆಂಬ ಕಾರಣಕ್ಕೆ ಆ ಕಂಪನಿಯಿಂದ ಔಷಧಗಳು ಬೇಡವೆಂದು ಹಿಂದೆ ನಿರ್ಧರಿಸಲಾಗಿತ್ತು. ಆದರೆ ಇಂಥ ನಿರ್ಧಾರಕ್ಕೆ ಬರುವ ಮೊದಲು ಕಂಪನಿಗೆ ನೋಟಿಸ್‌ ಕೊಟ್ಟಿರಲಿಲ್ಲ ಎನ್ನಲಾಗಿದೆ. ಅದನ್ನೇ ಮುಂದಿಟ್ಟುಕೊಂಡು ಕಂಪನಿಯು ಕೋರ್ಟ್‌ ಮೆಟ್ಟಿಲೇರಿತು. ಔಷಧ ಗುಣಮಟ್ಟದ್ದಾಗಿರಲಿಲ್ಲ ಎಂಬ ವಿಷಯ ಪಕ್ಕಕ್ಕೆ ಸರಿದು, ಔಷಧ ಖರೀದಿ ಸ್ಥಗಿತಗೊಳಿಸುವುದಕ್ಕೆ ಮುನ್ನ ಕಂಪನಿಗೆ ನೋಟಿಸ್‌ ಕೊಟ್ಟಿರಲಿಲ್ಲ ಎಂಬುದೇ ಮುಖ್ಯ ವಿಷಯವಾಯಿತು. ಕೋರ್ಟ್‌ ಮೆಟ್ಟಿಲೇರಿ, ಗೆದ್ದು, ಮತ್ತೆ ಔಷಧ ಸರಬರಾಜು ಮಾಡುವುದನ್ನು ಕಂಪನಿಯು ಮುಂದುವರಿಸಿತು. ಸರ್ಕಾರ ಆಗಲೇ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಆ ಕೆಲಸ ಆಗದ್ದರಿಂದ ಕಳಪೆ ಔಷಧಗಳು ಹಲವು ತಾಯಂದಿರ ಜೀವ ತೆಗೆದುಕೊಂಡವು.

ಕಳಪೆ ಔಷಧ ಸರಬರಾಜು ಮಾಡಿದ್ದು ನಿಜವೇ ಆಗಿದ್ದರೆ ನಮ್ಮ ನಿಗಮವು ಆ ಕಂಪನಿಗೆ ಕ್ರಮದ ಪ್ರಕಾರ ನೋಟಿಸ್‌ ಕೊಟ್ಟು ಔಷಧಗಳನ್ನು ಹಿಂದಕ್ಕೆ ಕಳಿಸಬೇಕಾಗಿತ್ತಲ್ಲವೇ? ಹಾಗೆ ಮಾಡಲಿಲ್ಲವೇಕೆ? ನಂತರವಾದರೂ ನೋಟಿಸ್‌ ಕೊಡಬೇಕಾಗಿತ್ತಲ್ಲವೇ? ಕಳಪೆಯೆಂದು ಗೊತ್ತಿದ್ದು ಕೂಡ ಅದೇ ಔಷಧಗಳನ್ನು ಖರೀದಿಸಿ ನಮ್ಮ ಜನರಿಗೆ ಕುಡಿಸಿದ ನಿಗಮವು ಬಾಣಂತಿಯರ ಸಾವಿಗೆ ಹೊಣೆಗಾರನಲ್ಲವೇ?

ತಾಯಂದಿರ ಸಾವಿಗೆ ಹಾಗೂ ತಾಯಂದಿರನ್ನು ಕಳೆದುಕೊಂಡಿರುವ ಕಂದಮ್ಮಗಳಿಗೆ ನ್ಯಾಯ ಕೊಡಿಸಬೇಕೆಂದರೆ ಮುಖ್ಯಮಂತ್ರಿಯವರು ಈಗಲಾದರೂ ನಿಗಮವನ್ನು ಹೊಣೆಯಾಗಿಸಬೇಕು. ಅಷ್ಟೇಅಲ್ಲ, ತಮಿಳುನಾಡಿನ ವೈದ್ಯಕೀಯ ಸೇವಾ ನಿಗಮದ ಮಾದರಿಯಲ್ಲಿ ಕೆಲಸ ಮಾಡಬೇಕೆಂದು ಬಾಯಿಮಾತಿನಲ್ಲಿ ಹೇಳಿದರೆ ಏನೂ ಪ್ರಯೋಜನವಿಲ್ಲ. ತಮ್ಮ ಮಾತಿಗೆ ಅರ್ಥ ಬರಬೇಕೆಂದರೆ, ಔಷಧ ಸರಬರಾಜು ಮಾಡುವ ಕೆಎಸ್ಎಂಎಸ್‌ಸಿಎಲ್‌ನಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದಂತೆ, ಅಧಿಕಾರಿಗಳು ತಲೆಹಾಕದಂತೆ ಅದನ್ನು ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಕೂಡ ಮುಖ್ಯಮಂತ್ರಿಯವರ ಮೇಲಿದೆ. ತಪ್ಪು ಮಾಡಿದವರನ್ನು ಹಾಗೆಯೇ ಹೋಗಗೊಟ್ಟರೆ ಇನ್ನಷ್ಟು ತಾಯಂದಿರ ಸಾವುಗಳನ್ನು ನೋಡಬೇಕಾದೀತು. ಹಾಗಾಗದಂತೆ ತಡೆಯುವ ಹೊಣೆಗಾರಿಕೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರ ಮೇಲಿದೆ.

ಲೇಖಕ: ಅಧ್ಯಕ್ಷ, ಡ್ರಗ್ ಆ್ಯಕ್ಷನ್ ಫೋರಂ- ಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.