ADVERTISEMENT

ದುಃಖ ಶಮನಕ್ಕೆ ಮದ್ದು ಅರೆದ ‘ಮಹಾವೈದ್ಯ’

‘ಸರ್ವಧರ್ಮ ಸಮನ್ವಯ’ದ ಪರಿಕಲ್ಪನೆ ನೀಡಿದ ಬುದ್ಧ, ಜಗತ್ತಿಗೊಂದು ಬೆಳಕು

ಡಾ.ಟಿ.ಎನ್‌.ವಾಸುದೇವ ಮೂರ್ತಿ
Published 17 ಮೇ 2019, 20:25 IST
Last Updated 17 ಮೇ 2019, 20:25 IST
...
...   

ಇಂದು ಜಗತ್ತಿನಾದ್ಯಂತ ಯುದ್ಧೋತ್ಸಾಹಿ ರಾಜಕೀಯ ನಾಯಕರ ಪ್ರತಿಷ್ಠೆ, ಅಟ್ಟಹಾಸಗಳು ದಿಗಿಲು ಹುಟ್ಟಿಸುತ್ತವೆ. ಅಸಲಿಗೆ, ನಮ್ಮ ಯುದ್ಧೋತ್ಸಾಹವು ಮನುಷ್ಯಕುಲಕ್ಕೆ ಸೋಕಿರುವ ಯಾವುದೋ ರೋಗದ ಬಾಹ್ಯ ಲಕ್ಷಣವಾಗಿದೆ. ಬುದ್ಧ, ಮನುಷ್ಯನ ಆಳದಲ್ಲಿ ಬೇರೂರಿದ್ದ ರೋಗವನ್ನು ಪತ್ತೆ ಮಾಡಿ ಅದಕ್ಕೆ ಸರಿಯಾದ ಮದ್ದು ನೀಡಿದ. ಬೌದ್ಧ ಅನುಭಾವಿಯಾದ ವಾಗ್ಭಟನು ಬುದ್ಧನನ್ನು ‘ಮಹಾವೈದ್ಯ’ನೆಂದು ಸರಿಯಾಗಿಯೇ ಕರೆದಿದ್ದ.

ಬುದ್ಧ ಆ ರೋಗವನ್ನು ‘ದುಃಖ’ ಎಂದು ಕರೆದ. ನಮ್ಮ ಹುಟ್ಟಿದಾರಭ್ಯ ಸಾವಿನವರೆಗೆ, ಒಟ್ಟಾರೆ ನಮ್ಮ ಜೀವಿತಾನುಭವ ನಮಗೆ ದುಃಖದ ಅನುಭವವನ್ನೇ ನೀಡುತ್ತದೆ ಎಂದ. ಒಳಗೆ ಮನುಷ್ಯ ದುಃಖಿಯಾದ ಕಾರಣ ಹೊರಗೆ ಅವನು ಹಿಂಸಾರಭಸ ಮತಿಯಾಗಿದ್ದಾನೆ. ಒಳಲೋಕದ ದುಃಖ ನಿವಾರಣೆಯಾಗುತ್ತಲೇ ಹೊರಲೋಕದ ವಿಕೃತಿಗಳೂ ಕಣ್ಮರೆಯಾಗುತ್ತವೆ. ಆ ‘ದುಃಖ ನಿರೋಧ’ಕ್ಕೆ ಬುದ್ಧ ಆರ್ಯ ಅಷ್ಟಾಂಗ ಮಾರ್ಗ ಸೂಚಿಸಿದ. ವಿಪರ್ಯಾಸವೆಂದರೆ ಹೀಗೆ ದುಃಖ ಸಮುದಯ, ದುಃಖ ನಿರೋಧ ಮುಂತಾದ ಆರ್ಯಸತ್ಯ ನುಡಿದ ಬುದ್ಧ ನಮ್ಮ ಕೃತಜ್ಞತೆಗೇನೂ ಭಾಜನನಾಗಲಿಲ್ಲ. ಬದಲಾಗಿ ನಮ್ಮ ನಿಂದನೆಗೆ ಒಳಗಾದ. ಬೌದ್ಧಧರ್ಮ ‘ಜೀವವಿರೋಧಿ ಧರ್ಮ’ವಾಗಿದೆ ಎಂದು ಭಾರತದ ಸನಾತನವಾದಿಗಳು ಜರೆಯಲಾರಂಭಿಸಿದರು. ಬೌದ್ಧ ಚಿಂತನೆಯ ಚರ್ಚೆ ಬಂದಾಗಲೆಲ್ಲ ನಾಡಿನ ಕೆಲವು ಖ್ಯಾತ ಸಾಹಿತಿಗಳು ಸನಾತನಿಗಳ ಈ ಆರೋಪವನ್ನು (ಅಂದರೆ, ಬೌದ್ಧಧರ್ಮ ಜೀವವಿರೋಧಿ ಧರ್ಮ ಎಂಬುದನ್ನು) ಆಗಾಗ ಪುನರುಚ್ಚರಿಸುತ್ತಿರುತ್ತಾರೆ. ಗೌತಮ ಬುದ್ಧ ನಿಜಕ್ಕೂ ಜೀವವಿರೋಧಿಯೇ, ಸರ್ವಲೋಕಾನುಕಂಪಿ ಎನಿಸಿದ ಅವನ ವಿಷಯದಲ್ಲಿ ಹೀಗೆ ನುಡಿವುದು ಉಚಿತವೇ? ಮೊದಲು ಈ ಪ್ರಶ್ನೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ.

ನಮ್ಮ ಬದುಕು ದುಃಖಕರ ಎಂಬುದನ್ನು ತಿಳಿಸಲಿಕ್ಕೆ ಬುದ್ಧ ಅವತರಿಸಿ ಬರಬೇಕೇ? ನಮ್ಮ ಪ್ರತಿಕ್ಷಣದ ಅನುಭವವೇ ಅದನ್ನು ನಮಗೆ ಸಾರಿ ಸಾರಿ ಹೇಳುತ್ತಿಲ್ಲವೇ? ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಬುದ್ಧನ ಪ್ರಸಿದ್ಧ ವಾಕ್ಯ ನಮಗೆ ಸುಪರಿಚಿತ. ಬುದ್ಧ ಇನ್ನೂ ಮುಂದುವರಿದು ಆಸೆಯೇ ನಮ್ಮ ಸಾವಿಗೂ ಮೂಲವೆಂದು ಎಚ್ಚರಿಸುತ್ತಾನೆ. ‘ಎಷ್ಟು ಬಗೆಯ ಕಾಮನೆಗಳಿವೆಯೋ ಅಷ್ಟು ಬಗೆಯ ಮೃತ್ಯುಗಳಿರುತ್ತವೆ; ಅಷ್ಟು ಬಗೆಯ ಮೃತ್ಯುವಿನ ಅನುಭವ ನಮಗಾಗುತ್ತದೆ’ ಎಂದಿದ್ದಾನೆ. ಬದುಕನ್ನು ನಿರಾಕರಿಸಬೇಕೆಂದು ಉಪದೇಶಿಸುವ ಜೀವವಿರೋಧಿಯಲ್ಲ ಬುದ್ಧ. ಆಶೆಯ ವೇಷದಲ್ಲಿ ಸುಳಿವ ಸಾವಿನ ವ್ಯಸನವನ್ನು ನಿರಾಕರಿಸಬೇಕು ಎಂದು ಬೋಧಿಸುವ ಗುರುವಾಗಿದ್ದಾನೆ.

ADVERTISEMENT

ಮಹಾಯಾನ ಪಂಥದ ‘ದಶಭೂಮಿಕಾ ಸೂತ್ರ’ವು ಪ್ರಮುದಿತಾ, ವಿಮಲಾ, ಪ್ರಭಂಕರಿ ಮುಂತಾದ ಹತ್ತು ಹಂತಗಳಲ್ಲಿ ಬೌದ್ಧಸಾಧಕನ ಅಂತರಂಗದ ವಿಕಾಸವನ್ನು ವಿವರಿಸುತ್ತದೆ. ಅದರಲ್ಲಿ ಮೊದಲನೆಯದೇ ಪ್ರಮುದಿತಾ (ಅಂದರೆ ಸಂತೋಷ). ಬುದ್ಧನ ಮಾರ್ಗದಲ್ಲಿ, ಮೊದಲ ಹೆಜ್ಜೆಯನ್ನು ಸರಿಯಾಗಿ ಇರಿಸಬಲ್ಲ ಸಾಧಕನು ಮೊದಲ ಸಲ ಜೀವನದ ನಿಜವಾದ ಸಂತೋಷವನ್ನು, ಆಹ್ಲಾದವನ್ನು ಅನುಭವಿಸಬಲ್ಲವನಾಗುತ್ತಾನೆ ಎಂಬುದು ಈ ಮೊದಲನೆಯ ಸೂತ್ರದ ಅರ್ಥವಾಗಿದೆ. ಬುದ್ಧ ಜೀವವಿರೋಧಿ, ದುಃಖವನ್ನು ಬೋಧಿಸುವ ಪ್ರವಾದಿ ಎಂದೆಲ್ಲ ಆಕ್ಷೇಪಿಸುವವರು ಬುದ್ಧನ ಈ ಒಳನೋಟಕ್ಕೆ ಕುರುಡಾಗುವುದು ದುರದೃಷ್ಟಕರ.

ಬುದ್ಧನ ಉಪದೇಶಗಳು ಜಗತ್ತಿನ ಉಳಿದ ಅನುಭಾವಿಗಳು ಹಾಗೂ ಧರ್ಮಪ್ರವರ್ತಕರ ಉಪದೇಶಗಳಂತಲ್ಲ. ಜಗತ್ತಿನ ಉಳಿದೆಲ್ಲ ಧರ್ಮಗಳು ಕಟ್ಟುಕತೆ, ಕಟ್ಟುಪಾಡು, ಪವಾಡ, ಪರಲೋಕದ ಪ್ರಲೋಭನೆಗಳ ತಳಹದಿಯ ಮೇಲೆ ನಿಂತ ಧರ್ಮಗಳಾಗಿವೆ. ಆದರೆ ಬುದ್ಧನ ಚಾರಿತ್ರ್ಯವನ್ನು ಗಮನಿಸಿದರೆ, ಅಲ್ಲಿ ಈ ಯಾವ ಅಂಶಕ್ಕೂ ಪ್ರಾಮುಖ್ಯ ಇದ್ದಂತೆ ತೋರುವುದಿಲ್ಲ. ಮಾತ್ರವಲ್ಲ ಪವಾಡ, ಪರಲೋಕ ಇತ್ಯಾದಿಗಳನ್ನು ಬುದ್ಧ ತೀಕ್ಷ್ಣವಾಗಿ ಖಂಡಿಸುತ್ತಾನೆ. ವಿನಯ ಪಿಟಕದಲ್ಲಿ, ಸಾಧಕನಾದವನಿಗೆ ನೂರೆಂಟು ನಿಯಮಗಳನ್ನು ಪಟ್ಟಿ ಮಾಡಲಾಗಿದೆ, ನಿಜ. ಆದರೆ ಅವು ಕಟ್ಟುಪಾಡುಗಳಲ್ಲ. ಈ ಮಾರ್ಗಸೂಚಿಯನ್ನು ಅನುಸರಿಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಬುದ್ಧ ಆಶ್ವಾಸಿಸುವುದೂ ಇಲ್ಲ; ಅನುಸರಿಸದೆ ಹೋದರೆ ನರಕಕೂಪದಲ್ಲಿ ಬೀಳಬೇಕಾಗುತ್ತದೆ ಎಂದು ಹೆದರಿಸುವುದೂ ಇಲ್ಲ. ಹೆಚ್ಚೆಂದರೆ, ಆ ನಿಯಮಗಳನ್ನು ಮಾರ್ಗಸೂಚಿ ಅಥವಾ ಬೌದ್ಧಮಾರ್ಗದ ನೀಲಿನಕ್ಷೆ ಎನ್ನಬಹುದು.

ಬುದ್ಧನ ಮತ್ತೊಂದು ವೈಶಿಷ್ಟ್ಯ, ಅವನು ಜಗತ್ತಿನ ಉಳಿದ ಅನುಭಾವಿಗಳಂತೆ ಬೆಡಗಿನಲ್ಲಿ ನುಡಿಯುವುದಿಲ್ಲ, ಭಾವೋದ್ರೇಕದಿಂದ ಮೈಮರೆವವನಲ್ಲ. ಬುದ್ಧನ ಉಪದೇಶಗಳಲ್ಲಿ ಅಲ್ಲಲ್ಲಿ ಉಪಮೆ, ದೃಷ್ಟಾಂತಗಳು ಬಂದರೂ ಅವು ಅರ್ಥಸಂದಿಗ್ಧದಿಂದ ಉಪದೇಶದ ಮೂಲ ಆಶಯದ ದಿಕ್ಕು ತಪ್ಪಿಸುವುದಿಲ್ಲ.

ಒಂದು ವಿಷಯವನ್ನು ನುಡಿದು ವಿವರಿಸಲಾಗದು ಎನಿಸಿದರೆ, ಆ ಕುರಿತು ಬೆಡಗಿನಲ್ಲಿ ನುಡಿದು ವಿವರಿಸುವ ಪ್ರಯತ್ನವನ್ನು ಬುದ್ಧ ಮಾಡುವುದಿಲ್ಲ, ಬದಲಾಗಿ ಮೌನ ವಹಿಸಿಬಿಡುತ್ತಾನೆ. ಕಾಲ, ದೇಶ, ಆತ್ಮ ಮತ್ತು ಬುದ್ಧತ್ವಗಳ ಕುರಿತು ಅವನು ಕೊನೆಗೂ ಏನನ್ನೂ ನುಡಿಯಲಿಲ್ಲ. ಅದನ್ನು ಬೌದ್ಧಪರಂಪರೆ ‘ಬುದ್ಧನ ಮಹಾಮೌನ’ವೆಂದೇ ಕರೆಯುತ್ತದೆ. ಏಕೆಂದರೆ ಆ ನಾಲ್ಕು ವಿಷಯಗಳ ಕುರಿತು ಏನನ್ನಾದರೂ ನುಡಿದರೆ ಪುನಃ ಉಪದೇಶಗಳಲ್ಲಿ ಬೆಡಗು, ಒಗಟು, ಕ್ಲೀಷೆಗಳು ತಲೆದೋರಿಬಿಡುತ್ತವೆ.

ಸತ್ಯ ಎಂಬುದು ವಿರೋಧಾಭಾಸಗಳಿಂದ ಕೂಡಿರುತ್ತದೆ ಎಂಬುದನ್ನು ಭಾರತದ ಶ್ರಮಣಧಾರೆಗಳು ಅರಿತಿದ್ದವು. ಉದಾಹರಣೆಗೆ, ಬೌದ್ಧ ವಿವೇಕವು ಪುನರ್ಜನ್ಮವನ್ನು ಒಪ್ಪುತ್ತದೆ; ಅನಾತ್ಮವಾದವನ್ನೂ ಪ್ರತಿಪಾದಿಸುತ್ತದೆ. ಇಲ್ಲಿ ಆತ್ಮವಿಲ್ಲದ ಮೇಲೆ ಪುನರ್ಜನ್ಮ ಹೊಂದುವವರಾರು ಎಂಬ ಪ್ರಶ್ನೆ ಅಥವಾ ವಿರೋಧಾಭಾಸ ಉದ್ಭವಿಸುವುದುಂಟು. ಪರಮಸತ್ಯದ ವ್ಯಾಪಕತೆಯನ್ನು ಸೀಮಿತ ನುಡಿಗಳಿಗೆ ಹಿಡಿದಿಡಲು ಆಗದ ಕಾರಣ, ಸತ್ಯದ ನಿರ್ವಚನದಲ್ಲಿ ವಿರೋಧಾಭಾಸ ಭಾಸವಾಗುವುದುಂಟು. ಇಂತಹ ಸಂದರ್ಭ ಮತ್ತೆ ಮತ್ತೆ ಸೃಷ್ಟಿಯಾಗಬಾರದೆಂದೇ ಬುದ್ಧ ‘ಮಹಾಮೌನ’ ವಹಿಸಿದ್ದ ಎನಿಸುತ್ತದೆ. ಈ ಮಹಾಮೌನ ಒಂದು ಹಂತ ದಾಟಿದ ಮೇಲೆ ಚರ್ಚೆ, ವಾಗ್ವಾದಗಳನ್ನು ನಿರಸನ ಮಾಡಬೇಕು ಎಂಬ ಉದ್ದೇಶದ್ದಾಗಿದೆ. ಜೈನ ಧರ್ಮದ ಸ್ಯಾದ್ವಾದವನ್ನೂ ಈ ಹಿನ್ನೆಲೆಯಲ್ಲೇ ಪರಿಭಾವಿಸಬೇಕಾಗುತ್ತದೆ.

ಮನುಷ್ಯ ಜಾತಿಗೆ ‘ಸರ್ವಧರ್ಮ ಸಮನ್ವಯ’ದ ಪರಿಕಲ್ಪನೆ ನೀಡಿದ್ದು ಬೌದ್ಧ ಪರಂಪರೆಯ ಮತ್ತೊಂದು ಅಮೂಲ್ಯ ಕೊಡುಗೆ. ಎಲ್ಲ ಧರ್ಮಗಳೂ ಮೂಲದಲ್ಲಿ ಒಂದೇ ಎನ್ನಲು ಬುದ್ಧನ ಉದಾರತನ ಕಾರಣವಲ್ಲ. ಭಾಷೆಗೆ ವೈರುಧ್ಯಗಳ ಆಳದಲ್ಲಿರುವ ಏಕತೆ ಕಾಣಿಸದೆಂಬ ಕಾರಣಕ್ಕೆ ಅವನು ಹಾಗೆ ನುಡಿಯುತ್ತಾನೆ. ಶಬ್ದಪ್ರಮಾಣವೇ ಸರ್ವಸ್ವವೆಂದು ಭಾವಿಸಿದ ಜಡಬುದ್ಧಿಗಳೊಂದಿಗೆ ವೃಥಾ ವಿವಾದ ಬೇಡವೆಂಬ ಕಾರಣಕ್ಕೆ ಬೌದ್ಧರು ಸರ್ವಧರ್ಮ ಸಮನ್ವಯಕಾರರಾದರು. ಆದರೆ ಲೋಕದ ಜನ ಇದನ್ನು ಬೌದ್ಧರ ಔದಾರ್ಯವೆಂದು ಭಾವಿಸಿದರು.

ಪಾಶ್ಚಿಮಾತ್ಯ ಚಿಂತಕರು ಬುದ್ಧನನ್ನು ಏಷ್ಯಾದ ಬೆಳಕು ಎಂದು ವರ್ಣಿಸಿದ್ದರು. ಆದಿಶಂಕರರಿಂದ ಹಿಡಿದು ಡಾ. ಅಂಬೇಡ್ಕರ್‌ ಅವರವರೆಗೆ ಜಗತ್ತಿನ ಎಲ್ಲ ಶ್ರೇಷ್ಠ ಚಿಂತಕರೂ ತಮ್ಮ ಚಿಂತನೆಯ ಅಂತಿಮ ನೆಲೆಯನ್ನು ಬುದ್ಧನಲ್ಲಿ ಕಂಡರು. ವೇದಾಂತಿಗಳಿಂದ ಹಿಡಿದು ಜಾನಪದರವರೆಗೆ ಏಷ್ಯಾದ ಎಲ್ಲ ಅನುಭಾವ–ಜನಪದ ಪರಂಪರೆಗಳಿಗೂ ಬುದ್ಧ ತಮ್ಮವನೆನಿಸಿದ.

ರಷ್ಯನ್ ಲೇಖಕ ನಿಕೋಲಸ್ ನೋಟೋವಿಚ್ ತನ್ನ ‘ಯೇಸುಕ್ರಿಸ್ತನ ಅಜ್ಞಾತ ಬದುಕು’ ಎಂಬ ಸಂಶೋಧನಾ ಕೃತಿಯಲ್ಲಿ, ಯೇಸು ಭಾರತದಲ್ಲಿ ಆರು ವರ್ಷಗಳ ಕಾಲ ನೆಲೆಸಿ ಇಲ್ಲಿ ಬೌದ್ಧ ಅಧ್ಯಯನದಲ್ಲಿ ತೊಡಗಿದ್ದನೆಂದು ದಾಖಲೆಗಳ ಸಮೇತ ಪ್ರತಿಪಾದಿಸುತ್ತಾನೆ. ಒಂದು ವೇಳೆ ಅವನ ಮಾತು ನಿಜವಾಗಿದ್ದರೆ ಬುದ್ಧ ಬರೀ ಏಷ್ಯಾದ ಬೆಳಕಲ್ಲ, ಇಡೀ ಜಗತ್ತಿನ ಬೆಳಕೆಂದು ಭಾವಿಸಬೇಕಾಗುತ್ತದೆ. ನೋಟೋವಿಚ್‍ನ ಸಂಶೋಧನೆ ಹುಸಿ, ಇರಲಿ, ಅಥವಾ ದಿಟವಿರಲಿ; ದುಃಖಮಯವಾದ ಇಂದಿನ ಜಗತ್ತಿಗಂತೂ ಬುದ್ಧನೇ ಸಮರ್ಥ ಬೆಳಕಾಗಿದ್ದಾನೆ, ಔಷಧವಾಗಿದ್ದಾನೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.