‘ಇಪ್ಪತ್ತನಾಲ್ಕು ವರ್ಷ ದುಡಿದಿದ್ದೇನೆ, ಬೀದಿಗೆ ದೂಡಬೇಡಿ...’ –‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಯನ್ನು ಓದುವಾಗ, ಕಣ್ಣು ಮಂಜಾದವು, ಕರುಳು ಕಲಕಿದಂತಾಯಿತು. ಆ ಸುದ್ದಿ ಓದಿದ ಬೇರೆಯವರಿಗೆ ಏನನ್ನಿಸಿತೋ ತಿಳಿಯದು, ನನ್ನಂತವರಿಗೆ ಮಾತ್ರ ನೋವು, ಸಿಟ್ಟು ಒಟ್ಟಿಗೆ ಬರುತ್ತದೆ.
ಪರಿಶಿಷ್ಟ ಜಾತಿಗೆ ಸೇರಿದ ನಂಜಮ್ಮ ಎನ್ನುವ ಮಹಿಳೆ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕೆಲವು ವರ್ಷಗಳ ಕಾಲ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿದವರು. ಈಗ ಆಕೆಯೇ ಅಡುಗೆ ಮಾಡಲು ಶುರು ಮಾಡಿದಾಗ, ಪರಿಶಿಷ್ಟರ ಹೊರತಾಗಿ ಉಳಿದ ಸಮುದಾಯದ ಎಲ್ಲಾ ಮಕ್ಕಳು ವರ್ಗಾವಣೆ ಪತ್ರ ತೆಗೆದುಕೊಂಡು ಬೇರೆ ಶಾಲೆಗೆ ಹೋಗಿದ್ದಾರೆ. ಇದೇ ತಾಯಿ ಅಡುಗೆ ಸಹಾಯಕರಾಗಿದ್ದಾಗ ಮಕ್ಕಳ ತಟ್ಟೆ– ಪಾತ್ರೆಗಳನ್ನು ತೊಳೆದಿದ್ದಾರೆ, ಅಕ್ಕಿ ತೊಳೆದಿದ್ದಾರೆ. ಅಡುಗೆಗೆ ನೀರು ತಂದಿದ್ದಾರೆ. ಇದೆಲ್ಲ ಮಾಡುವಾಗ ಇಲ್ಲದ ಅಸ್ಪೃಶ್ಯತೆ ಮೈಲಿಗೆ ಅವರು ಅಡುಗೆ ಮಾಡುವಾಗ ಧೂಮಕೇತುವಿನಂತೆ ಪ್ರತ್ಯಕ್ಷವಾಗಿ ಮಕ್ಕಳ ತಟ್ಟೆಗೆ ಬಂದು ಬಿದ್ದುದು ಹೇಗೆ?
ಪ್ರಕರಣ ಸುದ್ದಿಯಾದ ನಂತರ, ಮಕ್ಕಳು ಶಾಲೆ ಬಿಟ್ಟುದುದಕ್ಕೆ ದಲಿತ ಮಹಿಳೆ ಕಾರಣವಲ್ಲ, ಪಠ್ಯ ಚಟುವಟಿಕೆ ಸರಿಯಿಲ್ಲದೆ ಹೋದುದರಿಂದ ವಿದ್ಯಾರ್ಥಿಗಳು ಬೇರೆ ಶಾಲೆ ನೋಡಿಕೊಂಡರು ಎಂದು ಹೇಳಲಾಯಿತು. ಆದರೆ, ದಲಿತ ಮಹಿಳೆಯರು ಅಡುಗೆ ಮಾಡುವುದಕ್ಕೆ ರಾಜ್ಯದ ಹಲವು ಶಾಲೆಗಳಲ್ಲಿ ವಿರೋಧ ವ್ಯಕ್ತವಾಗಿರುವುದನ್ನು ಗಮನಿಸಿದರೆ, ನಂಜಮ್ಮನ ಸಂಕಟವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.
ಮಕ್ಕಳೆಲ್ಲ ಶಾಲೆ ಬಿಟ್ಟು ಹೋದರೆ, ನನ್ನ ಬದುಕು ಅತಂತ್ರವಾಗುತ್ತದೆ; ಹಾಗೆ ಮಾಡಬೇಡಿ ಎನ್ನುವುದು ಆ ತಾಯಿಯ ಪ್ರಾರ್ಥನೆ. ಅದು ಬರೀ ನಂಜಮ್ಮನ ಅಳಲಲ್ಲ; ಹಳ್ಳಿಯಿಂದ ದಿಲ್ಲಿಯವರೆಗೂ ದಿನವೂ ಜಾತಿಯ ನಂಜು ಉಣ್ಣುತ್ತಿರುವವರ ಅಸಹಾಯಕತೆಯ ದನಿ.
ಬಾಬಾಸಾಹೇಬ ಅಂಬೇಡ್ಕರ್ ಅವರೂ ಜಾತಿಯ ಅಸಹನೆ ಎದುರಿಸಿದ್ದರು. ಒಮ್ಮೆ ಗಾಂಧೀಜಿ ಅವರಿಗೆ ‘ನಮಗೊಂದು ಮಾತೃಭೂಮಿಯಿಲ್ಲ. ಅಸ್ಪೃಶ್ಯರ ನೋವು– ಅವಮಾನ ನನಗೆ ಅರ್ಥವಾದಷ್ಟು ನಿಮಗೆ ಅರ್ಥವಾಗುವುದಿಲ್ಲ’ ಎಂದು ಅಂಬೇಡ್ಕರ್ ಹೇಳಿದ ಮಾತು ಎಲ್ಲಾ ಕಾಲಕ್ಕೂ ಸತ್ಯವಾಗಿಬಿಟ್ಟಿದೆ. ಇದೇ ನಂಜಮ್ಮ ಶಿಕ್ಷಕಿಯಾಗಿದ್ದರು ಎಂದುಕೊಳ್ಳಿ. ಆಗ, ಶಾಲೆಯ ಮಕ್ಕಳೆಲ್ಲ ಏನು ಮಾಡುತ್ತಿದ್ದರು? ದಲಿತರು ಅಧಿಕಾರಿಯೋ ಜನಪ್ರತಿನಿಧಿಯೋ ಆಗಿದ್ದಾಗ ಜಾತಿ ವ್ಯಸನಿಗರು ಏನು ಮಾಡುತ್ತಾರೆ? ನಮ್ಮ ಸಮಾಜದಲ್ಲಿ ಸ್ಥಾನ– ಮಾನದಿಂದ ಜಾತಿ ಸಹನೀಯವಾಗುವ ಉದಾಹರಣೆಗಳೂ ಇವೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಕ್ಕೂ ಹೆಚ್ಚು ಕಾಲವಾಯಿತು. ತಂತ್ರಜ್ಞಾನದಿಂದಾಗಿ ಜಗತ್ತೇ ಒಂದು ಗ್ರಾಮವಾಗಿದೆ. ಬೆರಳ ತುದಿಯಲ್ಲೇ ಲೋಕ ಕಾಣುತ್ತಿದೆ. ಆದರೆ, ಈ ಹೊತ್ತಿಗೂ ಜಾತೀಯತೆ, ಅಸ್ಪೃಶ್ಯತೆ ಜೀವಂತವಾಗಿದೆ. ವ್ಯಕ್ತಿಯಾಗಿ ತನಗೆ ಗೌರವವಿದೆ, ಘನತೆಯಿದೆ ಎಂದು ಭಾವಿಸುವವರು, ಉಳಿದವರಿಗೂ ಅದೇ ಘನತೆ ಮತ್ತು ಗೌರವ ಇದೆ ಎಂದು ಭಾವಿಸುವ ವಿವೇಕ ಹೊಂದಿರದೆ ಹೋದರೆ ಹೇಗೆ?
ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 1.10 ಲಕ್ಷಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಲಿತರ ಮೇಲೆ ನಡೆದಿವೆ. ಇವು ದಾಖಲಾಗಿರುವ ಪ್ರಕರಣಗಳಷ್ಟೇ. ಮುಚ್ಚಿ ಹೋಗಿರುವ ಪ್ರಕರಣಗಳು ಇನ್ನೆಷ್ಟೋ. ಈ ದೌರ್ಜನ್ಯ ಪ್ರಕರಣಗಳ ಬಗ್ಗೆ ಸಮಾಜ ವಿಜ್ಞಾನಿಗಳಿಂದ ಅಧ್ಯಯನ ನಡೆದು, ಜಾತೀಯ ದರ್ಪ– ದೌರ್ಜನ್ಯದಲ್ಲಿ ಯಾವ ಯಾವ ಸಮುದಾಯಗಳ ಪಾತ್ರ ಎಷ್ಟೆಷ್ಟು ಎನ್ನುವುದು ದಾಖಲಾದರೆ, ಅದು ಭಾರತೀಯ ಸಮಾಜದ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.
ಪರಧರ್ಮ, ಪರವಿಚಾರಗಳ ಕುರಿತು ಸೈರಣೆಯ ಮಾದರಿಗಳನ್ನು ಸೃಷ್ಟಿಸಿದ ನಾಡಿನಲ್ಲೇ, ದಲಿತ ವ್ಯಕ್ತಿಯೊಬ್ಬನಿಗೆ ಮಲ ತಿನ್ನಿಸಿದ ಪ್ರಕರಣವೂ ನಡೆದಿದೆ. ಬೆಂಕಿಯ ಒಂದು ಕಿಡಿ ಮೈಗೆ ತಾಕಿದರೆ ಬೆಚ್ಚಿ ಬೀಳುತ್ತೇವೆ. ಆದರೆ, ಕೋಲಾರದ ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟು ಬೂದಿ ಮಾಡಲಾಯಿತು. ನಾಗಲಪಲ್ಲಿ ಎಂಬ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಶಿಕ್ಷಕಿ ಮತ್ತು ಅವರ ಮಗನನ್ನು ಕೊಂದು, ತಾಯಿಯ ಎದೆಯ ಮೇಲೆ ಮಗನ ಮೃತದೇಹವನ್ನು ಮಲಗಿಸಲಾಗಿತ್ತು. ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವೆನ್ನಿಸುವ ಇಂಥ ಘಟನೆಗಳಿಂದ ನಾವು ಕಲಿತಿರುವುದಾದರೂ ಏನು?
ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವಾಗ ಕಾನೂನು ಏನು ಮಾಡುತ್ತಿದೆ? ದುರದೃಷ್ಟಕರ ಸಂಗತಿಯೆಂದರೆ, ಜಾತಿ ದೌರ್ಜನ್ಯಗಳ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾದ ಪೊಲೀಸ್ ಇಲಾಖೆ ಶೋಷಕರ ಬಗ್ಗೆ ಮೃದುವಾಗಿರುವುದು. ಪೊಲೀಸ್ ಠಾಣೆ ಎನ್ನುವುದೊಂದು ಜಾತ್ಯತೀತ ವ್ಯವಸ್ಥೆಯಷ್ಟೆ. ಅಲ್ಲಿ ಎಲ್ಲ ಜಾತಿ, ಧರ್ಮದವರಿಗೂ ಒಂದೇ ಕಾನೂನು. ಆದರೆ, ದಬ್ಬಾಳಿಕೆ ಮಾಡುವ ಸಮುದಾಯದವರದ್ದೇ ಠಾಣೆಗಳಲ್ಲಿ ಮೇಲುಗೈ ಆಗಿರುತ್ತದೆ ಮತ್ತು ಆ ಸಮುದಾಯಕ್ಕೆ ಸೇರಿದ ಭೂಮಾಲೀಕರು, ಹಣವಂತರು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಯಾರು ಅನ್ಯಾಯಕ್ಕೆ ಒಳಗಾಗಿರುತ್ತಾರೋ ಅವರಿಗೆ ನ್ಯಾಯ ಸಿಗದಂತೆ ಮಾಡುತ್ತಾರೆ. ಯಾವ ಪೊಲೀಸ್ ಠಾಣೆ ನೊಂದವರಿಗೆ ರಕ್ಷಣೆ ಕೊಡಬೇಕೋ, ಆ ಠಾಣೆಯಲ್ಲಿಯೇ ದಲಿತ ವ್ಯಕ್ತಿ ಮೂತ್ರ ನೆಕ್ಕುವಂತೆ ಮಾಡಿದ ಘಟನೆಗೂ ಕರ್ನಾಟಕ ಸಾಕ್ಷಿಯಾಗಿದೆ.
ಮತ್ತೊಂದು ಪ್ರಕರಣ ನೋಡಿ. ಉತ್ತರ ಕರ್ನಾಟಕದ ಪೊಲೀಸ್ ಠಾಣೆಯೊಂದರ ಪಿಎಸ್‌ಐ ಪರಿಶಿಷ್ಟ ಜಾತಿಗೆ ಸೇರಿದವರು. ಅದು ಆ ಕ್ಷೇತ್ರದ ಶಾಸಕರಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಜನಪ್ರತಿನಿಧಿಯಿಂದ ಜಾತಿ ನಿಂದನೆಯನ್ನು ಸಹಿಸಿಕೊಳ್ಳಲಾರದೆ ಆ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಆತನ ಪತ್ನಿ ಈಗಲೂ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಇದು ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ಅಣಕವಲ್ಲವೇ? ಹೋಟೆಲ್‌ನಲ್ಲಿ ಜಗ್‌ನಲ್ಲಿದ್ದ ನೀರು ಕುಡಿದ ಕಾರಣಕ್ಕೆ ಇಬ್ಬರು ದಲಿತ ಹುಡುಗರನ್ನು ಬೆಂಗಳೂರಿನ ಪೀಣ್ಯದ ಮುಖ್ಯರಸ್ತೆಯಲ್ಲಿ ಕಾರು ಗುದ್ದಿಸಿ ಕೊಲ್ಲಲಾಗಿತ್ತು.
ನಾನೇ ಹುಟ್ಟಿ ಬೆಳೆದ ಊರಿನಲ್ಲಿ ಒಂದು ಘಟನೆ ನಡೆಯಿತು. ನನ್ನ ಕೇರಿಯ ಭೋಜಣ್ಣ ಮತ್ತು ಮಲ್ಲೇಶಣ್ಣ ಸಹೋದರರು ಮರಳು ಲೋಡಿಗೆ ಹೋಗಿ ಬಂದವರು, ಹೋಟೆಲ್ ಹತ್ತಿರ ಟೀ ಕುಡಿಯುತ್ತಾ ನಿಂತಿದ್ದರು. ಮಳೆಗಾಲವಾದ್ದರಿಂದ ಜೋರು ಮಳೆ–ಗಾಳಿ. ಸಹೋದರರು ಮಳೆಯಿಂದ ತಪ್ಪಿಸಿಕೊಳ್ಳಲು ಹೋಟೆಲ್ ಒಳಗೆ ಹೆಜ್ಜೆಯಿಡಲು ಪ್ರಯತ್ನಿಸಿದ್ದಾರೆ. ಜಾತಿ ವಿಷ ಹೊಮ್ಮಲಿಕ್ಕೆ ಅಷ್ಟು ಸಾಕಾಯಿತು. ಆ ಸಹೋದರರ ಮೇಲೆ ಮುಗಿಬಿದ್ದ ಕೆಲವರು, ಇಂದು ಹೋಟೆಲ್ ಒಳಗೆ ಬಂದವರು ನಾಳೆ ಹೆಣ್ಣು ಕೇಳಲು ನಮ್ಮ ಮನೆಗೆ ಬರುತ್ತೀರಿ ಎಂದು ನಿಂದಿಸುತ್ತಾ, ಹಲ್ಲೆ ನಡೆಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡದ ಜಾಗಕ್ಕೆ ಎಳೆದೊಯ್ದು, ಇಬ್ಬರ ಬಲಗೈ ಮುರಿದು ಹಾಕಿದ್ದಾರೆ. ನೋವು ಹಾಗೂ ಅವಮಾನ ತಾಳಲಾರದೆ ಅಳುತ್ತಾ ಮನೆಗೆ ಬಂದ ಆ ಸಹೋದರರ ಚೀರಾಟ ನಮ್ಮ ಮೆದುಳನ್ನೇ ಕಿತ್ತು ಎಸೆಯುವಂತಿತ್ತು. ಇದು ನಾನು ಕಣ್ಣಾರೆ ಕಂಡ, ಈಗಲೂ ಮರೆಯಲಾಗದ ಘಟನೆ.
ಕೋಲಾರದ ಕಡೆಯ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕರೊಬ್ಬರು ಹೇಳಿದ ಘಟನೆ ಹೀಗಿತ್ತು. ಭೂ ಮಾಲೀಕನ ಮನೆಯಲ್ಲಿ ಒಬ್ಬ ದಲಿತ ಜೀತ ಮಾಡುತ್ತಿದ್ದ. ಆತನ ಮಗ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣನಾದರೆ, ಭೂಮಾಲೀಕನ ಮಗ ಅನುತ್ತೀರ್ಣನಾಗಿದ್ದಾನೆ. ಜೀತಗಾರನ ಮಗನ ಕೊಲೆಯಾಗಲು ಅಷ್ಟು ಸಾಕಾಯಿತು. ಇದು, ನಾವು ಬದುಕುತ್ತಿರುವ ಸಮಾಜ; ದಲಿತರು ಅಸ್ಪೃಶ್ಯರೆಂದರೆ ಅಗಿದು ಜಗಿದು ಸಿಪ್ಪೆಯಾಗಿಸಿ ಉಗುಳುವುದಕ್ಕೆ ಅವಕಾಶ ಇರುವ ಸಮಾಜ.
ಕರ್ನಾಟಕದಲ್ಲಿನ ಸಾವಿರಾರು ಹಳ್ಳಿಗಳಲ್ಲಿ, ದಲಿತ ಕೇರಿಗಳಲ್ಲಿ ಯಾರಾದರೂ ತೀರಿಹೋದರೆ, ಉಳಿದ ಸಮುದಾಯದ ಹಟ್ಟಿಗಳಲ್ಲಿರುವ ಹೋಟೆಲ್‌ಗಳು ಇದ್ದಕ್ಕಿದ್ದಂತೆಯೇ ಬಾಗಿಲು ಮುಚ್ಚಿಕೊಳ್ಳುತ್ತವೆ. ಇದಕ್ಕೆ ಕಾರಣ, ಅಂತ್ಯಸಂಸ್ಕಾರಕ್ಕೆ ಬೇರೆ ಊರುಗಳಿಂದ ಬರುವ ದಲಿತರು ಹೋಟೆಲ್‌ಗೆ ಬರಬಹುದೆನ್ನುವ ಮೈಲಿಗೆಯ ಭಯ!
ಮುಟ್ಟಬಾರದೆಂದು ಸಮಾಜ ದೂರ ಇರಿಸಿದವರಿಗೆ ಮನುಷ್ಯರ ಅನುಕಂಪ ಇರಲಿ, ಮೂವತ್ತಮೂರು ಕೋಟಿ ದೇವರುಗಳಿಂದಲೂ ಸಾಸಿವೆ ಕಾಳಿನಷ್ಟು ಪ್ರಯೋಜನವಾಗಿಲ್ಲ. ಇವರಿಗೆ ದೇವರ ಗುಡಿಯೊಳಗೆ ಪ್ರವೇಶವಿಲ್ಲ. ಆದರೂ, ಅಪಾರ ಭಕ್ತಿ–ಶ್ರದ್ಧೆಯಿಂದ ದೇವರ ಪೂಜೆ ಮಾಡುವುದರಲ್ಲಿ ಶೋಷಿತರು ಹಿಂದೆ ಬಿದ್ದಿಲ್ಲ.
ಅನೇಕ ಹಳ್ಳಿಗಳಲ್ಲಿ ಇವತ್ತಿಗೂ ನಮ್ಮವರಿಗೆ ಕ್ಷೌರದ ಭಾಗ್ಯವಿಲ್ಲ. ನೀರು ಮುಟ್ಟಿಸದ ಪ್ರಕರಣ
ಗಳಿಗಂತೂ ಲೆಕ್ಕ ಇಲ್ಲ. ದೇವನೂರ ಮಹಾದೇವ ಅವರು ದಲಿತ ಸಂಘರ್ಷ ಸಮಿತಿಯ ನಾಯಕ
ರಾಗಿದ್ದಾಗ, ಅಸ್ಪೃಶ್ಯತೆ ಎಷ್ಟರ ಮಟ್ಟಿಗೆ ಜೀವಂತ
ವಾಗಿದೆ ಎಂದು ಪರೀಕ್ಷೆ ಮಾಡಲಿಕ್ಕೆ, ಒಂದು ಕಾರ್ಯಕ್ರಮ ರೂಪಿಸಿದ್ದರು. ಊರು ಹಾಗೂ ದಲಿತ ಕೇರಿಯ ಒಂದು ಕೇಂದ್ರಬಿಂದುವಿನಲ್ಲಿ ನೀರಿನ ಮಡಿಕೆ ಇರಿಸಿ, ನೀರು ಕುಡಿಯಲಿಕ್ಕಾಗಿ ಎಲ್ಲರನ್ನೂ ಆಹ್ವಾನಿಸುವ ಕಾರ್ಯಕ್ರಮ ಅದು. ಅದನ್ನು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಮಾಡಲಾಯಿತು. ಆದರೆ, ಸ್ವಾಮೀಜಿಗಳು, ಧರ್ಮಗುರುಗಳು ಹಾಗೂ ಇಪ್ಪತ್ತನಾಲ್ಕು ಗಂಟೆ ಸಮಾಜ ಸೇವೆ ಮಾಡುವ ರಾಜಕಾರಣಿಗಳು, ಚಿಂತಕರು, ಯಾರೂ ನೀರು ಕುಡಿಯುವ ಸವಾಲನ್ನು ಸ್ವೀಕರಿಸಲಿಲ್ಲ. ಮಾಜಿ ಸಚಿವರಾದ ಎಚ್.ಜಿ. ಗೋವಿಂದೇಗೌಡ ಅವರು ಮಾತ್ರ ಶೃಂಗೇರಿಯಲ್ಲಿ ಗುಟುಕು ನೀರು ಕುಡಿದು ಮಾದರಿಯಾದರು.
ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಭಾರತದ ನೆಲ ಫಲವತ್ತಾಗಿರುವುದಕ್ಕೆ ನಮ್ಮ ದೇಹ ಮತ್ತು ನೆತ್ತರೇ ಕಾರಣ. ನಮ್ಮ ದೇಹಗಳು ಈ ನೆಲದಲ್ಲಿ ಚೆಲ್ಲಿದ ರಕ್ತದಿಂದಲೇ ಭಾರತದ ಮಣ್ಣು ಇಷ್ಟು ಫಲವತ್ತಾ
ಗಿದೆ ಎಂದು ಹೇಳುವುದಕ್ಕೆ ವಿಷಾದವೂ ಇದೆ, ಹೆಮ್ಮೆಯೂ ಇದೆ. ಪ್ರಕೃತಿ, ಹೆಣ್ಣು ಮತ್ತು ಅಸ್ಪೃಶ್ಯರು ಈ ದೇಶದಲ್ಲಿ ಹೆಚ್ಚು ಶೋಷಿತರು, ಅವಮಾನಿತರು.
‘ನೊಂದವರ ನೋವು ನೋಯದವರೇನು ಬಲ್ಲರು’ ಎನ್ನುವುದು ಅಕ್ಕಮಹಾದೇವಿ ಮಾತು. ನಮ್ಮ ನೋವನ್ನು ಯಾರಿಗೆ ಹೇಳಿಕೊಳ್ಳುವುದು? ಬಸವಣ್ಣನ ‘ದಯೆಯೇ ಧರ್ಮದ ಮೂಲವಯ್ಯಾ?’ ಮತ್ತು ಬುದ್ಧ ಗುರುವಿನ ‘ಜಗತ್ತಿನ ಅತಿದೊಡ್ಡ ಪ್ರಾರ್ಥನೆ ಎಂದರೆ ತಾಳ್ಮೆ’ ಎನ್ನುವ ಮಾತುಗಳು ನೆನಪಾಗುತ್ತವೆ. ಈ ಮಾತುಗಳು ಎಲ್ಲರ ಎದೆಗೂ ಬಿದ್ದರೆ, ಕುವೆಂಪು ಹೇಳಿದ ‘ಸರ್ವ ಜನಾಂಗದ ಶಾಂತಿಯ ತೋಟ’ ಸಾಕಾರಗೊಳ್ಳಬಹುದು.
ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುವೆ. ಅನ್ನ ನೀಡುವ ತಾಯಿ ಅಸ್ಪೃಶ್ಯಳಾದರೆ, ಸಕಲ ಜೀವಕೋಟಿಯನ್ನೂ ಹೊತ್ತು ನಿಂತಿರುವ ಭೂತಾಯಿಯನ್ನು ಏನನ್ನಬೇಕು? ಸಕಲ ಜೀವಿಗಳ ಜೀವಜಲವಾಗಿರುವ ಗಂಗಾ–ಕಾವೇರಿ ತಾಯಂದಿರನ್ನು ಏನನ್ನಬೇಕು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.