ADVERTISEMENT

ವಿಶ್ಲೇಷಣೆ | ಚಿನ್ನ ಕಳ್ಳಸಾಗಣೆ: ಭಾರತವೇ ಏಕೆ?

ಹಳದಿ ಲೋಹದ ಬಗ್ಗೆ ಭಾರತೀಯರಿಗೆ ಇರುವ ಮೋಹವೇ ಕಳ್ಳಸಾಗಣೆದಾರರಿಗೆ ವರವಾಗಿದೆ

ಟಿ.ಆರ್.ಅನಂತರಾಮು
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
   

ನಮ್ಮ ದೇಶಕ್ಕೆ ವಿದೇಶದಿಂದ ಚಿನ್ನ ಕಳ್ಳಸಾಗಣೆ ಆಗುವ ವಿಷಯ ಈಗ ಸುದ್ದಿಯಲ್ಲಿದೆ. ಈ ಸಂಬಂಧ ಬಂಧಿತರಾಗಿರುವ ಚಿತ್ರನಟಿ ರನ್ಯಾ ರಾವ್‌ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇರಬಹುದೆಂದು ಜಾರಿ ನಿರ್ದೇಶನಾಲಯ ಅನುಮಾನಪಟ್ಟಿದೆ. ನಿಜ, ಈ ಪ್ರಕರಣ ಬೆಳಕಿಗೆ ಬಂದ ಕಾರಣದಿಂದ ಭಾರತದ ಚಿನ್ನದ ಮಾರುಕಟ್ಟೆಯೇನೂ ಅಲ್ಲೋಲಕಲ್ಲೋಲ ಆಗುವುದಿಲ್ಲ. ಆದರೆ ಜನಸಾಮಾನ್ಯರು ಕೇಳುವ ಕೆಲವು ಪ್ರಶ್ನೆಗಳಿವೆ. ಭಾರತ ಏಕೆ ಚಿನ್ನದ ಕಳ್ಳಸಾಗಾಣಿಕೆಗೆ ಸ್ವರ್ಗ ಆಗುತ್ತಿದೆ? ಚಿನ್ನದ ಮೇಲೆ ವಿಧಿಸುತ್ತಿರುವ ಅಧಿಕ ಸುಂಕವೇ? ಚಿನ್ನಕ್ಕಿರುವ ಅತ್ಯಧಿಕ ಬೇಡಿಕೆಯೇ? ಅದನ್ನು ಪೂರೈಕೆಯಲ್ಲಿ ಸರಿಗಟ್ಟಲು ಸಾಧ್ಯವಾಗುತ್ತಿಲ್ಲವೇ?

ಚಿನ್ನದ ಕಳ್ಳಸಾಗಾಣಿಕೆ ಭಾರತದ ಮಟ್ಟಿಗೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲೇ ಇದೆ. ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಕಸ್ಟಮ್ಸ್‌ ಇಲಾಖೆಯು ದೇಶದ ವಿವಿಧ ವಿಮಾನ ನಿಲ್ದಾಣಗಳ ಮೇಲೆ ಈಗ ಕಣ್ಣಿಟ್ಟಿವೆ. ಕಸ್ಟಮ್ಸ್‌ ಇಲಾಖೆಯು 2023-24ರ ಆರ್ಥಿಕ ವರ್ಷದಲ್ಲಿ 4,869 ಕೆ.ಜಿ. ಚಿನ್ನವನ್ನು ವಿವಿಧ ವಿಮಾನ ನಿಲ್ದಾಣಗಳಲ್ಲಿ ಜಪ್ತಿ ಮಾಡಿದೆ. ಅದರ ಹಿಂದಿನ ಆರ್ಥಿಕ ವರ್ಷದಲ್ಲಿ 3,500 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿತ್ತು.

ನಿಮಗೆ ಆಶ್ಚರ್ಯವಾಗಬಹುದು, ಕೋಲಾರ ಜಿಲ್ಲೆಯಲ್ಲಿನ ಚಿನ್ನದ ಗಣಿಯನ್ನು 2001ರಲ್ಲಿ ಮುಚ್ಚಿದ ಮೇಲೆ ಇಡೀ ಭಾರತದಲ್ಲಿ ಏಕೈಕ ಚಿನ್ನದ ಗಣಿ ಇರುವುದು ಕರ್ನಾಟಕದ ರಾಯಚೂರಿನ ಹಟ್ಟಿಯಲ್ಲಿ. ಇದರ ವಾರ್ಷಿಕ ಉತ್ಪಾದನೆ ಎರಡು ಟನ್ನನ್ನೂ ಮುಟ್ಟುವುದಿಲ್ಲ. ಅಂದಮೇಲೆ ಚಿನ್ನವನ್ನು ಆಮದು ಮಾಡಿಕೊಳ್ಳುವುದು ಭಾರತದ ಮಟ್ಟಿಗೆ ಅನಿವಾರ್ಯ. ವಾರ್ಷಿಕ ಅಂದಾಜು 800 ಟನ್‌ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಪೆಟ್ರೋಲಿಯಂ ಉತ್ಪನ್ನಗಳ ನಂತರ ಈ ಬಾಬತ್ತಿಗೆ ಹೆಚ್ಚಿನ ವಿದೇಶಿ ವಿನಿಮಯ ಖರ್ಚಾಗುತ್ತಿದೆ. 

ADVERTISEMENT

ಭಾರತದಲ್ಲಿ ಪ್ರತಿವರ್ಷ ಅಂದಾಜು 10 ಲಕ್ಷ ಮದುವೆಗಳು ನಡೆಯುತ್ತವೆ. ಮದುವೆಗಳ ಸಲುವಾಗಿ ಕನಿಷ್ಠ ಎಂದರೂ 50 ಟನ್‌ನಷ್ಟು ಚಿನ್ನ ಬೇಕು. ಉಳಿದದ್ದೆಲ್ಲ ಹೆಚ್ಚಿನ ಪಾಲು ಆಭರಣಕ್ಕೇ ವಿನಿಯೋಗವಾಗು ತ್ತದೆ. ಅಲ್ಪ ಪ್ರಮಾಣ ಎಲೆಕ್ಟ್ರಾನಿಕ್‌ ಉದ್ಯಮದಲ್ಲಿ ಮತ್ತು ದಂತ ವೈದ್ಯಕೀಯದಲ್ಲಿ ಬಳಕೆಯಾಗುತ್ತದೆ. ಆದರೆ ಆಭರಣಗಳ ಬೇಡಿಕೆಯನ್ನು ಪರಿಗಣಿಸಿದರೆ ಇದು ನಗಣ್ಯ. ಇನ್ನೂ ಒಂದು ಅಂದಾಜಿದೆ. ಭಾರತ ಮೊದಲಿನಿಂದಲೂ ಚಿನ್ನದ ಆಕರ್ಷಣೆಗೆ ಒಳಗಾಗಿದೆ. ಆಭರಣದ ರೂಪದಲ್ಲಿ ಇಂದಿಗೂ ಖಾಸಗಿಯಾಗಿ ಸುಮಾರು 25,000 ಟನ್‌ ಚಿನ್ನದ ದಾಸ್ತಾನಿದೆ ಎಂದು ಅಂದಾಜು. ನಮ್ಮ ಮಹಿಳೆಯರು 14 ಕ್ಯಾರೆಟ್‌ ಚಿನ್ನವನ್ನು ಎಂದೂ ಒಪ್ಪುವುದಿಲ್ಲ. ಅಂದರೆ 14 ಕ್ಯಾರೆಟ್‌ ಶುದ್ಧ ಚಿನ್ನ, ಉಳಿದದ್ದು ಬೆಳ್ಳಿ, ತಾಮ್ರ, ಪ್ಲಾಟಿನಂ, ಪೆಲ್ಲಾಡಿಯಂ ನಂತಹ ಯಾವುದಾದರೂ ಲೋಹ ಆಗಿರಬಹುದು. ಕನಿಷ್ಠ 22 ಕ್ಯಾರೆಟ್‌, ಅಂದರೆ ಪರಿಶುದ್ಧ ಚಿನ್ನವೇ ಆಭರಣಗಳಿಗಾಗಿ ಬೇಕು.

ಕೋಲಾರ ಜಿಲ್ಲೆಯ ಅಷ್ಟೂ ಚಿನ್ನದ ಗಣಿಗಳು 100 ವರ್ಷದಲ್ಲಿ ಶೋಧಿಸಿ ತೆಗೆದ ಚಿನ್ನ ಸುಮಾರು 800 ಟನ್ನು. ಈಗ ವರ್ಷಕ್ಕೇ ನಮಗೆ ಈ ಪ್ರಮಾಣದ ಚಿನ್ನ ಬೇಕಾಗಿದೆ. ಬ್ಯಾಂಕಿನಲ್ಲಿ ಕೇಂದ್ರ ಸರ್ಕಾರ ಆಪತ್ತಿಗೆಂದು ಇಟ್ಟಿರುವ ಚಿನ್ನದ ಪ್ರಮಾಣ ಸುಮಾರು 800 ಟನ್ನು. ಚಿನ್ನವು ಸರ್ಕಾರಕ್ಕೂ ಆಪದ್ಧನ, ಪ್ರಜೆಗಳಿಗೂ ಆಪದ್ಧನ. ಇದರ ಮೇಲೆ ಇಟ್ಟಷ್ಟು ಭರವಸೆಯನ್ನು ಬೇರೆ ಯಾವ ಚಿರ-ಚರ ಆಸ್ತಿಯ ಮೇಲೂ ಇಟ್ಟಿಲ್ಲ.

ರಷ್ಯಾ– ಉಕ್ರೇನ್‌ ಯುದ್ಧವು ಅಂತರರಾಷ್ಟ್ರೀಯ ಚಿನ್ನದ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿರುವುದು ಸ್ಪಷ್ಟವಾಗಿಯೇ ಇದೆ. ಜಾಗತಿಕ ಬಿಕ್ಕಟ್ಟುಗಳನ್ನು ಬೇಗ ಅರ್ಥ ಮಾಡಿಕೊಂಡ ಭಾರತ, 2024ರಲ್ಲಿ ತನ್ನ ಚಿನ್ನದ ದಾಸ್ತಾನಿಗೆ 24 ಟನ್‌ ಚಿನ್ನವನ್ನು ಸೇರಿಸಿ ರಿಸರ್ವ್‌ ಬ್ಯಾಂಕಿನಲ್ಲಿ ಜಮಾ ಮಾಡಿತು. ಭಾರತ 1991ರಲ್ಲಿ ವಿದೇಶಿ ಸಾಲದ ಒತ್ತಡದಲ್ಲಿ ಸಿಲುಕಿಕೊಂಡಾಗ ತಕ್ಷಣ ಹೊಳೆದದ್ದು ರಿಸರ್ವ್‌ ಬ್ಯಾಂಕಿನಲ್ಲಿ ಇಟ್ಟಿದ್ದ ಚಿನ್ನದ ದಾಸ್ತಾನು. ಅದರಿಂದ 46.91 ಟನ್‌ ಚಿನ್ನವನ್ನು ಎತ್ತಿಕೊಂಡು ಬ್ಯಾಂಕ್‌ ಆಫ್‌ ಇಂಗ್ಲೆಂಡಿನಲ್ಲಿ ಅಡವಿಟ್ಟು ಸಾಲ ಚುಕ್ತಾ ಮಾಡಿ ಸಂದಿಗ್ಧದಿಂದ ಪಾರಾಯಿತು. ಅಮೆರಿಕ ಕೂಡ ಚಿನ್ನದ ಮೇಲೆಯೇ ಹೆಚ್ಚು ವಿಶ್ವಾಸ ಇಟ್ಟಿದೆ. ಪೋರ್ಟ್‌ನಾಕ್ಸ್‌ ಮತ್ತು ಫೆಡರಲ್‌ ಬ್ಯಾಂಕುಗಳಲ್ಲಿ ಆ ದೇಶ 8,133 ಟನ್‌ ಚಿನ್ನವನ್ನು ಆಪದ್ಧನವಾಗಿ ಇಟ್ಟುಕೊಂಡಿದೆ. ಇದು ಜಗತ್ತಿನಲ್ಲೇ ಸರ್ಕಾರ ಭದ್ರಪಡಿಸಿ ರುವ ಅತಿ ದೊಡ್ಡ ಚಿನ್ನದ ದಾಸ್ತಾನು ಎನ್ನಲಾಗಿದೆ. ಚಿನ್ನಕ್ಕೆ ಭಾಷೆ ಇಲ್ಲ, ದೇಶವಿಲ್ಲ, ಕಾಲವಿಲ್ಲ. ಎಲ್ಲೆಲ್ಲೂ ಸಲ್ಲುತ್ತದೆ, ಯಾವಾಗಲೂ ಸಲ್ಲುತ್ತದೆ. ಈ ಕಾರಣದಿಂದಾಗಿಯೇ ಚಿನ್ನವನ್ನು ರಾಜರ ಲೋಹ- ಲೋಹಗಳ ರಾಜ ಎನ್ನುವುದು. ಚಿನ್ನದ ಕಳ್ಳಸಾಗಾಣಿಕೆಗೆ ಇದೇ ಬಹುಮುಖ್ಯ ಕಾರಣ.

ದೇಶದಲ್ಲಿ ಚಿನ್ನದ ಬೆಲೆ ಬಲು ದುಬಾರಿ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಅತಿ ಹೆಚ್ಚು ಬೇಡಿಕೆ ಬಂದಿದ್ದ
ರಿಂದ ಏಕಾಏಕಿ ಚಿನ್ನದ ಬೆಲೆ ಏರುಮುಖ ಕಂಡಿದೆ. ಚಿನ್ನದ ಬೆಲೆ ಕುಸಿಯುವುದು ಸಾಧ್ಯವಿಲ್ಲದ ಪರಿಸ್ಥಿತಿ ಭಾರತದಲ್ಲಿ. ಹೀಗಾಗಿಯೇ ಆಂತರಿಕ ಬೇಡಿಕೆಯನ್ನು ಸರಿದೂಗಿಸಲು ಸ್ವಿಟ್ಜರ್ಲೆಂಡ್‌, ಅರಬ್‌ ರಾಷ್ಟ್ರ, ದಕ್ಷಿಣ ಆಫ್ರಿಕಾದ ಮೊರೆ ಹೋಗಿದ್ದೇವೆ.

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌, ಭಾರತದ ಚಿನ್ನದ ಆಮದಿನ ಲೆಕ್ಕ ಇಟ್ಟಿದೆ. ಪ್ರತಿವರ್ಷ ಕೇರಳವೊಂದೇ 200 ಟನ್‌ನಿಂದ 225 ಟನ್‌ ಚಿನ್ನ ಬಳಸುತ್ತಿದೆ. ಅಂದರೆ ಕಳ್ಳಸಾಗಾಣಿಕೆಗೂ ಪೂರಕವಾದ ವಾತಾವರಣ ಭಾರತದಲ್ಲಿದೆ. ವಿದೇಶಗಳಲ್ಲಿ ವಿಶೇಷವಾಗಿ ದುಬೈನಲ್ಲಿ ಚಿನ್ನದ ಬೆಲೆ ನಮ್ಮಲ್ಲಿ ಇರುವುದಕ್ಕಿಂತ ಕಡಿಮೆ. ಜೊತೆಗೆ ಚಿನ್ನಕ್ಕಾಗಿ ವಿಶೇಷ ಸುಂಕವನ್ನು ಆ ದೇಶ ವಿಧಿಸುವುದಿಲ್ಲ. ಅಲ್ಲದೆ ಚಿನ್ನದ ಪರಿಷ್ಕರಣೆ ಅತ್ಯುನ್ನತ ಮಟ್ಟದ್ದು. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಚಿನ್ನದ ಆಮದು ಸುಂಕ ಅತ್ಯಂತ ದುಬಾರಿ, ಶೇ 6ರಷ್ಟು. 2024ರ ಕೇಂದ್ರ ಆಯವ್ಯಯದಲ್ಲಿ ಇದನ್ನು ಶೇ 15ರಿಂದ ಶೇ 6ಕ್ಕೆ ಸರ್ಕಾರ ಇಳಿಸಿತಾದರೂ ಇದೇನೂ ಕಡಿಮೆ ಹೊರೆಯಲ್ಲ.

ಭಾರತಕ್ಕೆ ಚಿನ್ನವನ್ನು ಕಳ್ಳಮಾರ್ಗವಾಗಿ ಸಾಗಿಸಲು ಇನ್ನೂ ಒಂದು ಅನುಕೂಲ ಇದೆ. ಅದೆಂದರೆ 2000ದಲ್ಲೇ ಭಾರತ ಸರ್ಕಾರ ಕೆಲವು ರಾಜ್ಯಗಳಲ್ಲಿ ವಿಶೇಷ ಆರ್ಥಿಕ ವಲಯಗಳನ್ನು ಸೃಷ್ಟಿಸಿದೆ. ಇಲ್ಲಿ ಆಮದು, ರಫ್ತಿಗೆ ನಿರ್ಬಂಧವಿಲ್ಲ. ಮುಖ್ಯವಾಗಿ ಕೈಗಾರಿಕೆಗಳ ಮೂಲಕ, ವಾಣಿಜ್ಯ ವ್ಯವಹಾರಗಳ ಮೂಲಕ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಬೇಕು ಮತ್ತು ರಫ್ತಿನ ಮೂಲಕ ವಾಣಿಜ್ಯೋದ್ಯಮವನ್ನು ಬೆಳೆಸಬೇಕು ಎಂಬುದು ಗುರಿ. ಇಲ್ಲಿ ಚಿನ್ನದ ಆಮದಿಗೆ, ಇಲ್ಲಿಂದ ಆಭರಣಗಳ ಮೂಲಕ ರಫ್ತು ಮಾಡಲು ಸುಂಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗಿದೆ. ಇದನ್ನು ಬಳಸಿಕೊಂಡು ಕಳ್ಳಸಾಗಾಣಿಕೆ ದಾರರು ಇಂಥ ವಲಯಗಳನ್ನು ಪ್ರವೇಶಿಸುತ್ತಾರೆ. ಇದು ವಿದೇಶದಲ್ಲಿ ಕರವನ್ನು ಕಟ್ಟದೆ, ಭಾರತದಲ್ಲಿ ನ್ಯಾಯಬದ್ಧ ಕರಕ್ಕೂ ಸಂಚಕಾರ ಮಾಡಿ ಲಾಭ ಗಳಿಸಲು ಅವರಿಗೆ ಕುಮ್ಮಕ್ಕು ಕೊಟ್ಟಿದೆ.

ಈಗ ವಿದೇಶದಿಂದ ಯಾವ ಪ್ರಜೆಯಾದರೂ ನಿಯಮಾನುಸಾರ ಶೇ 6ರಷ್ಟು ಕರವನ್ನು ತೆತ್ತು ಒಂದು ಕೆ.ಜಿ. ಚಿನ್ನ ತರಬಹುದು. ಇದರಲ್ಲಿ ಪುರುಷರಿಗೆ 20 ಗ್ರಾಂ ಮತ್ತು ಮಹಿಳೆಯರಿಗೆ 40 ಗ್ರಾಂ ಕರಮುಕ್ತ. ಇವೆಲ್ಲಕ್ಕೂ ತಿಲಾಂಜಲಿ ಇಟ್ಟೇ ಕಳ್ಳಸಾಗಾಣಿಕೆ ದಾರರು ಬೇರೆ ಬೇರೆ ಮಾರ್ಗಗಳಲ್ಲಿ ಚಿನ್ನವನ್ನು ದೇಶಕ್ಕೆ ತರುತ್ತಿದ್ದಾರೆ. ಇದರಲ್ಲಿ ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳು ಕೈ ಜೋಡಿಸಿರಬಹುದು ಎಂಬ ಶಂಕೆಯನ್ನು ಜಾರಿ ನಿರ್ದೇಶನಾಲಯ ವ್ಯಕ್ತಪಡಿಸಿದೆ. ಆದರೆ ಭಾರತದಲ್ಲಿ ಚಿನ್ನದ ಬೇಡಿಕೆ ಎಂದಿಗೂ ಕುಸಿಯುವುದಿಲ್ಲ ಎಂಬುದು ಕಳ್ಳ ವ್ಯಾಪಾರಿಗಳಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಚಿನ್ನ ಸುದ್ದಿ ಮಾಡುತ್ತಲೇ ಇರುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.