ADVERTISEMENT

ವಿಶ್ಲೇಷಣೆ | ಆಡಳಿತಕ್ಕೆ ಕಾಯಕಲ್ಪ: ಉದ್ದೇಶ ಈಡೇರುವುದೇ?

ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸುವ ಸವಾಲು ಮತ್ತು ಕಾಯ್ದೆಯ ಮಿತಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 0:35 IST
Last Updated 28 ಏಪ್ರಿಲ್ 2025, 0:35 IST
   

ಬಹುಚರ್ಚಿತ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024ಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದೆ, ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಈ ಮೂಲಕ, ಸ್ಥಳೀಯ ಆಡಳಿತದ ದಿಸೆ ನಿರ್ಧರಿಸುವ ಕಾನೂನಾಗಿ ಅದು ಹೊರಹೊಮ್ಮಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಉತ್ತಮವಾದ ಆಡಳಿತವನ್ನು ಒದಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಾಧ್ಯವಾಗುತ್ತಿಲ್ಲ ಎಂಬುದು ಈ ಕಾಯ್ದೆಯ ಜಾರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಸಮರ್ಥನೆ.

ನೂತನ ಕಾನೂನಿನ ಅಡಿಯಲ್ಲಿ ‘ಗ್ರೇಟರ್‌ ಬೆಂಗಳೂರು’ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಗರಿಷ್ಠ 7 ನಗರಪಾಲಿಕೆಗಳನ್ನು ರಚಿಸಲು ಅವಕಾಶ ಇದೆ. ಇವುಗಳ ಮೂಲಕ ಒಟ್ಟು 800ರಿಂದ 1,000ಕ್ಕೂ ಹೆಚ್ಚು ಕೌನ್ಸಿಲರ್‌ಗಳನ್ನು ಹೊಂದುವ ಪ್ರಸ್ತಾವ ಇದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ರಚಿಸಿ, ಅದರ ಅಡಿಯಲ್ಲಿ ಪಾಲಿಕೆಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ ವಿಕೇಂದ್ರೀಕೃತ ಸ್ಥಳೀಯ ಆಡಳಿತಕ್ಕೆ ಶಕ್ತಿ ತುಂಬಲಾಗುವುದು. ವಿವಿಧ ಪೌರ ಸಂಸ್ಥೆಗಳ ಹೊಣೆಗಾರಿಕೆಯನ್ನು ಸುಗಮಗೊಳಿಸಿ, ಬೃಹತ್ ಬೆಂಗಳೂರು ಪ್ರದೇಶದಲ್ಲಿ ಪರಿಣಾಮಕಾರಿಯಾದ ನಗರಾಡಳಿತವನ್ನು ಖಾತರಿಪಡಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು  ವೇಗವಾಗಿ ಅನುಷ್ಠಾನಗೊಳಿಸುವುದು ಗ್ರೇಟರ್‌ ಬೆಂಗಳೂರು ಆಡಳಿತ ವ್ಯವಸ್ಥೆಯ ಉದ್ದೇಶ ಎಂಬುದು ಸರ್ಕಾರದ ಪ್ರತಿಪಾದನೆ.

ಆದರೆ ಹೊಸ ಕಾನೂನನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಳೀಯ ಸಂಘ– ಸಂಸ್ಥೆಗಳು ಮತ್ತು ಮತದಾರರ ಜೊತೆ ವ್ಯಾಪಕವಾದ ಸಮಾಲೋಚನೆ ನಡೆಸಲಾಗಿಲ್ಲ ಎಂದು ಟೀಕೆಗಳು ಬೇರೆ ಬೇರೆ ವಲಯಗಳಿಂದ ವ್ಯಕ್ತವಾಗಿವೆ. ಇನ್ನೊಂದೆಡೆ, ಮೆಟ್ರೊಪಾಲಿಟನ್ ಆಡಳಿತವನ್ನು ಬಲಪಡಿಸಲು ಬೇಕಾದ ತಿದ್ದುಪಡಿಗಳನ್ನು ಮಾಡುವತನಕ ವಿಧಾನ ಪರಿಷತ್ತಿನಲ್ಲಿ ಮಸೂದೆಗೆ ಅಂಗೀಕಾರ ಸಿಗದಂತೆ ನೋಡಿಕೊಳ್ಳಲು ಅಗತ್ಯವಾದ ಸಂಖ್ಯಾಬಲ ವಿರೋಧ ಪಕ್ಷಕ್ಕೆ ಇತ್ತು. ಆದರೂ ಅದು ಹಾಗೆ ಮಾಡದೆ, ತೋರಿಕೆಗೆ ಮಾತ್ರ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದೆ.

ADVERTISEMENT

ಬೆಂಗಳೂರಿನಂತಹ ಮಹಾನಗರದಲ್ಲಿ ಎಲ್ಲ ನಾಗರಿಕರಿಗೆ ಉತ್ಕೃಷ್ಟ ಶಿಕ್ಷಣ, ಆರೋಗ್ಯ ಸೇವೆ ಮತ್ತು ಉದ್ಯೋಗಾವಕಾಶ ಒದಗಿಸುವುದರ ಮೂಲಕ ಅವರ ಜೀವನ ಗುಣಮಟ್ಟ ಸುಧಾರಿಸುವುದು ಸವಾಲಿನ ಕೆಲಸ. ಇದನ್ನು ಸಮರ್ಥವಾಗಿ ನಿಭಾಯಿಸಬೇಕಾದರೆ ನಗರದ ಆಡಳಿತ ವ್ಯವಸ್ಥೆಯು ಸಂಪೂರ್ಣ ಸ್ವಾಯತ್ತವಾಗಿ ಮತ್ತು ಸದೃಢವಾಗಿ ಇರಬೇಕಾಗುತ್ತದೆ. ಈಗ ಜಾರಿಗೆ ಬರಲಿರುವ ವ್ಯವಸ್ಥೆಯು ಬೆಂಗಳೂರಿಗರು ಎದುರಿಸುತ್ತಿರುವ ವಸತಿ, ಕುಡಿಯುವ ನೀರು, ಶುಚಿತ್ವ, ಸಾರಿಗೆ, ಸಂಚಾರ ಮತ್ತು ಭದ್ರತೆಗೆ ಸಂಬಂಧಿಸಿದ ದಿನನಿತ್ಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸ್ಥಳೀಯ ಸರ್ಕಾರಕ್ಕೆ ಅಗತ್ಯವಿರುವ ಅಧಿಕಾರ ಹಾಗೂ ಸಂಪನ್ಮೂಲಗಳನ್ನು ನೀಡಲಿದೆಯೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ.

ಈ ಸಂದರ್ಭದಲ್ಲಿ, ಹೊಸ ಕಾನೂನು ಬೆಂಗಳೂರಿನ ಪ್ರಸ್ತುತ ಸ್ಥಳೀಯ ಸ್ವಸರ್ಕಾರ (ಲೋಕಲ್‌ ಸೆಲ್ಫ್‌ ಗವರ್ನಮೆಂಟ್‌) ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ನಿವಾರಿಸಿ, ಅಗತ್ಯವಿರುವ ಸುಧಾರಣಾ ಕ್ರಮಗಳನ್ನು ಪರಿಚಯಿಸುವುದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದು ಅರ್ಥೈಸಿಕೊಳ್ಳುವುದು ಬಹುಮುಖ್ಯ.

ಮಹಾನಗರ ಪಾಲಿಕೆಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಹೊಸ ವ್ಯವಸ್ಥೆಯ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಕೌನ್ಸಿಲ್‌ನ ಅವಧಿ ಮುಕ್ತಾಯಗೊಂಡು ಇದೀಗ 55 ತಿಂಗಳುಗಳೇ ಕಳೆದಿವೆ. ಹೀಗಿದ್ದರೂ ಮಹಾನಗರಪಾಲಿಕೆಗೆ ಈವರೆಗೂ ಚುನಾವಣೆ ನಡೆದಿಲ್ಲ. ಈ ಹಿಂದೆಯೂ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯು ಎರಡರಿಂದ ಐದು ವರ್ಷಗಳಷ್ಟು ವಿಳಂಬ ಆಗಿದ್ದ ನಿದರ್ಶನಗಳಿವೆ. ಈ ದೀರ್ಘಕಾಲದ ಸಮಸ್ಯೆಗೆ ಹೊಸ ಅಧಿನಿಯಮವು ತೃಪ್ತಿಕರ ಪರಿಹಾರವನ್ನು ಒದಗಿಸುವಲ್ಲಿ ವಿಫಲವಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಯದಿರುವುದಕ್ಕೆ ಕ್ಷೇತ್ರ ಮರುವಿಂಗಡಣೆ ಮತ್ತು ವಾರ್ಡ್ ಮೀಸಲಾತಿ ಗುರುತಿಸುವಿಕೆಯಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪವೇ ಕಾರಣ ಎಂದು ಮಹಾಲೇಖಪಾಲರ (ಸಿಎಜಿ) 2020ರ ವರದಿ ಹೇಳಿದೆ. ಸಂವಿಧಾನದ 74ನೇ ತಿದ್ದುಪಡಿಯ ಆಶಯದ ಅನುಸಾರ, ಐದು ವರ್ಷಗಳಿಗೊಮ್ಮೆ ತಪ್ಪದೇ ಚುನಾವಣೆ ನಡೆಯುವುದನ್ನು ಖಾತರಿಪಡಿಸಲು, ಮಹಾನಗರ ಪಾಲಿಕೆಗಳ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗೆ ಒಪ್ಪಿಸುವುದು ಅಗತ್ಯ. ಆದರೆ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯ ಅಧಿನಿಯಮವು ಈ ವಿಷಯದಲ್ಲಿ ಯಾವುದೇ ಸುಧಾರಣೆಯನ್ನು ಪ್ರಸ್ತಾಪಿಸಿಲ್ಲ. ಎಂದಿನಂತೆಯೇ ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಗುರುತಿಸುವಿಕೆಯ ಅಧಿಕಾರವು ರಾಜ್ಯ ಸರ್ಕಾರದ ಬಳಿಯೇ ಇರಲಿದೆ. ಹಾಗಿದ್ದಮೇಲೆ ಪ್ರಾಧಿಕಾರದ ಅಡಿಯಲ್ಲಿ ರಚನೆಯಾಗಲಿರುವ ನಗರ ಪಾಲಿಕೆಗಳ ಚುನಾವಣೆಯು ಸಕಾಲದಲ್ಲಿ ನೆರವೇರುವ ಖಾತರಿ ಇಲ್ಲದಂತಾಗಿದೆ.

ಮಹಾಪೌರರಿಗೆ ಐದು ವರ್ಷಗಳಿಗಿಂತ ಕಡಿಮೆ ಆಡಳಿತಾವಧಿಯನ್ನು ನಿಗದಿಪಡಿಸಿರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದು ಎಂದು ಸಿಎಜಿ ವರದಿಯೇ ಗುರುತಿಸಿದೆ. ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಾಪೌರರಿಗೆ ಐದು ವರ್ಷಗಳ ಆಡಳಿತಾವಧಿ ಒದಗಿಸುವುದು ಅಗತ್ಯ. ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವಲ್ಲಿ ಆಡಳಿತಾವಧಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹೊಸ ಕಾಯ್ದೆಯ ಅಡಿಯಲ್ಲಿ ನಗರ ಪಾಲಿಕೆಗಳ ಮಹಾಪೌರರಿಗೆ ಐದು ವರ್ಷ ಆಡಳಿತಾವಧಿಯ ಗ್ಯಾರಂಟಿಯೇ ಇಲ್ಲ. ಒಂದೆಡೆ, ನಗರ ಪಾಲಿಕೆಗಳ ಮಹಾಪೌರ ಸ್ಥಾನಕ್ಕೆ ಬರೀ 30 ತಿಂಗಳ ಆಡಳಿತಾವಧಿಯನ್ನು ನಿಗದಿಪಡಿಸಲಾಗಿದೆ. ಇನ್ನೊಂದೆಡೆ, ಜಿಬಿಎ ಮಟ್ಟದಲ್ಲಿ, ಬೆಂಗಳೂರಿನ ನಿವಾಸಿಗಳಿಗೆ ನೇರವಾಗಿ ಉತ್ತರದಾಯಿ ಆಗಿರುವ ಚುನಾಯಿತ ಮೆಟ್ರೊಪಾಲಿಟನ್ ಮೇಯರ್ ಸ್ಥಾನವನ್ನೇ ಕೈಬಿಡಲಾಗಿದೆ. ಜಿಬಿಎ ಕಾರ್ಯಕಾರಿ ಮುಖ್ಯಸ್ಥರಾಗಿ ಮುಖ್ಯಮಂತ್ರಿಯವರೇ ಕಾರ್ಯನಿರ್ವಹಿಸುವುದಾದರೆ, ಅಧಿಕಾರ ವಿಕೇಂದ್ರೀಕರಣದ ಉದ್ದೇಶ ಸಾಕಾರವಾಗುವುದು ಅಸಾಧ್ಯ ಎಂಬುದೇ ಕಳವಳಕ್ಕೆ ಕಾರಣವಾಗಿದೆ.

ಈ ಮೊದಲು, ಬಿಬಿಎಂಪಿ ಕಾಯ್ದೆ– 2020ರ ಅಡಿಯಲ್ಲಿ, ನಾಗರಿಕರು ನಗರದ ಅಭಿವೃದ್ಧಿ ಕುರಿತು ಸಲಹೆಗಳನ್ನು ನೀಡಲು ಮತ್ತು ತಮ್ಮ ನೆರೆಹೊರೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದು ತ್ವರಿತ ಪರಿಹಾರ ಕಂಡುಕೊಳ್ಳಲು ವಾರ್ಡ್ ಸಮಿತಿ, ಪ್ರದೇಶ ಸಭಾ ಹಾಗೂ ವಲಯ ಸಮಿತಿಗಳನ್ನು ರಚಿಸಲು ಅವಕಾಶ ಇತ್ತು. ಆದರೆ ಹೊಸ ಕಾಯ್ದೆಯ ಅಡಿಯಲ್ಲಿ ಪ್ರದೇಶ ಸಭಾಗಳನ್ನು ಮತ್ತು ವಲಯ ಸಮಿತಿಗಳನ್ನು ಕೈಬಿಡಲಾಗಿದೆ. ಅಲ್ಲದೆ, ವಾರ್ಡಿನ ಚುನಾಯಿತ ಸದಸ್ಯರ ಅಧ್ಯಕ್ಷತೆಯಲ್ಲಿ ರಚಿಸಲ್ಪಡುವ ವಾರ್ಡ್ ಸಮಿತಿಗಳನ್ನು, ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾಗುವ ವಿಧಾನಸಭಾ ಕ್ಷೇತ್ರ ಮಟ್ಟದ ಸಮಾಲೋಚನೆ ಮತ್ತು ಸಮನ್ವಯ ಸಮಿತಿಗಳ ಅಧೀನಕ್ಕೆ ಒಳಪಡಿಸಲಾಗಿದೆ. ಈ ಮೂಲಕ ಅವುಗಳ ಪಾತ್ರವನ್ನು ದುರ್ಬಲಗೊಳಿಸಲಾಗಿದೆ. ಇದರಿಂದ ವಿಕೇಂದ್ರೀಕೃತ ಆಡಳಿತಕ್ಕೆ ಧಕ್ಕೆಯಾಗುವುದಲ್ಲದೆ ಸ್ಥಳೀಯ ಅಭಿವೃದ್ಧಿ ಕಾರ್ಯಗಳ ಯೋಜನೆ ರೂಪಿಸುವ ಪ್ರಕ್ರಿಯೆಯಲ್ಲಿ ಮತ್ತು ಅವುಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನಸಾಮಾನ್ಯರ ಪಾಲ್ಗೊಳ್ಳುವಿಕೆಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ.

ಬೃಹದಾಕಾರದಲ್ಲಿ ವಿಸ್ತರಿಸುತ್ತಿರುವ ಬೆಂಗಳೂರು ಮಹಾನಗರಕ್ಕೆ ಸುಧಾರಿತ ಆಡಳಿತ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನು ಈ ಕಾಯ್ದೆ ಹೊಂದಿದ್ದರೂ ಅದರಲ್ಲಿ ಅನೇಕ ಕೊರತೆಗಳು ಇನ್ನೂ ಹಾಗೆಯೇ ಉಳಿದಿರುವುದು ವಿಷಾದಕರ ಸಂಗತಿ. ರಾಜ್ಯ ಸರ್ಕಾರ ತಾನೇ ರಚಿಸಿದ ಬ್ರ್ಯಾಂಡ್ ಬೆಂಗಳೂರು ಸಮಿತಿಯ ಶಿಫಾರಸುಗಳನ್ನು ಪ್ರಾಮಾಣಿಕವಾಗಿ ಅನುಸರಿಸಿದ್ದರೆ, ಈ ಕಾಯ್ದೆಯು ಇನ್ನೂ ಉತ್ತಮ ಮತ್ತು ಜನಸ್ನೇಹಿ ರೂಪವನ್ನು ಪಡೆಯಬಹುದಿತ್ತು. ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರಿಗೆ 21ನೇ ಶತಮಾನಕ್ಕೆ ಅನುಗುಣವಾದ ಒಂದು ಸ್ವಾಯತ್ತ ಮತ್ತು ಆಧುನಿಕ ಮೆಟ್ರೊಪಾಲಿಟನ್ ನಗರ ವ್ಯವಸ್ಥೆಯನ್ನು ಕಲ್ಪಿಸುವ ಒಂದು ಸುವರ್ಣಾವಕಾಶ ಇದರಿಂದ ಕೈತಪ್ಪಿ ಹೋದಂತೆ ಆಗಿದೆ.

ಲೇಖಕ: ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಷಿಪ್ ಆ್ಯಂಡ್ ಡೆಮಾಕ್ರಸಿ ಸಂಸ್ಥೆಯ ‘ಭಾಗವಹಿಸುವಿಕೆಯ ಆಡಳಿತ’ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.