ADVERTISEMENT

ಬೆದರಿಸುವವರ ಎದುರಿಸಿ ನಿಲ್ಲಬೇಕು

ಚೀನಾ ಜೊತೆಗಿನ ತಿಕ್ಕಾಟದ ಈ ಸಂದರ್ಭದಲ್ಲಿ ಪಾಠವಾಗಬಹುದಾದ ಪ್ರಸಂಗಗಳು...

ಕ್ಯಾಪ್ಟನ್‍ ಗೋಪಿನಾಥ್‍
Published 17 ಜೂನ್ 2020, 19:42 IST
Last Updated 17 ಜೂನ್ 2020, 19:42 IST
   

ಭಾರತ ಮತ್ತು ಚೀನಾ ನಡುವೆಈಗ ನಡೆದಿರುವ ತಿಕ್ಕಾಟಕ್ಕೆ ಸಂಬಂಧಪಡುವಂತೆ ಬಾಂಗ್ಲಾ ಯುದ್ಧದ ಕುರಿತು ಒಂದೆರಡು ಮಾತು ಹೇಳುವೆ. ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿನ ನನ್ನ ಬ್ಯಾಚ್‌ ‘ಹುಟ್ಟಿದ್ದೇ ಹೋರಾಟಕ್ಕೆ’ ಎಂಬ ಖ್ಯಾತಿಯನ್ನು ಪಡೆಯಿತು. ಇದಕ್ಕೆ ಕಾರಣ, ತರಬೇತಿ ನಡೆಯುತ್ತಿದ್ದಾಗಲೇ ನಮ್ಮ ಕೋರ್ಸ್‌ನ ಅವಧಿಯನ್ನು ಕಡಿಮೆ ಮಾಡಿ, ನಮ್ಮ ಬೆಟಾಲಿಯನ್‌ ಸೇರಿಕೊಳ್ಳಬೇಕು ಎಂದು ನಮ್ಮನ್ನು 1971ರಲ್ಲಿ ಅವಸರದಲ್ಲಿ ಕಳಿಸಿಕೊಡಲಾಯಿತು. ನಾವು ಅಂದಾಜು 150 ಜನ ಸೇನಾಧಿಕಾರಿಗಳು ಇದ್ದೆವು. ಪೂರ್ವ ಪಾಕಿಸ್ತಾನದಿಂದ (ಇಂದಿನ ಬಾಂಗ್ಲಾದೇಶ) ನಿರಾಶ್ರಿತರು ಸಾಗರದಂತೆ ಭಾರತದ ಕಡೆ ಹರಿದುಬರುತ್ತಿದ್ದಾಗ, ಗಡಿಯಲ್ಲಿ ಸೇನಾ ಜಮಾವಣೆ ನಡೆಯುತ್ತಿದೆ ಎಂಬ ವರದಿಗಳು ಇದ್ದವು.

ಯುದ್ಧ ನಡೆಯುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ನನ್ನ ರೆಜಿಮೆಂಟನ್ನು ಸೇರಿಕೊಳ್ಳಲು ನಾನು ಸಿಲಿಗುರಿಗೆ ರೈಲಿನಲ್ಲಿ ಹೊರಟೆ. ಸಿಲಿಗುರಿ ಇರುವುದು ಚೀನಾ ಗಡಿಯಲ್ಲಿ. ನಾನು ಅಲ್ಲಿಂದ, ಸೇನಾ ವಾಹನಗಳ ಸಾಲಿನಲ್ಲಿ ಭವ್ಯ ಹಿಮಾಲಯ ಪರ್ವತಗಳ ಕಡೆ ಸಾಗಿದೆ, ನನಗೆ ನಿಗದಿ ಮಾಡಲಾಗಿದ್ದ ಸ್ಥಾನ ತಲುಪಿದೆ.

ರೆಜಿಮೆಂಟ್‌ನ ಕ್ಯಾಂಪ್‌ನಲ್ಲಿ ಸೈನಿಕರು ಗಲಿಬಿಲಿಯಿಂದ ಓಡಾಡುತ್ತಾ ವಸ್ತುಗಳನ್ನು ವಾಹನಕ್ಕೆ ತುಂಬುತ್ತಿದ್ದರು. ‘ಸೇನಾ ಜಮಾವಣೆ ಆಗಬೇಕು ಎಂಬ ಆದೇಶ ಬಂದಿದೆ, ಎಲ್ಲರೂ ನಾಳೆ ಬೆಳಿಗ್ಗೆ ಮದ್ದುಗುಂಡುಗಳೊಡನೆ ಬಾಂಗ್ಲಾ ಗಡಿಯ ಕಡೆ ಹೋಗಬೇಕು’ ಎಂದು ಅಲ್ಲಿನ ಲೆಫ್ಟಿನೆಂಟ್ ತಿಳಿಸಿದರು.

ADVERTISEMENT

ಆ ರಾತ್ರಿ ನನಗೆ ಕಣ್ಣು ಮಿಟುಕಿಸುವಷ್ಟು ಹೊತ್ತು ಕೂಡ ನಿದ್ರೆ ಮಾಡಲು ಆಗಲಿಲ್ಲ. ನಾವು ಆ ಪರ್ವತದಿಂದ ಕೆಳಗೆ ಇಳಿಯಲು ಆರಂಭಿಸಿದೆವು. ಭೂತಾನ ಮತ್ತು ಬಾಂಗ್ಲಾದೇಶದ ನಡುವೆ ಇರುವ ಚಿಕನ್ ನೆಕ್ ಪ್ರದೇಶದಲ್ಲಿನ ಸಿಲಿಗುರಿಯತ್ತ ಹೊರಟೆವು. ನನಗೆ ಸುಧಾರಿಸಿಕೊಳ್ಳಲು ಸಾಧ್ಯವಾಗುವುದಕ್ಕೂ ಮೊದಲೇ ನಾವು ಪೂರ್ವ ಪಾಕಿಸ್ತಾನದ ಕಡೆ ಧಾವಿಸಿದೆವು. ಅಲ್ಲಿ ಭಾರತೀಯ ಸೇನೆಯು ಹಲವು ದಿಕ್ಕುಗಳಿಂದ ದಾಳಿ ನಡೆಸಿತ್ತು. ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಯುದ್ಧದಲ್ಲಿ ತೊಡಗಿದ್ದೆವು. ಯುದ್ಧಕ್ಕೆ ಇಳಿಯದೆ ಇರುವ ಆಯ್ಕೆಯೇ ಇರಲಿಲ್ಲ.

ಮಿಂಚಿನ ವೇಗದಲ್ಲಿ ನಡೆದ ಆಕ್ರಮಣ ಅದಾಗಿತ್ತು. ಹದಿನೈದು ದಿನಗಳಲ್ಲಿ ಭಾರತೀಯ ಸೇನೆಯು ಯುದ್ಧ ಗೆದ್ದುಕೊಂಡಿತ್ತು. ಪಾಕ್ ಸೇನೆಯನ್ನು ಹೊಸಕಿ ಹಾಕಲಾಯಿತು. ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರದ ಉದಯವಾಯಿತು. ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಈ ನಿಚ್ಚಳ ಗೆಲುವು ತಂದುಕೊಟ್ಟಿದ್ದು ಇಂದಿರಾ ಗಾಂಧಿ ಅವರ ಧೈರ್ಯಶಾಲಿ ನಾಯಕತ್ವ, ಸೇನೆಗೆ ನೀಡಿದ್ದ ಸ್ಪಷ್ಟ ಆದೇಶ, ಫೀಲ್ಡ್ ಮಾರ್ಷಲ್ ಮಣೇಕ್‌ ಷಾ ಅವರ ಚಾತುರ್ಯ. ಹಾಗೆಯೇ, 1962ರ ಚೀನಾ ವಿರುದ್ಧದ ಯುದ್ಧದಲ್ಲಿ ಕಲಿತ ಪಾಠಗಳು, ಸೇನೆ ತಾನು ಪಡೆದುಕೊಂಡ ತರಬೇತಿ.

ಈಗ ಚೀನಾದ ಜೊತೆ ನಡೆದಿರುವ ತಿಕ್ಕಾಟದ ಸಂದರ್ಭದಲ್ಲಿ ಕೂಡ ಈ ಮೇಲಿನ ಪ್ರಸಂಗದಿಂದ ಒಂದಿಷ್ಟು ಪಾಠಗಳನ್ನು ಕಲಿತುಕೊಳ್ಳಬಹುದು. ಭಾರತ– ಚೀನಾ ಗಡಿ ಪ್ರದೇಶದ ಭೌಗೋಳಿಕ ಲಕ್ಷಣಗಳ ವಿಶ್ಲೇಷಣೆಗೆ ಮುಂದಾಗದೆಯೇ, ನಮ್ಮ ಹಾಗೂ ಚೀನಾದ ಮಿಲಿಟರಿ ಶಕ್ತಿ ಏನೆಂಬುದರ ಹೋಲಿಕೆ ಮಾಡದೆಯೇ, ಕೆಲವು ಅಪ್ರಿಯ ಸತ್ಯಗಳನ್ನು ಹೇಳಲು ಬಯಸುವೆ. ಚೆಂಗೀಸ್ ಖಾನ್, ನೆಪೋಲಿಯನ್ ಕಾಲದಿಂದಲೂ ಯುದ್ಧಗಳನ್ನು ಗೆದ್ದುಕೊಂಡು ಬರಲಾಗಿದೆ. ಈ ರಾಜರು ಹೊಂದಿದ್ದ ಸಣ್ಣ ಸೇನೆಗಳು ಭಾರಿ ಸೈನ್ಯಗಳನ್ನು ಹೊಸಕಿ ಹಾಕಿದ್ದಿದೆ. ಇದಕ್ಕೆ ಕಾರಣ ಯೋಜನೆ, ಕಾರ್ಯತಂತ್ರ, ವೇಗ ಹಾಗೂ ಶತ್ರು ದಂಗಾಗುವಂತೆ ಮಾಡುವ ಆಕ್ರಮಣ. ‘ಯುದ್ಧಗಳನ್ನು ಗೆದ್ದುಕೊಡುವುದು ಫಿರಂಗಿಗಳಲ್ಲ; ವೇಗ’ ಎಂದು ನೆಪೋಲಿಯನ್ ಹೇಳಿದ್ದ.

ಪೂರ್ವ ಪಾಕಿಸ್ತಾನದ ಮೇಲೆ 1971ರ ಜೂನ್‌ನಲ್ಲಿ ದಾಳಿ ನಡೆಸುವಂತೆ ಇಂದಿರಾ ಗಾಂಧಿ ಒತ್ತಾಯಿಸಿದಾಗ, ಸ್ಯಾಮ್ ಮಣೇಕ್ ಷಾ ಅದಕ್ಕೆ ಒಪ್ಪಲಿಲ್ಲ. ಬದಲಿಗೆ, ಆ ವರ್ಷದ ಡಿಸೆಂಬರ್‌ವರೆಗೆ ಕಾಯುವ ತೀರ್ಮಾನ ಮಾಡಿದರು. ಜೂನ್‌ ತಿಂಗಳಲ್ಲಿ ಮಂಜು ಕರಗಿರುತ್ತದೆ. ಅದು ಚೀನೀಯರಿಗೆ ಭಾರತದ ಮೇಲೆ ಆಕ್ರಮಣ ನಡೆಸಲು ಅವಕಾಶ ಮಾಡಿಕೊಡುತ್ತದೆ. ಚೀನಾ ಆಕ್ರಮಣ ನಡೆಸಿದರೆ, ಮೂರು ಕಡೆಗಳಿಂದ ಯುದ್ಧ ಎದುರಿಸಬೇಕಾದ ಸ್ಥಿತಿ ಬರುತ್ತಿತ್ತು. ಡಿಸೆಂಬರ್‌ ತಿಂಗಳ ಕಠಿಣ ಚಳಿಯು ಚೀನೀಯರಿಗೆ ಒಂದು ಬೆದರಿಕೆಯಾಗಿ ಕೆಲಸ ಮಾಡುತ್ತದೆ ಎಂಬುದು ಅವರ ಲೆಕ್ಕಾಚಾರ ಆಗಿತ್ತು.

ಭಾರತದ ಗಡಿಯೊಳಕ್ಕೆ ಬಂದ ಚೀನಾ ಸೇನೆಯು, ಭಾರತೀಯ ಸೇನೆಯ ನಿರ್ಣಾಯಕ ಪ್ರತಿದಾಳಿಯ ಕಾರಣದಿಂದಾಗಿ ಹಿಮ್ಮೆಟ್ಟಿದ ಎರಡು ನಿದರ್ಶನಗಳು ಇವೆ. 1965ರಲ್ಲಿ ಭಾರತ– ಪಾಕಿಸ್ತಾನ ಯುದ್ಧ ತೀವ್ರವಾಗಿದ್ದ ಸಂದರ್ಭದಲ್ಲಿ, ಟಿಬೆಟ್ ಜೊತೆ ಹೊಂದಿಕೊಂಡಿರುವ ಸಿಕ್ಕಿಂನ ಗಡಿ ಪ್ರದೇಶದ ನಾಥುಲಾದಿಂದ ಹಿಂದೆ ಸರಿಯುವಂತೆ ಚೀನಾ ಎಚ್ಚರಿಕೆ ನೀಡಿತ್ತು. ಇದು ಆಗಿದ್ದು ಸೆಪ್ಟೆಂಬರ್‌ನಲ್ಲಿ. ಆದರೆ, ಅಲ್ಲಿನ ವಿಭಾಗೀಯ ಕಮಾಂಡರ್ ಆಗಿದ್ದ ಮೇಜರ್ ಜನರಲ್ ಸಗತ್ ಸಿಂಗ್ ಅವರು ಇದಕ್ಕೆ ಜಗ್ಗಲಿಲ್ಲ. ಚೀನಾದ ಕಡೆಯಿಂದ ಎದುರಾಗಬಹುದಾದ ಯಾವುದೇ ಕಿಡಿಗೇಡಿತನದ ಕೃತ್ಯಗಳನ್ನು ತಡೆಯುವಂತೆ ಯೋಧರಿಗೆ ಅವರು ಸೂಚಿಸಿದ್ದರು. 1967ರ ಆಗಸ್ಟ್‌ನಲ್ಲಿ ನಾಥುಲಾ ಮೇಲೆ ಮತ್ತೆ ತನ್ನ ಹಕ್ಕು ಸ್ಥಾಪಿಸಲು ಚೀನಾ ಮುಂದಾಯಿತು. ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ದಾಟಲು ಯತ್ನಿಸಿತು. ಸಗತ್ ಸಿಂಗ್ ಆಗಲೂ ಅಲ್ಲಿಯೇ ಅದೇ ಹುದ್ದೆಯಲ್ಲೇ ಇದ್ದರು. ಅವರು ತಡ ಮಾಡದೆಯೇ ಚೀನಾ ಸೇನೆಯ ಮೇಲೆ ಗುಂಡಿನ ಮಳೆ ಸುರಿಸಿದರು. ಶತ್ರು ಪಾಳಯದಲ್ಲಿ ಬಹಳಷ್ಟು ಸಾವುನೋವುಗಳು ಆದವು. ಭಾರತ ಕೂಡ ಸೈನಿಕರನ್ನು ಕಳೆದುಕೊಂಡಿತು, ಆದರೆ ಕಡಿಮೆ ಸಂಖ್ಯೆಯಲ್ಲಿ.

ಅರುಣಾಚಲದ ವಾಂಗ್ಡುಂಗ್ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಲು ಚೀನಾ ಸೇನೆಯು 1986ರಲ್ಲಿ ತವಾಂಗ್ ಪ್ರದೇಶದಲ್ಲಿ ಒಳ ನುಸುಳಲು ಮುಂದಾಯಿತು. ಆಗ, ಭಾರತೀಯ ಸೇನೆ ನಡೆಸಿದ ಕ್ಷಿಪ್ರ ಸಿದ್ಧತೆಯನ್ನು ಗಮನಿಸಿದ ಚೀನಾ ಹಿಮ್ಮೆಟ್ಟಿತು.

ಸಂದರ್ಭಕ್ಕೆ ಸೂಕ್ತವಾದ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಮಿಲಿಟರಿ ಕಮಾಂಡರ್‌ಗಳು ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ ಶತ್ರುಗಳ ನುಸುಳುವಿಕೆಗೆ ತಡೆ ಒಡ್ಡಬೇಕು. ಇದು ಮಿಲಿಟರಿಯ ಸ್ಪಷ್ಟ ನಿಯಮ. ತಾವು ಕೈಗೊಂಡ ತೀರ್ಮಾನಗಳ ಬಗ್ಗೆ ಅವರು ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರಬೇಕು. ಸ್ಥಳೀಯ ಕಮಾಂಡರ್‌ಗಳಿಗೆ ಅಗತ್ಯ ಸಂದರ್ಭದಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳುವ ಸ್ವಾತಂತ್ರ್ಯ ನೀಡಿಯೇ, ಗಡಿಗಳನ್ನು ಕಾಯಲು ನಿಯೋಜಿ ಸಲಾಗಿರುತ್ತದೆ. ಆದರೆ ರಾಜಕೀಯ ನಾಯಕತ್ವವು ಸ್ಪಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳದೇ ಇದ್ದರೆ, ಸೇನಾ ಕಮಾಂಡರ್‌ಗಳ ವಿವೇಚನಾ ಅಧಿಕಾರವನ್ನು ಕಿತ್ತುಕೊಂಡರೆ ಸಮಸ್ಯೆ ಸೃಷ್ಟಿಯಾಗುತ್ತದೆ. ಸೇನಾ ಕಮಾಂಡರ್‌ಗಳು ತಮ್ಮ ಹಿರಿಯ ಅಧಿಕಾರಿಗಳತ್ತ ನೋಡಿ, ಅವರು ರಕ್ಷಣಾ ಸಚಿವಾಲಯದ ಕಡೆ ನೋಡಿ, ಅವರು ರಕ್ಷಣಾ ಮಂತ್ರಿಯತ್ತ ಮುಖ ಮಾಡಿ, ಅವರು ಪ್ರಧಾನಿಹಾಗೂ ರಾಷ್ಟ್ರೀಯ ಭದ್ರತಾ ಸಹೆಗಾರರ ಕಡೆ ತಿರುಗಿ... ನಂತರ ಎಚ್ಚೆತ್ತುಕೊಳ್ಳುವ ಹೊತ್ತಿಗೆತಡವಾಗಿರುತ್ತದೆ.

ಆ ಹೊತ್ತಿಗೆ ಶತ್ರು ಮನೆಯೊಳಕ್ಕೆ ಬಂದು, ಅವನನ್ನು ಹೊರಹಾಕುವುದು ಕಷ್ಟವೂ ಸಂಕೀರ್ಣವೂ ಆಗಿಬಿಟ್ಟಿರುತ್ತದೆ. ವಿವೇಚನೆ ಇಲ್ಲದೆ ಕೆಲಸ ಮಾಡಬೇಕು, ಯುದ್ಧದ ಕಿಡಿ ಹೊತ್ತಿಸಬೇಕು ಎಂದು ಈ ಮಾತು ಹೇಳುತ್ತಿಲ್ಲ. ಸೇನಾ ಕಮಾಂಡರ್‌ಗಳು ತಮ್ಮ ವಿವೇಚನಾ ಅಧಿಕಾರ ಬಳಸಿ ಇನ್ನೊಂದು ದೇಶದ ಮೇಲೆ ಆಕ್ರಮಣ ನಡೆಸುವಂತೆ ಇಲ್ಲ. ಆದರೆ ಅವರು ನಮ್ಮ ದೇಶದ ಮೇಲಿನ ಆಕ್ರಮಣವನ್ನು ತಡೆಯಲು ಮೇಲಧಿಕಾರಿಗಳಿಂದ ಅನುಮತಿಗೆ ಕಾಯಬೇಕಿಲ್ಲ. ಹಾಗೆ ಕಾಯುವುದು ತಮ್ಮ ಮೂಲ ಹೊಣೆಗಾರಿಕೆಯನ್ನು ಮರೆಯುವುದಕ್ಕೆ ಸಮ.

ಇನ್ನೊಬ್ಬರನ್ನು ಹೆದರಿಸುವ ವ್ಯಕ್ತಿ ತಾನೇ ಹೇಡಿಯಾಗಿರುತ್ತಾನೆ, ಆತ್ಮಗೌರವ ಹೊಂದಿರುವುದಿಲ್ಲ ಎಂಬ ಮಾತಿದೆ. ಇದು ರಾಷ್ಟ್ರಗಳ ಮಟ್ಟಿಗೂ ಅನ್ವಯ ಆಗುತ್ತದೆ. ಬೆದರಿಕೆ ಒಡ್ಡುವ ವ್ಯಕ್ತಿಯನ್ನು ಹಾಗೇ ಬಿಟ್ಟರೆ, ಆತ ಮತ್ತೆ ಅದನ್ನೇ ಮಾಡುತ್ತಾನೆ. ಆತನನ್ನು ಧೈರ್ಯದಿಂದ ಎದುರಿಸಿ ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.