
ದಶಕದಿಂದೀಚೆಗೆ ಸಂವಿಧಾನ ಕುರಿತು ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ನಾಯಕರು, ಪಂಥೀಯ ವಾದಿಗಳು, ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರು ಎಲ್ಲರೂ ಒಂದಲ್ಲ ಒಂದು ಸಂದರ್ಭಗಳಲ್ಲಿ ‘ಸಂವಿಧಾನ’ ಪದ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರೂ ಬಳಕೆಯಾಗುತ್ತಿರುತ್ತದೆ. ಹೌದು.. ಹಾಗಾದರೆ ಸಂವಿಧಾನ ಎಂದರೆ ಏನು? ಸಂವಿಧಾನಕ್ಕೆ ಏಕಿಷ್ಟು ಮಹತ್ವ ನೀಡಲಾಗುತ್ತಿದೆ. ನಮಗೆ ಸಂವಿಧಾನ ಎಷ್ಟು ಅನಿವಾರ್ಯ, ಸಂವಿಧಾನಕ್ಕೂ, ಅಂಬೇಡ್ಕರ್ ಅವರಿಗೂ ಏನು ಸಂಬಂಧ? ಅಂಬೇಡ್ಕರ್ ಅವರನ್ನು ನಾವು ಸಂವಿಧಾನಶಿಲ್ಪಿ ಎಂದು ಏಕೆ ಕರೆಯುತ್ತೇವೆ? ಭಾರತದ ಸಂವಿಧಾನ ರೂಪುಗೊಂಡ ರಚನಾತ್ಮಕ ನೆಲಗಟ್ಟಿನ ಬಗ್ಗೆ ಒಂದು ಹುಡುಕಾಟ ಇಲ್ಲಿದೆ.
ಭಾರತ ಎನ್ನುವುದು ಇತಿಹಾಸದ ಪುಟಗಳಲ್ಲಿ ಎಂದಿಗೂ ಒಂದು ನಿರ್ದಿಷ್ಟ ಭೂಪ್ರದೇಶ ಒಳಗೊಂಡ ದೇಶವಾಗಿರಲಿಲ್ಲ. ಮೌರ್ಯರು, ಗುಪ್ತರು, ಮೊಘಲರು ಸೇರಿದಂತೆ ಆಯಾ ಕಾಲಘಟ್ಟದಲ್ಲಿ
ರಾಜರ ಆಳ್ವಿಕೆಗೆ ಒಳಪಟ್ಟ ಆಯಾ ಪ್ರದೇಶಗಳು ಒಂದು ಸಂಸ್ಥಾನ, ಸಾಮ್ರಾಜ್ಯಗಳಾಗಿದ್ದವು. ಯುದ್ಧ, ಅದರ ಬೆನ್ನಲ್ಲೇ ನಡೆವ ಸಂಧಾನಗಳ ಆಧಾರದಲ್ಲಿ ಭೂಪಟವೂ ಬದಲಾಗುತ್ತಾ ಸಾಗುತ್ತಿತ್ತು. ಬ್ರಿಟಿಷರೂ ನೇರವಾಗಿ ಇಡೀ ಭಾರತವನ್ನು ಆಳ್ವಿಕೆ ಮಾಡಲಿಲ್ಲ. ಹಲವು ಸಂಸ್ಥಾನಗಳು ಇದ್ದವು. 1885ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ನಂತರ ಜನಜಾಗೃತಿ ಮೂಡಿ, ಸಂಘಟಿತರಾಗಿ ಸ್ವಾತಂತ್ರ್ಯಕ್ಕಾಗಿ ಜನಪರ ಚಳವಳಿಗಳು ಮೊದಲಾದವು. ಶತಮಾನಗಳಿಂದ ರಾಜರ ಆಳ್ವಿಕೆಗೆ ಒಳಪಟ್ಟ ಜನರಿಗೆ ತಮ್ಮನ್ನು ತಾವು ಆಳ್ವಿಕೆ ಮಾಡಿಕೊಳ್ಳಲು, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾದ ಹೊಸ ಮಾದರಿಯ ಆಡಳಿತ ವ್ಯವಸ್ಥೆಯೊಂದನ್ನು ಕಟ್ಟಿಕೊಳ್ಳಲು ಒಂದು ಉತ್ತಮ ಸಂವಿಧಾನದ ಅಗತ್ಯವಿತ್ತು. ಸ್ವಾತಂತ್ರ್ಯ ಚಳವಳಿಯ ಜತೆಜತೆಗೆ ಇಂತಹದೊಂದು ಕನಸು ಹೆಣೆಯುವ ನಡೆಗೂ ವಿಭಜಿತ ಭಾರತ ತಯಾರಾಗುತ್ತಲೇ ಇತ್ತು.
ಅದು 1939ನೇ ಇಸವಿ. ದ್ವಿತೀಯ ಮಹಾಯುದ್ಧಕ್ಕೆ ಆಗಲೇ ಜರ್ಮನಿ, ಜಪಾನ್ ಮತ್ತು ಇಟಲಿ ದೇಶಗಳು ಮುನ್ನುಡಿ ಬರೆದಿದ್ದವು. 1945ರವರೆಗೆ ನಡೆದ ಮಹಾಯುದ್ಧ ಹಲವು ದೇಶಗಳ ಸ್ಥಿತಿಗತಿಗಳನ್ನೇ ಬದಲಾಯಿಸಿತು. ಈ ಸನ್ನಿವೇಶದಲ್ಲಿ ಭಾರತವನ್ನೂ ಆಳುತ್ತಿದ್ದ ‘ಸೂರ್ಯಮುಳುಗದ ಸಾಮ್ರಾಜ್ಯ’ ಎಂಬ ಸ್ವಘೋಷಿತ ಬ್ರಿಟನ್ ಸಂಕಷ್ಟಕ್ಕೆ ಸಿಲುಕಿತ್ತು. ಯುದ್ಧಕ್ಕೆ ಭಾರತೀಯರ ನೆರವಿನ ಅಗತ್ಯ ಮನಗಂಡ ಬ್ರಿಟಿಷರು ಯುದ್ಧದ ನಂತರ ಸ್ವಾತಂತ್ರ್ಯ ನೀಡುವ ಕುರಿತು ಚರ್ಚಿಸುವ ಭರವಸೆ ನೀಡಿ, ಭಾರತೀಯ ನಾಯಕರ ಸಹಕಾರ ಪಡೆಯುವಲ್ಲಿ ಯಶಸ್ವಿಯಾದರು.
ಯುದ್ಧಕ್ಕೂ ಮೊದಲು ಬ್ರಿಟಿಷರು 1935ರ ಭಾರತ ಸರ್ಕಾರ ಕಾಯ್ದೆ ಜಾರಿಗೆ ತಂದಿದ್ದರು. ಈ ಕಾಯ್ದೆ ಭಾರತದ ರಾಜಕೀಯ ಸುಧಾರಣೆ ಗಳಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿತು. ಈ ಕಾಯ್ದೆಗೆ ಅನುಗುಣವಾಗಿ ಪ್ರಾಂತ್ಯಗಳ ಸ್ವಾಯತ್ತತೆ ಯನ್ನು ಜಾರಿಗೊಳಿಸಲು 1937ರಲ್ಲಿ ಪ್ರಾಂತ್ಯಗಳ ಶಾಸಕಾಂಗಗಳಿಗೆ ಚುನಾವಣೆ ನಡೆದವು. 11 ಪ್ರಾಂತ್ಯಗಳ ಪೈಕಿ ಎಂಟರಲ್ಲಿ ಕಾಂಗ್ರೆಸ್, ಮೂರರಲ್ಲಿ ಕಾಂಗ್ರೆಸೇತರ ಸರ್ಕಾರಗಳು ಅಧಿಕಾರ ಹಿಡಿದವು. ನಂತರ ಆರಂಭವಾದ ದ್ವಿತೀಯ ಮಹಾಯುದ್ಧ ಭಾರತದ ಮೇಲೂ ಪ್ರಭಾವ ಬೀರಿ, ಬ್ರಿಟಿಷ್ ಸರ್ಕಾರ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಮಧ್ಯೆ ಭಿನ್ನಭಿಪ್ರಾಯ ಸೃಷ್ಟಿಯಾದವು. ಭಾರತೀಯರ ವಿಶ್ವಾಸಗಳಿಸಲು, ಭಾರತದ ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಬ್ರಿಟನ್ 1942ರಲ್ಲಿ ಭಾರತಕ್ಕೆ ಕ್ರಿಪ್ಸ್ ಮಿಷನ್ ಕಳುಹಿಸಿತು. ಈ ಮಿಷನ್ ನೇತೃತ್ವ ವಹಿಸಿದ್ದ ಸ್ಟಾಫರ್ಡ್ ಕ್ರಿಪ್ಸ್ ನೀಡಿದ ಹಲವು ಸಲಹೆಗಳಲ್ಲಿ ದ್ವಿತೀಯ ಮಹಾಯುದ್ಧ ಮುಗಿದ ನಂತರ ಭಾರತಕ್ಕೆ ಪ್ರತ್ಯೇಕವಾದ ಹೊಸ ಸಂವಿಧಾನ ರಚಿಸಲು ಕ್ರಮ ಕೈಗೊಳ್ಳುವುದು ಪ್ರಮುಖ ಅಂಶವಾಗಿತ್ತು.
1946ರಲ್ಲಿ ಭಾರತಕ್ಕೆ ಬಂದ ಲಾರೆನ್ಸ್, ಕ್ರಿಪ್ಸ್ ಮತ್ತು ವಿ.ವಿ. ಅಲೆಕ್ಸಾಂಡರ್ ಅವರನ್ನು ಒಳಗೊಂಡ ತ್ರಿಸದಸ್ಯ ಕ್ಯಾಬಿನೆಟ್ ನಿಯೋಗ ಹಲವು ರಾಜಕೀಯ ನಾಯಕರ ಜತೆ ಚರ್ಚೆ ನಡೆಸಿ, ತಕ್ಷಣ ಸಂವಿಧಾನ ರಚನಾ ಸಭೆಯನ್ನು ರಚಿಸಲು ಶಿಫಾರಸು ಮಾಡಿತು. ಬ್ರಿಟಿಷ್ ಇಂಡಿಯಾ ಪ್ರದೇಶದಲ್ಲಿ ಚುನಾವಣೆ ನಡೆದು, ದೇಶಿ ಸಂಸ್ಥಾನಗಳಿಂದ ನಾಮಕರಣಗೊಂಡ 389 ಸದಸ್ಯರನ್ನು ಒಳಗೊಂಡ ಸಂವಿಧಾನ ರಚನಾ ಸಭೆ ಅಸ್ತಿತ್ವಕ್ಕೆ ಬಂದಿತು. ಸಭೆ 1946 ಡಿಸೆಂಬರ್ 11ರಂದು ಮೊದಲ ಸಭೆ ಸೇರಿತು. ಡಾ.ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಭಾರತ ವಿಭಜನೆಯಾದ ಪರಿಣಾಮ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು. ಅಂಬೇಡ್ಕರ್ ಅವರು ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ನೇಮಕವಾದರು. ಅವರ ನೇತೃತ್ವದಲ್ಲಿ 2 ವರ್ಷ 11 ತಿಂಗಳು 17 ದಿನಗಳು ಕಾರ್ಯ ನಿರ್ವಹಿಸಿದ ಸಭೆ, ಬ್ರಿಟಿಷರು ಭಾರತದಲ್ಲಿ ಜಾರಿಗೆ ತಂದ ಕಾಯ್ದೆಗಳು, ಬ್ರಿಟಿಷ್ ಸಂವಿಧಾನ ಸೇರಿದಂತೆ ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ, ಎಲ್ಲ ಸಂವಿಧಾನಗಳ ಉತ್ತಮ ಅಂಶಗಳನ್ನು ಕಲೆಹಾಕಿ, 11 ಅಧಿವೇಶನಗಳಲ್ಲಿ ಚರ್ಚೆ ನಡೆಸಿ, ಭಾರತಕ್ಕೆ ಹೊಂದುವಂತಹ 395 ವಿಧಿಗಳು, 8 ಅನುಸೂಚಿಗಳನ್ನು ಒಳಗೊಂಡ ಸಂವಿಧಾನವನ್ನು ರಚಿಸಿತು (ಪ್ರಸ್ತುತ 24 ಭಾಗಗಳು, 12 ಅನುಸೂಚಿಗಳಿವೆ).
1949 ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಲಾಹೋರ್ ಅಧಿವೇಶನದಲ್ಲಿ ಘೋಷಿಸಿದ್ದ ಪೂರ್ಣ ಸ್ವರಾಜ್ (1929 ಜನವರಿ 26) ನೆನಪಿಗಾಗಿ 1950 ಜನವರಿ 26ರಿಂದ ಅಧಿಕೃತವಾಗಿ ಜಾರಿಗೊಳಿಸಲಾಯಿತು. ಆ ದಿನವನ್ನು ಗಣರಾಜ್ಯ ದಿನವಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಚುನಾಯಿತ ಪ್ರತಿನಿಧಿ ರಾಷ್ಟ್ರದ ಮುಖ್ಯಸ್ಥರಾಗಿದ್ದರೆ ಅಂತಹ ವ್ಯವಸ್ಥೆ ಯನ್ನು ಗಣರಾಜ್ಯ ಎನ್ನುತ್ತೇವೆ. ಭಾರತದ ರಾಷ್ಟ್ರಪತಿ ದೇಶದ ಮುಖ್ಯಸ್ಥರಾಗಿ, ಪ್ರಧಾನಮಂತ್ರಿ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಮೊದಲ ರಾಷ್ಟ್ರಪತಿ, ಜವಾಹರಲಾಲ್ ನೆಹರು ಮೊದಲ ಪ್ರಧಾನಿಯಾದರು.
ಸಂಗ್ರಹಿಸಿದ ಎಲ್ಲ ಮಾಹಿತಿಯನ್ನು ಪರಿಷ್ಕರಿಸಿ, ವಿಗಂಡಣೆ ಮಾಡಿ, ಅರ್ಥ ವಿವರಣೆ ನೀಡಿ, ಸರ್ವ ಜನಾಂಗವೂ ಒಪ್ಪುವಂತಹ ಶ್ರೇಷ್ಠ ಸಂವಿಧಾನವನ್ನು ರೂಪಿಸುವಲ್ಲಿ ಶ್ರಮಿಸಿದ ಸಂವಿಧಾನ ರಚನಾ ಸಭೆಯ ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರನ್ನು ಭಾರತದ ‘ಸಂವಿಧಾನ ಶಿಲ್ಪಿ’ ಎಂದೇ
ಕರೆಯಲಾಗುತ್ತಿದೆ.
ಸಂವಿಧಾನ ಎಂದರೇನು?
ಕಾನೂನು ರೂಪಿಸುವ (ಶಾಸಕಾಂಗ), ಜಾರಿಗೆ ತರುವ (ಕಾರ್ಯಾಂಗ) ಮತ್ತು ಕಾನೂನು ಪಾಲಿಸದ, ವಿರುದ್ಧ ನಡೆದುಕೊಳ್ಳುವವರಿಗೆ ಶಿಕ್ಷೆ ವಿಧಿಸುವ (ನ್ಯಾಯಾಂಗ) ವ್ಯವಸ್ಥೆಯನ್ನು ಸರ್ಕಾರ ಎನ್ನುತ್ತೇವೆ.
ಇಂತಹ ಕಾನೂನುಗಳನ್ನು ಕೆಲ ಮೂಲಭೂತ ನಿಯಮಗಳಿಗೆ ಅನುಗುಣವಾಗಿ ರೂಪಿಸಬೇಕು. ಸರ್ಕಾರದ ರಚನೆಯಾಗಬೇಕು. ಆಡಳಿತದ ಕರ್ತವ್ಯ ನಿರ್ವಹಿಸಬೇಕು. ನ್ಯಾಯ ತೀರ್ಪು ನೀಡುವಾಗ ಅನುಸರಿಸಬೇಕು. ಪ್ರಜೆಗಳೂ ಸಹ ತಮ್ಮ ಹಕ್ಕುಗಳನ್ನು ಅನುಭವಿಸಿ, ಕರ್ತವ್ಯಗಳನ್ನು ಪಾಲಿಸಬೇಕು. ಅಂತಹ ಮೂಲಭೂತ ನಿಯಮಗಳ ಸಂಕಲನವೇ ಸಂವಿಧಾನ.
ಸಂವಿಧಾನ ಎಂಬ ಪದ ಕಾನ್‌ಸ್ಟಿಟ್ಯೂಷನ್ ಎಂಬ ಇಂಗ್ಲಿಷ್ ಪದದ ಕನ್ನಡ ರೂಪಾಂತರ. ಕಾನ್‌ಸ್ಟಿಟ್ಯೂಷನ್ ಎಂದರೆ ಸಂಯೋಜಿಸು, ನಿಯೋಜಿಸು ಅಥವಾ ವಿಧಿವತ್ತಾಗಿ ಪಾಲಿಸುವುದು ಎಂದು ಅರ್ಥ. ಸಂವಿಧಾನವು ರಾಷ್ಟ್ರದ ಸರ್ವಶ್ರೇಷ್ಠ ಸಂಹಿತೆಯಾಗಿದ್ದು, ರಾಷ್ಟ್ರವನ್ನು ಮುನ್ನಡೆಸುವ ಸರ್ಕಾರ ಮತ್ತು ಪ್ರಜೆಗಳು ಸಂವಿಧಾನದ ಚೌಕಟ್ಟಿನಲ್ಲೇ ಸಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.