ಸಮಾಜವಾದ ಸಿದ್ಧಾಂತದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಆದರೆ, ಆ ಶ್ರೀಮಂತ ಪರಂಪರೆಗೀಗ ಮಬ್ಬು ಆವರಿಸಿದೆ. ತೊಂಬತ್ತು ವರ್ಷಗಳ ಸಮಾಜವಾದದ ಮೌಲ್ಯ ಪರಂಪರೆಯಲ್ಲಿ ವರ್ತಮಾನದ ಅನೇಕ ಸಂಕಟಗಳಿಗೆ ಉತ್ತರವಿದೆ.
‘ಸಮಾಜವಾದಿಗಳಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಲ್ಲ ಯುವಜನರೇ! ಗಾಂಧಿವಾದಿಗಳಿಗೆ ಈ ಮಾನದಂಡ 75 ವರ್ಷ!’
‘ನನಗೀಗ 55 ವರ್ಷ. ಯುವಕನೆಂದು ಹೇಳುವುದು ಕಷ್ಟ’ ಎನ್ನುವ ಅವಿನಾಶ್ ಪಾಟೀಲ್‌ರ ಮಾತಿಗೆ ತಮಾಷೆಯಾಗಿ ಹೀಗೆ ಹೇಳಿದೆ. ಪುಣೆಯಲ್ಲಿ ನಡೆದ, ದೇಶದ ವಿವಿಧ ಭಾಗಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದ ‘ಸಮಾಜವಾದಿ ಏಕತಾ ಸಮ್ಮೇಳನ’ದ ಗೋಷ್ಠಿಯೊಂದರ ಸಂದರ್ಭದಲ್ಲಿ, ‘ಈ ಗೋಷ್ಠಿಗೆ ನಾವು ಯುವ ಅಧ್ಯಕ್ಷರನ್ನು ಹೊಂದಿದ್ದೇವೆಂದು ಹೇಳಲು ಸಂತೋಷವಾಗುತ್ತದೆ’ ಎನ್ನುವ ಸುನೀತಾ ತಾಯಿ ಅವರ ಪ್ರಕಟಣೆ ಈ ಮಾತುಕತೆಗೆ ಕಾರಣವಾಯಿತು.
ಇಂಥ ಬಹುತೇಕ ಹಾಸ್ಯದ ಮಾತುಗಳು ನೋವಿನ ಲೇಪವನ್ನೊಳಗೊಂಡಿರುವಂತೆ, ನನ್ನ ಮಾತಿನಲ್ಲೂ ಕಹಿಸತ್ಯವಿತ್ತು. ಸಮಾಜವಾದ ಈಗ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕ; ಆದರೆ, ‘ಭಾರತದ ಸಮಾಜವಾದ ಪರಂಪರೆ’ಗೆ ಮಬ್ಬು ಆವರಿಸಿಕೊಂಡಿದೆ. ಹಿಂದಿಯ ಹೃದಯಭಾಗದಲ್ಲಿ ರಾಜಕೀಯ ದ್ವೇಷವನ್ನು ಎದುರಿಸಿದ ರಾಜಕಾರಣದ ಚೈತನ್ಯವು ಅಂಚಿಗೆ ಬಂದುನಿಂತಿದೆ. ನಕಲಿ ರಾಷ್ಟ್ರೀಯತೆಯನ್ನು ಎದುರಿಸಲು ಯುವಜನತೆಗೆ ಅಗತ್ಯವಾದ ಪ್ರತಿರೋಧಕ್ಕೆ ಬೇಕಾದ ಚಿಂತನೆಗಳ ಚಿಲುಮೆಯು ಈಗ ಅಲಭ್ಯವಾಗಿದೆ. ಇದು ಇಳಿಮುಖ ಸಮುದಾಯವಾಗಿರುವ, ನೆನಪುಗಳನ್ನು ಚಪ್ಪರಿಸುತ್ತಿರುವ ಸಮಾಜವಾದಿಗಳ ದುರಂತವಷ್ಟೇ ಅಲ್ಲ; ದೇಶಕ್ಕಾಗಿರುವ ನಷ್ಟವೂ ಹೌದು.
ನಮ್ಮ ರಾಷ್ಟ್ರೀಯಜೀವನದ ಸಮಾಜವಾದಿ ಧಾರೆಯನ್ನು ಮರೆವು ಆವರಿಸಿಕೊಂಡಿದೆ. ಭಾರತದ ಸಮಾಜವಾದಿಗಳ ಬಗ್ಗೆ ಯುವಜನರನ್ನು ಮಾತನಾಡಿಸಿದರೆ, ನಿರ್ವಾತವನ್ನೇ ಎದುರುಗೊಳ್ಳುತ್ತೀರಿ. ಜನಸಮೂಹದ ಮೇಲೆ ಪ್ರಭಾವ ಹೊಂದಿದ್ದ ಬಹುದೊಡ್ಡ ಸಮಾಜವಾದಿ ನಾಯಕರಲ್ಲೊಬ್ಬರಾದ ಮುಲಾಯಂ ಸಿಂಗ್ ಯಾದವ್ ಹೆಸರು ನಿಮಗೆ ಕೇಳಿಸಬಹುದು; ಆದರೆ ಸಮಾಜವಾದಿ ರಾಜಕಾರಣಕ್ಕೆ ಮುಲಾಯಂ ಒಳ್ಳೆಯ ಮಾದರಿಯೇನಲ್ಲ. ಹಳೆಯ ಕಾಲದ ಪತ್ರಕರ್ತರನ್ನು ಮಾತನಾಡಿಸಿದರೆ, ವರ್ಣರಂಜಿತ ವ್ಯಕ್ತಿತ್ವದ ಜಾರ್ಜ್ ಫರ್ನಾಂಡಿಸ್ ಮತ್ತು ಸರಳರಾಗಿದ್ದೂ ವಿಚಿತ್ರವಾಗಿ ಕಾಣಿಸುತ್ತಿದ್ದ ರಾಜ್ ನಾರಾಯಣ್ ಅವರನ್ನು ನೆನಪಿಸಿಕೊಳ್ಳಬಹುದು. ಆದರೆ, ಕರ್ಪೂರಿ ಠಾಕೂರ್, ಮಧು ಲಿಮಯೆ, ಎಸ್.ಎಂ. ಜೋಶಿ, ರಬಿ ರೇ, ಮೃಣಾಲ್ ಗೋರ್ ಮತ್ತು ಕಿಶನ್ ಪಟ್ನಾಯಕ್ ಅವರಂಥ ನಾಯಕರ ಬಗ್ಗೆ ಸಮೃದ್ಧ ನೆನಪುಗಳೇನೂ ಅವರಲ್ಲಿಲ್ಲ; ಇವರಿಗೂ ಹಿಂದಿನ ತಲೆಮಾರಿನ, ಮುಂಬಯಿಯ ವರ್ಚಸ್ವೀ ಮೇಯರ್ ಆಗಿದ್ದ ಯೂಸುಫ್ ಮೆಹರಾಲಿ ಅಥವಾ ಆಧ್ಯಾತ್ಮಿಕ ಸಮಾಜವಾದಿ ಅಚ್ಯುತ್ ಪಟವರ್ಧನ್ ಅವರ ಹೆಸರುಗಳನ್ನೂ ಉಲ್ಲೇಖಿಸಲಾರರು.
ಮರೆವು ಅಲ್ಲದೆ ಹೋದಲ್ಲಿ, ನೆನಪುಗಳ ತಂತು ತಪ್ಪಿಹೋಗಿರುವುದಂತೂ ನಿಜ. ಲೋಕನಾಯಕ ಜಯಪ್ರಕಾಶ ನಾರಾಯಣ್ (ಜೇಪಿ) ಅವರನ್ನು ಗಾಂಧಿವಾದಿಯಾಗಿ, ಸರ್ವೋದಯದ ನಾಯಕರಾಗಿ, ಜನತಾ ಪಕ್ಷದ ಮಾರ್ಗದರ್ಶಕರಾಗಿ ಉಲ್ಲೇಖಿಸಲಾಗುತ್ತದೆ. ಭಾರತೀಯ ಕರಕುಶಲಕಲೆ ಹಾಗೂ ಸಂಸ್ಕೃತಿಗೆ ನೀಡಿದ ಕೊಡುಗೆಗಾಗಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಆಚಾರ್ಯ ನರೇಂದ್ರ ದೇವ ಅವರನ್ನು ಬಹುದೊಡ್ಡ ವಿದ್ವಾಂಸರನ್ನಾಗಿಯೂ ಗುರೂಜಿಯನ್ನಾಗಿಯೂ ಮರಾಠಿಯ ಐಕಾನಿಕ್ ಬರಹಗಾರನನ್ನಾಗಿಯೂ ಸ್ಮರಿಸಲಾಗುತ್ತದೆ. ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರ್ತಿಯನ್ನಾಗಿ ಉಷಾ ಮೆಹ್ತಾ ಅವರನ್ನು ಗುರ್ತಿಸಲು ಕಾರಣ ಆದುದಕ್ಕಾಗಿ ‘ಏ ವತನ್ ಮೇರೇ ವತನ್’ ಒಟಿಟಿ ಸಿನಿಮಾಕ್ಕೆ ಧನ್ಯವಾದ ಹೇಳಬೇಕು. ಆದರೆ, ಉಷಾ ಅವರನ್ನು ಸಮಾಜವಾದಿ ಚಳವಳಿಯ ನಾಯಕಿಯನ್ನಾಗಿ ಯಾರೂ ನೆನಪಿಸಿಕೊಳ್ಳುವುದಿಲ್ಲ. ರಾಮ್ ಮನೋಹರ್ ಲೋಹಿಯಾ ಅವರನ್ನು ಸಮಾಜವಾದಿ ಎಂದು ಗುರ್ತಿಸಲಾಗುತ್ತದೆಯಾದರೂ, ಮಂಡಲ್‌ನ ಪಿತಾಮಹನ ರೂಪದಲ್ಲಿ ಅವರನ್ನು ನೆನಪಿಸಿಕೊಳ್ಳುವುದೇ ಹೆಚ್ಚು ಹಾಗೂ ಅಸಲಿ ಸಮಾಜವಾದಿ ಚಿಂತಕ–ನಾಯಕನನ್ನಾಗಿ ನೋಡುವುದು ಕಡಿಮೆ.
ಪುಣೆಯ ಸಮಾವೇಶದಲ್ಲಿ, ಭಾರತದ ಸಮಾಜವಾದಿ ಚಳವಳಿಯ ನಾಯಕತ್ವವನ್ನು ನೆನಪಿಸುವ ಛಾಯಾಚಿತ್ರಗಳ ಪ್ರದರ್ಶನವೂ ಇತ್ತು. ಆ ಸ್ಮೃತಿಚಿತ್ರ ಕಥನ, 1934ರಲ್ಲಿ ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಸ್ಥಾಪನೆಯಿಂದ ಶುರುವಾಗುತ್ತದೆ. ವಸಾಹತು ವಿರುದ್ಧದ ಹೋರಾಟದಲ್ಲಿ, ರಾಜಕೀಯ ಸ್ವಾತಂತ್ರ್ಯವನ್ನು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಜೊತೆಗೆ ಸಮೀಕರಿಸುವುದು ಆ ಪಕ್ಷದ ಪ್ರಯತ್ನವಾಗಿತ್ತು. ಜೇಪಿ ಅವರನ್ನೊಳಗೊಂಡಂತೆ ಬಹುತೇಕ ನಾಯಕರು, ಸೈದ್ಧಾಂತಿಕವಾಗಿ ಮಾರ್ಕ್ಸಿಸ್ಟ್‌ಗಳಾಗಿದ್ದರೂ, ಕಮ್ಯುನಿಸ್ಟ್‌ಗಳಿಗಿಂಥ ಭಿನ್ನವಾಗಿ, ಭಾರತೀಯ ಕಾಂಗ್ರೆಸ್ ಭಾಗವಾಗಿ ಕೆಲಸ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದರು. ‘ಕ್ವಿಟ್ ಇಂಡಿಯಾ’ ಚಳವಳಿ ತೀವ್ರವಾಗಿದ್ದಾಗ, ಜೇಪಿ, ಲೋಹಿಯಾ, ಮೆಹ್ತಾ ಮುಂತಾದ ನಾಯಕರು ಭೂಗತರಾಗಿದ್ದುಕೊಂಡೇ ಪ್ರತಿರೋಧ ತೋರಿದರು, ಧೀರೋದಾತ್ತ ಪಾತ್ರ ನಿರ್ವಹಿಸಿದರು. ಸ್ವಾತಂತ್ರ್ಯಾನಂತರ, ಕಾಂಗ್ರೆಸ್ ತೊರೆದ ಸಮಾಜವಾದಿಗಳು, ಆಗಾಗ ವಿರೋಧ ಪಕ್ಷವಾಗಿ ಕಾಣಿಸಿಕೊಳ್ಳುತ್ತಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷಕ್ಕಿಂತ ಭಿನ್ನವಾದ ಎಡಪಂಥೀಯ ಪ್ರಜಾಪ್ರಭುತ್ವ ಪ್ರತಿರೋಧದ ಮಾದರಿಯೊಂದನ್ನು ರೂಪಿಸಿದರು. ಕಾಂಗ್ರೆಸ್ ಪ್ರಾಬಲ್ಯದಿಂದಾಗಿ ಚುನಾವಣಾ ರಾಜಕಾರಣದಲ್ಲಿ ಹಿನ್ನಡೆ ಅನುಭವಿಸಿದರೂ, ಹಿಂದುಳಿದ ಸಮುದಾಯಗಳು ಹಾಗೂ ಬಡವರ್ಗದ ರಾಜಕೀಯ ಧ್ವನಿಯಾಗಿ ಸಮಾಜವಾದಿಗಳು ಕೆಲಸ ಮಾಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರತಿರೋಧ ತೋರಿಸಿದ್ದ ಕೆಲವು ಸಮಾಜವಾದಿಗಳ ಉಪಸ್ಥಿತಿ ಭಾರತದ ಸಮಾಜವಾದಿ ಆಂದೋಲನದ ವೈಭವವನ್ನು ಮೆಲುಕು ಹಾಕಲು ಅವಕಾಶ ಕಲ್ಪಿಸಿತು. ಅವರಲ್ಲಿ ಕೆಲವರು ತುರ್ತು ಪರಿಸ್ಥಿತಿಯ 19 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದರು. ಮೋದಿ ಸರ್ಕಾರದ ಬಗೆಗಿನ ಪರಾಮರ್ಶೆಗೆ ಇವರಾರಿಗೂ ಕಾಂಗ್ರೆಸ್ ಜೊತೆಗಿನ ಕಹಿ ನೆನಪುಗಳು ಅಡ್ಡಿಯಾಗಲಿಲ್ಲ.
ಸಮಾವೇಶದಲ್ಲಿದ್ದ ಕೆಲವು ಪುಸ್ತಕ ಮಳಿಗೆಗಳು ಭಾರತೀಯ ಸಮಾಜವಾದದ ಶ್ರೀಮಂತ ತಾತ್ತ್ವಿಕ ಪರಂಪರೆಯ ಬಗ್ಗೆ ಗಮನಸೆಳೆಯುವಂತಿದ್ದವು. ಭಾರತೀಯ ಸಮಾಜವಾದಿಗಳ ಪಥ ಪ್ರವರ್ತಕ ಸೈದ್ಧಾಂತಿಕ ಕೊಡುಗೆಯು ಬಹುಮಟ್ಟಿಗೆ ನೇಪಥ್ಯದಲ್ಲೇ ಉಳಿದಿದೆ. ಸಮಾಜವಾದಿ ಆಂದೋಲನದ ದಾಖಲೆಗಳ ಸಂಗ್ರಹಗಳಾದ ಎರಡು ಸಂಪುಟಗಳ ಮರು ಬಿಡುಗಡೆಯೂ ಸಮಾವೇಶದಲ್ಲಿ ನಡೆಯಿತು. ಇದರಿಂದಾಗಿ ಯುವಜನರಿಗೆ ಸಮಾಜವಾದಿ ಚಳವಳಿಯನ್ನು ಪರಿಚಯಿಸುವ ಪ್ರಯತ್ನವೂ ನಡೆದಂತಾಯಿತು.
ಭಾರತೀಯ ಸಮಾಜವಾದದ ನಾಲ್ಕು ಚಿಂತನೆಗಳು ಪ್ರಸ್ತುತ ನಮಗೆ ಅತ್ಯಗತ್ಯವಾಗಿವೆ. ಮೊದಲನೆಯದು, ಜಾತಿ, ಲಿಂಗ, ವರ್ಣ ಹಾಗೂ ರಾಷ್ಟ್ರೀಯತೆಯನ್ನು ಒಳಗೊಂಡಂತೆ ಸಮಾನತೆಯ ಪರಿಕಲ್ಪನೆಯನ್ನು ಆರ್ಥಿಕ ಆಯಾಮದಾಚೆಗೂ ಭಾರತದ ಸಮಾಜವಾದ ವಿಸ್ತರಿಸಿದೆ. ಇದು ಜಾಗತಿಕವಾಗಿ ಹೆಚ್ಚುತ್ತಿರುವ ಅಸಮಾನತೆಯನ್ನು ಎದುರಿಸಲು ಅಗತ್ಯವಾದ ಚಿಂತನೆಯಾಗಿದೆ. ಮಹಿಳಾ ಮೀಸಲಾತಿ, ಜಾತಿಗಣತಿ ಅಥವಾ ಒಬಿಸಿ ಇಲ್ಲವೇ ಎಸ್‌ಸಿ ವರ್ಗದೊಳಗಿನ ಉಪವರ್ಗಗಳಿಗೆ ಸಂಬಂಧಿಸಿದ ಅಸಮಾನತೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲೂ ಈ ಚಿಂತನೆ ಸಹಕಾರಿಯಾಗಿದೆ. ಎರಡನೆಯ ಚಿಂತನೆ, ಭಾರತೀಯ ಸಮಾಜವಾದಿಗಳು ನಗರಕೇಂದ್ರಿತ ಕೈಗಾರಿಕಾ ತಾಂತ್ರಿಕ ಅಭಿವೃದ್ಧಿ ಮಾದರಿಗೆ ಮರುಚಿಂತನೆಯ ಅಡಿಪಾಯವನ್ನು ರೂಪಿಸಿರುವುದು.
ಈ ಚಿಂತನೆ, ಜಾಗತಿಕ ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಸಹಾಯಕವಾಗಲಿದೆ. ಗಾಂಧೀಜಿಯ ಸತ್ಯಾಗ್ರಹ ಪರಿಕಲ್ಪನೆಯನ್ನು ಚುನಾವಣಾ ಬದಲಾವಣೆ ಅಥವಾ ರಾಜಕೀಯ ಹಿಂಸೆಗೆ ಪರ್ಯಾಯವಾಗಿ ಬಳಸುವುದರ ಜೊತೆಗೆ ಸಾಮಾಜಿಕ ಬದಲಾವಣೆಯ ರೂಪದಲ್ಲೂ ವಿಸ್ತರಿಸಿದ್ದು ಮೂರನೆಯ ಚಿಂತನೆ. ಕೊನೆಯದು: ನಮ್ಮ ಭಾಷೆಗಳು, ಸಾಂಸ್ಕೃತಿಕ ಸಂಕೇತಗಳು ಹಾಗೂ ರಾಷ್ಟ್ರೀಯತೆಯಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ರಾಜಕಾರಣದ ವ್ಯಾಕರಣವೊಂದನ್ನು ಅಭಿವೃದ್ಧಿಪಡಿಸಿದ್ದು. ಈ ವ್ಯಾಕರಣ, ಪ್ರಸಕ್ತ ಸಾಂಸ್ಕೃತಿಕ ರಾಜಕಾರಣದ ಹೆಸರಿನಲ್ಲಿ ನಡೆಯುತ್ತಿರುವ ದಾಳಿ ಹಾಗೂ ವಿಶ್ವಮಟ್ಟದಲ್ಲಿ ಹೆಚ್ಚಾಗುತ್ತಿರುವ ಜನಾಂಗೀಯ ರಾಷ್ಟ್ರೀಯತೆಯನ್ನು ಎದುರಿಸಲು ಅಗತ್ಯವಾದ ತಾತ್ತ್ವಿಕ ಸಂಪನ್ಮೂಲವಾಗಿದೆ.
ಕೆಲವು ದಶಕಗಳ ಹಿಂದೆ, ಸಮಾಜವಾದದ ಮಸೂರವಿಲ್ಲದೆ ಭವಿಷ್ಯದ ಬಗ್ಗೆ ಯೋಚಿಸುವುದು ಸಾಧ್ಯವಿರಲಿಲ್ಲ. ಈಗ ಗಡಿಯಾರದಲ್ಲಿನ ಲೋಲಕ ಮತ್ತೊಂದು ತುದಿಯಲ್ಲಿದೆ. ಸಮಾಜವಾದ ಎನ್ನುವುದು ಶಾಪಗ್ರಸ್ತ ಪದವಾಗಿದೆ. ಆದರೂ, ಮಾನವೀಯ ಜಗತ್ತಿನ ಹಂಬಲ, ಹೆಚ್ಚಿನ ಅಸಮಾನತೆಗಳಿಲ್ಲದ ವಿಶ್ವದ ಹಂಬಲ, ಎಲ್ಲರ ಶ್ರೇಯಸ್ಸನ್ನು ಬಯಸುವ ವಿಶ್ವದ ಹಂಬಲ ಈಗಲೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಈ ಹುಡುಕಾಟವು ಸಮಾಜವಾದಕ್ಕೆ ಪರ್ಯಾಯವಾಗಿ ಬೇರೆ ಹಣೆಪಟ್ಟಿಯನ್ನು ಆಯ್ದುಕೊಳ್ಳಬಹುದು, ಹೊಸ ರಾಜಕೀಯ ವಾಹಕಗಳನ್ನು ಕಂಡುಕೊಳ್ಳಬಹುದು. ಹೊಸ ರಾಜಕೀಯ ಸಂರಚನೆಯನ್ನೂ ಕಂಡುಕೊಳ್ಳುವ ಸಾಧ್ಯತೆಯೂ ಇದೆ. ಆದರೆ, ಸಮಾಜವಾದದ ಚಿಂತನೆಯು ಭವಿಷ್ಯಕ್ಕೆ ಸಂಪನ್ಮೂಲವಾಗಿ ಒದಗಿಬರುವುದು ಮುಂದುವರಿಯುತ್ತದೆ; ಸಮಾಜವಾದವನ್ನು ಹೇಗೆ ನೆನಪಿಸಿಕೊಳ್ಳಬಹುದು, ಹೇಗೆ ನವೀಕರಿಸಬಹುದು ಮತ್ತು ನಮ್ಮ ಅಗತ್ಯಗಳಿಗಾಗಿ ಹೇಗೆ ಮರು ಹೊಂದಾಣಿಕೆ ಮಾಡಿಕೊಳ್ಳಬಹುದು ಎನ್ನುವುದು ನಮಗೆ ತಿಳಿದಿರಬೇಕಷ್ಟೇ.
ನೂರು ವರ್ಷಗಳ ಸಂಭ್ರಮದಲ್ಲಿರುವ ‘ಆರ್‌ಎಸ್‌ಎಸ್’ ಪರಂಪರೆಯನ್ನು ಎದುರಿಸಲು ಅಗತ್ಯವಾದ ರಾಜಕೀಯ ಹಾಗೂ ಬೌದ್ಧಿಕ ಸಂಪನ್ಮೂಲಗಳು ತೊಂಬತ್ತು ವರ್ಷಗಳ ಸಮಾಜವಾದಿ ಚಳವಳಿಯಿಂದ ದೊರೆಯಬಹುದು ಎನ್ನುವ ಆಶಯದೊಂದಿಗೆ ನಾನು ಪುಣೆಯಿಂದ ಬೀಳ್ಕೊಂಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.