ADVERTISEMENT

ಚಂದ್ರಕಾಂತ ವಡ್ಡು ಬರಹ: ‘ಬಿ’ ರಿಪೋರ್ಟ್‌ ಮತ್ತು ತನಿಖಾ ಸಂಸ್ಥೆಗಳ ಕಣ್ಕಟ್ಟು!

ಮತಿಗೆಟ್ಟ ವ್ಯವಸ್ಥೆಯಲ್ಲಿ ಎಲ್ಲರಿಗೂ ‘ಸಂಶಯದ ಲಾಭ’, ಅನಾಚಾರದಲ್ಲೂ ಸಮಾನತೆ

ಚಂದ್ರಕಾಂತ ವಡ್ಡು
Published 21 ಜುಲೈ 2022, 19:30 IST
Last Updated 21 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೂರು ತಿಂಗಳ ಹಿಂದೆ ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಈಡುಮಾಡಿದ್ದ ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತನಿಖೆಯ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ. ಅಂದರೆ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಆಡಳಿತಾರೂಢ ಬಿಜೆಪಿ ಮುಖಂಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ದೊರೆತಿದೆ. ಇಂತಹ ಪ್ರಕರಣಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ‘ಕ್ಲೀನ್ ಚಿಟ್’ ಎಂಬುದು ಎನ್‌ಕೌಂಟರ್ ಪದದಂತೆ ಧ್ವನ್ಯಾರ್ಥ, ವಾಚ್ಯಾರ್ಥ, ವಿಪರೀತಾರ್ಥ ಹೊಂದಿರುವುದನ್ನು ಗಮನಿಸಬೇಕು.

ಸಹಜವಾಗಿ ಹರ್ಷಗೊಂಡಿರುವ ಈಶ್ವರಪ್ಪ, ತಮ್ಮನ್ನು ಆರೋಪದಿಂದ ಮುಕ್ತಗೊಳಿಸಿದ, ಪಕ್ಷದ ಮುಖಂಡ ರನ್ನು ಮುಜುಗರದಿಂದ ಕಾಪಾಡಿದ ತಮ್ಮ ಮನೆದೇವರು ಚೌಡೇಶ್ವರಿಯನ್ನು ನೆನೆದಿದ್ದಾರೆ. ಹಾಗೆಯೇ ಮೃತರ ಹೆಂಡತಿ ರೇಣುಕಾ, ‘ಈಶ್ವರಪ್ಪ ಅವರು ಪೊಲೀಸ್ ಇಲಾಖೆ ಮೇಲೆ ಪ್ರಭಾವ ಬೀರಿ ‘ಬಿ’ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ತನಿಖೆಯಲ್ಲಿ ನ್ಯಾಯ ಸಿಗುವ ನಿರೀಕ್ಷೆ ಹುಸಿಯಾಗಿದೆ’ ಎಂದು ರೋದಿಸಿದ್ದಾರೆ. ಇವರು ಕಳೆದ ವಾರವಷ್ಟೇ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಾಜ್ಯಪಾಲರಿಗೆ ದೂರು ನೀಡಿದ್ದರು ಕೂಡ.

ಈ ಪ್ರಕರಣದಲ್ಲಿ ಈಶ್ವರಪ್ಪ ನಿಜಕ್ಕೂ ನಿರಪರಾಧಿ ಆಗಿದ್ದು ಮೃತರ ಕುಟುಂಬದವರ ಅನುಮಾನ ಸುಳ್ಳಾಗಿ ರಬಾರದೆಂದೇನೂ ಇಲ್ಲ ಅಥವಾ ತನಿಖಾಧಿಕಾರಿಯು ವರದಿಯಲ್ಲಿ ಉಲ್ಲೇಖಿಸಿದಂತೆ ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕಾಗಿ ಈಶ್ವರಪ್ಪ ವಿರುದ್ಧದ ಆರೋಪಗಳನ್ನು ಕೈಬಿಟ್ಟಿರುವುದು ಸಮಂಜಸವೂ ಇರಬಹುದು. ಆದರೆ ಇಂತಹ ಹೈ ಪ್ರೊಫೈಲ್ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳ ಸ್ವಾತಂತ್ರ್ಯ, ದಕ್ಷತೆ, ಪ್ರಾಮಾಣಿಕತೆಗಳಿಗೆ ಮುಸುಕು ತೊಡಿಸುವ ವಸ್ತುಸ್ಥಿತಿಯು ಹಲವು ಪ್ರಶ್ನೆಗಳಿಗೆ ಆಸ್ಪದ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿನ ಅಧಿಕಾರಸ್ಥರ ವರ್ತನೆ, ನಿಲುವು, ಸಾಂದರ್ಭಿಕ ಹೇಳಿಕೆಗಳು ತನಿಖೆಯ ದಿಕ್ಕು ಮತ್ತು ಗುರಿಯನ್ನು ಮೊದಲೇ ನಿರ್ಧರಿಸಿದಂತಿರುವುದು, ಸಾಮಾನ್ಯರೂ ಊಹಿಸಬಲ್ಲಷ್ಟು ಖಚಿತವಾಗಿರುವುದು ಏನನ್ನು ಬಿಂಬಿಸುತ್ತದೆ?

ADVERTISEMENT

ಏಪ್ರಿಲ್ 12ರಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿ
ಗಳೊಂದಿಗೆ ಮಾತನಾಡುತ್ತಾ, ‘ಈ ಘಟನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೋ ಅಥವಾ ಒಳ್ಳೆಯ ಹೆಸರು ಬರುತ್ತದೋ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಯಾರೋ ಆರೋಪ ಮಾಡಿದ ಕೂಡಲೆ ಸಾಬೀತು ಆಗುವುದಿಲ್ಲ. ಕಮಿಷನ್ ಯಾರು ಕೊಟ್ಟಿದ್ದು, ಯಾರು ತೆಗೆದುಕೊಂಡಿದ್ದು ಎಂಬುದು ಮೊದಲು ಸಾಬೀತು ಆಗಬೇಕು. ಇದೆಲ್ಲಾ ಸಾಬೀತು ಆದರೆ ಅವರ ಮೇಲೆ ಕ್ರಮ ಕೈಗೊಳ್ಳಬಹುದು’ ಎಂದು ಹೇಳಿದ್ದರು.

‘ಇದೀಗ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ, ‘ನೀವೇನೂ ತಲೆ ಕೆಡಿಸಿಕೊಳ್ಳಬೇಡಿ, ನಾನೆಲ್ಲಾ ತನಿಖೆ ಮಾಡಿಸುತ್ತೇನೆ’ ಎಂದು ಹೇಳಿದ್ದಾರೆ’ ಎಂದು ಮಾಧ್ಯಮಗಳ ಮುಂದೆ ಮುಚ್ಚುಮರೆ ಇಲ್ಲದೇ ಸತ್ಯ ಬಿಚ್ಚಿಟ್ಟಿದ್ದರು ಈಶ್ವರಪ್ಪ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಈಶ್ವರಪ್ಪನವರ ಭಾವಚಿತ್ರದ ಜೊತೆಗೆ ‘ಸತ್ಯಕ್ಕೆ ಸಂದ ಜಯ’ ಎಂಬ ಸಾಲು ಹರಿದಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 16ರಂದು ಗದಗ ನಗರದಲ್ಲಿ ಜರುಗಿದ ಪಕ್ಷದ ಸಮಾರಂಭವೊಂದರಲ್ಲಿ, ‘ಬಿಜೆಪಿಗೆ ಮುಜುಗರವಾ ಗ ಬಾರದೆಂದು ಈಶ್ವರಪ್ಪ ಸ್ವಯಂಪ್ರೇರಣೆಯಿಂದ ರಾಜೀ ನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಆರೋಪಮುಕ್ತರಾಗುವ ವಿಶ್ವಾಸವಿದೆ… ಕಾಂಗ್ರೆಸ್‌ನವರು ತಾವೇ ಶುದ್ಧಹಸ್ತರು ಎನ್ನುವಂತೆ ವರ್ತಿಸುತ್ತಿದ್ದಾರೆ, ಸ್ವಲ್ಪ ದಿನದಲ್ಲಿ ಅವರಿಗೆ ಸತ್ಯವನ್ನು ಎದುರಿಸುವ ಕಾಲ ಸನ್ನಿಹಿತವಾಗಲಿದೆ…’ ಎಂದು ಹೇಳಿದ್ದರು.

ಯಾವುದೇ ವ್ಯಕ್ತಿಯ ಮೇಲೆ ಆರೋಪ ಕೇಳಿ ಬಂದಾಗ ಅವರ ಹಿತೈಷಿಗಳು, ಸಂಬಂಧಿಕರು, ಗೆಳೆಯರು, ‘ಅವರು ಆರೋಪಮುಕ್ತರಾಗುತ್ತಾರೆ’ ಎಂಬ ಆಶಾಭಾವ ತಾಳುವುದರಲ್ಲಿ, ಹಾಗೆಂದು ಹೇಳುವುದರಲ್ಲಿ ಪ್ರಮಾದವೇನೂ ಇರಲಾರದು. ಆದರೆ ಸರ್ಕಾರದ ಮುಖ್ಯಸ್ಥರು ಇಂತಹ ಹೇಳಿಕೆ ನೀಡಿದಾಗ ತನಿಖೆಯ ಫಲಿತಾಂಶ ಯಾರ ಊಹೆಗಾದರೂ ನಿಲುಕಿಬಿಡುತ್ತದೆ.

‘ಬಿ’ ರಿಪೋರ್ಟ್‌ ಮತ್ತು ‘ಕ್ಲೀನ್ ಚಿಟ್‌’ಗಳಿಗೆ ಇರುವ ಪಾವಿತ್ರ್ಯ ಎಲ್ಲ ಪಕ್ಷಗಳ ಆಡಳಿತಾವಧಿಯಲ್ಲೂಸಂಶಯಕ್ಕೆ ಈಡಾಗಿರುವುದನ್ನು ಕಾಣಬಹುದು. ಬಹುಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ಹೆಸರುವಾಸಿಯಾಗಿತ್ತು. ಎಷ್ಟರಮಟ್ಟಿಗೆ ಎಂದರೆ ಆಗ ಸಿಬಿಐ ಸಂಸ್ಥೆಯನ್ನು ಕಾಂಗ್ರೆಸ್ ಬ್ಯುರೊ ಆಫ್ ಇನ್ವೆಸ್ಟಿಗೇಷನ್ ಎಂದು ಕರೆಯಲಾಗುತ್ತಿತ್ತು. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ, ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ವಿರುದ್ಧದ ಆರೋಪ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ‘ಬಿ’ ರಿಪೋರ್ಟ್ ಸಲ್ಲಿಸಿದ್ದವು. ಹಾಗಾಗಿಯೇ ಈಗಿನ ಅಧಿಕಾರಸ್ಥರು ವಿರೋಧ ಪಕ್ಷದ ಇಂತಹ ಚಾರಿತ್ರಿಕ ದೌರ್ಬಲ್ಯಗಳ ಕೊಡೆಯ ಕೆಳಗೆ ಆಶ್ರಯ ಪಡೆಯುವುದನ್ನು ಕಾಣಬಹುದು.

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಲೋಕಾಯುಕ್ತವನ್ನು ಮೂಲೆಗೊತ್ತಲು ರಚಿಸಿದ ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆಯೇ ವ್ಯಾಪಕ ಟೀಕೆಗಳಿವೆ. ಪಿ.ಎಸ್.ಐ. ನೇಮಕಾತಿ ಹಗರಣದಲ್ಲಿ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮ್ರಿತ್‌ ಪೌಲ್‌ ಅವರು ಆರೋಪಿತರಾಗಿ ಜೈಲು ಸೇರಿದ್ದಾರೆ. ಇಂತಹ ಅಧಿಕಾರಿಗಳು ಮತ್ತು ತನಿಖಾ ಸಂಸ್ಥೆಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ
ವ್ಯಕ್ತವಾಗುತ್ತಿರುವ ಕಳವಳವು ಅಧಿಕಾರಸ್ಥರ ಎದೆಗೆ ತಾಗದಿರುವುದು ದುರಂತ!

ಇನ್ನೊಂದೆಡೆ ‘ನ್ಯಾಷನಲ್ ಹೆರಾಲ್ಡ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಕೈಗೊಂಡಿರುವ ವಿಚಾರಣೆಯನ್ನು ‘ದ್ವೇಷ ರಾಜಕಾರಣ’, ‘ಅಧಿಕಾರ ದುರುಪಯೋಗ’ ಎಂದು ದೂಷಿಸುವ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಬೀದಿಗಿಳಿದು ಪ್ರತಿಭಟಿ ಸುತ್ತಿದೆ. ‘ವಿಚಾರಣೆ ಎದುರಿಸಲು ಹಿಂಜರಿಕೆ ಬೇಕೆ? ತನಿಖೆಗೆ ವಿರೋಧ ಏಕೆ? ತಪ್ಪು ಮಾಡದಿದ್ದರೆ ಹೆದರಿಕೆ ಏಕೆ? ತನಿಖೆ ನಂತರ ಸತ್ಯ ಹೊರಬರಲಿ…’ ಇಂತಹ ಮಾತುಗಳು, ತರ್ಕಗಳು ಹೊರನೋಟಕ್ಕೆ ಸರಿಯೆಂದು ತೋರುತ್ತವೆ. ಆದರೆ ವಾಸ್ತವದಲ್ಲಿ ದುರುದ್ದೇಶಪೂರಿತ ತನಿಖೆಯ ವೈಖರಿ, ಗುರಿ ನಾವೆಣಿಸಿದಷ್ಟು ಸರಳವೂ ಸುಸಂಬದ್ಧವೂ ಆಗಿರಲಾರದು.

ಅಂದರೆ ವಿವಿಧ ತನಿಖಾ ಸಂಸ್ಥೆಗಳು ಬೇಕಾದವರನ್ನು ಕಾಪಾಡಲು, ಬೇಡದವರನ್ನು ಕಾಡಲು ಅಧಿಕಾರಸ್ಥರ ಬತ್ತಳಿಕೆಯಲ್ಲಿ ಲಭ್ಯವಿರುವ ಅಸ್ತ್ರಗಳಾಗಿವೆ. ತನಿಖಾ ಸಂಸ್ಥೆಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಹರಣಕ್ಕೆ ಕಾರಣವಾಗುವ ಅಧಿಕಾರಸ್ಥರ ಹಸ್ತಕ್ಷೇಪದ ದೀರ್ಘಕಾಲೀನ ಪರಿಣಾಮದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಎಲ್ಲರಿಗೂ ತಮ್ಮ ಅಧಿಕಾರಾವಧಿಯ ಸಾಂದರ್ಭಿಕ ಲಾಭ–ನಷ್ಟಗಳಷ್ಟೇ ಮುಖ್ಯವಾಗಿವೆ.

ತನಿಖಾ ಸಂಸ್ಥೆಗಳ ಬಗ್ಗೆ ಒಮ್ಮೆ ಅಪನಂಬಿಕೆ ಹುಟ್ಟಿದ ಮೇಲೆ ಯಾವ ಪ್ರಕರಣದಲ್ಲಿ ನ್ಯಾಯ ಕೆಲಸ ಮಾಡಿತು, ಇನ್ಯಾವ ಪ್ರಕರಣದಲ್ಲಿ ಅನ್ಯಾಯ ಮೂಗು ತೂರಿಸಿತು ಎಂದು ವಿಂಗಡಿಸುವುದಾದರೂ ಹೇಗೆ? ತನಿಖೆಯ ಫಲಿತಾಂಶವನ್ನು ಸತ್ಯಾಸತ್ಯ ಬದಿಗಿಟ್ಟು ತಮ್ಮಿಚ್ಛೆಗೆ ತಕ್ಕಂತೆ ಅರ್ಥೈಸುವ ಅವಕಾಶವೋ, ಅನಾ ಹುತವೋ ಎದುರಿಗೆ ಬಂದು ನಿಂತಾಗ ಗೋಣು ಎತ್ತ ತಿರುಗಿಸುವುದು? ದಿಕ್ಕೆಟ್ಟ ವ್ಯವಸ್ಥೆಯ ‘ಸಂಶಯದ ಲಾಭ’ ಎಲ್ಲರಿಗೂ ದಕ್ಕುವಂತಾದರೆ ಅನಾಚಾರದಲ್ಲೂ ಸಮಾನತೆ ಎಂದು ಸಂತೃಪ್ತಿ ಪಡೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.