ADVERTISEMENT

ವಿಶ್ಲೇಷಣೆ | ನಮಗೆ ಈಗ ಬೇಕಿರುವ ಲೋಹಿಯಾ

ತಿರುಚುವಿಕೆಯನ್ನು ಸರಿಪಡಿಸಿ ಪರಂಪರೆಯನ್ನು ಮರಳಿ ಪಡೆದುಕೊಳ್ಳಬೇಕಿದೆ

ಯೋಗೇಂದ್ರ ಯಾದವ್
Published 27 ಮಾರ್ಚ್ 2025, 0:30 IST
Last Updated 27 ಮಾರ್ಚ್ 2025, 0:30 IST
   

ರಾಮ ಮನೋಹರ ಲೋಹಿಯಾ ಅವರ 115ನೇ ಜನ್ಮದಿನವಾದ ಮಾರ್ಚ್‌ 23ರಂದು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ದಾರ್ಶನಿಕ ನಾಯಕ, ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ’ ಎಂದು ಬಣ್ಣಿಸಿದ್ದಾರೆ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳದಂತಹ ಲೋಹಿಯಾವಾದಿ ಪಕ್ಷಗಳನ್ನು ಬಿಟ್ಟರೆ ಇತರ ಪಕ್ಷಗಳು ಲೋಹಿಯಾ ಅವರ ರಾಜಕೀಯ ಮತ್ತು ಸೈದ್ಧಾಂತಿಕ ಪರಂಪರೆಯನ್ನು ತಮ್ಮ ದಾಗಿಸಿಕೊಳ್ಳುವ ಪ್ರಯತ್ನ ನಡೆಸಿಲ್ಲ.

ಅವರ ಪರಂಪರೆಯು ಅವರು ಮಾಡಿದ ರಾಜಕೀಯ ಚಟುವಟಿಕೆಗಳ ನೆನಪುಗಳಲ್ಲಿ ಮಾತ್ರ ಹುದುಗಿಹೋಗಿದೆ. ಲೋಹಿಯಾ ಅವರ ಅತ್ಯಂತ ಪ್ರಮುಖ ಚಿಂತನೆಗಳಾದ ಸಮಾಜವಾದಿ ಸಿದ್ಧಾಂತದ ಮರುರೂಪಿಸುವಿಕೆ ಮತ್ತು ಅದರೊಂದಿಗಿನ ರಾಜಕೀಯ ಹಾಗೂ ನೀತಿ ವಿಚಾರಗಳು ಕೆಲವೇ ಕೆಲವು ಲೋಹಿಯಾವಾದಿಗಳಿಗಷ್ಟೇ ತಿಳಿದಿವೆ. ಇದು ‘ಇಂಡಿಯಾ’ ಮೈತ್ರಿಕೂಟಕ್ಕೆ ಮಾತ್ರವಲ್ಲ ಭಾರತಕ್ಕೆ ಕೂಡ ಆಗಿರುವ ದೊಡ್ಡ ನಷ್ಟ. 

ಮೋದಿ ಮತ್ತು ಬಿಜೆಪಿಯ ಇತರ ನಾಯಕರು ಲೋಹಿಯಾ ಅವರನ್ನು ಉಲ್ಲೇಖಿಸಿರುವುದು ಇದು ಮೊದಲೇನೂ ಅಲ್ಲ. ಅವರ ನಿಲುವುಗಳು ಮತ್ತು ಪ್ರಸಿದ್ಧ ಹೇಳಿಕೆಗಳನ್ನು ಬಿಜೆಪಿಯ ನಾಯಕರು ತಿರುಚಿ ತಮಗೆ ಬೇಕಾದಂತೆ ಬಳಸಿಕೊಂಡಿದ್ದಾರೆ. ಲೋಹಿಯಾ ಅವರ ರಾಜಕೀಯ ನಿಲುವುಗಳಿಗೆ ತದ್ವಿರುದ್ಧವಾದ ರೀತಿಯಲ್ಲಿ ಇವು ಬಳಕೆ ಆಗಿವೆ. ಲೋಹಿಯಾ ಅವರು ಜವಾಹರಲಾಲ್‌ ನೆಹರೂ ಮೇಲೆ ನಡೆಸಿದ್ದ ವಾಗ್ದಾಳಿಯು ಬಿಜೆಪಿಯವರಿಗೆ ಆಪ್ಯಾಯಮಾನ. ಅವರ ‘ಕಾಂಗ್ರೆಸ್‌ ವಿರೋಧ’ವನ್ನು ಕಾಂಗ್ರೆಸ್‌ ಪಕ್ಷಕ್ಕೆ ಬಡಿಯುವ ದೊಣ್ಣೆಯಂತೆ ಬಳಸಿಕೊಳ್ಳಲಾಗಿದೆ. ಬಿಜೆಪಿಯೊಂದಿಗಿನ ಮೈತ್ರಿಯನ್ನು ಸಮರ್ಥಿಸಿಕೊಳ್ಳಲು ಕೆಲವು ಮಾಜಿ ಸಮಾಜವಾದಿಗಳೂ ಇದನ್ನು ಬಳಸಿಕೊಂಡಿದ್ದಾರೆ. ‘ಇಂಗ್ಲಿಷ್‌ ಅನ್ನು ಓಡಿಸಿ’ ಎಂಬ ಅವರ ಘೋಷಣೆಯನ್ನು ಹಿಂದಿ ಹೇರಿಕೆಗೆ ಸಮರ್ಥನೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಹಿಂದುಳಿದ ವರ್ಗಗಳ ಪರವಾಗಿ ಅವರು ಹೊಂದಿದ್ದ ಬಲವಾದ ಒಲವನ್ನು ಪ್ರಬಲ ಒಬಿಸಿ ನಾಯಕರು ಅಧಿಕಾರ ಕಬಳಿಕೆಯ ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ. 

ADVERTISEMENT

ಈ ಎಲ್ಲ ತಿರುಚುವಿಕೆಗಳನ್ನು ಸರಿಪಡಿಸುವ ಮೂಲಕ ಲೋಹಿಯಾ ಪರಂಪರೆಯನ್ನು ಮರಳಿ ಪಡೆದುಕೊಳ್ಳ
ಬೇಕು. ‘ಕಾಂಗ್ರೆಸ್‌ ವಿರೋಧ’ ಎಂಬುದು ಒಂದು ರಾಜಕೀಯ ಸಿದ್ಧಾಂತ ಅಲ್ಲ. ಅದು ವ್ಯವಸ್ಥೆ ವಿರೋಧಿ ರಾಜಕಾರಣದ ಒಂದು ಅಲ್ಪಾವಧಿ ತಂತ್ರ ಮಾತ್ರ. ಲೋಹಿಯಾ ಅವರು ತಮ್ಮ ರಾಜಕೀಯವನ್ನು ಆರಂಭಿಸಿದ್ದು ಕಾಂಗ್ರೆಸ್‌ ಮೂಲಕವೇ. ಸ್ವಾತಂತ್ರ್ಯ ಸಿಕ್ಕ ಬಳಿಕ ಸಮಾಜವಾದಿಗಳು ಕಾಂಗ್ರೆಸ್‌ ತೊರೆದುದನ್ನೂ ಅವರು ವಿರೋಧಿಸಿದ್ದರು. 1960ರ ದಶಕದಲ್ಲಿ ಅವರು ಕಾಂಗ್ರೆಸ್‌ ಅನ್ನು ವಿರೋಧಿಸಲು ಆರಂಭಿಸಿದರು. ಅದು ಕಾಂಗ್ರೆಸ್‌ನ ಅತಿಯಾದ ಪ್ರಾಬಲ್ಯದ ಕಾಲವಾಗಿತ್ತು. ಲೋಹಿಯಾ ಈಗ ಇದ್ದಿದ್ದರೆ ‘ಬಿಜೆಪಿ ವಿರೋಧಿ ವಾದ’ವನ್ನು ಆರಂಭಿಸುತ್ತಿದ್ದರು ಎಂಬುದರಲ್ಲಿ ಅನುಮಾನವೇನೂ ಇಲ್ಲ. ಈಗಿನ ರಾಜಕೀಯ ಸನ್ನಿವೇಶ ದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಪ್ರತಿಪಾದಿಸುತ್ತಿದ್ದರು. ಹಾಗೆಯೇ ಲೋಹಿಯಾ ಅವರು ಇಂಗ್ಲಿಷ್‌ ವಿರೋಧಿಯೂ ಆಗಿರಲಿಲ್ಲ.

ಆ ಭಾಷೆಯನ್ನು ಬಹಳ ಲಾಲಿತ್ಯಪೂರ್ಣವಾಗಿ, ಅಧಿಕಾರಯುತವಾಗಿ ಅವರು ಬಳಸುತ್ತಿದ್ದರು. ಅವರ ವಿರೋಧಕ್ಕೆ ಕಾರಣ ಇಂಗ್ಲಿಷ್‌ನ ಯಾಜಮಾನ್ಯ. ಇಂಗ್ಲಿಷ್‌ ವಿದೇಶಿ ಭಾಷೆ ಎಂಬ ಕಾರಣಕ್ಕೆ ಅವರು ವಿರೋಧಿಸಲಿಲ್ಲ. ಬದಲಿಗೆ ಅದು ಊಳಿಗಮಾನ್ಯ ಮತ್ತು ವರ್ಗ ಅಸಮಾನತೆಯನ್ನು ಪ್ರತಿನಿಧಿಸುತ್ತದೆ ಎಂಬ ಕಾರಣಕ್ಕೆ ವಿರೋಧಿಸಿದರು. ಹಿಂದಿ ಶ್ರೇಷ್ಠ ಎಂಬುದರ ಪ್ರತಿಪಾದಕ ರಂತೂ ಅವರು ಖಂಡಿತಾ ಆಗಿರಲಿಲ್ಲ. ಅವರು ಭಾರತದ ಎಲ್ಲ ಭಾಷೆಗಳ ಪರವಾಗಿದ್ದರು. ವಿವಿಧ ಭಾಷೆಗಳ ಹಲವು ಲೇಖಕರಿಗೆ ಅವರು ಸ್ಫೂರ್ತಿಯಾದುದರಲ್ಲಿ ಅಚ್ಚರಿಯೇನೂ ಇಲ್ಲ. ಅವರಿಂದ ಸ್ಫೂರ್ತಿ ಪಡೆದವರಲ್ಲಿ ಹಿಂದಿಯ ಫಣೀಶ್ವರನಾಥ ರೇಣು, ರಘುವೀರ್‌ ಸಹಾಯ್‌, ಸರ್ವೇಶ್ವರ ದಯಾಲ್‌ ಸಕ್ಸೇನಾ, ವಿಜಯದೇವ್‌ ನಾರಾಯಣ್‌ ಸಾಹಿ, ಅಸ್ಸಾಮಿನ ಬೀರೇಂದ್ರ ಕುಮಾರ್‌ ಭಟ್ಟಾಚಾರ್ಯ, ಕನ್ನಡದ ಯು.ಆರ್‌. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್‌, ಸಿದ್ಧಲಿಂಗಯ್ಯ ಸೇರಿದ್ದಾರೆ. ಭಾರತೀಯ ಭಾಷೆಗಳ ಪರವಾಗಿದ್ದ ಅವರು ಹಿಂದಿ ಹೇರಿಕೆಯನ್ನು ಖಂಡಿತವಾಗಿ ವಿರೋಧಿಸುತ್ತಿದ್ದರು. 

ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿ ಲೋಹಿಯಾ ಅವರ ನೀತಿಯು ಒಬಿಸಿ ಕೇಂದ್ರೀಕೃತವಾದುದು ಆಗಿರಲಿಲ್ಲ. ಲೋಹಿಯಾ ಅವರ ಸಮಾಜವಾದಿ ಪಕ್ಷವು ಹಿಂದಿ ಭಾಷಿಕ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಒಬಿಸಿಗಳು ರಾಜಕೀಯಕ್ಕೆ ಬರಲು ವೇದಿಕೆಯಾಯಿತು. ಅವಕಾಶಗಳ ಹಂಚಿಕೆಯ ಸಮಗ್ರ ನೀತಿಯನ್ನು ಅವರು ಪ್ರತಿಪಾದಿಸುತ್ತಿದ್ದರು. ಹಿಂದುಳಿದ ವರ್ಗಗಳಿಗೆ ಶೇಕಡ 60ರಷ್ಟು ಮೀಸಲು ಬೇಕು ಎನ್ನುತ್ತಿ ದ್ದರು. ಅವರು ಹೇಳುತ್ತಿದ್ದ ಒಬಿಸಿಯಲ್ಲಿ ದಲಿತರು, ಒಬಿಸಿ ಮತ್ತು ಮಹಿಳೆಯರು ಒಳಗೊಳ್ಳುತ್ತಾರೆ. ಆರು ಮುಖ್ಯ ಅನ್ಯಾಯಗಳಲ್ಲಿ ಲಿಂಗತಾರತಮ್ಯವೂ ಒಂದು ಎನ್ನುತ್ತಿ ದ್ದರು. ಎಲ್ಲ ಜಾತಿ– ವರ್ಗಗಳಲ್ಲಿಯೂ ಮಹಿಳೆಯನ್ನು ಶೂದ್ರರಿಗೆ ಸಮಾನವಾಗಿ ಕಾಣುತ್ತಿದ್ದರು. ಹಾಗಾಗಿಯೇ ಅವರಿಗೆ ಮೀಸಲಾತಿ ಬೇಕಿದೆ ಎಂದು ‍ಪ್ರತಿಪಾದಿಸುತ್ತಿದ್ದರು.


ಒಬಿಸಿಯಲ್ಲಿರುವ ಅತ್ಯಂತ ಹಿಂದುಳಿದವರಿಗೆ ಮತ್ತು ಪರಿಶಿಷ್ಟ ಜಾತಿಯಲ್ಲಿರುವ ಮಹಾದಲಿತರಿಗೆ ವಿಶೇಷ ಅವಕಾಶ ನೀಡಿಕೆಯನ್ನು ಲೋಹಿಯಾ ಬೆಂಬಲಿಸುತ್ತಿದ್ದರು. ಲೋಹಿಯಾ ಅವರ ಸಾಮಾಜಿಕ ನ್ಯಾಯವು ಜಾತಿ, ವರ್ಗ ಮತ್ತು ಲಿಂಗತ್ವ ಎಲ್ಲವನ್ನೂ ಒಳಗೊಂಡದ್ದಾಗಿತ್ತು. ಇದರ ಆಧಾರದಲ್ಲಿ ಪಿರಮಿಡ್‌ನ ತಳದಲ್ಲಿರುವ ಸಾಮಾಜಿಕ ವರ್ಗವನ್ನು ಒಗ್ಗೂಡಿಸಬೇಕು. ಬಿಜೆಪಿಯ ಯಾಜಮಾನ್ಯದ ಈ ಸಂದರ್ಭದಲ್ಲಿ ಅದರ ಅಗತ್ಯವೂ ಇದೆ. 

ಈಗಿನ ಜಾತ್ಯತೀತ ರಾಜಕಾರಣದ ಮುಖ್ಯ ಸವಾಲು ಏನೆಂದರೆ, ನಮ್ಮ ನಾಗರಿಕ ಪರಂಪರೆ ಮತ್ತು ರಾಷ್ಟ್ರವಾದವು ಸಾಂಸ್ಕೃತಿಕ ಬೇರುಗಳನ್ನು ಹೊಂದಿಲ್ಲ ಎಂಬುದಾಗಿದೆ. ಲೋಹಿಯಾ ಅವರು ಬಳಸಿದ್ದ ಸಾಂಸ್ಕೃತಿಕತೆಯು ಈ ಕೊರತೆಯನ್ನು ತುಂಬಬಹುದು. ಅವರು ಬಳಸುತ್ತಿದ್ದ ದ್ರೌಪದಿಯ ರೂಪಕವು ಚತುರ, ಚಾಣಾಕ್ಷ, ದಿಟ್ಟ ಮತ್ತು ಸ್ವತಂತ್ರ ಚಿಂತನೆಯ ಭಾರತದ ಮಾದರಿ ಮಹಿಳೆಯನ್ನು ಪ್ರತಿನಿಧಿಸುತ್ತದೆ. ದುರ್ಬಲ ಮತ್ತು ವಿಧೇಯ ಸತಿ ಸಾವಿತ್ರಿಯನ್ನು ಅವರು ರೂಪಕವಾಗಿ ಬಳಸಲಿಲ್ಲ.

ರಾಮನು ಅವರಿಗೆ ದಕ್ಷಿಣ ಮತ್ತು ಉತ್ತರದ ನಡುವಣ ಒಗ್ಗಟ್ಟು ಹಾಗೂ ಕೃಷ್ಣನು ಪೂರ್ವ ಮತ್ತು ಪಶ್ಚಿಮದ ನಡುವಣ ಒಗ್ಗಟ್ಟಿನ ಸಂಕೇತವಾಗಿದ್ದರು. ನದಿಗಳನ್ನು ಕೂಡ ಅವರು ಮೌಲ್ಯಗಳ ವಾಹಕಗಳಾಗಿ ಕಂಡಿದ್ದರು. ಗಂಗಾ ಮತ್ತು ಸರಯೂ ನದಿಗಳು ಕರ್ತವ್ಯವನ್ನು, ಯಮುನಾ ಮತ್ತು ಅವುಗಳ ಉಪನದಿಗಳು ರಸವನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದರು. ಲೋಹಿಯಾ ಅವರಿಂದ ಸ್ಫೂರ್ತಿ ಪಡೆದೇ ಎಂ.ಎಫ್‌. ಹುಸೇನ್‌ ಅವರು ರಾಮಾಯಣ ಮತ್ತು ಮಹಾಭಾರತ ಚಿತ್ರ ಸರಣಿಗಳನ್ನು ಮಾಡಿದ್ದರು.

ವಸಿಷ್ಠ ಮತ್ತು ವಾಲ್ಮೀಕಿಯ ಮೂಲಕ ಹಿಂದೂ ಕೋಮುವಾದವನ್ನು ಅವರು ವಿಶ್ಲೇಷಣೆಗೆ ಒಳಪಡಿಸಿ
ದ್ದರು. ವಸಿಷ್ಠ ಮೇಲ್ಜಾತಿಯ ಸಂಕುಚಿತ ಹಿಂದೂಗಳ ಪ್ರತಿನಿಧಿ. ಈತ ಭಯಸ್ಥ, ಇತರರ ಕುರಿತು ಸದಾ ಸಂದೇಹ, ತನ್ನ ಕೆಳಗಿನವರನ್ನು ತುಳಿಯುವ ಬುದ್ಧಿ ಇರುವವನು. ವಾಲ್ಮೀಕಿಯು ಹಿಂದೂ ಧರ್ಮದೊಳಗೇ ಇರುವ ಉದಾರವಾದಿ ಪರಂಪರೆಯನ್ನು ಪ್ರತಿನಿಧಿಸುವವನು.


ಹಿಂದೂ– ಮುಸ್ಲಿಂ ಅಥವಾ ಇತರ ಅಲ್ಪಸಂಖ್ಯಾತರ ನಡುವಣ ಸಂಘರ್ಷದ ಮೂಲದಲ್ಲಿ ಇರುವುದು ಹಿಂದೂ ಧರ್ಮದ ಎರಡು ಧಾರೆಗಳು. ಉದಾರವಾದಿ ಧಾರೆ ಪ್ರಬಲವಾಗಿದ್ದಾಗಲೆಲ್ಲ ಭಾರತ ಮೇಲಕ್ಕೆ ಏರಿದೆ. ಸಂಕುಚಿತ ಹಿಂದೂ ಧರ್ಮ ಮೇಲುಗೈ ಪಡೆದಾಗ ಒಂದು ರಾಷ್ಟ್ರ ಮತ್ತು ನಾಗರಿಕತೆಯಾಗಿ ಭಾರತವು ಕುಸಿತ ಕಂಡಿದೆ. 

ರಾಜಕೀಯ ಚಿಂತಕನೊಬ್ಬನ ಪ್ರಸ್ತುತತೆಯು ಸಮಕಾಲೀನ ರಾಜಕಾರಣದಲ್ಲಿ ಆತನ ಉಪಯುಕ್ತತೆಗೆ ಸೀಮಿತವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಆಧುನಿಕತೆಗೆ ಲೋಹಿಯಾ ಕೊಟ್ಟ ಸೈದ್ಧಾಂತಿಕ ನೆಲಗಟ್ಟು ಅವರು ಬಿಟ್ಟುಹೋದ ಪರಂಪರೆಯಾಗಿದೆ. ಮಾರ್ಕ್ಸ್‌ವಾದ ಮತ್ತು ಪಶ್ಚಿಮದ ಸಮಾಜವಾದ ಸೇರಿದಂತೆ ಪಾಶ್ಚಾತ್ಯ ಸಿದ್ಧಾಂತಗಳನ್ನು ಅವರು ಕಟುವಿಮರ್ಶೆಗೆ ಒಳಪಡಿಸಿದ್ದರು. ಅದೇ ಹೊತ್ತಿಗೆ ಅವರು ಹೆಚ್ಚು ರಮ್ಯವಾಗಿ ಕಾಣಿಸುತ್ತಿದ್ದ ದೇಶೀಯತೆ ಮತ್ತು ನಮ್ಮ ಭೂತಕಾಲವೇ ಶ್ರೇಷ್ಠ ಎಂಬ ಮಿಥ್ಯೆಯಿಂದ ದೂರವೇ ಉಳಿದರು.

ಸಮಾಜವಾದ ಮತ್ತು ಆರ್ಥಿಕ ಸಮಾನತೆಯನ್ನು ಬಲವಾಗಿ ಪ್ರತಿಪಾದಿಸಿದ್ದ
ಅವರು ರಾಜಕೀಯ, ಸಾಂಸ್ಕೃತಿಕ ನಿರ್ವಸಾಹತೀಕರಣಕ್ಕೆ ನೆಲಗಟ್ಟು ಒದಗಿಸಿದರು. ಹೊಸ ರೀತಿಯ ಸುಧಾರಣಾವಾದದ ನೀಲನಕ್ಷೆಯನ್ನು ರೂಪಿಸಿದ್ದರು. ಲೋಹಿಯಾ ಅವರ ವಾದವನ್ನು ಒಪ್ಪಬಹುದು ಇಲ್ಲ ಬಿಡಬಹುದು. ಅವರ ಹಲವು ತತ್ವಗಳು ಕಾಲದ ಹೊಡೆತಕ್ಕೆ ಸಿಕ್ಕಿವೆ ಅಥವಾ ಕೆಲವನ್ನು ಇಂದು ಮರು
ಪರಿಶೀಲನೆಗೆ ಒಡ್ಡಬೇಕಾಗಬಹುದು. ಆದರೆ, ಲೋಹಿಯಾ ಅವರ ರಾಜಕೀಯ ಚಿಂತನೆಯು ಈಗ ನಮ್ಮ ಗಣರಾಜ್ಯ ವನ್ನು ರಕ್ಷಿಸಲು ಅಗತ್ಯವಾಗಿ ಬೇಕಾದ ಸೈದ್ಧಾಂತಿಕ
ಸಂಪನ್ಮೂಲವನ್ನು ಒದಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.