ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಸೆಪ್ಟೆಂಬರ್ 17 ಇತಿಹಾಸದಲ್ಲಿ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಈ ದಿನದಂದು, ದೇಶಾದ್ಯಂತ ಕುಶಲಕರ್ಮಿಗಳು ಮತ್ತು ಕಾರ್ಮಿಕರು ವಿಶ್ವಕರ್ಮ ಜಯಂತಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನದಂದು ಹೈದರಾಬಾದ್ ನಿರ್ದಯಿ ನಿಜಾಮ್ ಮತ್ತು ರಜಾಕಾರರಿಂದ ವಿಮೋಚನೆ ಪಡೆಯಿತು ಮತ್ತು ಈ ದಿನದಂದು ರಾಷ್ಟ್ರ ಮತ್ತು ಜನರ ಸೇವೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಮುತ್ಸದ್ಧಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಜನಿಸಿದರು. ಇದು ಮೋದಿ ಅವರ 75 ನೇ ಹುಟ್ಟುಹಬ್ಬವಾಗಿರುವುದರಿಂದ ಇನ್ನಷ್ಟು ಮಹತ್ವದ್ದಾಗಿದೆ. 140 ಕೋಟಿ ಭಾರತೀಯರ ಪರವಾಗಿ, ನಾನು ಮೋದಿಜಿಯವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ಅವರು ಭಾರತಕ್ಕಾಗಿ ಶ್ರೇಷ್ಠವಾದುದನ್ನು ಸಾಧಿಸಲು ದೇವರು ಅವರಿಗೆ ದೀರ್ಘಾಯಸ್ಸು, ಶಕ್ತಿ ಮತ್ತು ಅತ್ಯುತ್ತಮ ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದಶಕಗಳ ಕಾಲ ಕೆಲಸ ಮಾಡಿರುವುದರಿಂದ, ಅವರ ವ್ಯಕ್ತಿತ್ವವು ರಾಜಕಾರಣಿಯನ್ನು ಮೀರಿದ್ದು ಎಂದು ನಾನು ಭಾವಿಸಿದ್ದೇನೆ. ಇದು ರಾಷ್ಟ್ರದ ಕಲ್ಯಾಣಕ್ಕಾಗಿ ಮುಡಿಪಾದ ಧ್ಯೇಯ-ಚಾಲಿತ ವ್ಯಕಿತ್ವದ ಸಾಕಾರವಾಗಿದೆ. ಅವರಿಗೆ, ರಾಷ್ಟ್ರದ ಉನ್ನತಿ ಮತ್ತು ಅದರ ನಾಗರಿಕರ ಕಲ್ಯಾಣವು ಕೇವಲ ಆದರ್ಶಗಳಲ್ಲ, ಮಾರ್ಗದರ್ಶಿ ತತ್ವಗಳಾಗಿವೆ. ಎಲ್ಲರನ್ನೂ ಒಳಗೊಂಡ ಆಡಳಿತ ಮಾದರಿಯನ್ನು ಖಾತ್ರಿಪಡಿಸಿಕೊಳ್ಳುವತ್ತ ಅವರ ನಿರಂತರ ಗಮನವು ಅವರ ನಾಯಕತ್ವವನ್ನು ವಿಶಿಷ್ಟವಾಗಿಸುತ್ತದೆ. ಅವರ ನೀತಿಗಳು ಮತ್ತು ಅವುಗಳ ಅನುಷ್ಠಾನವು ಅಭಿವೃದ್ಧಿಯ ಪ್ರಯಾಣದಲ್ಲಿ ಯಾವುದೇ ವ್ಯಕ್ತಿ ಅಥವಾ ಸಮುದಾಯವು ಹಿಂದೆ ಉಳಿಯಬಾರದು ಎಂಬುದನ್ನು ಯಾವಾಗಲೂ ಒತ್ತಿಹೇಳುತ್ತದೆ. ಅವರಿಗೆ, ಆಡಳಿತವು ಅಧಿಕಾರದ ಸಾಧನವಲ್ಲ, ಬದಲಾಗಿ ಸೇವೆಯ ಮಾಧ್ಯಮವಾಗಿದೆ. ಅವರ ನಾಯಕತ್ವದಲ್ಲಿ, ಬಡವರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿರುವುದು ಮಾತ್ರವಲ್ಲದೆ, ಅವು ತಮ್ಮ ನಿಗದಿತ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಿವೆ.
50 ಕೋಟಿಗೂ ಹೆಚ್ಚು ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುವ ಮೂಲಕ ಜನಧನ್ ಯೋಜನೆಯು ಆರ್ಥಿಕ ಸೇರ್ಪಡೆಯ ಅದ್ಭುತ ಅಧ್ಯಾಯವನ್ನು ಬರೆಯಿತು. ಉಜ್ವಲ ಯೋಜನೆ ಲಕ್ಷಾಂತರ ಕುಟುಂಬಗಳನ್ನು ಹೊಗೆಯಿಂದ ಮುಕ್ತಗೊಳಿಸಿ ಅವರಿಗೆ ಘನತೆಯ ಜೀವನವನ್ನು ನೀಡಿತು. ಆಯುಷ್ಮಾನ್ ಭಾರತ್ ಬಡವರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸಿತು. ಪ್ರಧಾನಮಂತ್ರಿ ಆವಾಸ್ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿತು. ನಾನು ಫಲಾನುಭವಿಯ ಕಣ್ಣುಗಳನ್ನು ನೋಡಿದಾಗ ಮತ್ತು ಅವರಲ್ಲಿ ತೃಪ್ತಿ ಮತ್ತು ಆತ್ಮವಿಶ್ವಾಸವನ್ನು ನೋಡಿದಾಗ, ಮೋದಿಜಿಯವರ ಆಡಳಿತವು ಸಾರ್ವಜನಿಕ ಕಲ್ಯಾಣದ ದೃಷ್ಟಿಕೋನವನ್ನು ನಿಜವಾಗಿಯೂ ಹೇಗೆ ಸಾಕಾರಗೊಳಿಸುತ್ತಿದೆ ಎಂದು ನನಗೆ ಅರ್ಥವಾಗುತ್ತದೆ.
ಆರ್‌ಎಸ್ಎಸ್‌ನ ಪ್ರಚಾರಕರಾಗಿ, ಅವರು ದೇಶಾದ್ಯಂತ ಪ್ರವಾಸ ಮಾಡಿ ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂಪರ್ಕ ಸಾಧಿಸಿದರು. ಭಾರತದ ಆತ್ಮವನ್ನು ಹತ್ತಿರದಿಂದ ನೋಡಿದ್ದಲ್ಲದೆ, ಅದರ ಆಂತರಿಕ ಶಕ್ತಿಯನ್ನು ಸಹ ಅನುಭವಿಸಿದರು. ಇದು ಬಡವರು ಮತ್ತು ವಂಚಿತರ ಬಗ್ಗೆ ಅವರ ಸಹಾನುಭೂತಿಯ ಮೂಲಕ ಅವರ ಆಡಳಿತದಲ್ಲಿ ಪ್ರತಿಫಲಿಸಿತು. ಪ್ರಚಾರಕರಾಗಿ ಮೋದಿಜಿ ಸಂಘಟನೆಯ ಕಲೆಯನ್ನು ಕರಗತ ಮಾಡಿಕೊಂಡರು. ನಂತರ, ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಪುನರ್‌ರಚಿಸುವಾಗ, ಅವರು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಅಗಾಧ ಬದಲಾವಣೆಯನ್ನು, ನವೀನ ಸುಧಾರಣೆಗಳನ್ನು ಪರಿಚಯಿಸಿದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ, ಅವರ ದೃಷ್ಟಿಕೋನ ಮತ್ತು ಸಾಂಸ್ಥಿಕ ಒಳನೋಟಗಳನ್ನು ರಾಷ್ಟ್ರಮಟ್ಟದಲ್ಲಿ ಕಾರ್ಯಗತಗೊಳಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವಾಗಿದೆ.
ಕಠಿಣ ಸಂದರ್ಭಗಳಲ್ಲಿಯೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿ ಬಲವಾದ ನಾಯಕತ್ವದ ಲಕ್ಷಣವಿದೆ. ಈ ವಿಷಯದಲ್ಲಿ, ಮೋದಿಜಿಯವರ ನಾಯಕತ್ವವು ವಿಶಿಷ್ಟವಾದುದು. ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಅವರು ಅಸಾಧಾರಣ ತಾಳ್ಮೆ ಮತ್ತು ಸ್ಪಷ್ಟತೆ ಕಾಯ್ದುಕೊಳ್ಳುವುದನ್ನು ನಾನು ನೋಡಿದ್ದೇನೆ. 2014 ರಿಂದ, ದೇಶಕ್ಕೆ ದಿಟ್ಟ ಮತ್ತು ನಿರ್ಣಾಯಕ ಕ್ರಮಗಳ ಅಗತ್ಯವಿರುವ ಅನೇಕ ಸಂದರ್ಭಗಳು ಬಂದವು.
ಮೋದಿ ಅವರು ನಾಯಕತ್ವದ ತತ್ವಗಳನ್ನು ದೃಢವಾಗಿ ಎತ್ತಿಹಿಡಿದರು ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ನಿರ್ಧಾರಗಳನ್ನು ತೆಗೆದುಕೊಂಡರು. ಐತಿಹಾಸಿಕ ನೋಟು ರದ್ದತಿ ಮತ್ತು ಜಿಎಸ್‌ಟಿ ನಮ್ಮ ಆರ್ಥಿಕ ಸುಧಾರಣೆಗಳಲ್ಲಿ ಹೊಸ ಅಧ್ಯಾಯವನ್ನು ತೆರೆದವು. 370 ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯು ರಾಜಕೀಯ ಧೈರ್ಯವನ್ನು ಪ್ರದರ್ಶಿಸಿದ ನಿರ್ಧಾರ ಮಾತ್ರವಲ್ಲದೆ, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಮೋದಿಯವರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುವ ನಿರ್ಧಾರ ಎನ್ನಬಹುದು. ತ್ರಿವಳಿ ತಲಾಖ್ ಎಂಬ ಸಾಮಾಜಿಕ ಅನಿಷ್ಟವನ್ನು ಅಳಿಸಿಹಾಕಿದ್ದು ಮಹಿಳೆಯರ ಘನತೆ ಮತ್ತು ಹಕ್ಕುಗಳನ್ನು ರಕ್ಷಿಸುವ ದಿಟ್ಟ ಹೆಜ್ಜೆಯಾಗಿತ್ತು. ಈ ನಿರ್ಧಾರಗಳು ಯಾವುದೂ ಸುಲಭವಾಗಿರಲಿಲ್ಲ. ಹಲವು ನಿರ್ಧಾರಗಳನ್ನು ವಿರೋಧಿಸಲಾಯಿತು, ಆದರೆ ಮೋದಿಜಿ ಎಂದಿಗೂ ಹಿಂಜರಿಯಲಿಲ್ಲ. ವಿರೋಧ ಅಥವಾ ಟೀಕೆಗಳನ್ನು ಲೆಕ್ಕಿಸದೆ ರಾಷ್ಟ್ರೀಯ ಹಿತಾಸಕ್ತಿಯನ್ನು ಪಾಲಿಸಬೇಕು ಎಂಬುದು ಅವರ ದೃಢವಾದ ನಂಬಿಕೆಯಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ತಲ್ಲಣಗೊಳಿಸಿದಾಗ, ಮೋದಿಯವರು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಲ್ಲದೆ, ದೇಶದ ಕೈಗಾರಿಕೆಗಳು, ವಿಜ್ಞಾನಿಗಳು ಮತ್ತು ಯುವಜನರನ್ನು ಸ್ವಾವಲಂಬನೆಯತ್ತ ಮುನ್ನಡೆಸಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಜಗತ್ತು ಭಾರತದ ಬಗ್ಗೆ ಆತಂಕಗೊಂಡಿತ್ತು. ಆದರೆ ನಮ್ಮ ಸಮರ್ಥ ನಾಯಕತ್ವದ ಪರಿಣಾಮವಾಗಿ ದೇಶದಲ್ಲಿ ಲಸಿಕೆಯನ್ನು ದಾಖಲೆ ಸಮಯದಲ್ಲಿ ತಯಾರಿಸಿದ್ದು ಮಾತ್ರವಲ್ಲದೆ, ತಂತ್ರಜ್ಞಾನ ಆಧಾರಿತ ಉಚಿತ ಲಸಿಕೆ ಅಭಿಯಾನದ ಮೂಲಕ, ನಾವು ಕೋವಿಡ್ ನಿರ್ವಹಣೆಯ ಅನುಕರಣೀಯ ಮಾದರಿಯನ್ನು ಜಗತ್ತಿಗೆ ಪ್ರಸ್ತುತಪಡಿಸಿದೆವು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಮ್ಮ ರಾಷ್ಟ್ರೀಯ ಜೀವನಕ್ಕೆ ರಾಷ್ಟ್ರೀಯ ಭದ್ರತೆ ಮತ್ತು ಸ್ವಾಭಿಮಾನ ಅತ್ಯುನ್ನತವಾದುದು ಎಂದು ಭಾರತ ಪದೇ ಪದೇ ಸಾಬೀತುಪಡಿಸಿದೆ. ಉರಿ ದಾಳಿಯ ನಂತರದ ಸರ್ಜಿಕಲ್ ಸ್ಟ್ರೈಕ್, ಭಾರತ ಇನ್ನು ಮುಂದೆ ಭಯೋತ್ಪಾದನೆಗೆ ಮೂಕ ಪ್ರೇಕ್ಷಕನಾಗಿರುವುದಿಲ್ಲ ಎಂದು ಜಗತ್ತಿಗೆ ತೋರಿಸಿತು. ಪುಲ್ವಾಮಾ ಘಟನೆಯ ನಂತರದ ಬಾಲಕೋಟ್ ವಾಯುದಾಳಿಯು ಈ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿತು. ಇತ್ತೀಚೆಗೆ, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ 2025 ರ ಮೇ 7 ರಂದು ಪ್ರಾರಂಭಿಸಲಾದ 'ಆಪರೇಷನ್ ಸಿಂಧೂರ', ದೇಶದ ಅಸ್ಮಿತೆ ಮತ್ತು ನಾಗರಿಕರ ಸುರಕ್ಷತೆಗೆ ಧಕ್ಕೆಯಾದಾಗಲೆಲ್ಲಾ ಭಾರತ ಧೈರ್ಯ ಮತ್ತು ದೃಢಸಂಕಲ್ಪದಿಂದ ಪ್ರತಿಕ್ರಿಯಿಸುತ್ತದೆ ಎಂಬ ನೀತಿಯನ್ನು ಸ್ಥಾಪಿಸಿತು. ಈ ಕ್ರಮಗಳು ಭಾರತದ ಜನರಲ್ಲಿ ಆತ್ಮವಿಶ್ವಾಸ ಮತ್ತು ಹೆಮ್ಮೆಯ ಭಾವನೆಯನ್ನು ಬಲಪಡಿಸಿದ್ದಲ್ಲದೆ, ನವ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗಾಗಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿತು.
ವಿದೇಶಾಂಗ ನೀತಿಯಲ್ಲೂ ಮೋದಿಜಿಯವರ ಕಾರ್ಯತಂತ್ರ ವಿಶಿಷ್ಟವಾಗಿದೆ. ಇಂದು, ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಭಾರತದ ಪರವಾಗಿ ಸಂಪೂರ್ಣ ವಿಶ್ವಾಸದಿಂದ ಮಾತನಾಡುವಾಗ, ನಮ್ಮೆಲ್ಲರಲ್ಲೂ ಹೆಮ್ಮೆಯ ಅಲೆಗಳು ಉಕ್ಕುತ್ತವೆ. ಹಿಂದೆ ಭಾರತವನ್ನು ಉದಯೋನ್ಮುಖ ರಾಷ್ಟ್ರವಾಗಿ ನೋಡಲಾಗುತ್ತಿತ್ತು, ಈಗ ಮೋದಿಜಿಯವರ ನಾಯಕತ್ವದಲ್ಲಿ, ಭಾರತವು ಜಾಗತಿಕ ನಾಯಕನ ಪಾತ್ರವನ್ನು ನಿರ್ವಹಿಸುವತ್ತ ಸಾಗುತ್ತಿದೆ. ಅದು ಪ್ಯಾರಿಸ್ ಹವಾಮಾನ ಒಪ್ಪಂದವಾಗಿರಲಿ, ಜಿ-20 ಶೃಂಗಸಭೆಯಾಗಿರಲಿ ಅಥವಾ ವಿಶ್ವಸಂಸ್ಥೆಯಲ್ಲಿ ಅವರ ಭಾಷಣವಾಗಿರಲಿ - ಎಲ್ಲೆಡೆ ಅವರ ಆತ್ಮವಿಶ್ವಾಸವು ಭಾರತದ ಬೆಳೆಯುತ್ತಿರುವ ಶಕ್ತಿ ಮತ್ತು ಹೆಮ್ಮೆಯ ಸಂಕೇತವಾಗಿದೆ.
ನರೇಂದ್ರ ಮೋದಿಯವರ ಬಗ್ಗೆ ನನಗೆ ತಿಳಿದಿರುವಂತೆ, ಅವರ ವ್ಯಕ್ತಿತ್ವವು ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಅವರು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ವಿಶೇಷ ವರ್ಚಸ್ಸನ್ನು ಹೊಂದಿದ್ದಾರೆ. ಅವರ ಭಾಷಣದಲ್ಲಿ ಸಹಜತೆ ಮತ್ತು ಸರಳತೆ ಇದೆ, ಅದು ಅವರು ಜನರ ಹೃದಯಗಳಿಗೆ ತಲುಪುವಂತೆ ಮಾಡಿದೆ. ಅವರು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕೋಟ್ಯಂತರ ಜನರು ಪ್ರಧಾನಿಯವರು ತಮ್ಮೊಂದಿಗೆ ನೇರವಾಗಿ ಮಾತನಾಡುತ್ತಿದ್ದಾರೆ ಎಂಬ ಭಾವನೆಯನ್ನು ಅನುಭವಿಸುತ್ತಾರೆ. ಅದು ಹಳ್ಳಿಯ ರೈತನಾಗಿರಲಿ, ನಗರದ ವಿದ್ಯಾರ್ಥಿಯಾಗಿರಲಿ ಅಥವಾ ಗೃಹಿಣಿಯಾಗಿರಲಿ, ಪ್ರತಿಯೊಬ್ಬರೂ ಅವರೊಂದಿಗೆ ಆತ್ಮೀಯತೆಯ ಭಾವನೆಯನ್ನು ಅನುಭವಿಸುತ್ತಾರೆ. ಇದು ಸಾಮಾನ್ಯ ವಿಷಯವಲ್ಲ.
ಹಿಂತಿರುಗಿ ನೋಡಿದರೆ, ನರೇಂದ್ರ ಮೋದಿ ಅವರು ಭಾರತವನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಸಬಲೀಕರಣಗೊಳಿಸಿದ್ದಾರೆ ಎಂದು ನನಗೆ ತೋರುತ್ತದೆ. ಭಾರತದ ಆಂತರಿಕ ಶಕ್ತಿಯ ಬಗ್ಗೆ ಉತ್ತಮ ತಿಳವಳಿಕೆಯನ್ನು ಹೊಂದಿರುವ ಮೋದಿ ಅವರು, 2047 ರಲ್ಲಿ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸಿದಾಗ, ನಮ್ಮ ದೇಶವು ಮತ್ತೊಮ್ಮೆ ʼಆತ್ಮನಿರ್ಭರ ಭಾರತʼ ಮತ್ತು ಶ್ರೇಷ್ಠ ರಾಷ್ಟ್ರವಾಗಿ ತನ್ನ ಗುರುತನ್ನು ಸ್ಥಾಪಿಸಬೇಕು ಎಂಬ ದೃಷ್ಟಿಕೋನವನ್ನು ಹೊಂದಿದ್ದಾರೆ. ಮತ್ತು ಈ ಗುರಿಯನ್ನು ಸಾಧಿಸಲು, ಅವರು ತಮ್ಮ ದೂರದರ್ಶಿ ನೀತಿಗಳೊಂದಿಗೆ ದೇಶವನ್ನು ವೇಗವಾಗಿ ಮುನ್ನಡೆಸುತ್ತಿದ್ದಾರೆ. ಈ ಜಗತ್ತಿನಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ ಎಂಬ ನಂಬಿಕೆಯನ್ನು ಅವರು ಪ್ರತಿಯೊಬ್ಬ ಭಾರತೀಯನಲ್ಲೂ ತುಂಬಿದ್ದಾರೆ. ಕಳೆದ 11 ವರ್ಷಗಳಲ್ಲಿ, ಅವರ ನಾಯಕತ್ವದಲ್ಲಿ, ದೇಶವು ಸ್ವಾಭಿಮಾನ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಹೊಸ ಎತ್ತರಗಳನ್ನು ಏರಿದೆ, ಇದು ನನ್ನ ಅಭಿಪ್ರಾಯದಲ್ಲಿ ಐತಿಹಾಸಿಕವಾದುದು ಮತ್ತು ವಿಶಿಷ್ಟವಾದುದು.
ವಾಸ್ತವವಾಗಿ, ನಿಜವಾದ ನಾಯಕತ್ವವೆಂದರೆ ತನ್ನ ಜೀವನದ ಪ್ರತಿ ಕ್ಷಣವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಡುವ ಮತ್ತು ವರ್ತಮಾನವನ್ನು ಮೀರಿ ಭವಿಷ್ಯದ ಕಡೆಗೆ ನೋಡುವ ದೂರದರ್ಶಿ ವ್ಯಕ್ತಿತ್ವವಾಗಿದೆ. ಇಂದು, ನರೇಂದ್ರ ಮೋದಿಯವರ ಈ ವ್ಯಕ್ತಿತ್ವವು ಭಾರತದ ಅತಿದೊಡ್ಡ ಶಕ್ತಿಯಾಗಿದೆ.
ಲೇಖಕರು: ಕೇಂದ್ರ ಗೃಹ ಸಚಿವ, ಭಾರತ ಸರ್ಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.