ADVERTISEMENT

ನಂಜುಂಡವರು ಮತ್ತು ನಂಜೇರಿದವರು

ಸಹಬಾಳ್ವೆಯ ದೇಶ ಕಟ್ಟುವ ಹುಮ್ಮಸ್ಸು ಕುಸಿದುಹೋಗಿದೆಯೇ?

ಸಬಿತಾ ಬನ್ನಾಡಿ
Published 21 ನವೆಂಬರ್ 2019, 20:15 IST
Last Updated 21 ನವೆಂಬರ್ 2019, 20:15 IST
Edit-22-11-2019
Edit-22-11-2019   

ಮಹಾರಾಷ್ಟ್ರದಲ್ಲಿ ಕಳೆದ ವರ್ಷ ರೈತರು ನಡೆಸಿದ ಹೋರಾಟಕ್ಕೆ ಸಂಬಂಧಿಸಿದ ವರದಿಯೊಂದುಬಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದವರೊಬ್ಬರು, ‘ಈ ರೈತರ ಸಾಲ ಮನ್ನಾ ಮಾಡಲು ನಮ್ಮ ತೆರಿಗೆ ಹಣ ಪೋಲಾಗುತ್ತದೆ’ ಎಂದು ಬರೆದಿದ್ದನ್ನು ಓದಿ ನಾನು ದಂಗಾಗಿದ್ದೆ. ಆ ಪ್ರತಿಕ್ರಿಯೆಯನ್ನು ಅಲ್ಲಿಯೇ ಕೆಲವರು ತೀವ್ರವಾಗಿ ಖಂಡಿಸಿದ್ದರು. ತಮ್ಮಂತೆಯೇ ಪ್ರಜೆಗಳಾದ ರೈತರಿಗಿಂತಲೂ ತಾವು ಮೆಚ್ಚುವ ಸರ್ಕಾರವೇ ಮುಖ್ಯವೆಂದುಕೊಳ್ಳುವ ಈ ಪರಿ ವಿಚಿತ್ರವಾದುದು. ಅದಕ್ಕಾಗಿ ರೈತರನ್ನೇ ಖಳರಾಗಿಸಲು ಅವರು ಹೊರಡುತ್ತಾರೆ. ಕೊನೆಯಪಕ್ಷ ರೈತರಿಗೆ ಈಚಿನ ದಿನಗಳಲ್ಲಿ ತೆರೆದುಕೊಂಡಿರುವ ನೈಸರ್ಗಿಕ ಕೃಷಿ ಇತ್ಯಾದಿ ಪರ್ಯಾಯ ದಾರಿಗಳ ಬಗ್ಗೆ ಅವರು ಹೇಳಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು ಮತ್ತದು ಮಾನವೀಯ
ಆಗಿರುತ್ತಿತ್ತು. ಆದರೆ, ತಾವು ತೆರಿಗೆ ಕಟ್ಟುವವರು ಎಂಬ ಈ ಧಿಮಾಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ‘ತಮ್ಮ ಹಣ ತಮ್ಮ ಭೋಗ’ ಎಂಬ ಈ ಮನಃಸ್ಥಿತಿಗೂ ಇಂದಿನ ಮಾರುಕಟ್ಟೆ ಆಧಾರಿತ ಆರ್ಥಿಕತೆಯು ವ್ಯಕ್ತಿಗಳಲ್ಲಿ ತುಂಬುತ್ತಿರುವ ರಾಕ್ಷಸ ಹಸಿವಿಗೂ ಸಂಬಂಧ ಇದೆ. ನಮ್ಮ ತೆರಿಗೆ ಹಣ ಹಲವರ ಭೋಗಕ್ಕೆ ಸಾಧನವಾಗುವುದುಇವರಿಗೆ ಕಾಣುವುದಿಲ್ಲ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೇ ಸುಧಾರಣಾ ಚಳವಳಿಗಳೂ ಹುಟ್ಟಿಕೊಂಡವು. ಅವು ಭಾರತದ ಸಾಮಾಜಿಕ ಪಿಡುಗುಗಳ ಬಗ್ಗೆ ಜನರನ್ನು ಎಚ್ಚರಿಸುವ ಹೊಣೆ ಹೊತ್ತುಕೊಂಡವು. ಕಾಲದ ಅಂತರದಲ್ಲಿ ನೋಡುವಾಗ ಆ ಸುಧಾರಣೆಗಳಿಗೂ ಕೆಲವು ಮಿತಿ ಇರುವುದು ತಿಳಿಯುತ್ತದಾದರೂ, ಒಂದು ಮಟ್ಟದ ಆದರ್ಶವನ್ನು ಒಳಗೊಳ್ಳುವ ಉತ್ಸಾಹ ಜನರಲ್ಲಿ ಕಾಣಿಸಿಕೊಂಡಿತು. ಇದು ಒಂದು ರೀತಿಯಲ್ಲಿ ಸಮಾಜದಲ್ಲಿ ಮೇಲ್‍ಸ್ತರದಲ್ಲಿ ಇರುವವರು ಕೆಳಸ್ತರದಲ್ಲಿ ಇರುವವರನ್ನು ಉದಾರವಾಗಿ ಕಾಣುವ, ದಮನಿತರನ್ನು ಉದ್ಧರಿಸುವ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ರೀತಿಯದು.

ಈ ಮೇಲ್ಮೇಲಿನ ಸುಧಾರಣೆಗಿಂತಲೂ ತುರ್ತಾಗಿ ಭಾರತದ ಸಾಮಾಜಿಕತೆಯ ಬೇರುಗಳಲ್ಲಿರುವ ತರತಮ
ಗಳನ್ನು ನಾಶ ಮಾಡಿ ಸಮಾನ ಅವಕಾಶ ಮತ್ತು ಆ ಮೂಲಕ ಸ್ವಾಭಿಮಾನದ ಬದುಕು ದಮನಿತರಿಗೆ ಒದಗಿ ಬರುವುದೇ ಬದಲಾವಣೆಯ ನಿಜದ ದಾರಿ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಈ ಎಲ್ಲ ಚರ್ಚೆಗಳ ನಡುವೆಯೂ ಸುಧಾರಣೆ ಎಂಬ ಆದರ್ಶವು ಭಾರತದ ಮಧ್ಯಮವರ್ಗಗಳ ನಡುವೆ ‘ಮೌಲ್ಯ’ ಎನಿಸತೊಡ
ಗಿತ್ತು. ಇವರ ಜೊತೆ ಉಳ್ಳವರೂ ಸೇರಿಕೊಂಡು, ಗ್ರಾಮೀಣ ಭಾಗದಲ್ಲಿ ಶಾಲೆ ತೆರೆಯುವುದರಿಂದ ಹಿಡಿದು, ಅಸ್ಪೃಶ್ಯತಾ ನಿವಾರಣೆ ಇತ್ಯಾದಿ ಕಾರ್ಯಗಳಲ್ಲಿ ಮೇಲ್ಜಾತಿಯವರೂ ಭಾಗವಹಿಸಿದ್ದು ಕಾಣಿಸುತ್ತದೆ. ಕಾರ್ನಾಡ್‌ ಸದಾಶಿವರಾಯರಂಥವರನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇವೆಲ್ಲವನ್ನೂ ಇಲ್ಲಿ ಯಾಕೆ ನೆನಪಿಸಿಕೊಳ್ಳುತ್ತಿರುವುದೆಂದರೆ, ಹೀಗೆ ಭಾರತವನ್ನು ಕಟ್ಟುವ ಉಮೇದು ಇಂದು ಯಾಕೆ ನಶಿಸಿಹೋಗಿದೆ ಎನ್ನುವುದನ್ನು ಕೇಳಿಕೊಳ್ಳುವುದಕ್ಕಾಗಿ. ಜಾತಿ ನಿವಾರಣೆ ಕೂಡ ಆಗ ಒಂದು ಗುರಿಯಾಗಿತ್ತು.

ADVERTISEMENT

ಈಗ ಬಹಳ ಅಚ್ಚರಿ ಎನಿಸುವ ಒಂದು ವಿಚಾರ ಹಂಚಿಕೊಳ್ಳಲು ಬಯಸುತ್ತೇನೆ. ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ಈಚೆಗೆ ತೀರಿಕೊಂಡರು. ಇವರು ಮದುವೆಯಾದದ್ದು 1964ರಲ್ಲಿ. ಇವರ ಮದುವೆ ಪ್ರಸ್ತಾಪವನ್ನು ಮಾಡಿದವರು ಕಡಿದಾಳ್ ಮಂಜಪ್ಪನವರು– 1957ರಲ್ಲಿ. ಗೋಪಾಲಗೌಡರು ಒಕ್ಕಲಿಗರಾದರೆ, ಸೋನಕ್ಕ ಲಿಂಗಾಯತರು. ಇದೊಂದು ಹಿರಿಯರು ನಿರ್ಧರಿಸಿದ ಮದುವೆಯೇ ಹೊರತು, ಪ್ರೇಮ ವಿವಾಹವಲ್ಲ. ಸೋನಕ್ಕನಿಗೆ ಇವರನ್ನು ಮದುವೆಯಾಗಲು ಮನಸ್ಸಿತ್ತು ಎಂಬುದು ಬೇರೆ ವಿಷಯ. ಆದರೆ ಹಿರಿಯರು ಈ ಮದುವೆಗೆ ವಿರೋಧ ಮಾಡಲಿಲ್ಲ ಎಂಬುದು ಮುಖ್ಯವಾದ ಸಂಗತಿ. ಸುಧಾರಣಾವಾದ, ಸಮಾಜವಾದಗಳ ಪ್ರಭಾವ ಅಷ್ಟರಮಟ್ಟಿಗೆ ಕೆಲಸ ಮಾಡಿದೆ.

ಆದರೆ, ಈಚೆಗೆ ನಡೆಯುತ್ತಿರುವ ಸಂಗತಿಗಳನ್ನು ನೋಡಿದರೆ ದುಃಖವಾಗುತ್ತದೆ. ತೀರಾ ಈಚೆಗೆ ಗದಗ ಜಿಲ್ಲೆಯ ಗಜೇಂದ್ರಗಡದ ಬಳಿಯ ಲಕ್ಕಲಹಟ್ಟಿ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆಯಿತು. ಪ್ರೀತಿಸಿ ಮದುವೆಯಾದ ಇಬ್ಬರೂ ಪರಿಶಿಷ್ಟ ಜಾತಿಯ ಆವರಣದೊಳಗೆ ಇರುವವರು. ಆದರೆ, ಎರಡು ಭಿನ್ನ ಜಾತಿಯೊಳಗೆ ಗುರುತಿಸಿಕೊಳ್ಳುವ ಇದರೊಳಗೆ ವೈವಾಹಿಕ ಸಂಬಂಧಗಳು ನಡೆಯುವುದಿಲ್ಲ. ವಿರೋಧದ ನಡುವೆಯೂ ಮದುವೆಯಾದ ಇಬ್ಬರೂ ಹಲ್ಲೆಗೆ ಒಳಗಾದ ಕಾರಣ ಊರು ತೊರೆದರು. ಹಲವು ವರ್ಷಗಳ ನಂತರ ಇಬ್ಬರು ಮಕ್ಕಳ ಪೋಷಕರಾಗಿ ಊರಿನ ಹಬ್ಬಕ್ಕೆ ಬಂದಿದ್ದರು. ಯುವಕನನ್ನು ಯುವತಿಯ ಮನೆಯವರು ಕೊಂದು ಪೊಲೀಸರಿಗೆ ಶರಣಾಗಿದ್ದಾರೆ. ಇದೆಂತಹ ದ್ವೇಷ? ಇದೆಂತಹ ಮನಃಸ್ಥಿತಿ? ಸಾಧಾರಣವಾಗಿ ಮಕ್ಕಳು ಹುಟ್ಟಿದ ಮೇಲೆ ಮುನಿಸು ಕಳೆದುಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ, ವರ್ಷಗಳ ಕಾಲ ಹಟವನ್ನು ಕಾಪಿಟ್ಟುಕೊಂಡು ಕೊಲೆ ಮಾಡುವಷ್ಟು ಪೋಷಕರೇ ಅಮಾನುಷರಾಗುತ್ತಾರೆ ಎಂದರೆ ಅದು ಯಾವ ರೀತಿಯ ಜಾತಿಪ್ರೇಮ? ಇಲ್ಲ, ಇದು ಪ್ರೇಮವಲ್ಲ, ನಂಜು. ನಂಜೇರಿದವರಿಗೆ ಇನ್ನು ಏನೂ ಕಾಣಿಸುವುದಿಲ್ಲ. ಹೆತ್ತ ಮಗಳೂ, ಮುದ್ದು ಮೊಮ್ಮಕ್ಕಳೂ.

ಇಂತಹ ಹಲವು ನಂಜುಗಳು ನಮ್ಮೊಳಗೆ ಏರಿ ಕುಳಿತಿವೆ. ಹೆಚ್ಚಿದ ಶುಲ್ಕದ ವಿರುದ್ಧ ಬಡ ಮಕ್ಕಳು ಹೋರಾಡುತ್ತಿದ್ದರೆ, ‘ನಮ್ಮ ತೆರಿಗೆಯ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ’ ಎಂದು ಕಮೆಂಟ್ ಮಾಡುವುದು ಕೂಡ ಇಂತಹುದೇ ಇನ್ನೊಂದು ಬಗೆಯ ನಂಜು. ಇಷ್ಟು ಕಡಿಮೆ ಶುಲ್ಕವನ್ನೂ ಕೊಡುವುದು ಅವರಿಗೆ ಸಾಧ್ಯವಾಗದ ದುಃಸ್ಥಿತಿಯ ಬಗೆಗೆ ನಾವು ಯೋಚಿಸಬೇಕಾಗಿತ್ತು. ಸರ್ಕಾರಿ ಸಂಸ್ಥೆಗಳಲ್ಲೇ ಓದಿ ಉತ್ತಮ ಸರ್ಕಾರಿ, ಖಾಸಗಿ ಉದ್ಯೋಗಗಳನ್ನು ಪಡೆದು ಒಳ್ಳೆಯ ಸ್ಥಿತಿಗೆ ಹೋದವರು ಮತ್ತು ಆ ಸವಲತ್ತುಗಳಿಂದ ತಮ್ಮ ಮಕ್ಕಳನ್ನು ದುಬಾರಿ ಖಾಸಗಿ ಸಂಸ್ಥೆಗಳಲ್ಲಿ ಓದಿಸಿದವರೇ ಇಂದು ಇಂತಹ ಮನಃಸ್ಥಿತಿ ಹೊಂದಿದ್ದಾರೆ. ಆ ಖಾಸಗಿ ಸಂಸ್ಥೆಗಳಲ್ಲಿ ಬಡತನ ಎಂದರೇನು ಎಂದೇ ತಿಳಿಯದೆ ಓದಿದವರಿಂದಂತೂ ಹೆಚ್ಚಿನದನ್ನು ನಿರೀಕ್ಷಿಸುವಂತೆಯೇ ಇಲ್ಲ. ಖಾಸಗಿ ಈವೆಂಟ್‍ಗಳನ್ನು ಆಯೋಜಿಸುತ್ತಾ, ದುಡಿದ ದುಡ್ಡನ್ನು ಖರ್ಚು ಮಾಡುವ ದಾರಿ ಹುಡುಕುವುದೇ ಕ್ರಿಯೇಟಿವಿಟಿ ಮತ್ತು ಪ್ರತಿಷ್ಠೆಯಾಗಿರುವ ಪ್ರತ್ಯೇಕ ಸಮಾಜಕ್ಕೆ ಸೇರಿದವರು ಇವರು. ಮತ್ತೆ ನೆನಪಿಸಿಕೊಳ್ಳಿ. ಸ್ವಾತಂತ್ರ್ಯದ ಆಸುಪಾಸಿನಲ್ಲಿ ಊರಿಗೊಂದು ಶಾಲೆ ತೆರೆಯುವುದು ಎಷ್ಟು ದೊಡ್ಡ ಆದರ್ಶವಾಗಿತ್ತು, ಅದಕ್ಕಾಗಿ ಊರಿಗೆ ಊರೇ ಹೇಗೆ ಕೈಜೋಡಿಸುತ್ತಿತ್ತು ಎಂಬುದನ್ನು. ನಮ್ಮ ನಮ್ಮ ಊರುಗಳಲ್ಲೂ ಈ ಕತೆಗಳಿವೆ. ನಮ್ಮೂರ ಶಾಲೆಗೆ ತನ್ನ ಪೋಷಕರು ಭೂಮಿ ಕೊಟ್ಟ ಬಗ್ಗೆ ನನ್ನಮ್ಮನಿಗೆ ಹೆಮ್ಮೆ ಮಾತ್ರವಲ್ಲ, ಕೃತಜ್ಞತೆಯೂ ಇತ್ತು. ನವೋದಯ ಕಾಲದವರ ನೆನಪಿನ ಚಿತ್ರಗಳಲ್ಲೆಲ್ಲಾ ಇಂತಹ ಹತ್ತು ಹಲವು ಪ್ರಸಂಗಗಳು ಕಣ್ಣಮುಂದೆ ಬರುತ್ತವೆ.

ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಮರೆಯಲಾದೀತೇ?...’ ಕೃತಿಯಲ್ಲಿ ತೋಪಿನ ಹನುಮಣ್ಣ ಮತ್ತು ಮೀಸೆ ಹನುಮಣ್ಣರ ಜಮೀನು ಜಗಳವನ್ನು ಪರಿಹರಿಸಲು ವಿವಾದಿತ 35 ಎಕರೆ ಜಾಗವನ್ನು ಶಾಲೆಗೆ ಬಿಟ್ಟುಕೊಡುವ ಸೂತ್ರವನ್ನು ಊರ ಪಂಚಾಯಿತಿ ಹೇಳಿದಾಗ, ಇಬ್ಬರೂ ಮರುಮಾತಿಲ್ಲದೆ ಒಪ್ಪಿಬಿಡುತ್ತಾರೆ. ಇದೇ ತೋಪಿನ ಹನುಮಣ್ಣ ತನ್ನ ಫಲಭರಿತ ಅಡಿಕೆ ತೋಟವನ್ನು ಆಸ್ಪತ್ರೆ ಮಾಡಲು ದಾನ ಕೊಡುತ್ತಾರೆ. ಗಾಂಧೀಜಿಯಿಂದ ಪ್ರಭಾವಿತರಾದ ಗೋಪಾಲಸ್ವಾಮಿ ಅಯ್ಯರ್ ಎಂಬ ಮಡಿವಂತರು ಶ್ರೀರಾಮಪುರದಲ್ಲಿ ಹರಿಜನ ಹಾಸ್ಟೆಲ್ ಆರಂಭಿಸುತ್ತಾರೆ. ಅವರನ್ನು ಪಂಚಮಯ್ಯರ್ ಅಂತ ತಮಾಷೆ ಮಾಡುತ್ತಿದ್ದರಂತೆ. ಅವರು ಪ್ರತಿ ಭಾನುವಾರ ವಿದ್ಯಾರ್ಥಿಗಳ ತಲೆಗೆ ಎಣ್ಣೆಹಚ್ಚಿ ಅಭ್ಯಂಜನ ಮಾಡಿಸುತ್ತಿದ್ದರಂತೆ. ತಾರತಮ್ಯ ಎಂಬುದು ಎಷ್ಟು ಸಾಮಾಜಿಕವೋ ಅಷ್ಟೇ ಮಾನಸಿಕತೆ ಕೂಡ ಹೌದು. ಅದರ ವಿರುದ್ಧದ ಸಾಮುದಾಯಿಕ ಪ್ರಯತ್ನ ಸದಾ ಬೇಕಿದೆ.

ಈಗ ಮತ್ತೆ ಈ ಮಾನಸಿಕತೆಯ ರೋಗ ಉಲ್ಬಣಿಸತೊಡಗಿದೆ. ಇಲ್ಲದೇ ಹೋದಲ್ಲಿ, ಬಡ ವಿದ್ಯಾರ್ಥಿ
ಗಳಿಗೆ ತೆರಿಗೆ ಪಾಲು ಕೊಡುವುದಿಲ್ಲ ಎಂಬ, ಹೆತ್ತ ಮಕ್ಕಳ ಮನಸ್ಸರಿಯದೇ ಕೊಲೆಪಾತಕರಾಗುವ, ರೈತರ
ಅಸಹಾಯಕತೆಯನ್ನು ಲೇವಡಿ ಮಾಡುವ ಲಜ್ಜೆಗೇಡಿತನಕ್ಕೆ ಈ ಲೋಕ ಇಳಿಯುತ್ತಿರಲಿಲ್ಲ. ಬಹುಜನರು ಅದಕ್ಕೆ ಸಾಥ್ ಕೊಡುತ್ತಿರಲಿಲ್ಲ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.