ADVERTISEMENT

ಬದ್ಧತೆಗೆ ಒಲಿದ ಬದಲಾವಣೆ

ಈಶಾನ್ಯ ಕರ್ನಾಟಕದ ಈ ಶಾಲೆಗಳ ಶಿಕ್ಷಕರು ಕಣ್ಗಾವಲಿಗಿಂತ ತಮ್ಮ ಪ್ರಜ್ಞೆಗೆ ಉತ್ತರದಾಯಿ!

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:34 IST
Last Updated 17 ಡಿಸೆಂಬರ್ 2019, 19:34 IST
ಶಾಲಾ ಮಕ್ಕಳು
ಶಾಲಾ ಮಕ್ಕಳು   

ಮಾರ್ಚ್ ತಿಂಗಳ ಒಂದು ಬೆಳಿಗ್ಗೆ 10 ಗಂಟೆ. ಆದರೆ, ಈಶಾನ್ಯ ಕರ್ನಾಟಕದ ಸುರಪುರದ ಕಲ್ಲುಬೆಟ್ಟಗಳ ಮೇಲೆ ಅದಾಗಲೇ ಬಿಸಿಲೇರಿತ್ತು. ಹೆದ್ದಾರಿಯಿಂದ ಒಂದು ಮೈಲು ದೂರದಲ್ಲಿ ಪಕ್ಕದ ರಸ್ತೆಯಿಂದ ಸಾಗಿ, ಕೊನೆಯಲ್ಲಿ ಮಣ್ಣಿನ ಹಾದಿಯನ್ನು ತುಳಿದರೆ ಹೂವಿನಹಳ್ಳ ಎಂಬ ಗ್ರಾಮ ಸಿಗುತ್ತದೆ. ಸುಮಾರು 800 ಜನ ವಾಸವಿರುವ ಈ ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆಯೇ ಚಟುವಟಿಕೆಗಳಿಂದ ಕಲರವಗುಟ್ಟುವ ಶಾಲೆಯೊಂದು ಕಣ್ಣಿಗೆ ಬೀಳುತ್ತದೆ. ಮರಗಳಿಂದ ಕಂಗೊಳಿಸುವ ಇದರ ಆವರಣದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಸಿಗುವ ನೀರನ್ನು ವಿವೇಚನೆಯಿಂದ ಬಳಸುತ್ತಿರುವುದು ಕಾಣುತ್ತದೆ. ಸಶಕ್ತ ಶಾಲಾ ಮಂತ್ರಿಮಂಡಲವೊಂದು ಇದರೊಟ್ಟಿಗೆ ಇತರ ಹಲವು ಕಾರ್ಯಗಳನ್ನೂ ನಿರ್ವಹಿಸುತ್ತಿರು ವುದು ನಮಗೆ ತಿಳಿಯುತ್ತದೆ. ಮುಖ್ಯೋಪಾಧ್ಯಾಯರು ಊರವರೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಂಡಿರುವುದು ಮನಸ್ಸಿಗೆ ತಟ್ಟುತ್ತದೆ. ಅವರು ತಮ್ಮ ವೈಯಕ್ತಿಕ ಸಮಯ ಮತ್ತು ಸಂಪನ್ಮೂಲವನ್ನು ತಮ್ಮ ಶಾಲೆಯ ಮಕ್ಕಳು ಮೊರಾರ್ಜಿ ಶಾಲೆ ಮತ್ತು ನವೋದಯ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುವಾಗುವಂತೆ ಕಲಿಯಲು ವಿನಿಯೋಗಿಸುತ್ತಿರುವುದು ಕಾಣುತ್ತದೆ. ಹೊಸ ಹೊಸ ಆಲೋಚನೆಗಳು ಅವರಲ್ಲಿ ತುಂಬಿತುಳುಕುತ್ತಿವೆ.

ಸುರಪುರ ತಾಲ್ಲೂಕಿನಲ್ಲಿ ನಾನು ಏಳು ದಿನಗಳ ಕಾಲ ಪ್ರಯಾಣಿಸುತ್ತಾ 16 ಶಾಲೆಗಳಿಗೆ ಭೇಟಿ ನೀಡಿದೆ. ಸುಮಾರು 30 ಶಿಕ್ಷಕರ ಜೊತೆ ಮಾತುಕತೆ ನಡೆಸಿದೆ. 2002ರಿಂದ ಸುಮಾರು ಆರೇಳು ವರ್ಷಗಳ ಕಾಲ ನಾನು ಹಲವು ಸಲ ಭೇಟಿ ನೀಡಿದ ಬ್ಲಾಕು ಸುರಪುರ. ಹತ್ತು ವರ್ಷಗಳಲ್ಲಿ ಇಲ್ಲಿಯ ರಸ್ತೆಗಳು ಅಭಿವೃದ್ಧಿಗೊಂಡಿವೆ. ಜಿಲ್ಲಾ ಕೇಂದ್ರ ಯಾದಗಿರಿಯ ಮೂಲ ಸೌಲಭ್ಯಗಳು ಉತ್ತಮಗೊಂಡಿವೆ. ಕಳೆದ ಹದಿನೈದು ವರ್ಷಗಳಲ್ಲಿ, ಒಣಭೂಮಿಯ ಗಟ್ಟಿ ಬೆಳೆಯಾದ ಬಿಳಿಜೋಳವು ಬಾಯಾರಿ ಗಟಗಟ ನೀರು ಕುಡಿಯುವ ಭತ್ತದ ಬೆಳೆಗೆ ಜಾಗ ಮಾಡಿಕೊಟ್ಟಿದೆ. ಆದರೆ ಬದುಕಿನ ಬವಣೆ ಹಿಂದಿನಂತೆಯೇ ಕಠೋರವಾಗಿದೆ. ಬದಲಾಗದೇ ಉಳಿದಿರುವಂತೆ ಕಾಣುತ್ತಿರುವುದು ಇಲ್ಲಿಯ ಕೂಲಿಕಾರ್ಮಿಕ ಜನವರ್ಗ ಮತ್ತು ದೂರದ ಊರುಗಳಿಗೆ ಕೆಲಸ ಹುಡುಕಿ ಗುಳೆ ಹೋಗುವ ಅವರ ಅನಿವಾರ್ಯ ಸ್ಥಿತಿ. ನನ್ನ ಭೇಟಿಯ ಮೂಲ ಉದ್ದೇಶವು ಶಾಲೆಗಳನ್ನು ನೋಡುವುದೇ ಆಗಿತ್ತು. ಶಾಲೆಗಳಲ್ಲಿ ಸುಧಾರಣೆಗಳು ಆಗುತ್ತಿರುವುದು ನಿಚ್ಚಳವಿತ್ತು.

ಸುರಪುರದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ– ಮಧ್ಯಾಹ್ನದ ಬಿಸಿಯೂಟ ಮತ್ತು ಶಿಕ್ಷಕರ ಪರಿಶ್ರಮದ ಹೊರತಾಗಿಯೂ– 2008ರವರೆಗೆ ಶೇ 65ನ್ನು ದಾಟುವುದಕ್ಕೆ ಏದುಸಿರು ಬಿಡುತ್ತಿದ್ದುದು ಶೇ 75-80ರ ಆಸುಪಾಸಿಗೆ ಬಂದಿದೆ. ನಾನು ಭೇಟಿ ನೀಡಿದ ಪ್ರತಿ ಶಾಲೆಯಲ್ಲೂ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಹಾಜರಿರುತ್ತಿದ್ದರು. ಎಲ್ಲೆಂದರಲ್ಲಿ ಇರುತ್ತಿದ್ದ ಬಡಿಗೆ ಮಾಯವಾಗಿತ್ತು. ಮಕ್ಕಳು ನಿರ್ಭೀತರಾಗಿ ಶಿಕ್ಷಕರ ತೋಳು, ಸೀರೆಯ ಚುಂಗು ಅಥವಾ ಅಂಗಿಯ ಅಂಚಿಗೆ ಜೋತುಬೀಳುವುದು ಕಾಣುತ್ತಿತ್ತು.

ADVERTISEMENT

ಬಹಳಷ್ಟು ಶಾಲೆಗಳಲ್ಲಿ ಸಮುದಾಯದ ಸದಸ್ಯರು ಶಾಲೆಯ ಏಳಿಗೆಗೆ ಸಹಾಯಹಸ್ತ ನೀಡುತ್ತಿರುವುದು ಕಾಣುತ್ತಿದೆ. ಇದಲ್ಲದೆ ಬೇರೆ ಮಹತ್ವದ ಬದಲಾವಣೆ ಗಳನ್ನೂ ಕಾಣಬಹುದು. ಒಂದು ದಶಕದ ಹಿಂದೆ ಹತ್ತಕ್ಕೆ ನಾಲ್ಕೋ ಐದೋ ಶಾಲೆಗಳಲ್ಲಿ ಸಮವಸ್ತ್ರ ಕಾಣುತ್ತಿತ್ತು ಮತ್ತು ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳು ತಲುಪುತ್ತಿದ್ದವು. ಇಂದು ಅದು ಪ್ರತಿ ಶಾಲೆಯಲ್ಲೂ ಸಾಮಾನ್ಯ ಎಂಬಂತೆ ಇದೆ. ಹತ್ತು ವರ್ಷಗಳ ಹಿಂದೆ, ಸುಮಾರು ಶೇ 15ರಿಂದ 20 ಮುಖ್ಯ ಶಿಕ್ಷಕರು ಯಾವುದೋ ಕಾರ್ಯನಿಮಿತ್ತ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದರೆ, ಇಂದು ಈ ಪ್ರಮಾಣ ಗಣನೀಯವಾಗಿ ಇಳಿದಿದೆ. ಈಗ ಅವರು ಜಿಲ್ಲಾ ಕೇಂದ್ರದಿಂದ ಮತ್ತು ಮಾಹಿತಿ ತಂತ್ರಜ್ಞಾನದ ರುಚಿ ಹಿಡಿಸಿಕೊಂಡಿರುವ ಕಿರಿಯ ಸಹೋದ್ಯೋಗಿಗಳ ಮುಖೇನ ತಕ್ಷಣವೇ ಮಾಹಿತಿ
ಪಡೆಯಬಲ್ಲವರಾಗಿದ್ದಾರೆ.

ಗ್ರಾಮೀಣ ಶಾಲೆಗಳು ವಿಸ್ತಾರವಾದ ಭೌಗೋಳಿಕ ಪ್ರದೇಶದಲ್ಲಿ ನಿರ್ಮಾಣಗೊಂಡಿವೆ. ಪ್ರಜ್ಞಾವಂತ ಕ್ಷೇತ್ರ ಶಿಕ್ಷಣಾಧಿಕಾರಿಗೂ ಅವನ್ನು ಭೇಟಿ ಮಾಡುವುದು ಯಾವಾಗಲೋ ಒಮ್ಮೆ ಮಾತ್ರ ಸಾಧ್ಯ. ಆದರೂ ದೂರದ ಮೂಲೆಯಲ್ಲಿರುವ ಈ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಬಗ್ಗೆ ಮೆಚ್ಚುಗೆ ಮೂಡುತ್ತದೆ. ಏಕೆಂದರೆ, ತಮ್ಮ ಪ್ರಜ್ಞೆಗೆ ಉತ್ತರದಾಯಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ.

ಏವೂರ ದೊಡ್ಡತಾಂಡಾ ಮತ್ತು ಜುಮಾಲಪುರ ದೊಡ್ಡತಾಂಡಾ ವ್ಯಾಪ್ತಿಯ ಮೂಲೆಮುಡುಕಿನ ಶಾಲೆಗಳ ಉದಾಹರಣೆಯನ್ನೇ ನೋಡಬಹುದು. ಇಲ್ಲಿಯ ಮುಖ್ಯ ಶಿಕ್ಷಕರು ಮತ್ತು ಸಹೋದ್ಯೋಗಿಗಳು ಸಾಧಿಸಿರುವ ಹಾಜರಾತಿ ಪ್ರಮಾಣ ಗಮನಾರ್ಹವಾಗಿದೆ. ಬಾಬು ಲಂಬಾಣಿಯವರು ಇಲ್ಲಿಗೆ ಬಂದಾಗ 250ರಲ್ಲಿ 45 ಮಕ್ಕಳು ಮಾತ್ರ ಶಾಲೆಗೆ ದಿನವಹಿ ಹಾಜರಿರುತ್ತಿದ್ದರು. ಇಂದು ಆ ಸರಾಸರಿ 190ನ್ನು ಮುಟ್ಟಿದೆ. ಬಾಬು ಅವರ ಮಾದರಿಯನ್ನು ಅನುಸರಿಸುವ ಇಲ್ಲಿಯ ಶಿಕ್ಷಕರು, ಪ್ರತಿದಿನ ಸಮಯಕ್ಕೆ ಮುಂಚಿತವಾಗಿ ಹಾಜರಾಗುತ್ತಾರೆ. ಶಾಲಾ ಅವಧಿಯ ನಂತರ, ತಮ್ಮ ಶೈಕ್ಷಣಿಕ ಆಲೋಚನೆ ಗಳನ್ನು ಸುಧಾರಿಸಿಕೊಳ್ಳುವ ಸಲುವಾಗಿ ಶಿಕ್ಷಕರ ಕಲಿಕಾ ಕೇಂದ್ರಗಳಿಗೆ ಸ್ವಇಚ್ಛೆಯಿಂದ ಭೇಟಿ ಕೊಡುತ್ತಾರೆ.

ಜುಮಾಲಪುರ ದೊಡ್ಡತಾಂಡಾದ ಶಾಲೆಗೆ ಕೆಲವು ವರ್ಷಗಳ ಹಿಂದೆ ಮುಖ್ಯೋಪಾಧ್ಯಾಯರಾಗಿ ಬಂದ ಅಚ್ಚಪ್ಪ ಗೌಡರ್‌ರ ಎದೆಗಾರಿಕೆಗೆ ಮಾರುಹೋಗುವ ಹಾಗಾಗುತ್ತದೆ. ತಾಂಡಾದಲ್ಲಿನ ಸಮುದಾಯಕ್ಕೆ ವಲಸೆ ಎಂಬುದು ಅನಿವಾರ್ಯ ಸಂಗತಿ. ಹಾಗಾಗಿ, ಅವರ ಮಕ್ಕಳಿಗೆ ಹಳ್ಳಿಯಲ್ಲಿನ ಔಪಚಾರಿಕ ಶಾಲೆ ಎಟುಕುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ, ವಲಸೆ ಹೋಗುವ ತಂದೆ-ತಾಯಿ ತಮ್ಮ ಮಕ್ಕಳನ್ನು ಧೈರ್ಯದಿಂದ ಉಳಿಸಿಹೋಗುವಂತೆ ಶಾಲೆಯ ಆವರಣದೊಳಗೇ ವಸತಿ ನಿಲಯವನ್ನು ಗೌಡರ್‌ ಆರಂಭಿಸಿದರು. ತರಗತಿ ಕೋಣೆಗಳನ್ನೇ ರಾತ್ರಿ ವೇಳೆ ತಂಗುದಾಣಗಳನ್ನಾಗಿಸಿದರು. ಮಕ್ಕಳಿಗೆ ಬೆಳಗಿನ ಉಪಾಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಿದರು. ಹೀಗೆ ಅಪಾಯಗಳಿಗೆ ಎದೆಗೊಟ್ಟ ಅವರಿಗೆ ಸಹೋದ್ಯೋಗಿಗಳು ಬೆಂಬಲಕ್ಕೆ ನಿಂತಿದ್ದಾರೆ. ಇದಕ್ಕೆ ಶಕ್ತಿ ತುಂಬುವಂತೆ ಊರಿನ ಅನುಕೂಲಸ್ತರು ಹೆಚ್ಚುವರಿ ಕೊಠಡಿಗಳನ್ನು, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಇಂತಹ ಬದಲಾವಣೆ, ಎದೆಗಾರಿಕೆ ಹಾಗೂ ಸಹಾನು ಭೂತಿಯನ್ನು ಸುರಪುರದಲ್ಲಿ ಕಾಣಬಹುದಾದರೆ, ಭಾರತದಾದ್ಯಂತ ಇರುವ ಇದೇ ಬಗೆಯ ಅವಕಾಶವಂಚಿತ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲೂ ಖಂಡಿತಾ ಬದಲಾವಣೆ
ಗಳು ಆಗುತ್ತಿರುವುದು ನಿಜ. ಈ ಊಹೆ ಸರಿಯಾಗಿಯೇ ಇದೆ ಎಂಬುದಕ್ಕೆ ಇತ್ತೀಚೆಗೆ ಅಜೀಂ ಪ್ರೇಮ್‍ಜಿ ಫೌಂಡೇಷನ್ನಿನ ನನ್ನ ಸಹೋದ್ಯೋಗಿಗಳು ನಡೆಸಿದ ಅಧ್ಯಯನವು ಪುರಾವೆ ಒದಗಿಸುತ್ತದೆ. ಆರು ರಾಜ್ಯಗಳ ಉದ್ದಗಲಕ್ಕೆ 619 ಶಾಲೆಗಳಲ್ಲಿ 2,891 ಶಿಕ್ಷಕರನ್ನು ಒಳಗೊಂಡು ನಡೆದ ಈ ಅಧ್ಯಯನವು ಶಿಕ್ಷಕರ ಗೈರು
ಹಾಜರಿ ಪ್ರಮಾಣ– ಸಕಾರಣವಿಲ್ಲದೆ ಮತ್ತು ಕರ್ತವ್ಯಕ್ಕೆ ತಪ್ಪಿಸಿಕೊಳ್ಳುವುದೇ ಉದ್ದೇಶವಾಗಿ– ಶೇ 2.5ಕ್ಕಿಂತ ಕಮ್ಮಿ ಇರುವುದು ಕಂಡುಬಂದಿದೆ. ಅತ್ಯಂತ ಕಷ್ಟದ ಸನ್ನಿವೇಶ ಗಳಲ್ಲೂ ಈ ಶಿಕ್ಷಕರು ಅಸಾಧಾರಣ ಬದ್ಧತೆಯಿಂದ ಇರುವುದನ್ನು, ತರಗತಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿರುವುದನ್ನು, ಕರ್ತವ್ಯಭ್ರಷ್ಟತೆ ಕನಿಷ್ಠ ಮಟ್ಟದಲ್ಲಿ ಇರುವುದನ್ನು ಅಧ್ಯಯನ ತೋರುತ್ತದೆ.

ದೇಶದ ಶೇ 50ರಷ್ಟು ಮಕ್ಕಳಿಗೆ ಸರ್ಕಾರಿ ಶಾಲೆಯೊಂದೇ ಶಿಕ್ಷಣಕ್ಕಿರುವ ಏಕೈಕ ಆಯ್ಕೆ ಎಂಬ ಬಗ್ಗೆ ವಿವಾದ ಇರಲಾರದು. ಅವರಿಗೆ ಮಧ್ಯಾಹ್ನದ ಬಿಸಿಯೂಟವೇ ಒಂದೇ ಹೊತ್ತಿನ ಊಟ ಎಂಬುದೂ ನಿಜ. ಹೀಗಿರುವಾಗ, ಸರ್ಕಾರಿ ಶಾಲಾ ಶಿಕ್ಷಕರನ್ನು ಬೆಂಬಲಿಸುವುದು ನಾವು ಮಾಡಬಹುದಾದ ಉತ್ತಮ ಕಾರ್ಯ ಎಂಬುದೂ ನಿಜ. ಅವರನ್ನು ನ್ಯಾಯವಂತಿಕೆಯಿಂದ ಮತ್ತು ಅನುಭೂತಿಯಿಂದ ನಾವು ನೋಡುವಂತೆ ಆಗಬೇಕು. ಮಕ್ಕಳು ಶಾಲೆಗಳಲ್ಲಿ ಉತ್ತಮವಾಗಿ ಕಲಿಯುವಂತೆ ಮಾಡುವ ಶಿಕ್ಷಕರ ಕೆಲಸವು ಕಠಿಣವಾದುದು. ಅವರು ಶಕ್ತಿಮೀರಿ ತಮ್ಮ ಕರ್ತವ್ಯ ನಿರ್ವಹಿಸುವುದನ್ನು ನಾವು ನೋಡುತ್ತಿದ್ದೇವೆ.

ಲೇಖಕ: ಮುಖ್ಯ ಕಾರ್ಯಕಾರಿ ಅಧಿಕಾರಿ,

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.