ADVERTISEMENT

ಮೀಸಲಾತಿ ಎಲ್ಲರಿಗೂ ಬೇಕು!; ದಿನೇಶ್ ಅಮಿನ್ ಮಟ್ಟು ಅವರ ವಿಶ್ಲೇಷಣೆ

ಯಾವ ಪಕ್ಷಕ್ಕೆ ಈಗ ಮೀಸಲಾತಿ ವಿರುದ್ಧ ಸೊಲ್ಲೆತ್ತುವ ಧೈರ್ಯ ಇದೆ?

ದಿನೇಶ್ ಅಮಿನ್ ಮಟ್ಟು
Published 17 ಡಿಸೆಂಬರ್ 2024, 22:02 IST
Last Updated 17 ಡಿಸೆಂಬರ್ 2024, 22:02 IST
   

ಮೀಸಲಾತಿ ವಿರೋಧಿ ಚಳವಳಿಯ ಯುಗ ಮುಗಿದು, ಮೀಸಲಾತಿಗಾಗಿ ಚಳವಳಿಯ ಹೊಸ ಯುಗ ಶುರುವಾಗಿದೆ. ರಾಜಸ್ಥಾನದಲ್ಲಿ ಜಾಟರು, ಗುಜರಾತ್‌ನಲ್ಲಿ ಪಾಟಿದಾರರು, ಮಹಾರಾಷ್ಟ್ರದಲ್ಲಿ ಮರಾಠರು, ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯದವರು... ಹೀಗೆ ಪ್ರತಿ ರಾಜ್ಯದಲ್ಲೂ ಒಂದಲ್ಲ ಒಂದು ಸಮುದಾಯವು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ.

ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯ ಬೇಡಿಕೆಗಳು ಕೇಳಿಬಂದಿವೆ. ತಮಗೆ ಸಿಗುತ್ತಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೆಲವು ಸಮುದಾಯಗಳಿಂದ ಕೂಗು ಎದ್ದಿದೆ. ಇನ್ನು ಕೆಲವು ಸಮುದಾಯಗಳು ತಮ್ಮನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತಿವೆ. ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಕೇಳುತ್ತಿದ್ದಾರೆ. ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿಯ ಕಿಚ್ಚು ಇನ್ನೂ ಆರಿಲ್ಲ.

ಅರ್ಹತೆಯ ಫಲಕ ಹಿಡಿದುಕೊಂಡು, ಮೀಸಲಾತಿ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಬ್ರಾಹ್ಮಣರು ಸೇರಿದಂತೆ ಮೇಲ್ವರ್ಗದವರು ಕೂಡ ಶೇಕಡ 10ರ ಮೀಸಲಾತಿಯ ಫಲಾನುಭವಿಗಳಾದ ನಂತರ ಮೀಸಲಾತಿಯ ಪರ ಜೈಕಾರ ಹಾಕುತ್ತಿದ್ದಾರೆ. ಇಡೀ ದೇಶದಲ್ಲಿ ಈಗ ಮೀಸಲಾತಿ ವಿರೋಧಿ ಚಳವಳಿಯ ಸೊಲ್ಲೇ ಇಲ್ಲದಂತಾಗಿದೆ. ಹೀಗಾಗಿ, ಈಗ ಎಲ್ಲರೂ ಮೀಸಲಾತಿ ಪರ.

ADVERTISEMENT

ಮೀಸಲಾತಿ ವಿರೋಧಿ ಹೋರಾಟಕ್ಕೆ ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಕರ್ನಾಟಕ, ತಮಿಳುನಾಡಿನಂತಹ ರಾಜ್ಯಗಳಲ್ಲಿ ದೀರ್ಘ ಇತಿಹಾಸ ಇದೆ. ಮೀಸಲಾತಿ ಪರ– ವಿರೋಧದ ಚಳವಳಿಯಿಂದ ಸರ್ಕಾರಗಳು ಉರುಳಿವೆ, ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಮಂಡಲ್‌ ವರದಿ ಜಾರಿ ವಿರೋಧಿಸಿ ಹುಟ್ಟಿಕೊಂಡ ಕಮಂಡಲ ಚಳವಳಿ ಇಡೀ ದೇಶದ ರಾಜಕೀಯ ಚಿತ್ರಣ, ದಿಕ್ಕುದೆಸೆಯನ್ನೇ ಬದಲಿಸಿದ್ದು ಈಗ ಇತಿಹಾಸ. ಮಂಡಲ್‌ ವರದಿ ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡವರು, ವಿರೋಧಿಗಳ ಮನೆಗೆ ಬೆಂಕಿ ಇಟ್ಟವರೆಲ್ಲರೂ ಒಂದೋ ಮೀಸಲಾತಿಯ ಬೆಲ್ಲ ಸವಿಯುತ್ತಾ ನೆಮ್ಮದಿಯಿಂದಿದ್ದಾರೆ ಇಲ್ಲವೇ ಮೀಸಲಾತಿಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದಾರೆ.

ಸ್ವಾತಂತ್ರ್ಯಪೂರ್ವದಲ್ಲಿಯೇ ಹುಟ್ಟಿಕೊಂಡ ಮೀಸಲಾತಿ ವಿರುದ್ಧದ ಹೋರಾಟದ ಕಾವು 90ರ ದಶಕದಲ್ಲಿ ತಾರಕಕ್ಕೇರಿ, ನಿಧಾನವಾಗಿ ಇಳಿಯುತ್ತಾ ಬಂದು 2006ರ ನಂತರ ಹೆಚ್ಚು ಕಡಿಮೆ ನಿಂತೇಹೋಗಿದೆ. 2006ರಲ್ಲಿ ಯುಪಿಎ ನೇತೃತ್ವದ ಸರ್ಕಾರವು ಸಂವಿಧಾನಕ್ಕೆ 104ನೇ ತಿದ್ದುಪಡಿ ಮಾಡಿ, ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಹಿಂದುಳಿದ ಜಾತಿಯವರಿಗಾಗಿ ಜಾರಿಗೊಳಿಸಿದ್ದ ಶೇಕಡ 27ರಷ್ಟು ಮೀಸಲಾತಿ ವಿರುದ್ಧದ ಹೋರಾಟವೇ ಕೊನೆ. ಅದರ ನಂತರ ದೊಡ್ಡ ಪ್ರಮಾಣದಲ್ಲಿ ಮೀಸಲಾತಿ ವಿರೋಧಿ ಚಳವಳಿಗಳು ನಡೆದಿಲ್ಲ.

ಅಂದರೆ ಮೀಸಲಾತಿಯನ್ನು ವಿರೋಧಿಸುತ್ತಿದ್ದವರೆಲ್ಲರಿಗೂ ಜ್ಞಾನೋದಯವಾಗಿ ಅವರು ಸಾಮಾಜಿಕ ನ್ಯಾಯಕ್ಕೆ ತಲೆಬಗ್ಗಿಸಿದ್ದಾರೆ ಎಂದು ಅರ್ಥವೇ? ಹಿಂದಿನ ಒಂದು ದಶಕದ ಅವಧಿಯಲ್ಲಿ ಕೋಮುವಾದದ ವಿಷ ಇಷ್ಟೊಂದು ಶೀಘ್ರಗತಿಯಲ್ಲಿ ಹರಡುತ್ತಿರುವಾಗಲೂ ಮೀಸಲಾತಿ ವಿರೋಧದ ವಿಷ ಜರ‍್ರನೆ ಕೆಳಗಿಳಿದು, ಎಲ್ಲರೂ ಸಾಮಾಜಿಕ ನ್ಯಾಯದ ಹರಿಕಾರರಾಗಿ ಬದಲಾಗಿದ್ದು ಹೇಗೆ? ಈ ಪ್ರಶ್ನೆಗಳು ಸಹಜವಾಗಿ ಅಧ್ಯಯನಕ್ಕೆ ಯೋಗ್ಯವಾಗಿವೆ.

ಇದಕ್ಕೆ ಮೊದಲನೆಯ ಕಾರಣ, ಮಂಡಲೋತ್ತರ ದಿನಗಳಲ್ಲಿ ಮೀಸಲಾತಿಯ ಫಲಾನುಭವಿಗಳಲ್ಲಿ ದೊಡ್ಡ ಗುಂಪಾದ ಹಿಂದುಳಿದ ಜಾತಿಗಳಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸಬಲೀಕರಣ. ಇದರಿಂದ ಈ ಸಮುದಾಯಗಳು ಯಾವ ರಾಜಕೀಯ ಪಕ್ಷವೂ ನಿರ್ಲಕ್ಷಿಸಲಾಗದ ಮತಬ್ಯಾಂಕ್ ಆಗಿ ಬೆಳೆದುನಿಂತಿವೆ. ಒಂದೆಡೆ, ಲಾಲು ಪ್ರಸಾದ್ ಮತ್ತು ಮುಲಾಯಂ ಸಿಂಗ್ ಅವರ ಯಾದವ ಜೋಡಿ, ಇನ್ನೊಂದೆಡೆ, ಕಾನ್ಶಿರಾಂ ಎಂಬ ಸ್ವತಂತ್ರ ಭಾರತದ ನಿಜ ಚಾಣಕ್ಯನ ಪ್ರವೇಶದಿಂದಾಗಿ ಉತ್ತರಪ್ರದೇಶ, ಬಿಹಾರದ ಸಾಮಾಜಿಕ ಮತ್ತು ರಾಜಕೀಯ ಚಿತ್ರಣವೇ ಬದಲಾಗಿಹೋಯಿತು.

ಇಂದು ದೇಶದ ಪ್ರಧಾನಿ ಮಾತ್ರವಲ್ಲ, ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಹಿಂದುಳಿದ ಜಾತಿಗಳಿಗೆ ಸೇರಿದವರು. 2024ನೇ ಲೋಕಸಭೆಯಲ್ಲಿ 138 ಸದಸ್ಯರು ಹಿಂದುಳಿದ ಜಾತಿಗಳಿಗೆ ಸೇರಿದವರು. ಕೇಂದ್ರ ಸಂಪುಟದಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿರುವ 23 ಸಚಿವರಿದ್ದಾರೆ. ಇದೇ ಮೊದಲ ಬಾರಿಗೆ ಲೋಕಸಭೆಗೆ  ಪ್ರಬಲ ಜಾತಿಗಳ ಸದಸ್ಯರಿಗೆ ತುಸು ಹೆಚ್ಚು ಕಡಿಮೆ ಸಮನಾಗಿ ಹಿಂದುಳಿದ ಜಾತಿಗಳ ಸದಸ್ಯರು ಆರಿಸಿ ಬಂದಿದ್ದಾರೆ. ಇವರ ಜೊತೆ ಎಸ್‌ಸಿ, ಎಸ್‌ಟಿಯ 131 ಸದಸ್ಯರನ್ನು ಸೇರಿಸಿದರೆ ಲೋಕಸಭೆಯಲ್ಲಿ ಮೀಸಲಾತಿ ಫಲಾನುಭವಿಗಳದ್ದೇ ದೊಡ್ಡ ಗುಂಪು. ಈಗ ಯಾವ ಪಕ್ಷಕ್ಕೆ ಮೀಸಲಾತಿ ವಿರುದ್ಧ ಸೊಲ್ಲೆತ್ತುವ ಧೈರ್ಯ ಇದೆ?

ಮೀಸಲಾತಿ ವಿರೋಧಿಗಳ ಮನಸ್ಸು ಇಂದು ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳುವ ಹಾಗಿಲ್ಲ. ಇವರ ಕಾರ್ಯತಂತ್ರ ಬದಲಾಗಿದೆ. ಇತ್ತೀಚಿನವರೆಗೆ ಮೀಸಲಾತಿ ಫಲಾನುಭವಿಗಳ ಮನೆಗೆ ಕಲ್ಲು ಹೊಡೆಯುತ್ತಿದ್ದವರು ಈಗ ಅವರ ಮನೆಯೊಳಗೆ ಹುಟ್ಟಿಕೊಂಡಿರುವ ಜಗಳದ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಇದಕ್ಕೆ ಕರ್ನಾಟಕದ ಪಂಚಮಸಾಲಿ ಸಮುದಾಯದವರು ಮತ್ತು 2ಎ ಪ್ರವರ್ಗದಲ್ಲಿರುವ ಹಿಂದುಳಿದ ಜಾತಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಒಂದು ಉದಾಹರಣೆ ಅಷ್ಟೆ.

ಮೀಸಲಾತಿಯ ಸುತ್ತ ಹುಟ್ಟುಹಾಕಲಾದ ವಿವಾದದ ಬೆಂಕಿಯನ್ನು ಆರಿಸಲು ಇರುವ ಏಕೈಕ ದಾರಿ ಒಟ್ಟು ಮೀಸಲಾತಿ ಪ್ರಮಾಣದ ಹೆಚ್ಚಳ. ಇದಕ್ಕೆ ಅಡ್ಡಿಯಾಗಿರುವುದು ಮೀಸಲಾತಿ ಪ್ರಮಾಣ ಶೇಕಡ 50 ಮೀರಬಾರದು ಎಂದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1992ರಲ್ಲಿ ನೀಡಿರುವ ತೀರ್ಪು. ಮೀಸಲಾತಿ ಹೆಚ್ಚಳದ ಬೇಡಿಕೆ ಎದುರಾದಾಗೆಲ್ಲ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಮುಖಕ್ಕಿಟ್ಟು ಬಾಯಿಮುಚ್ಚಿಸುತ್ತಾ ಬಂದಿದೆ. ಕೇಂದ್ರದ ಈಗಿನ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10ರಷ್ಟು ಮೀಸಲಾತಿ ನೀಡಿ ಶಾಸನ ರಚಿಸುವ ಮೂಲಕ ಇಂದಿರಾ ಸಹಾನಿ ತೀರ್ಪನ್ನು ನೇರವಾಗಿ ಉಲ್ಲಂಘಿಸಿ
ಆಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸಂವಿಧಾನದ ತಿದ್ದುಪಡಿ ಮೂಲಕ ಬದಲಾಯಿಸಿರುವ ಇನ್ನೂ ಹಲವಾರು ಉದಾಹರಣೆಗಳಿವೆ. ಸಂವಿಧಾನಕ್ಕೆ ಇಲ್ಲಿಯವರೆಗೆ 106 ತಿದ್ದುಪಡಿಗಳಾಗಿವೆ. ತಮಿಳುನಾಡು ಸರ್ಕಾರವು ಮೀಸಲಾತಿಯನ್ನು ಶೇಕಡ 69ಕ್ಕೆ ಹೆಚ್ಚಿಸಿ, ಅದು ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರುವಂತೆ ಮಾಡಿ ಸುರಕ್ಷಿತಗೊಳಿಸಿದೆ.

ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಹೊರಟರೆ ಸುಪ್ರೀಂ ಕೋರ್ಟ್ ವಿಶ್ವಾಸಾರ್ಹ ದತ್ತಾಂಶಗಳನ್ನು ಖಂಡಿತ ಕೇಳುತ್ತದೆ. ಇದಕ್ಕಾಗಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಗತ್ಯ ಇದೆ. ಈ ಸವಾಲನ್ನು ಎದುರಿಸಲು ಸಾಮಾಜಿಕ ನ್ಯಾಯ ಪಾಲನೆಯಲ್ಲಿ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕ ದಾರಿ ತೋರಿಸಬಹುದು. 1994ರಲ್ಲಿಯೇ ಎಂ.ವೀರಪ್ಪ ಮೊಯಿಲಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಟ್ಟು ಮೀಸಲಾತಿಯನ್ನು ಶೇಕಡ 73ಕ್ಕೆ ಹೆಚ್ಚಿಸಿ ಕಾನೂನು ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸುಮಾರು 25 ವರ್ಷಗಳಿಂದ ವಿಚಾರಣೆ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದ ಈ ಹಿಂದಿನ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳದ ಭರವಸೆ ನೀಡಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡಲು ನಮ್ಮಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಕೂಡಾ ಸಿದ್ಧವಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಳ ಮತ್ತು ಸಾಮಾಜಿಕ- ಆರ್ಥಿಕ ಸಮೀಕ್ಷೆಯ ಎರಡು ಅಸ್ತ್ರಗಳನ್ನು ಕರ್ನಾಟಕದಿಂದ ಪಡೆದುಕೊಂಡು ತಮ್ಮ ಬತ್ತಳಿಕೆಯಲ್ಲಿ ಸೇರಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇವುಗಳನ್ನೇ ತಮ್ಮ ಪ್ರಮುಖ ಅಜೆಂಡಾವನ್ನಾಗಿ ಮಾಡಿಕೊಂಡಿದ್ದಾರೆ.

ಈಗ ಚೆಂಡು ಕರ್ನಾಟಕ ಸರ್ಕಾರದ ಅಂಗಳದಲ್ಲಿದೆ. ಸರ್ಕಾರ ತಕ್ಷಣ ತೀರ್ಮಾನ ಕೈಗೊಂಡು ಸಾಮಾಜಿಕ- ಆರ್ಥಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು, ಅದರ ಆಧಾರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿ ಕಾನೂನು ರಚಿಸಬೇಕು. ಇದರ ಸುರಕ್ಷತೆಗಾಗಿ ಇದನ್ನು ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಈಗ ಇರುವ ಮತ್ತು ಹೊಸಹೊಸದಾಗಿ ಹುಟ್ಟಿಕೊಳ‍್ಳಲಿರುವ ಮೀಸಲಾತಿ ಬೇಡಿಕೆಗಳಿಗೆ ಸಂಬಂಧಿಸಿದ ಬಿಕ್ಕಟ್ಟಿಗೆ ಇದೊಂದೇ ಶಾಶ್ವತ ಪರಿಹಾರ. ಸಾಮಾಜಿಕ ನ್ಯಾಯದ ದಾರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳಷ್ಟು ಮುಂದೆ ಸಾಗಿ ಬಂದಿದ್ದಾರೆ, ಇನ್ನೊಂದು ದೃಢವಾದ ಹೆಜ್ಜೆ ಇಡಬೇಕಾಗಿದೆ. ಆ ರಾಜಕೀಯ ಇಚ್ಛಾಶಕ್ತಿಯನ್ನು ಅವರು ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.