ADVERTISEMENT

ನಿಜಕ್ಕೂ ಅನಾಥರು ಯಾರು?

ಎಲ್ಲ ಇದ್ದೂ ಏನೂ ಇಲ್ಲದಂತೆನಿಸುವ ‘ಅನಾಥ ಪ್ರಜ್ಞೆ’...

ಬಿ.ಎಂ.ಹನೀಫ್
Published 17 ಜೂನ್ 2020, 2:23 IST
Last Updated 17 ಜೂನ್ 2020, 2:23 IST
   

ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಆತ್ಮಹತ್ಯೆಯು ಬಾಲಿವುಡ್‌ನಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದೆ. ಸಿನಿಮಾ ಕುಟುಂಬದ ಹಿನ್ನೆಲೆಯಿಲ್ಲದ ಪ್ರತಿಭಾವಂತ ನಟ– ನಟಿಯರು ಬಾಲಿವುಡ್‌ನಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ ಎನ್ನುವ ಮಾತು ಹಿಂದಿನಿಂದಲೂ ಇದೆ. ‘ಇಲ್ಲಿ ಪಟ್ಟಭದ್ರರ ಕೂಟವಿದೆ. ಸಿನಿಮಾ ಕುಟುಂಬದ ಹಿನ್ನೆಲೆ ಇದ್ದರೆ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಹೊರಗಿನಿಂದ ಬಂದವರಾದರೆ, ನಿಮ್ಮಲ್ಲಿ ಎಷ್ಟೇ ಪ್ರತಿಭೆ ಇದ್ದರೂ ತುಳಿದು ಹೊರದಬ್ಬುವ ಪ್ರಯತ್ನ ನಡೆಯುತ್ತದೆ’ ಎನ್ನುವ ಮಾತುಗಳು ಸಾಮಾನ್ಯ. ಸುಶಾಂತ್ ಸಾವಿಗೂ ಇದೇ ಕಾರಣ ಎನ್ನಲಾಗುತ್ತಿದೆ.

‘ಎಷ್ಟೊಂದು ಸಿನಿಮಾಗಳಲ್ಲಿ ಆತ ಅತ್ಯುತ್ತಮ ಅಭಿನಯ ನೀಡಿದ್ದಾನೆ! ಯಾರೂ ಆತನಿಗೆ ಪ್ರಶಸ್ತಿ ಕೊಡಲಿಲ್ಲ. ಕುಹಕ ಮಾಡಿದವರೇ ಹೆಚ್ಚು. ಪಾರ್ಟಿಗಳಿಗೆ ಕರೆಯುತ್ತಿರಲಿಲ್ಲ. ಅಪರಿಚಿತನೆಂಬಂತೆ ಕಂಡರು. ಮನಸ್ಸು ಕುಗ್ಗದೆ ಇನ್ನೇನಾಗುತ್ತೆ? ಅನಾಥಪ್ರಜ್ಞೆ ಹುಟ್ಟದೆ ಇನ್ನೇನಾಗುತ್ತೆ?’ ಎಂದು ನಟಿ ಕಂಗನಾ ರನೌಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಶಾಂತ್‌ ಜೊತೆಗೆ ನಟಿಸಿದ್ದ ಶ್ರದ್ಧಾ ಕಪೂರ್‌ ಕೂಡಾ ಇದನ್ನೇ ಬೇರೆ ಮಾತುಗಳಲ್ಲಿ ಹೇಳಿದ್ದಾರೆ. ಸುಶಾಂತ್‌ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಕೆಲಸ ಮಾಡಿರಬಹುದಾದ ಈ ಅನಾಥಪ್ರಜ್ಞೆಯ ಬಗ್ಗೆ ‘ದೊಡ್ಡವರು’ ಯಾರೂ ತುಟಿ ಬಿಚ್ಚಿಲ್ಲ.

ಮುಂಬೈನಲ್ಲಿ ನೆಲೆಸಿದರೂ ಬಾಲಿವುಡ್‌ ಪ್ರವೇಶಿಸಲು ಸುಶಾಂತ್‌ ಬಹಳಷ್ಟು ಶ್ರಮಪಟ್ಟಿದ್ದುಂಟು. ಅವರಿಗೆ ಅಭಿನಯ ಗೊತ್ತಿತ್ತು, ಡ್ಯಾನ್ಸ್‌ ಮಾಡುತ್ತಿದ್ದರು, ಸ್ಫುರದ್ರೂಪಿ, ಬುದ್ಧಿವಂತ ಕೂಡ ಆಗಿದ್ದರು. ಎಂಜಿನಿಯರ್‌ ಆಗಿ ಬೇರೆಡೆ ನೆಮ್ಮದಿಯ ಕೆಲಸ ಹಿಡಿಯಬಹುದಿತ್ತು. ಆದರೆ ಕಲೆಯ ಸೆಳೆತ. ಚಿಚ್ಚೋರೆ, ಕಾಯ್‌ ಪೊ ಚೆ, ಎಂ.ಎಸ್‌.ಧೋನಿ..., ರಾಬ್ತಾ, ಕೇದಾರ್‌ನಾಥ್‌ ಮತ್ತಿತರ ಸಿನಿಮಾಗಳಲ್ಲಿ ಸುಶಾಂತ್‌ ಅಭಿನಯಅತ್ಯುತ್ತಮವಾಗಿತ್ತು. ಕೈಯಲ್ಲಿ ಇನ್ನೆರಡು ಸಿನಿಮಾಗಳಿದ್ದವು. ಹಣ, ಕೀರ್ತಿ, ಜನಪ್ರಿಯತೆ ಎಲ್ಲವೂ ಇತ್ತು. ಹುಟ್ಟಿ ಬೆಳೆದ ಪಟ್ನಾದಲ್ಲಿ ದೊಡ್ಡ ಕುಟುಂಬವಿತ್ತು. ಒಬ್ಬ ಸೋದರಿ ಮುಂಬೈಯಲ್ಲೇ ಇದ್ದರು.

ADVERTISEMENT

ನಿಕಟವಾಗಿದ್ದ ಸ್ನೇಹಿತೆ ಇದ್ದರು. ಅಷ್ಟಿದ್ದೂ 34ರ ಹರೆಯದಲ್ಲೇ ನೇಣು ಹಾಕಿಕೊಂಡು ಸಾಯುವಂತೆ ಆತನೊಳಗಿದ್ದ ಒಬ್ಬಂಟಿತನ ಏಕೆ ಪ್ರೇರೇಪಿಸಿತು? ಏನಿದು ಅನಾಥಪ್ರಜ್ಞೆ?

ಕಳೆದ ವರ್ಷದ ಕೊನೆಗೆ ತಮಿಳಿನಲ್ಲಿ ಬಂದ ‘ಕೆ.ಡಿ’ ಎನ್ನುವ ಸಿನಿಮಾ ನೆನಪಾಗುತ್ತಿದೆ. 80ರ ಇಳಿವಯಸ್ಸಿನ ಕರುಪ್ಪುದೊರೈ (ಕೆ.ಡಿ.) ಮೂರು ತಿಂಗಳಿಂದ ಮನೆಯ ಕೋಣೆಯೊಂದರಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿದ್ದಾನೆ. ಇದ್ದಕ್ಕಿದ್ದಂತೆ ಒಂದು ದಿನ ಎಚ್ಚರವಾದಾಗ ಹೊರಗೆ ಹೆತ್ತ ಮಕ್ಕಳ ಮಾತುಕತೆ ಕೇಳಿಸುತ್ತದೆ. ಅಪ್ಪನ ದಯಾಮರಣಕ್ಕೆ ವ್ಯವಸ್ಥೆ ಮಾಡುತ್ತಿದ್ದರು ಮಕ್ಕಳು! ಅದಕ್ಕೂ ಮುನ್ನ ಆಸ್ತಿಯ ಉಯಿಲಿಗೆ ಅಪ್ಪನ ಹೆಬ್ಬೆಟ್ಟು ಒತ್ತಲು ಸಂಚು ನಡೆಸಿದ್ದರು. ಸದ್ದಿಲ್ಲದೆ ಎದ್ದ ಕರುಪ್ಪುದೊರೈ ಹಿಂಬಾಗಿಲಿನಿಂದ ಮನೆಬಿಟ್ಟು ಪರಾರಿಯಾಗುತ್ತಾನೆ.

ಬಸ್ಸು, ಟೆಂಪೊಗಳನ್ನು ಹತ್ತಿ ಗುರಿಯಿಲ್ಲದೆ ಅಲೆದಾಡಿದ ಕರುಪ್ಪುದೊರೈಗೆ ದೇವಸ್ಥಾನದ ಜಗಲಿಯೊಂದರಲ್ಲಿ ವಾಸವಿದ್ದ ಎಂಟು ವರ್ಷದ ಅನಾಥ ಬಾಲಕ ಕುಟ್ಟಿ ಸಿಗುತ್ತಾನೆ. ತುಂಬು ಕುಟುಂಬ ಇದ್ದೂ ಅನಾಥನಾದ ವಯೋವೃದ್ಧ ಮತ್ತು ಹೆತ್ತವರು ಯಾರೆಂದೇ ಗೊತ್ತಿಲ್ಲದ ಪುಟ್ಟ ಬಾಲಕ.ಇಬ್ಬರ ಮಧ್ಯೆ ತಾತ– ಮೊಮ್ಮಗನ ಬಾಂಧವ್ಯ ಬೆಳೆಯುತ್ತದೆ. ಅದೊಂದು ಅನೂಹ್ಯ ಪಯಣ. ಅವರಿಬ್ಬರ ಮಧ್ಯೆ ಪ್ರೀತಿ, ಸಿಟ್ಟು, ಜಗಳ, ಮಮತೆ ಎಲ್ಲವೂ ಸಹಜವೆಂಬಂತೆ ಅರಳುತ್ತವೆ. ಈ ಪಯಣದ ಹಾದಿಯಲ್ಲಿ ಕರುಪ್ಪುದೊರೈಯ ಜೀವನದಲ್ಲಿ ಈಡೇರದ ಹತ್ತು ಬಯಕೆಗಳೂ ಬಯಲಾಗುತ್ತವೆ.

ಅದರಲ್ಲಿ ಒಂದು– ಬಾಲ್ಯದಲ್ಲಿ ಪ್ರೀತಿಸಿದ್ದ, ಆದರೆ ಬೇರೆ ಮದುವೆಯಾಗಿ ಊರುಬಿಟ್ಟ ಪ್ರಿಯತಮೆಯನ್ನು ನೋಡುವುದು! ಪ್ರತಿದಿನ ಮಟನ್ ಬಿರಿಯಾನಿ ತಿನ್ನುವುದು, ದೂರದ ಊರುಗಳ ಪ್ರವಾಸ, ಎಂಜಿಆರ್‌ನ ಸಿನಿಮಾ ಪಾತ್ರವೊಂದನ್ನು ವೇದಿಕೆಯ ಮೇಲೆ ನಿರ್ವಹಿಸುವುದು, ಬಾಲ್ಯದ ಗೆಳೆಯನೊಬ್ಬನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಜಾಲಿ ರೈಡ್‌ ಮಾಡುವುದು– ಇವು ಇನ್ನಿತರ ಬಯಕೆಗಳು. ಕಥೆ ನಿಸೂರಾಗಿ ಮುಂದಕ್ಕೆ ಹೋದಂತೆಯೇ ಆ ಬಾಲಕ ತಾತನ ಎಲ್ಲ ಆಸೆಗಳನ್ನೂ ಒಂದೊಂದಾಗಿ ಪೂರೈಸುತ್ತಾನೆ. ಈ ಮಧ್ಯೆ ಅಪ್ಪನನ್ನು ಹುಡುಕಿ ಕರೆತರಲು ಮಕ್ಕಳು ಪತ್ತೇದಾರನೊಬ್ಬನನ್ನು ಕಳುಹಿಸುತ್ತಾರೆ. ಆತ ಕರುಪ್ಪುದೊರೈಯ ಬಿರಿಯಾನಿ ಮೋಹ, ಕವಡೆಯಾಟದ ಗೀಳು ಮುಂತಾದ ಸುಳಿವುಗಳನ್ನು ಹುಡುಕುತ್ತಾ ಬರುತ್ತಾನೆ.

ಅನಾಥ ಬಾಲಕನನ್ನು ಚೆನ್ನೈನಲ್ಲಿನ ಉಚಿತ ಬೋರ್ಡಿಂಗ್‌ ಶಾಲೆಯೊಂದಕ್ಕೆ ಸೇರಿಸಲು ಮುಜರಾಯಿ ಅಧಿಕಾರಿಯೊಬ್ಬ ವ್ಯವಸ್ಥೆ ಮಾಡುತ್ತಾನೆ. ತಾತನಿಗೆ ಮೊಮ್ಮಗನನ್ನು ಬಿಡಲು ಮನಸ್ಸಿಲ್ಲ. ಕುಟ್ಟಿಯೂ ಹೋಗುವುದಿಲ್ಲವೆಂದು ಹಟ ಹಿಡಿಯುತ್ತಾನೆ. ಬಾಲಕನ
ಭವಿಷ್ಯದ ಹಿನ್ನೆಲೆಯಲ್ಲಿ ಕೊನೆಗೆ ತಾತನೇ ಕುಟ್ಟಿಯ ಮನವೊಲಿಸಿ ರೈಲು ಹತ್ತಿಸುತ್ತಾನೆ. ಅಷ್ಟು ಹೊತ್ತಿಗೆ ಪತ್ತೇದಾರನು ಕರುಪ್ಪು ದೊರೈಯ ಬಳಿಬಂದು ನಿಲ್ಲುತ್ತಾನೆ. ‘ಸರಿ ಹೊರಡೋಣ’ ಎಂದು ಕರುಪ್ಪು ದೊರೈಯೂ ಮನೆಗೆ ಮರಳುತ್ತಾನೆ.

ಮನೆಯಲ್ಲಿ ಎಲ್ಲ ಮಕ್ಕಳೂ ಮಮತೆ ತೋರುವವರೇ. ‘ಎಲ್ಲಿದ್ದೆ ಅಪ್ಪಾ, ನಿನ್ನನ್ನು ಎಷ್ಟೊಂದು ಹುಡುಕಿಸಿದೆವು...’ ಎನ್ನುವ ಅಳುಮೋರೆ! ಕರುಪ್ಪುದೊರೈ ಮಾತನಾಡುವುದಿಲ್ಲ. ‘ಎಲ್ಲಿ, ಉಯಿಲುಪತ್ರ ತನ್ನಿ’ ಎನ್ನುತ್ತಾನೆ. ಮಕ್ಕಳೆಲ್ಲ ಅಚ್ಚರಿಯಿಂದ ನೋಡುತ್ತಿರುವಂತೆಯೇ ಸಹಿ ಹಾಕುತ್ತಾನೆ (ಆತನಿಗೆ ಸಹಿ ಹಾಕುವುದನ್ನೂ ಕುಟ್ಟಿ ಕಲಿಸಿದ್ದ!). ಕೋಣೆಗೆ ಹೋಗಿ ಮಲಗಿಬಿಡುತ್ತಾನೆ. ಮಕ್ಕಳು ಮತ್ತೆ ಸದ್ದಿಲ್ಲದೇ ಅಪ್ಪನ ದಯಾಮರಣಕ್ಕೆ ಸಿದ್ಧತೆ ನಡೆಸುತ್ತಾರೆ. ಎಲ್ಲ ಸಿದ್ಧತೆ ಮುಗಿದು ಕೋಣೆಗೆ ಬಂದು ನೋಡಿದರೆ ಅಪ್ಪ ಮತ್ತೆ ಪರಾರಿಯಾಗಿದ್ದಾನೆ!

ನಿರ್ದೇಶಕಿ ಮಧುಮಿತಾ ಕಥೆ ಬರೆದು ಸಿನಿಮಾವನ್ನು ಎಷ್ಟು ಹೃದಯಂಗಮವಾಗಿ ಚಿತ್ರಿಸಿದ್ದಾರೆಂದರೆ, ಮಕ್ಕಳು ಮತ್ತು ವೃದ್ಧರನ್ನು ಸರಿಯಾಗಿ ನೋಡಿಕೊಳ್ಳ ಲಾಗದ ಅನಾಥ ಜಗತ್ತಿನ ಹೃದಯಹೀನತೆಯನ್ನೂ ಅದು ತೆರೆದಿಡುತ್ತದೆ. ಕರುಪ್ಪುದೊರೈ ಪಾತ್ರದಲ್ಲಿ ಮು.ರಾಮಸ್ವಾಮಿ ಮತ್ತು ಕುಟ್ಟಿಯ ಪಾತ್ರದಲ್ಲಿ ನಾಗವಿಶಾಲ್‌ ನಟನೆ ಅದ್ಭುತವೇ. ಯುಕೆ ಏಷ್ಯನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಿರ್ದೇಶನದ ಪ್ರಶಸ್ತಿ ಮತ್ತು ಜಾಗರಣ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟ (ಕುಟ್ಟಿ) ಪ್ರಶಸ್ತಿಯನ್ನು ಸಿನಿಮಾ ಗೆದ್ದುಕೊಂಡಿದೆ.

ಎಲ್ಲ ಇದ್ದೂ ಏನೂ ಇಲ್ಲದ ಈ ‘ಅನಾಥ ಪ್ರಜ್ಞೆ’ಗೆ ಏನನ್ನುವುದು? ಬಾಲಿವುಡ್‌ನಲ್ಲಿ ಹೀಗೆ ಖ್ಯಾತನಾಮರೊಬ್ಬರು ಮೊದಲು ಆತ್ಮಹತ್ಯೆಗೆ ಶರಣಾದದ್ದು 1964ರಲ್ಲಿ; ಆತ ‘ಪ್ಯಾಸಾ’ ಚಿತ್ರದ ಸೂಪರ್‌ಸ್ಟಾರ್‌ ಗುರುದತ್‌. ನಮ್ಮ ಪಡುಕೋಣೆಯವರು. ಏಷ್ಯಾದ 25 ಅತ್ಯುತ್ತಮ ನಟರ ಪಟ್ಟಿಯಲ್ಲಿ ಹೆಸರಿದ್ದವರು. ಬಳಿಕ ತಮಿಳಿನ ಸಿಲ್ಕ್‌ ಸ್ಮಿತಾ, ಮೋನಲ್‌ ನವಲ್‌, ಮಯೂರಿ, ಸಾಯಿ ಪ್ರಶಾಂತ್‌, ಮಲಯಾಳಂನ ಸಂತೋಷ್‌ ಜೋಗಿ, ಶ್ರೀನಾಥ್‌, ತೆಲುಗಿನ ರಂಗನಾಥ್‌, ಹಿಂದಿಯ ಜಿಯಾ ಖಾನ್‌, ಶಿಖಾ ಜೋಶಿ, ಪ್ರತ್ಯೂಷಾ ಬ್ಯಾನರ್ಜಿ (ಬಾಲಿಕಾ ವಧು) ಮುಂತಾದವರೂ ಆತ್ಮಹತ್ಯೆಯ ಹಾದಿ ಹಿಡಿದವರೇ.

ಕರುಪ್ಪುದೊರೈಯಂತೆಯೇ ಸುಶಾಂತ್‌ ಅವರಿಗೂ ‘ಆಸೆಗಳ ಪಟ್ಟಿ’ (bucket list) ಇತ್ತು. ಆತ ತನ್ನ‘ಬಕೆಟ್‌ ಲಿಸ್ಟ್‌’ ಅನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ದೂರದೂರದ ಸ್ಥಳಗಳ ಪ್ರವಾಸ, ನೀಲ ದಿಗಂತದ ವರ್ಣಚಿತ್ರಗಳ ರಚನೆ, ಪುಸ್ತಕ ಬರೆಯುವುದು, ನೆಚ್ಚಿನ ನಟ ರಾಬರ್ಟ್‌ಡೌನೀ ಜೂನಿಯರ್‌ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಮುಂತಾದ ಆಸೆಗಳಿದ್ದವು! ಆತನ ಬಳಿ 14 ಇಂಚಿನ ಎಲ್‌ಎಕ್ಸ್‌600 ಟೆಲಿಸ್ಕೋಪ್‌ ಇತ್ತು. ಬಿಡುವಿನ ವೇಳೆಯಲ್ಲಿ ಸದಾ ಆಕಾಶದ ತಾರೆಗಳನ್ನು ನೋಡುತ್ತಿದ್ದರು. ಕೊನೆಗೂ ಉಲ್ಕೆಯಂತೆ ಉರಿದುಹೋದರು.

ಅಂದಹಾಗೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆಗ್ನೇಯ ಏಷ್ಯಾದಲ್ಲಿ ಅತ್ಯಧಿಕ ಆತ್ಮಹತ್ಯೆಗಳು ನಡೆಯುತ್ತಿರುವುದು ಭಾರತದಲ್ಲೇ. ನಮ್ಮಲ್ಲಿ ಆತ್ಮಹತ್ಯೆಯ ಸರಾಸರಿ ದರ ಒಂದು ಲಕ್ಷಕ್ಕೆ 16.5.

ಬಿ.ಎಂ.ಹನೀಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.