ADVERTISEMENT

ವಿಶ್ಲೇಷಣೆ | ಉದುರಿ ಬೀಳುತ್ತಿರುವ ನಕ್ಷತ್ರ

ಯೋಗೇಂದ್ರ ಯಾದವ್
Published 9 ಸೆಪ್ಟೆಂಬರ್ 2025, 0:35 IST
Last Updated 9 ಸೆಪ್ಟೆಂಬರ್ 2025, 0:35 IST
   

ಭಿವಾಂಡಿಯಲ್ಲಿ 2020ರ ಜನವರಿಯಲ್ಲಿ ಅನಾವರಣಗೊಂಡಿದ್ದ ನಕ್ಷತ್ರಗಳ ಹೊಳಪಿನ ಸಂಜೆ ನೆನಪಾಗುತ್ತಿದೆ. ಆ ದಿನ ಕ್ರೀಡಾಂಗಣದಲ್ಲಿ ತುಂಬಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರ ಎದುರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ತರ್ಕಬದ್ಧವೂ ಆವೇಶಭರಿತವೂ ಆದ ಮಾತುಗಳಿಂದ ಉಮರ್ ಖಾಲಿದ್ ನಮ್ಮನ್ನು ಪುಳಕಿತರನ್ನಾಗಿಸಿದ್ದರು. ‘ಇಂಕಿಲಾಬಿ ಇಸ್ತಕ್‌ಬಾಲ್’ (ಕ್ರಾಂತಿಕಾರಿ ಸ್ವಾಗತ) ಎಂದು ಮಾತು ಪ್ರಾರಂಭಿಸಿ, ಭಗತ್‌ಸಿಂಗ್, ಅಂಬೇಡ್ಕರ್‌, ಗಾಂಧೀಜಿ ಎಲ್ಲರ ಮಾದರಿಗಳನ್ನು ಆವಾಹಿಸಿಕೊಂಡು ‘ಸಿಎಎ’ ವಿರುದ್ಧ ಅಹಿಂಸಾ ಹೋರಾಟಕ್ಕೆ ಕರೆ ಇತ್ತರು. ಮುಸ್ಲಿಮರನ್ನು ‘ಸಿಎಎ’ ಹೇಗೆ ಎರಡನೇ ಮೆಟ್ಟಿಲಿನ ಮೇಲೆ ತಂದು ಕೂರಿಸುತ್ತದೆ ಎಂದೂ ವಿಶ್ಲೇಷಿಸಿದರು.

ತಮ್ಮ ಭಾಷಣದ ಕೊನೆಯಲ್ಲಿ ಉಮರ್ ಅಲ್ಲಿದ್ದ ಎಲ್ಲರಿಗೂ ತಂತಮ್ಮ ಮೊಬೈಲ್ ಫೋನ್‌ಗಳ ಟಾರ್ಚ್ ಬೆಳಗುವಂತೆ ಕರೆ ಕೊಟ್ಟು, ‘ಆಜಾದಿ’ ಪಠಣಕ್ಕೆ ತಮ್ಮೊಡನೆ ದನಿಗೂಡಿಸುವಂತೆ ಕೇಳಿಕೊಂಡರು. ‘ನಾವು ಕೇಳಿದ್ದೇನು... ಸ್ವಾತಂತ್ರ್ಯ... ಸಿಎಎಯಿಂದ ಸ್ವಾತಂತ್ರ್ಯ... ಹಸಿವಿನಿಂದ ಹೊರಬರಲು ಸ್ವಾತಂತ್ರ್ಯ... ಅಂಬೇಡ್ಕರ್‌ ಮಾದರಿಯ ಸ್ವಾತಂತ್ರ್ಯ’ ಎಂದು ಲಯಬದ್ಧವಾಗಿ ಪಠಿಸಿದರು. ಸ್ವಾತಂತ್ರ್ಯ ಬೇಡಿಕೆಯ ಆ ಸಾಲುಗಳು ಆ ದಿನ ಕ್ರೀಡಾಂಗಣದಲ್ಲಿ ಅನುರಣಿಸಿದವು. ಎಲ್ಲರೂ ಉಮರ್‌ ಜೊತೆ ದನಿಗೂಡಿಸಿದರು. ಆ ಸ್ವಾತಂತ್ರ್ಯವು ಯಾರಿಂದಲೋ ಅಥವಾ ಯಾವುದರಿಂದಲೋ ಪಡೆಯುವುದು ಆಗಿರಲಿಲ್ಲ. ಸಮಾನ ನಾಗರಿಕ ಪ್ರಜ್ಞೆ ಮೂಡಿಸುವ ಸ್ವಾತಂತ್ರ್ಯಕ್ಕಾಗಿ ಆಗ್ರಹ ಅದಾಗಿತ್ತು. ಎಲ್ಲರೊಳಗೊಂದಾಗುವ ಸ್ವಾತಂತ್ರ್ಯ ಅದು; ಸಮಾನತೆಗಾಗಿ ಒತ್ತಾಯಿಸುವ ಸ್ವಾತಂತ್ರ್ಯ. ಆ ಸಂದರ್ಭವನ್ನು ನಾನು ಎಂದಿಗೂ ಮರೆಯಲಾರೆ. ಕಗ್ಗತ್ತಲಲ್ಲಿ ತಾರೆಗಳು ಹಿಂಡುಹಿಂಡಾಗಿ ಇದ್ದಂತೆ ನನಗೆ ಭಾಸವಾಗಿತ್ತು. ಆ ತಾರೆಗಳ ನಡುವೆ ಭಾರತಕ್ಕೆ ಅಗತ್ಯವಿರುವಂತಹ ನಾಯಕ, ಮುಸ್ಲಿಮರು ಕಾಯುತ್ತಿದ್ದ ನಾಯಕ ಇದ್ದಾನೆ ಎಂದೇ ಅನಿಸಿತ್ತು.

ದೆಹಲಿಯಲ್ಲಿ ನಡೆದ ಗಲಭೆಗಳ ಪಿತೂರಿಯ ಆರೋಪದಲ್ಲಿ ಬಂಧನದಲ್ಲಿರುವ ಉಮರ್‌ ಖಾಲಿದ್‌ಗೆ ದೆಹಲಿ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ. ದೆಹಲಿ ಹೈಕೋರ್ಟ್‌ನ ಚಿತ್ರಹಿಂಸಾ ಸ್ವರೂಪದ ವಾದಗಳನ್ನು ಸೂಕ್ಷ್ಮವಾಗಿ ದಣಿದ ಮನಸ್ಸಿನಿಂದ ಗಮನಿಸಿದಾಗ, ಭಿವಾಂಡಿಯಲ್ಲಿ ಕಂಡ ಆ ತಾರೆಗಳು ಒಂದೊಂದಾಗಿ ಉದುರಿ ಬೀಳುತ್ತಿರುವಂತೆ ಭಾಸವಾಯಿತು. ಸಾಂತ್ವನಕ್ಕಾಗಿ ನಾನು ಮತ್ತೆ ಆಮೀರ್‌ ಅಜೀಜ್ ಸಾಲುಗಳನ್ನು ತಿರುವಿ ಹಾಕಿದೆ: ‘ನೀನು ಕತ್ತಲನ್ನು ಬರೆದರೆ ನಾವು ಚಂದ್ರನನ್ನು ಬರೆಯುವೆವು/ ನೀನು ಜೈಲಿಗೆ ತಳ್ಳಿದರೆ ನಾವು ಗೋಡೆ ಕಿತ್ತು ಬರುವಂತೆ ಬರೆಯುವೆವು’. ಆ ಚಂದ್ರನನ್ನು ಕಣ್ತುಂಬಿಕೊಳ್ಳಲು ನಾನು ಕಾಯುತ್ತಿರುವೆ. ಇತಿಹಾಸವು ಈ 133 ಪುಟಗಳ ತೀರ್ಪನ್ನು ಹೇಗಾದರೂ ನೆನಪಿಟ್ಟುಕೊಂಡೀತು ಎಂಬ ಸಖೇದಾಶ್ಚರ್ಯ ನನ್ನದು. ಕಾನೂನು ಪರಿಣತ ಗೌತಮ್ ಭಾಟಿಯಾ ಅವರ ಬ್ಲಾಗ್‌ನಲ್ಲಿನ ಪೋಸ್ಟ್‌ಗಳು (ಇಂಡಿಯನ್‌ ಕಾನ್‌ಸ್ಟಿಟ್ಯೂಷನಲ್ ಲಾ ಅಂಡ್ ಫಿಲಾಸಫಿ) ಈ ಅಸಾಮಾನ್ಯವಾದ ಪ್ರಕರಣದ ವಿಚಾರಣೆಯ ಪಥವನ್ನು ಬಗೆದು ನೋಡಿವೆ. ‘ಕಣ್ಮುಚ್ಚಿದ’ ಧೋರಣೆಯಲ್ಲಿ ‘ಕಾನೂನು ಕ್ರಮ ಜರುಗಿಸಲೆಂದೇ ಸ್ಟೆನೊಗ್ರಾಫರ್’ ಆಗುವ ಕ್ರಮವಿದು ಎಂದು ಭಾಟಿಯಾ ವಿಶ್ಲೇಷಿಸಿದ್ದಾರೆ. ಈಗಿನ ತೀರ್ಪಿನ ಅಚ್ಚರಿಯ ತರ್ಕವೊಂದನ್ನು ಅವರು ಹೀಗೆ ವಿವರಿಸಿದ್ದಾರೆ: ‘ಪಿತೂರಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಹೇಳುವ ಮಾಸ್ಕೊ ವಿಚಾರಣಾ ಶೈಲಿಯನ್ನು ಕೋರ್ಟ್ ತನ್ನದಾಗಿಸಿಕೊಂಡಿದೆ. ಸಂರಕ್ಷಿಸಲಾದ ಸಾಕ್ಷಿಯೊಬ್ಬ ನೀಡಿದ ಅಸ್ಪಷ್ಟವೂ ದೃಢೀಕೃತವೂ ಅಲ್ಲದ ಹೇಳಿಕೆ ಆಧರಿಸಿ, ತನ್ನದೇ ಕಾಲ್ಪನಿಕ ತೀರ್ಮಾನಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೇರಿದೆ’. ಈ ತೀರ್ಪಿನ ಕುರಿತು ಬೇರೇನನ್ನೂ ಹೇಳುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್‌ನ ಕುಖ್ಯಾತ ಎಡಿಎಂ ಜಬಲ್‌ಪುರ ಪ್ರಕರಣಕ್ಕೆ ಸಂಬಂಧಿಸಿದ, ನ್ಯಾಯದಾನ ಹೇಗಿರಬಾರದು ಎನ್ನುವುದಕ್ಕೆ ಕನ್ನಡಿ ಹಿಡಿಯುವ, ಆದೇಶದ ಪಠ್ಯ ಸ್ವರೂಪಿ ಉದಾಹರಣೆಯ ಪಕ್ಕದಲ್ಲಿ ಇದನ್ನೂ ಇರಿಸಬೇಕಷ್ಟೆ.

ADVERTISEMENT

ಮುಂದೊಂದು ದಿನ, ಇತಿಹಾಸಕಾರರೊಬ್ಬರು ದೆಹಲಿ ಗಲಭೆಯ ಪಿತೂರಿ ಸಿದ್ಧಾಂತವನ್ನು ದಾಖಲಿಸ ಬಹುದು. ಆಗ ಸಂತ್ರಸ್ತರನ್ನು ಅಪರಾಧಿಗಳಾಗಿಸುವ, ಪ್ರತಿಭಟನಕಾರರನ್ನು ಸಂಚುಕೋರರನ್ನಾಗಿಸುವ; ಸಿ–ಗ್ರೇಡ್‌ ಚಿತ್ರಕತೆಯಂತಹ, ವಿಶ್ವಾಸಾರ್ಹತೆಯೇ ಇಲ್ಲದ ಅಸಂಬದ್ಧ ಪ್ರಕರಣ ಎಂದು ಬರೆದಾರು. 2018ರಿಂದ ದಿನದ 24 ಗಂಟೆ ಪೊಲೀಸರ ಕಣ್ಗಾವಲಿನಲ್ಲೇ ಇರುವ ಹಾಗೂ ಸದಾ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮೆರಾ ಕಣ್ಣು ತಮ್ಮ ಮೇಲೆ ನೆಟ್ಟಿದೆ ಎಂದು ತಿಳಿದಿರುವ ಉಮರ್‌ ಖಾಲಿದ್ ಅವರಂತಹವರು ದೆಹಲಿ ಗಲಭೆಯ ಪಿತೂರಿ ಮಾಡುತ್ತಾರೆ ಎಂದು ಭಾವಿಸುವುದಕ್ಕೆ ದೊಡ್ಡ ಕಲ್ಪನಾಶಕ್ತಿ ಬೇಕಾಗುತ್ತದೆ. ಅದರಲ್ಲೂ 100ಕ್ಕೂ ಹೆಚ್ಚು ಸದಸ್ಯರಿರುವ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಈ ಮುಸ್ಲಿಂ ಹೋರಾಟಗಾರರು ಹಿಂಸಾಕೃತ್ಯ ರೂಪಿಸಿ, ಅದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಮರೇ ಕೊಲ್ಲಲ್ಪಡುತ್ತಾರೆ ಎನ್ನುವ ಸಂಕಥನಕ್ಕೆ ಏನನ್ನಬೇಕು?

ಈ ಪ್ರಕರಣದ ಇಬ್ಬರು ಆರೋಪಿಗಳನ್ನು ನಾನು ಬಲ್ಲೆ ಹಾಗೂ ಸಿಎಎ ವಿರೋಧಿ ಹೋರಾಟದಲ್ಲಿ ಅವರೊಟ್ಟಿಗೆ ಕೆಲಸ ಮಾಡಿರುವೆ. ಉಮರ್‌ ಖಾಲಿದ್ ಅವರನ್ನು ಬಲ್ಲವರು, ಗಮನಿಸಿದವರು ಹಾಗೂ ಅವರ ಬಗ್ಗೆ ಕೇಳಿದ ಯಾರೇ ಆಗಲಿ, ಅವರು ಕೋಮುದಳ್ಳುರಿ ಹಚ್ಚುವವರ ಪೈಕಿ ಎಂದು ಒಪ್ಪಲಾರರು. 2020ರ ಜನವರಿ ಹಾಗೂ ಫೆಬ್ರುವರಿಯಲ್ಲಿ ಅವರು ದೆಹಲಿಯಿಂದ ಹೊರಗೇ ಇದ್ದರು. ಆ ಸಂದರ್ಭದಲ್ಲೇ ದೆಹಲಿಯಲ್ಲಿ ಪ್ರತಿಭಟನೆ ನಡೆದದ್ದು. ಅದೇ ರೀತಿ, ಖಾಲಿದ್ ಸೈಫಿ ಕೂಡ ಪೂರ್ವ ದೆಹಲಿಯಲ್ಲಿ ಹಿಂದೂ–ಮುಸ್ಲಿಮರ ನಡುವೆ ಜನಪ್ರಿಯರು. ಎಂತಹ ಸವಾಲು ಎದುರಾದರೂ ಸಂಘರ್ಷವು ಹಿಂಸೆಗೆ ತಿರುಗಬಾರದು ಎಂದೇ ಪ್ರತಿಪಾದಿಸುತ್ತಿದ್ದರು. ಅವರಿಬ್ಬರು ದೂರದಿಂದಲೇ ಯಾವುದೋ ಕೋಮುಸಂಘರ್ಷಕ್ಕೆ ಇಂಬುಗೊಡು ತ್ತಾರೆ ಎನ್ನುವುದನ್ನು ನಾನಂತೂ ಒಪ್ಪುವುದಿಲ್ಲ.

ಸಿಎಎ ಮುಸ್ಲಿಂ ವಿರೋಧಿ ಎಂದು ಹೇಳಿದ್ದಕ್ಕಾಗಿ ಉಮರ್ ಜೈಲಿನಲ್ಲಿ ಇದ್ದಾರೆ ಎಂದಾದರೆ, ನಾನೂ ಜೈಲು ಸೇರಬೇಕಿತ್ತು. ಸಿಎಎ ವಿರೋಧಕ್ಕೆ ಸ್ಥಳೀಯ ಪ್ರತಿಭಟನೆ ಸಂಘಟಿಸಿದ ಕಾರಣಕ್ಕೆ ಖಾಲಿದ್ ಜೈಲಿನಲ್ಲಿ ಇದ್ದಾರೆ ಎಂದಾದರೆ, ನನಗೂ ಅದೇ ಗತಿ ಬರಬೇಕಿತ್ತು. ದೆಹಲಿ ಪೊಲೀಸರ ಆರೋಪಪಟ್ಟಿಯಲ್ಲಿ ನನ್ನನ್ನು ಪ್ರಮುಖ ಸಂಚುಕೋರರಲ್ಲಿ ಒಬ್ಬ ಎಂದು ನಮೂದಿಸಲಾಗಿದೆ ಹಾಗೂ ಮೊಗ್ಯಾಂಬೊ ಶೈಲಿಯ ಕೆಲವು ಮಾತನ್ನು ನಾನು ಆಡಿದ್ದೇನೆ ಎಂದು ಆರೋಪಿಸಲಾಗಿದೆ. ದೆಹಲಿ ಪೊಲೀಸರು ಸಂಚಿನ ಕುರಿತು ಹೊಸೆದಿರುವ ಸಿದ್ಧಾಂತವನ್ನು ಗಂಭೀರವಾಗಿ ಪರಿಗಣಿಸಿದ್ದಿದ್ದರೆ, ನನ್ನ ವಿರುದ್ಧ ಯಾಕೆ ಕ್ರಮ ಜರುಗಿಸಲಿಲ್ಲ ಹಾಗೂ ಐದು ವರ್ಷಗಳಲ್ಲಿ ಒಮ್ಮೆಯಾದರೂ ಯಾಕೆ ನನ್ನನ್ನು ವಿಚಾರಣೆಗೆ ಕರೆಯಲಿಲ್ಲ ಎಂದು ನ್ಯಾಯಮೂರ್ತಿಗಳು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬಹುದಿತ್ತು.

ಲಭ್ಯ ಪಠ್ಯಕ್ಕಿಂತ ಹೆಚ್ಚಾಗಿ ಈ ಪ್ರಕರಣದಲ್ಲಿನ ಕುತೂಹಲಕಾರಿಯಾದ ಕಾಕತಾಳೀಯ ಸರಣಿ ವಿದ್ಯಮಾನಗಳನ್ನು ಇತಿಹಾಸ ನೆನಪಿಟ್ಟುಕೊಳ್ಳಬಹುದು. ಒಂದೇ ವಾರದಲ್ಲಿ ನಿರ್ಧರಿಸಬಹುದಾಗಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ತಿಂಗಳುಗಟ್ಟಲೆ ಹಿಗ್ಗಿಸಲಾಯಿತು, ಒಂದು ಬಾರಿಯಷ್ಟೇ ಅಲ್ಲ; ಮೂರು ಬಾರಿ. ಒಬ್ಬರಾದ ಮೇಲೆ ಒಬ್ಬರಂತೆ ಇಬ್ಬರು ನ್ಯಾಯಮೂರ್ತಿಗಳು ವಾದ–ಪ್ರತಿವಾದ ಆಲಿಸಿದ ನಂತರವೂ ತೀರ್ಪು ಕಾಯ್ದಿರಿಸಿ ಕುಳಿತರು. ಆ ಇಬ್ಬರಿಗೂ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಿ, ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲಾಯಿತು. ಅಷ್ಟು ಹೊತ್ತಿಗೆ ಈ ಪ್ರಕರಣದ ಕುರಿತು ಅವರು ತೀರ್ಪನ್ನು ಪ್ರಕಟಿಸಿರಲಿಲ್ಲ. ವಿಚಾರಣೆ ಮುಗಿದು ಎರಡು ತಿಂಗಳ ನಂತರ ತೀರ್ಪು ಪ್ರಕಟಿಸಲಾಯಿತು. ಅದೂ ನ್ಯಾಯಮೂರ್ತಿ ಶೈಲೇಂದ್ರ ಕೌರ್ ಅವರು ನಿವೃತ್ತರಾಗುವ ಮೂರು ದಿನ ಮೊದಲು.

ಉಮರ್ ಖಾಲಿದ್ ಭಾಷಣದಲ್ಲಿ ಜನಾಂಗೀಯ ದ್ವೇಷ ಹರಡುವ ಅಂಶಗಳು ಯಾವ್ಯಾವುದಿವೆ ಎಂದು ಹೆಕ್ಕಲು ನ್ಯಾಯಮೂರ್ತಿಗಳು ಯತ್ನಿಸುತ್ತಿರುವಾಲೇ ರಾಗಿಣಿ ತಿವಾರಿ, ಪ್ರದೀಪ್ ಸಿಂಗ್, ಯತಿ ನರಸಿಂಹಾನಂದ ಹಾಗೂ ಮಾನ್ಯ ಸಚಿವರಾದ ಕಪಿಲ್ ಮಿಶ್ರ ಮತ್ತು ಅನುರಾಗ್ ಠಾಕೂರ್ ಮಾಡಿದ ದ್ವೇಷ ಭಾಷಣಗಳೂ ಇತಿಹಾಸದಲ್ಲಿ ದಾಖಲಾಗುತ್ತವೆ. ಆ ಭಾಷಣಗಳ ವಿಡಿಯೊಗಳಲ್ಲಿನ ಅಂಶಗಳು ನ್ಯಾಯಮೂರ್ತಿಗಳ ಕಣ್ಣಿಗೆ ಬೀಳುವುದೇ ಇಲ್ಲ. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಗುರ್ಮೀತ್ ರಾಮ್ ರಹೀಂ ಕಳೆದ 8 ವರ್ಷಗಳಲ್ಲಿ 14 ಸಲ ಜೈಲಿನಿಂದ ಹೊರಬಂದಿರುವ ನಮ್ಮ ದೇಶದಲ್ಲಿ ಹೋರಾಟಗಾರರಿಗೆ 5 ವರ್ಷ ಜಾಮೀನನ್ನು ನಿರಾಕರಿಸಲಾಗುತ್ತಿದೆ. ಇದೂ ಇತಿಹಾಸದಲ್ಲಿ ದಾಖಲಾಗುತ್ತದೆ.

ಅಂತಿಮವಾಗಿ, ಒಂದು ಅಡಿ ಟಿಪ್ಪಣಿ. ಐದು ವರ್ಷಗಳಿಗೂ ಹೆಚ್ಚು ಅವಧಿ ಜೈಲಿನಲ್ಲಿರುವ ಆರೋಪಿಗಳು ಹಾಕಿರುವ ಅರ್ಜಿಗಳ ವಿಚಾರಣೆಗೆ ಬಸವನಹುಳುವಿನ ವೇಗ. ಆರೋಪಕ್ಕೆ ಸಂಬಂಧಿಸಿದ ವಿಚಾರಣೆಯು ಇನ್ನೂ ಪ್ರಾರಂಭವಾಗಬೇಕಿದ್ದು, ಮುಗಿಯಲು ಹತ್ತು ವರ್ಷಗಳಾದರೂ ಆಗಬಹುದು. ಪ್ರಕರಣ ಮುಂದುವರಿದಿದೆ ಎನ್ನುವುದನ್ನು ತೀರ್ಪು ಖಾತರಿಪಡಿಸುತ್ತದೆ. ವಿಚಾರಣೆಯ ವೇಗವು ಸಹಜವಾಗಿಯೇ ಇದೆ ಎಂದೂ ನಂಬಿಸುತ್ತದೆ. ಅಷ್ಟೇ ಅಲ್ಲ, ‘ಧಾವಂತದಲ್ಲಿ ವಿಚಾರಣೆ ನಡೆಸುವುದು ಮೇಲ್ಮನವಿದಾರರು ಹಾಗೂ ಸರ್ಕಾರ ಎರಡಕ್ಕೂ ಹಾನಿಕರ’ ಎನ್ನುವ ಕರುಣೆಯ ಖಾತರಿಯನ್ನೂ ತೀರ್ಪು ನೀಡುತ್ತದೆ.

ಕವಿ ಹೃದಯವು ಇಲ್ಲಿ ಅರ್ಥಪೂರ್ಣ: ನೀನು ನ್ಯಾಯಾಲಯಗಳಿಂದ ಚುಟುಕುಗಳನ್ನು ಬರೆಸು/ ನಾವು ಬೀದಿಗಳಲ್ಲಿ, ಗೋಡೆಗಳ ಮೇಲೆ ನ್ಯಾಯದ ಸಾಲುಗಳನ್ನು ಬರೆಯುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.