ADVERTISEMENT

ಸ್ನೇಹವೇ ಶೌರ್ಯವೆಂಬ ಹೆಣ್ಣುನಡೆಯ ದಾರಿ: ಪ್ರಾಧ್ಯಾಪಕಿ ಸಬಿತಾ ಬನ್ನಾಡಿ ಅವರ ಲೇಖನ

ಕೋಟೆಗಳಳಿಯಲಿ, ಬಯಲ ಹೆದ್ದಾರಿಯಲಿ ಭಯವಿರದೆ ಪಯಣ ಸಾಗಲಿ

ಸಬಿತಾ ಬನ್ನಾಡಿ
Published 7 ಮಾರ್ಚ್ 2022, 21:11 IST
Last Updated 7 ಮಾರ್ಚ್ 2022, 21:11 IST
   

‘ನಾನು ನಿಮ್ಮನ್ನು ಕಚ್ಚುವುದಿಲ್ಲ, ನಿಮಗೆ ಭಯವಾಗುತ್ತದೆಯೇ’ ಎಂದಿದ್ದು, ಯುದ್ಧದ ದಾಳಿಯ ನಡುವೆಯೇ ತಾನೇ ಶಸ್ತ್ರ ಹಿಡಿದು ಒಬ್ಬಂಟಿಯಾಗಿ ಹೋರಾಡಲು ಬೀದಿಗಿಳಿದ ಸಂತ್ರಸ್ತ ದೇಶದ ಅಧ್ಯಕ್ಷ ಎಂಬುದು ಮಹತ್ವದ ಸಂಗತಿ. ಆತನ ಮಾತಿಗೆ ನೂರು ಮತಾಪುಗಳ ಶಕ್ತಿ ಇರುತ್ತದೆ. ಮಾತುಕತೆಯ ಸಂದರ್ಭದಲ್ಲಿ ಮೂವತ್ತು ಅಡಿ ಉದ್ದದ ಟೇಬಲ್‍ನ ಒಂದು ತುದಿಯಲ್ಲಿ ಕುಳಿತುಕೊಳ್ಳುವ ಪುಟಿನ್ ಬಗ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಈ ವ್ಯಂಗ್ಯ ಕೇವಲ ಮಾತಲ್ಲ.

ದೊಡ್ಡ ದೇಶ ಆನೆಯಂಥಾ ರಷ್ಯಾ, ಆಡಿನಂಥಾ ಉಕ್ರೇನ್‍ನ ಮೇಲೆ ದಾಳಿ ಮಾಡಿದ್ದು, ಭೂಮಿ ಗೆದ್ದರೂ, ಮಾನ ಸೋತಿದ್ದನ್ನು ಈ ಶತಮಾನದ ಪಾಠವಾಗಿ ಜಗತ್ತು ನೋಡಬೇಕಿದೆ. ಈ ಶತಮಾನದಲ್ಲಿ ದೊಡ್ಡ, ಮುಂದುವರಿದ ದೇಶಗಳ ನಾಯಕರುಗಳು ಮಾನಕ್ಕಿಂತಲೂ, ಸುಳ್ಳಾದರೂ ಸರಿ, ಸಮ್ಮಾನವೇ ದೊಡ್ಡದು ಎಂಬಂತೆ ನಡೆದುಕೊಂಡು, ಜನರನ್ನೂ ಭ್ರಷ್ಟರನ್ನಾಗಿಸುವಲ್ಲಿ ದಾಪುಗಾಲು ಹಾಕುತ್ತಿರುವಾಗ, ಉಕ್ರೇನ್ ಪ್ರಾಣಕ್ಕಿಂತಲೂ ಮಾನವೇ ಹಿರಿದು, ಸತ್ಯದ ದಾರಿಯಲ್ಲೇ ನಡೆಯುತ್ತೇವೆ ಎಂದು ಇಡೀ ದೇಶದ ಪ್ರಜೆಗಳಲ್ಲಿ ಆ ಭಾವ ತುಂಬಿ ಒಗ್ಗಟ್ಟಿನಿಂದ ನಡೆದುಕೊಳ್ಳುತ್ತಿರುವುದು ಖಂಡಿತಾ ದೊಡ್ಡ ದೇಶಗಳ ‘ದೊಡ್ಡ’ ನಾಯಕರಿಗೆ ಇರಿಸುಮುರಿಸು ಮಾಡಿರುತ್ತದೆ.

ಈಗಾಗಲೇ ಚೀನಾವು ರಷ್ಯಾವನ್ನು ಬೆಂಬಲಿಸಿ ಎಂದು ತನ್ನ ಪ್ರಜೆಗಳಿಗೆ ಅಲವತ್ತುಕೊಂಡಿದೆ. ಆದರೆ ರಷ್ಯಾದ ಪ್ರಜೆಗಳೇ ರಷ್ಯಾ ಬೆಂಬಲಕ್ಕಿಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಇದು ಕೇವಲ ಯುದ್ಧದ ಪ್ರಶ್ನೆಯಲ್ಲ, ಇದು ನಾಯಕತ್ವದ ನಡೆಯು ಹೇಗಿರಬೇಕು ಎಂಬ ಪ್ರಶ್ನೆಯೂ ಆಗಿದೆ. ಜಾಗತಿಕ ಯುದ್ಧಗಳಿಗೆ, ಆಕ್ರಮಣಗಳಿಗೆ ಕಾರಣವಾದ ಎಲ್ಲ ‘ಬಲಿಷ್ಠ’ ನಾಯಕತ್ವದ ಮಾದರಿಯು ಶೌರ್ಯವನ್ನು ತಪ್ಪಾಗಿ ವ್ಯಾಖ್ಯಾನಿಸಿದ, ಕೆಲವೇ ಗಂಡಸರು ಹುಟ್ಟುಹಾಕಿ ಎಲ್ಲ ಗಂಡಸರ ಮೇಲೆ ಹೇರಿಕೆ ಮಾಡಿದ (ಹಲವು ಹೆಂಗಸರು ಅದನ್ನು ನಂಬಿ ಅನುಕರಣೆ ಮಾಡಲೆತ್ನಿಸುವ) ‘ಸಿದ್ಧ ಗಂಡು ಮಾದರಿ’ಯಾಗಿದ್ದು, ಇದರ ಕೊರತೆಗಳನ್ನು ಕಂಡುಕೊಳ್ಳಲು ಕೂಡಾ ಈ ಸಿದ್ಧಮಾದರಿಯಲ್ಲಿನ ನಂಬಿಕೆಗಳು ಅಡ್ಡಿ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ADVERTISEMENT

ಉಕ್ರೇನ್ ಬಗ್ಗೆ ಮತ್ತೆ ಮತ್ತೆ ಬರುತ್ತಿರುವ ಮಾತೆಂದರೆ, ಅವರು ರಷ್ಯನ್ನರನ್ನು ಪ್ರೀತಿಸುತ್ತಿದ್ದರು, ಸಹೋದರತೆಯಿಂದ ನೋಡುತ್ತಿದ್ದರು ಎಂಬುದಾಗಿದೆ. ಇಂದು ಜಗತ್ತು ಇಡಬೇಕಾದ ಹೆಜ್ಜೆ ಯಾವುದು ಎಂಬ ಬಗ್ಗೆ ಇತಿಹಾಸಜ್ಞ ನೋಹಾ ಹರಾರಿ, ‘ನಾವೀಗ ಹಣ ತೊಡಗಿಸಬೇಕಾದುದು ಮಿಲಿಟರಿಯ ಮೇಲಲ್ಲ, ಬದಲಿಗೆ ಜನರ ಶಿಕ್ಷಣ, ಆರೋಗ್ಯ, ಸುಸ್ಥಿರ ಪರಿಸರ ಇತ್ಯಾದಿಗಳ ಮೇಲೆ. ಪುಟಿನ್ ಮಿಲಿಟರಿ ಮೇಲೆ ಅತಿ ಹೆಚ್ಚು ಖರ್ಚು ಮಾಡುತ್ತಿದ್ದು, ಇದರಿಂದಾಗಿ ಅಲ್ಲಿನ ಜನರ ಜೀವನವೆಚ್ಚ ಹೆಚ್ಚಾಗಿದೆ. ಬಲಿಷ್ಠ ಮಿಲಿಟರಿಯ ತನಗೆ ಉಕ್ರೇನ್ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹೂ ನೀಡಿ ಸ್ವಾಗತಿಸಿ ಶರಣಾಗುತ್ತದೆ ಎಂಬುದು ಒಬ್ಬ ವ್ಯಕ್ತಿಯ ಭ್ರಮಾಧೀನ ಸ್ಥಿತಿಯ ನಂಬಿಕೆಯಾಗಿದ್ದು, ಭವಿಷ್ಯದಲ್ಲಿ ಜಗತ್ತು ಬೆಲೆ ತೆರಬೇಕಾಗಿದೆ’ ಎನ್ನುತ್ತಾರೆ.

ಈ ಹೊತ್ತು ಯಾವುದೇ ದೇಶ ತನ್ನ ನೆರೆಹೊರೆಯ ದೇಶಗಳೊಂದಿಗೆ ಇರಬೇಕಾದ ರೀತಿ ಯಾವುದು ಎನ್ನುವುದಕ್ಕೆ ಯುರೋಪಿಯನ್ ಒಕ್ಕೂಟ ಕಣ್ಣಮುಂದಿರುವ ಸದ್ಯದ ಒಳ್ಳೆಯ ದಾರಿಯಾಗಿದೆ. ಅನೇಕ ಪುಟ್ಟ ಪುಟ್ಟ ದೇಶಗಳ ಗೊಂಚಲಿನಂತೆ ಇರುವ ಯುರೋಪ್‍ನ ಹಲವು ದೇಶಗಳು ಸ್ವ ಇಚ್ಛೆಯಿಂದ ಯುರೋಪಿಯನ್ ಒಕ್ಕೂಟಕ್ಕೆ ಸೇರಿಕೊಂಡಿವೆ. ಹೀಗೆ ಮಾಡಿಕೊಂಡು, ಶಾಂತವಾಗಿಯೇ ಎಲ್ಲವೂ ಆರ್ಥಿಕವಾಗಿ ವಿಶೇಷ ಯಶಸ್ಸನ್ನು ಪಡೆದುಕೊಂಡಿವೆ. ಈಗ ಉಕ್ರೇನ್ ಕೂಡಾ ತಾನು ಈ ಒಕ್ಕೂಟದ ಭಾಗವಾಗುತ್ತೇನೆ ಎನ್ನುತ್ತಿದೆ. ಈ ದೇಶಗಳ ನಡುವೆ ಜನರ ವ್ಯಾಪಾರ ವಹಿವಾಟು, ಓಡಾಟವೂ ಮುಕ್ತವಾಗಿದೆ. ಕೋಟೆ ಕಟ್ಟಿಕೊಂಡು, ಯಾರು ನಮ್ಮ ಮೇಲೆ ಆಕ್ರಮಣ ಮಾಡುತ್ತಾರೋ ಎಂದು ಹೆದರಿಕೊಂಡು ಕಾವಲು ಪಡೆ ನೇಮಿಸಿಕೊಂಡು ಕಾಯುತ್ತಾ ಕುಳಿತುಕೊಳ್ಳುವುದು ಮಾನಸಿಕವಾಗಿ ನಮ್ಮನ್ನು ಜರ್ಝರಿತರನ್ನಾಗಿಸುತ್ತದೆ. ಇಷ್ಟೆಲ್ಲಾ ಮಾಡಿ, ಅಭಿವೃದ್ಧಿ ಸಾಧಿಸಬೇಕು ಅನ್ನುತ್ತಾ ನಾವು ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಯೇ ಪ್ರಖರ ದೀಪಕ್ಕೆ ಸುತ್ತುವ ಪತಂಗದ ಮಾದರಿಯಾಗಿದ್ದು ಬೇರೆ ಶತ್ರುಗಳೇನು, ನಮ್ಮ ಜೀವನಶೈಲಿಯೇ ನಮ್ಮ ಶತ್ರುಗಳಾಗಿರುವಾಗ, ಈ ಯುದ್ಧಗಳು ನಾಶದ ವೇಗವರ್ಧಕಗಳಾಗಿ ಮಾತ್ರ ಕೆಲಸ ಮಾಡಬಲ್ಲವು. ಇದಕ್ಕೆ ಭಿನ್ನವಾದ ತಾಯಿ ಮಾದರಿಯೊಂದು ನಮ್ಮ ನಡುವೆ ಇದ್ದು, ಅದನ್ನು ಮುನ್ನೆಲೆಗೆ ತರಬೇಕಿದೆ. ವಿನಾಶವಲ್ಲ, ವಿವೇಕ. ಇರುವುದನ್ನು ಕಾಪಿಟ್ಟುಕೊಳ್ಳುವ ಮಾತೃತ್ವ, ನಿನ್ನೊಂದಿಗೆ ನಾನು ಮತ್ತು ಮುಂದೆ ಹುಟ್ಟಲಿರುವವರುಎಂಬ ಈ ಹೆಣ್ಣು ನಡೆಯನ್ನು ಒಪ್ಪಿಕೊಳ್ಳಲು ಇರುವ ಅಹಂಕಾರವನ್ನು ಜಗತ್ತು ತೊರೆದ ದಿನ ಈ ಜಗತ್ತುಸ್ವರ್ಗವೆನಿಸುತ್ತದೆ.

‘ಹನಿಲ್ಯಾಂಡ್’ ಎಂಬ ಟರ್ಕಿಶ್ ಸಿನಿಮಾವೊಂದಿದೆ. ಅದರಲ್ಲಿ ಬೆಟ್ಟಗಳ ತಪ್ಪಲಿನ ಬಯಲಿನಲ್ಲಿನ ಒಂಟಿ ಮನೆಯಲ್ಲಿ ತಾಯಿಯೊಂದಿಗೆ ಇರುವ ಬೋಸ್ನಿಯಾ ಹೆಣ್ಣು ಮಗಳು ಕಾಡಿನ ಜೇನುಗಳನ್ನು ಕಲ್ಲಿನ ಪೊಟರೆಯೊಳಗೆ ನೈಸರ್ಗಿಕ ಕೃಷಿ ಮಾಡಿ, ಪೇಟೆಯಲ್ಲಿ ಮಾರಿ ತನಗೆ ಬೇಕಾದ್ದನ್ನು ಕೊಂಡುಕೊಂಡು ನೆಮ್ಮದಿಯಲ್ಲಿ ಇರುತ್ತಾಳೆ. ಆ ಜೇನುಗಳಿಗೆ ಅವಳು ಎಂದೂ ಹಾನಿ ಮಾಡುವುದಿಲ್ಲ. ಅರ್ಧಭಾಗ ಅವುಗಳಿಗೆ ಬಿಟ್ಟು ಇನ್ನರ್ಧ ಮಾತ್ರ ತಾನು ಪಡೆಯುತ್ತಾಳೆ. ಹೀಗಾಗಿ ಅವು ಯಾರನ್ನೂ ಕಚ್ಚುವುದಿಲ್ಲ ಮತ್ತು ಸಂತತಿಯೂ ಹೆಚ್ಚುತ್ತದೆ. ಹೀಗಿರುವಾಗಇದ್ದಕ್ಕಿದ್ದಂತೆ ಹತ್ತಾರು ಜನರ ಒಂದು ಕುಟುಂಬ ತನ್ನ ನೂರಾರು ಹಸು, ಲಾರಿಗಟ್ಟಲೆ ಸಾಮಾನು, ಯಂತ್ರಗಳು ಎಲ್ಲವನ್ನೂ ಹೇರಿಕೊಂಡು ದೂಳೆಬ್ಬಿಸುತ್ತಾ, ಗಲಾಟೆ ಮಾಡುತ್ತಾ ಅಲ್ಲಿಗೆ ಬಂದು ನೆಲೆಸುತ್ತದೆ. ಜೇನಿನ ಪೆಟ್ಟಿಗೆ ಸ್ಥಾಪಿಸಿ ಇವಳ ಮಾದರಿಯನ್ನು ನಗೆಪಾಟಲು ಮಾಡಿ, ಎಲ್ಲ ಹುಟ್ಟುಗಳನ್ನೂ ತಾವೇ ಬಳಸಿ ಅವಳ ಜೇನುಹುಳಗಳನ್ನೂ ನಾಶ ಮಾಡಿ ಹಿಂಡಿಕೊಂಡು, ಕೊನೆ ಕೊನೆಗೆ ಜೇನಿನ ಸಂತತಿಯೇ ನಾಶವಾಗಿ ಬದುಕಿಗಾಗಿ ಇನ್ನೆಲ್ಲಿಗೋ ವಲಸೆ ಹೋಗುತ್ತಾರೆ. ಈಕೆ ಕಾಡಲ್ಲಿ ಅಲೆದು ಹೇಗೋ ಉಳಿಸಿದ್ದ ಒಂದು ಹುಟ್ಟನ್ನು ನೋಡುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಅಲ್ಲಲ್ಲಿ ಈ ಭೂಮಿತತ್ವದ ಜನರು ಉಳಿಸಿದ್ದಕ್ಕಷ್ಟೇ ನಾವಿನ್ನೂ ಇದ್ದೇವೆ, ಠೇಂಕಾರದಲ್ಲಿಮೆರೆಯುತ್ತಿದ್ದೇವೆ.

ಮಹಿಳಾ ದಿನಾಚರಣೆ ಪುನಃ ಬಂದಿದೆ. ಇದು ದಿನ ಮತ್ತು ಆಚರಣೆ ಅಷ್ಟೇ ಅಲ್ಲ. ಇದು ಕೇವಲ ಹೆಣ್ಣಿನ ಹಕ್ಕಿನ ಮಾತೂ ಅಲ್ಲ. ಇದು ತಾಯಿಯೊಬ್ಬಳು ತನ್ನ ಗಂಡು ಮತ್ತು ಹೆಣ್ಣು ಮಕ್ಕಳೆಲ್ಲರನ್ನು ಸಮಾನ ನೋವು ಕೊಟ್ಟು ಹೆತ್ತು, ಸಮಾನ ಸಂತಸದಲ್ಲಿ ಪೊರೆದು, ಶಿಕ್ಷಣ ಮತ್ತು ಅದಕ್ಕಾಗಿ ತಕ್ಕ ಅಪಾಯಕಾರಿಯಲ್ಲದ ಶಿಕ್ಷೆ ನೀಡಿ ಪೊರೆದ ಆಡಳಿತ ಮಾದರಿಯನ್ನು ಜಗತ್ತು ಸ್ವೀಕರಿಸಬೇಕಾದ ದಿನವೂ ಆಗಿದೆ.

ನಮ್ಮ ಕರ್ನಾಟಕದಲ್ಲೂ ಒಂದು ಮಹಿಳಾ ಒಕ್ಕೂಟವಿದೆ. ಈ ಒಕ್ಕೂಟಕ್ಕೆ ಯಾವುದೇ ಅಧ್ಯಕ್ಷರಾಗಲೀಪದಾಧಿಕಾರಿಗಳಾಗಲೀ ಯಾವುದೇ ಸದಸ್ಯತ್ವ ಶುಲ್ಕವಾಗಲೀ ಇಲ್ಲ. ಲಿಂಗಭೇದವಿಲ್ಲದೆ ಮಾನವೀಯ ತತ್ವದಲ್ಲಿ ನಂಬಿಕೆ ಇರುವವರೆಲ್ಲರೂ ಇದರ ಸದಸ್ಯರೂ ಕಾರ್ಯಕರ್ತರೂ ಆಗಬಹುದು. ಇದು ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಜಾಗೃತಿ ಮತ್ತು ಪರ್ಯಾಯ ನಡೆಯನ್ನು ನಮ್ಮಿಂದಲೇ ಆರಂಭಿಸಬೇಕು ಎಂಬ ನಂಬಿಕೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ವರ್ಷವೂ ಒಂದೊಂದು ಜಿಲ್ಲೆಗೆ ತೆರಳಿ, ಅಲ್ಲಿ ವರ್ಷವಿಡೀ ಅರಿವಿನ ಪಯಣಗಳನ್ನು ಮಾಡಿ ಮಾರ್ಚ್ 8ರಂದು ಸಮಾರಂಭದೊಂದಿಗೆ ಇನ್ನೊಂದು ಜಿಲ್ಲೆಗೆ ಪಯಣ ಹೊರಡುತ್ತದೆ. ಈ ವರ್ಷ ಕಲಬುರಗಿಯಲ್ಲಿ ನಡೆಯುತ್ತಿದ್ದು, ಇದನ್ನು ಉದ್ಘಾಟಿಸುವುದು ಬೀಜಗಳನ್ನು ಕಾಪಿಡುವ ತಾಯಿ ಪುಟ್ಟೀರಮ್ಮ.

ಈ ಹೆಣ್ಣುಮಾದರಿಯ ಶಿಕ್ಷಣವು ಪುಟಿನ್‍ರನ್ನೂ ಸೇರಿಸಿ ಸದಾ ಆಕ್ರಮಣವೇ ಶೌರ್ಯ ಎಂದು ಭಾವಿಸಿರುವ ಎಲ್ಲ ಪುಕ್ಕಲೆದೆಯವರಿಗೂ ಸಿಗಲಿ.

ಲೇಖಕಿ: ಪ್ರಾಧ್ಯಾಪಕಿ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.