ADVERTISEMENT

ಚುರುಮುರಿ | ಪರ್ಯಾಯ ಶಿ(ಕ್ಷೆ)ಕ್ಷಣ

ಕೆ.ವಿ.ರಾಜಲಕ್ಷ್ಮಿ
Published 29 ಜುಲೈ 2020, 21:43 IST
Last Updated 29 ಜುಲೈ 2020, 21:43 IST
ಚುರುಮುರಿ
ಚುರುಮುರಿ   

‘ಈ ಸಾಲಿನ ಪಾಠಗಳನ್ನ ಶೇಕಡ 30ರಷ್ಟು ಕಡಿತಗೊಳಿಸ್ತಾರಂತೆ? ಕೊರೊನಾ ಕೃಪೆ, ಟೀವಿಯಲ್ಲೂ ಕಲಿಸ್ತಿದ್ದಾರೆ. ಮನೆ ಬಾಗಿಲಿಗೇ ಶಿಕ್ಷಣ, ಬೋಧಿಸಲು ಬಹಳಷ್ಟು ಪರ್ಯಾಯ ಮಾರ್ಗಗಳು, ಒಳ್ಳೆ ಸುದ್ದಿನೇ’ ಪೇಪರ್ ಮೇಲೆ ಕಣ್ಣಾಡಿಸುತ್ತಾ ಮನೆಯವರ ಗಮನಸೆಳೆದೆ.

‘ಏನು ಒಳ್ಳೇದೋ ಏನೋ? ಶಾಲೇಲಿ ಪಾಠ ಕಲಿಸೋಕ್ಕೂ ಮೊಬೈಲ್‌ಗೆ ಬರೋ ವಿಡಿಯೊ ನೋಡಿ ಕಲಿಯೋಕ್ಕೂ ವ್ಯತ್ಯಾಸ ಇದೆ. ಹತ್ತು ನಿಮಿಷದಲ್ಲಿ ಪಾಠ ಹೇಳಿ, ಅರ್ಥವಾಯ್ತಾ ಮಕ್ಕಳಾ ಅಂದರೆ ಸಾಕೇ? ಅಭ್ಯಾಸಗಳನ್ನು ಬರೆದು ಹೋಂ ವರ್ಕ್ ಮಾಡಿ ಅಂದರೆ, ಏನಾದರೂ ತಲೆಗೆ ಹೋಗಿದ್ದರಲ್ಲವೇ ಮಕ್ಕಳು ಬರೆಯೋಕ್ಕೆ ಸಾಧ್ಯ?’ ನನ್ನವಳು ಖಡಕ್ಕಾಗಿ ಕಮೆಂಟಿಸಿದಳು.

‘ಅಷ್ಟಲ್ಲದೆ ಹೇಳಿದರೇ ಜನನಿ ತಾನೇ ಮೊದಲ ಗುರು ಅಂತ’ ಅಂದೆ.

ADVERTISEMENT

‘ಅದೇ ಜನಕ ಯಾಕಲ್ಲ? ಎಲ್ಲ ನಮ್ಮ ತಲೆಗೇ’ ಮತ್ತೆ ಗೊಣಗಿದಳು.

ಆಗ ರೆಸ್ಕ್ಯೂಗೆ ಬಂದದ್ದು ಪುಟ್ಟಿ. ‘ಅಪ್ಪ, ಸರೋಜಾ ಆಂಟಿ ಅನುಭವ ಕೇಳಪ್ಪಾ. ಪಿ.ಟಿ. ಕ್ಲಾಸ್ ವಿಡಿಯೋಲಿ ಬಂದಾಗ ಮನೆಯಲ್ಲೇ ಇದ್ದ ಮೊಮ್ಮಗ, ‘ವಿಡಿಯೋಲಿ ಇರೋ ಡ್ರಿಲ್ ನೀನು ನನ್ನ ಜೊತೆ ಮಾಡು’ ಅಂತ ಹಟ ಮಾಡಿದ್ದಕ್ಕೆ, ಸ್ವಲ್ಪ ಕೈ ಕಾಲು ತಿರುಗಿಸಿ ದೇಹ ಬಾಗಿಸಿದ್ದಾರೆ- ಮೇಲೇಳಲು ಆಗಿಲ್ಲ- ಸ್ಲಿಪ್ ಡಿಸ್ಕ್ ಅಂತೆ ಪಾಪ...’

‘ನಿನ್ನೆ ಮೇಲ್ಗಡೆ ಮನೆ ಚಿಂಟೂಗೆ ಕನ್ನಡ ಕಲಿಸ್ತಿದ್ದೆ. ಕುದುರೆ ಪದ ಬರಿ ಅಂದರೆ ಕದರೆ ಅಂತ ಬರೆದಿದ್ದಾನೆ- ಕ ಕೊಂಬು ಕು, ದ ಕೊಂಬು ದು ಮಾಯ... ಏನೋ ಇದು ಅಂದಿದ್ದಕ್ಕೆ, ಬುಕ್ಕಲ್ಲಿ ಕುದುರೆ ಚಿತ್ರ ತೋರಿಸಿ, ಕೊಂಬು ಎಲ್ಲಿದೆ ಅಂತಾನೆ ಕತ್ತೇನ್ ತಂದು’ ಅತ್ತೆ ಕೆರಳಿದರು.

‘ಅಷ್ಟ್ಯಾಕೆ? ನಿಮ್ಮ ಸ್ನೇಹಿತ ಕಂಠಿ ಕತೆ ತಿಳೀಲಿಲ್ವಾ? ಮೊಬೈಲ್ ನೋಡಿ ಕರಾಟೆ ಕಲೀತಿದ್ದ ಬಾಸ್ ಮಗ ಅಶ್ ಉಶ್ ಅಂತ ಮುಷ್ಟಿ ಹಿಡಿದು ಆಡ್ತಿದ್ದವ್ನು, ಯಾವುದೋ ಮಾಯದಲ್ಲಿ ಇವರ ಮೂಗಿಗೇ ಬಡಿದು ಮುಖ ಊದಿಸಿದ್ದಾನೆ. ಬಾಲವಿಲ್ಲದ ಈ ವಾನರಗಳ್ನ ಸಂಬಾಳ್ಸಿ ಸಾಕಾಗ್‌ಹೋಗಿದೆ ಅಂತ ಶ್ರೀಮತಿ ಗೋಳಾಡಿಕೊಂಡ್ಳು’.

ಕಂಠಿಯ ಗೈರಿನ ಕಾರಣ ತಿಳಿಯಿತು. ‘ಹೌದೇ? ಅಯ್ಯೋ ಪಾಪ, ಒಂದು ಗಳಿಗೆ ನೋಡಿ ಬರ್ತೀನಿ’ ಎಂದು ಮೇಲೆದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.