ADVERTISEMENT

ಚುರುಮುರಿ: ಹೊಡೀರಿ ಕಪಾಳಕ್ಕೆ!

ಬಿ.ಎನ್.ಮಲ್ಲೇಶ್
Published 28 ಮಾರ್ಚ್ 2024, 22:36 IST
Last Updated 28 ಮಾರ್ಚ್ 2024, 22:36 IST
..
..   

‘ಏನ್ ಮಂಜಮ್ಮ, ಏನೈತೆ ತಿಂಡಿ?’ ಗುಡ್ಡೆ ಕೇಳಿದ.

‘ತಿಂಡಿ ಏನಿಲ್ಲ, ಓನ್ಲಿ ಚಾ...’ ಮಂಜಮ್ಮ ಮಸಿಬಟ್ಟೆ ಕೊಡವಿ ನಕ್ಕಳು.

‘ನಿಮ್ ಪಾರ್ಟೀಲಿ ಚಾ ಒಂದೇ ಗ್ಯಾರಂಟಿ. ನಮ್ ಕೈ ಪಾರ್ಟಿಗೆ ಬಾ, ಮೊಹಬ್ಬತ್ ಕಾ ದುಖಾನ್... ಅಂದ್ರೆ ಪ್ರೀತಿ ಅಂಗಡೀನೇ ಇಟ್ಟಿದೀವಿ’ ಎಂದ ಗುಡ್ಡೆ.

ADVERTISEMENT

‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಲೇಯ್, ಪ್ರೀತಿ ಅಂಗಡಿ ಇಟ್ಟಿದೀವಿ ಅಂತೀರಿ, ನೀವೂ ಹೊಡಿ ಬಡಿ ಮಾತಾಡ್ತೀರಿ, ಎಲ್ಲೈತೋ ಪ್ರೀತಿ?’ ಎಂದ.

‘ಅಂದ್ರೆ ಹೂವಿನ ಪಾರ್ಟಿಲೇನು ಬರೀ ಹೂವಿನಂಥ ಮಾತೇ ಬರ್ತಿದಾವಾ? ಅವ್ರೂ ಬಾಯಿಗೆ ಬಂದಂಗ್ ಮಾತಾಡ್ತಿಲ್ವ?’ ಗುಡ್ಡೆಗೆ ಸಿಟ್ಟು ಬಂತು.

‘ನಮ್ಗೆ ದೇಶ ಮುಖ್ಯ, ಧರ್ಮ, ಸಂಸ್ಕೃತಿ ಇಟ್ಕಂಡು ರಾಜಕೀಯ ಮಾಡೋರು ನಾವು’ ಮಂಜಮ್ಮ ವಾದಿಸಿದಳು.

‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಬರೀ ಇ.ಡಿ, ಸಿಬಿಐ, ಇನ್‌ಕಂಟ್ಯಾಕ್ಸ್‌ ರಾಜಕೀಯ ನಿಮ್ದು, ಎಲ್ಲೈತೆ ನ್ಯಾಯ, ನೀತಿ, ಧರ್ಮ?’ ಎಂದ.

‘ಹಾ...ಇದಪ್ಪ ಮಾತು’ ಎಂದ ಗುಡ್ಡೆ. ಮಂಜಮ್ಮಗೂ ಸಿಟ್ಟು ಬಂತು ‘ನಿನ್ ಮೂತಿಗಿಷ್ಟು’ ಎಂದಳು. ‘ನಮ್ ಗ್ಯಾರಂಟಿಗಳನ್ನ ತಗಳ್ಳದೆ ನಿನ್ ತಾಕತ್ ತೋರ್ಸು’ ಎಂದ ಗುಡ್ಡೆ. ಮಾತಿಗೆ ಮಾತು, ಗದ್ದಲ ಶುರುವಾಯಿತು.
ಅಷ್ಟೆಲ್ಲ ಗದ್ದಲ ನಡೆದರೂ ತೆಪರೇಸಿ ಮಾತ್ರ ಪಿಟಿಕ್ಕನ್ನದೆ ಕೂತಿದ್ದ. ‘ಯಾಕೋ ತೆಪರ, ಏನೂ ಮಾತಾಡ್ತಿಲ್ಲ?’ ಕೇಳಿದ ಕೊಟ್ರ.

‘ನೋಡ್ರಪಾ, ನಂಗೆ ಈ ರಾಜಕೀಯ ಅಂದ್ರೆ ಆಗಲ್ಲ. ನಾನು ಯಾವ ಪಾರ್ಟಿಗೂ ಸೇರ್ದೋನಲ್ಲ. ನಾನೊಬ್ಬ ಸಾಮಾನ್ಯ ಮತದಾರ. ನನ್ ಪಾಡಿಗೆ ನನ್ನ ಬಿಟ್ಬಿಡಿ’ ಎಂದ ತೆಪರೇಸಿ.

‘ಹೊಡೀರಿ ಕಪಾಳಕ್ಕೆ’ ಎಂದ ದುಬ್ಬೀರ, ‘ಲೇಯ್, ಇದೆಲ್ಲ ನಿನ್ನಿಂದ್ಲೇ ಆಗ್ತಿರೋದು. ಮತದಾರ ಅಂತೆ. ಈ ಮತದಾರ ಅನ್ನೋನು ಒಬ್ಬ ನೆಟ್ಟಗಿದ್ದಿದ್ರೆ ರಾಜಕೀಯದೋರು ಎಲ್ರೂ ನೆಟ್ಟಗಿರೋರು’ ಎಂದ. ಎಲ್ಲರೂ ಗೊಳ್ಳಂತ ನಕ್ಕರು. ತೆಪರೇಸಿ ಪಿಟಿಕ್ಕನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.