‘750 ಕೋಟಿ ರೂಪಾಯಿ…! ನನಗರೆ ಅಂಕಿಗಳ ಮುಂದೆ ಎಷ್ಟು ಸೊನ್ನಿ ಬರತಾವು ಅಂತ ತೆಲಿಕೆಡಿಸಿಕೊಂಡು ಸಾಕಾಗೈತಿ’ ಎಂದು ಬೆಕ್ಕಣ್ಣ ನಿಟ್ಟುಸಿರು ಬಿಟ್ಟಿತು.
‘ನಿನಗೆ ಸಿಕ್ಕಿತೇನ್ ಅಷ್ಟ್ ರೊಕ್ಕಾ?’ ನಾನು ಗಾಬರಿಯಾಗಿಬಿಟ್ಟೆ.
‘ಅಯ್ಯೋ… ನನಗ ಯಾವ ಕುಬೇರ ಕೊಡತಾನ? ಅಷ್ಟಕೊಂದು ರೊಕ್ಕ ಗುಂಡಿಗೆ ಸುರಿತಾರಂತೆ!’
‘ಯಾರು ಸುರಿತಾರಂತೆ? ಯಾವ ಗುಂಡಿಗೆ?’ ನಾನು ಇನ್ನಷ್ಟು ಗಾಬರಿಯಾದೆ.
‘ಎದಕ್ಕ ಹಂಗೆ ಗಾಬರಿಯಾಗತೀ? ಸುದ್ದಿ ಓದಿಲ್ಲೇನು?’ ಬೆಕ್ಕಣ್ಣ ಗುರುಗುಟ್ಟಿತು.
‘ಬೆಂಗಳೂರಿನ ರಸ್ತೆಗಳಲ್ಲಿ 14 ಸಾವಿರಕ್ಕೂ ಹೆಚ್ಚು ಗುಂಡಿಗಳಿದ್ದವಂತೆ. ಸುಮಾರು 7,000 ಗುಂಡಿ ಮುಚ್ಯಾರಂತೆ. ಇನ್ನುಳಿದವನ್ನು ವಾರದಾಗೆ ಮುಚ್ತಾರಂತೆ. ಒಟ್ ಎಲ್ಲಾ ಗುಂಡಿ ಮುಚ್ಚಾಕೆ 750 ಕೋಟಿ ರೂಪಾಯಿ ಬಿಡುಗಡೆ ಮಾಡೀವಂತ ಡಿಕೇಶಂಕಲ್ಲು ಹೇಳ್ಯಾರೆ.’ ಬೆಕ್ಕಣ್ಣ ಸುದ್ದಿ ವದರಿತು.
‘ಅಂದ್ರ ಒಂದು ಗುಂಡಿ ಮುಚ್ಚಕ್ಕೆ ಸುಮಾರು ಐದು ಲಕ್ಷ ರೂಪಾಯಿ ರೊಕ್ಕ ಖರ್ಚಾಗತೈತಾ?’ ನಾನು ಲೆಕ್ಕಹಾಕಿ ಕೇಳಿದೆ.
‘ಇವೆಲ್ಲ ಬಿಜೆಪಿ ಕಾಲದ ಹಳೇ ಗುಂಡಿಗಳಂತ ಸರ್ಕಾರ ಹೇಳೈತೆ. ಹಳೇ ಗುಂಡಿ ತುಂಬಕ್ಕೆ ಮತ್ತೆ ರೊಕ್ಕನೂ ಭಾಳ ಬೇಕಾಗ್ತಿರಬಕು’ ಬೆಕ್ಕಣ್ಣನ ಸಮಜಾಯಿಷಿ.
‘ಗುಂಡಿ ತುಂಬತಾರೋ… ಗುತ್ತಿಗೆದಾರರ ಹುಂಡಿ ತುಂಬತಾರೋ ಯಾರಿಗ್ಗೊತ್ತು!’
‘ಅಪ್ಪ, ಅಮ್ಮ ಯಾರು ಅಂತ ತಿಳಿಯಾಕೆ ಅದೇನೋ ಡಿಎನ್‌ಎ ಟೆಸ್ಟ್ ಮಾಡತಾರಲ್ಲ… ಹಂಗ ಗುಂಡಿಗಳ ಖರೇ ವಾರಸುದಾರರು ಯಾರು ಅಂತ ತಿಳಿಯಕ್ಕೆ ಏನರೆ ಟೆಸ್ಟ್ ಮಾಡಬಕು ನೋಡು’ ಎಂದಿತು ಬೆಕ್ಕಣ್ಣ.
‘ಅಂತಹ ಟೆಸ್ಟ್ ಮಾಡಕ್ಕೆ ಕೋಟಿಗಟ್ಟಲೆ ರೊಕ್ಕ ಖರ್ಚು ಮಾಡತಾರೆ. ಏನೂ ಬ್ಯಾಡ ಸುಮ್ನಿರು’ ಎಂದೆ.
‘ರಸ್ತೆಗಳ ಗುಂಡಿಗೇನೋ ತ್ಯಾಪೆ ಹಾಕಿ ಮುಚ್ಚಬೌದು. ನೀವು ನರಮನುಷ್ಯರು ನಿಮ್ಮೆದೆವಳಗೆ ಜಾತಿ, ಮತದ ಗುಂಡಿ ತೋಡಿಕೊಂಡು ಕುಂತೀರಲ್ಲ… ಅದನ್ನು ಹೆಂಗೆ ಮುಚ್ಚುತೀರಿ?’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು. ನಾನು ತಲೆ ತಗ್ಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.