ADVERTISEMENT

ಸಂಪುಟ ಸಂಕಟ ಪರಿಹಾರಕ್ಕಾಗಿ ಭಗವಂತನ ಸನ್ನಿಧಿಯಲ್ಲಿ... ನಾಳೆ ಬಾ...!

ಲಿಂಗರಾಜು ಡಿ.ಎಸ್
Published 19 ಆಗಸ್ಟ್ 2019, 20:00 IST
Last Updated 19 ಆಗಸ್ಟ್ 2019, 20:00 IST
   

ಟೆಲಿಫೋನ್‌ ಕಳ್ಳಗಿವಿಗಳನ್ನು ಸಿಬಿಐ ಕಾಲಭೈರವನ ಕೈಗೆ ಕೊಟ್ಟ ಮಹರ್ಷಿ ಯಡಿಯೂರಪ್ಪರು ತಮ್ಮ ಸಂಪುಟ ಸಂಕಟದ ಪರಿಹಾರಕ್ಕಾಗಿ ಭಗವಂತನ ಸನ್ನಿಧಿಯಲ್ಲಿ ಕುಳಿತು ನಮೋ ಭೂತನಾಥ, ನಮೋ ದೇವದೇವಾ, ನಮೋ ದಿವ್ಯತೇಜಾ ಎಂದು ಪ್ರಾರ್ಥಿಸುತ್ತಾ ಘೋರ ತಪಸ್ಸನ್ನಾಚರಿಸುತ್ತಿರಲು, ವರ್ಚುವಲ್ ರೂಪದಲ್ಲಿ ದರ್ಶನ ನೀಡಿದ ಭಗವಂತನು ‘ಮಹರ್ಷಿಗಳೇ ತಮ್ಮ ಪ್ರಾರ್ಥನೆಗೆ ಕಾರಣವೇನು?’ ಎಂದು ಕೇಳಿದ.

‘ಅಪ್ಪಾ ತಂದೇ, ರಾಜ್ಯದಲ್ಲಿ ಕಾಡುತ್ತಿರುವ ನೆರೆ-ಬರಕ್ಕೆಲ್ಲಾ ಮಂತ್ರಿಗಳಿಲ್ಲದಿರುವುದೇ ಕಾರಣ ಎಂದು ದಾನವರು ನನ್ನನ್ನು ದೂರುತ್ತಿದ್ದಾರೆ. ಆದುದರಿಂದ ಸಂಪುಟದ ಪಟ್ಟಿಗೆ ಅನುಮತಿ ನೀಡು’ ಎಂಬುದಾಗಿ ಕೋರಿದರು.

‘ಮುನಿವರ್ಯರೇ, ನಾವುಗಳು ಕಾಶ್ಮೀರ ಮೋಕ್ಷದಲ್ಲಿ ಬಿಜಿಯಾಗಿರುವುದರಿಂದ ನಿಮ್ಮ ಪಟ್ಟಿಯೊಂದಿಗೆ ಯಾವುದಾದರೂ ಒಂದು ದಿನ ಬನ್ನಿ’ ಎಂದ ಭಗವಂತ.

ADVERTISEMENT

‘ವಟುಗಳ, ಅತೃಪ್ತ ಆತ್ಮಗಳ ರೋದನ ಕೇಳಲಾರೆ ತಂದೆ, ನೀನೇ ಯಾವ ದಿನ ಎಂದು ಹೇಳಿಬಿಡು’ ಎಂದು ಕೋರಿದರು. ಭಗವಂತನು ಮುನಿವರ್ಯರನ್ನು ಇನ್ನೂ ಪರೀಕ್ಷಿಸಲು ತೀರ್ಮಾನಿಸಿ ಹೇಳಿದನು- ‘ಮಹರ್ಷಿಗಳೇ ನಿಮ್ಮ ಪಟ್ಟಿಯನ್ನು ಹಿಡಿದು ನಾಳೆ ಬನ್ನಿ’ ಅಂದವನೆ ಇಂಟರ್‍ನೆಟ್ ಕನೆಕ್ಟಿವಿಟಿ ತಪ್ಪಿ ಥಟ್ಟನೆ ಮಾಯವಾದನು. ಮಹರ್ಷಿಗಳು ಸಂತಸದಿಂದ ಭಗವಂತನ ಕೃಪೆಯ ಸಂದೇಶವನ್ನು ಆಶ್ರಮಕ್ಕೆ ರವಾನಿಸಿದರು.

ಮಹರ್ಷಿಗಳು ಮಾರನೇ ದಿನ ಬೆಳಿಗ್ಗೆಯೇ ಸನ್ನಿಧಾನಕ್ಕೆ ಬಂದು ‘ಜಯಜಯ ಜಗದೀ-ಶಾ, ಪಾಂ ಪಾಹಿ ವಾರಣಾಸೀಶಾ, ಮೋದೀಶಾ...’ ಎಂದು ಪರಿಪರಿಯಾಗಿ ಭಗವಂತನ ಪ್ರಾರ್ಥನೆ ಮಾಡುತ್ತಿರಲಾಗಿ, ಆತನು ಔಟ್ ಆಫ್‌ ಕವರೇಜ್ ಏರಿಯಾ ಎಂಬ ಉತ್ತರವು ಬರುತ್ತಿತ್ತು. ಆಗ ಪ್ರಕಟವಾದ ಅಮಿತಶಾ ದೇವತೆಯು ‘ಭಗವಂತ ನಾಳೆ ಬರಲು ಹೇಳಿರುವರಲ್ಲಾ! ಈಗ ಹೋಗಿ ನಾಳೆ ಬಾ’ ಎಂದು ವಾಪಸ್ ಕಳುಹಿಸಿದರು. ಅದರ ಮಾರನೇ ದಿನವೂ ನಾಳೆ ಬಾ ಎಂಬ ಉತ್ತರವು ಸಿಕ್ಕಿತು. ಪಟ್ಟುಬಿಡದ ಮಹರ್ಷಿಗಳು ತಿಂಗಳಿನಿಂದ ನಾಳೆ ಎಂದು ಬಂದೀತೋ ಎಂದು ದಿಲ್ಲಿ ದೇವಲೋಕದಲ್ಲಿ ಕಾದು ನಿಂತಿದ್ದರು ಎನ್ನುವಲ್ಲಿಗೆ ತುರೇಮಣೆ ಭಾರತದ ಮಂತ್ರಿಕಾಂಡದ ಪೂರ್ವಾರ್ಧ ಮುಕ್ತಾಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.