ADVERTISEMENT

ಚುರುಮುರಿ: ಜಾತಿ ಫಜೀತಿ

ಮಣ್ಣೆ ರಾಜು
Published 2 ಮಾರ್ಚ್ 2021, 19:30 IST
Last Updated 2 ಮಾರ್ಚ್ 2021, 19:30 IST
Churumuri-03-03-2021
Churumuri-03-03-2021   

‘ಮಗು ಹುಟ್ಟಿದ ತಕ್ಷಣ ಜಾತೀಕರಣ, ಆನಂತರ, ನಾಮಕರಣ. ಮಗು ದೊಡ್ಡದಾದ ಮೇಲೆ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ಸುಲಭವಾಗಿ ಜಾತಿ ಚೇಂಜ್ ಮಾಡಿಕೊಳ್ಳೋದು ಕಷ್ಟ ಅಲ್ವೇನ್ರೀ?’ ಅಂದಳು ಸುಮಿ.

‘ಹೌದು, ಕುರಿ ಹಳ್ಳಕ್ಕೆ ಬಿದ್ದಂತೆ ನಾವು ಜಾತಿಯಲ್ಲಿ ಬೀಳ್ತೀವಿ. ಅಪ್ಪ ಅಮ್ಮನ ಕೇರಾಫ್ ಜಾತಿ ನಮ್ಮ ಜೊತೆ ಕಂಟಿನ್ಯೂ ಆಗುತ್ತೆ’ ಅಂದ ಶಂಕ್ರಿ.

‘ಸಾಲದ್ದಕ್ಕೆ, ಇವರು ಇಂಥಾ ಜಾತಿಯವರು ಅಂತ ಸಮಾಜ ಬ್ರ್ಯಾಂಡ್ ಮಾಡುತ್ತದೆ, ಸರ್ಕಾರ ಜಾತಿಯನ್ನು ದಾಖಲು ಮಾಡುತ್ತದೆ. ಶಿಕ್ಷಣ, ಉದ್ಯೋಗ, ಸೌಲಭ್ಯಗಳು ಜಾತಿ ಆಧಾರದಲ್ಲಿ ಹಂಚಿಕೆ ಆಗುತ್ತವೆ’.

ADVERTISEMENT

‘ಹೌದು, ಜಾತ್ಯತೀತ ಮನಃಸ್ಥಿತಿ ಇದ್ದರೂ ಜಾತಿ ಬಿಡದ ಪರಿಸ್ಥಿತಿಯಲ್ಲಿ ಸಿಕ್ಕಿಬಿಡುತ್ತೇವೆ’.

‘ಶಾಂತಮ್ಮ ಬೇರೆ ಜಾತಿಯವನ ಜೊತೆ ಓಡಿಹೋಗಿ ಮದುವೆಯಾಗಿದ್ದಳು. ಎರಡೂ ಕಡೆಯವರು ಅವರನ್ನು ತಮ್ಮ ಜಾತಿಯಿಂದ ಹೊರಗೆ ಹಾಕಿದ್ದರು. ಈಗ ಶಾಂತಮ್ಮನ
ಮಗಳಿಗೆ ಆ ಎರಡು ಜಾತಿಗಳಲ್ಲೂ ಗಂಡು ಸಿಗುತ್ತಿಲ್ಲವಂತೆ’ ನೊಂದಳು ಸುಮಿ.

‘ಅದೇನು ಜಾತಿ ಸಂಬಂಧವೋ... ರಕ್ತ ಸಂಬಂಧಿಗಳು ಅಂತ ಹೇಳಿಕೊಳ್ಳುವವರ
ರಕ್ತದ ಗುಂಪುಗಳೇ ಒಂದಕ್ಕೊಂದು ಮ್ಯಾಚ್ ಆಗಲ್ಲ... ಹಹ್ಹಹ್ಹಾ...’ ಶಂಕ್ರಿ ನಕ್ಕ.

‘ಅಷ್ಟೇ ಅಲ್ಲಾರೀ, ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳ ರಕ್ತದ ಗ್ರೂಪ್ ಕೂಡಾ ಅಪ್ಪಮ್ಮನ ರಕ್ತದ ಗುಂಪು ಸೇರುವುದಿಲ್ಲ,ಬೇರೆ ಬ್ಲಡ್ ಗ್ರೂಪ್ ಇರುತ್ತದೆ’.

‘ಜೊತೆಗೆ, ನಮ್ಮನಮ್ಮವರಲ್ಲೇ ನಡೆಯುವ ಐಪಿಎಲ್ ಪಂದ್ಯದ ರೀತಿ ಒಂದೇ ಜಾತಿಯ ಬಿಪಿಎಲ್, ಎಪಿಎಲ್ ಅನ್ನೋ ಬಡವ- ಶ್ರೀಮಂತರ ನಡುವೆ ಪೈಪೋಟಿ ನಡೆದೇ ಇದೆ’.

‘ಈ ವ್ಯತ್ಯಾಸ ನಿವಾರಣೆ ಮಾಡಿ ತಮ್ಮ ಜಾತಿಯ ಸರ್ವರಿಗೂ ಸಮಾನ ಸೌಲಭ್ಯ ಸಿಗಬೇಕು ಅಂತ ಆಯಾ ಜಾತಿಯ ಗುರು-ಹಿರಿಯರು ಮೀಸಲಾತಿ ಹೋರಾಟನಡೆಸುತ್ತಿರುವುದು ಪ್ರಸ್ತುತ ವಿದ್ಯಮಾನ...’ ಎಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.