ADVERTISEMENT

ಚುರುಮುರಿ | ಹಕ್ಕಿ ರಾಮಾಣ್ಯ

ಲಿಂಗರಾಜು ಡಿ.ಎಸ್
Published 22 ಜೂನ್ 2020, 17:10 IST
Last Updated 22 ಜೂನ್ 2020, 17:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ನೋಡಿ ಸಾ, ಪಾಪದ ಇಸ್ವಣ್ಣನಿಗೆ ಇನ್ನೂ ಮಂತ್ರಿಯಾಗ ದೆಸೆನೇ ತಿರುಗಿಲ್ಲ! ಚೀನಿ ಆಪ್ ಥರಾ ರಿಮೂವ್ ಆಗಿಬುಟ್ಟವರೆ’ ಅಂದೆ. ‘ಹ್ಞೂಂ ಕನೋ, ಬಂಡಾಯದ ಟಿಕ್‍ಟಾಕ್ ಶುರು ಮಾಡಿದ್ದೇ ಈ ಗೀಜುಗ ಗಿಳಿರಾಮನಲ್ಲುವೇ!’ ಅಂದ್ರು ತುರೇಮಣೆ.

‘ಏನ್ಸಾರ್, ಚೀನಾ 20 ಜನ ಸೈನಿಕರನ್ನು ಕೊಂದಾಕಿ ಈಗ ಭಾರತದ ಜೊತೆ ಸಂಬಂಧ ಬೇಕು ಅಂತ ನಾಟಕ ಆಡ್ತಾದಲ್ಲ, ನಂಬದು ಹ್ಯಂಗೆ?’ ಅಂತಂದೆ.

‘ಭಾರತ- ಚೀನಾದ ಗಾಳೀಗಂಟಲ ರಾಜಕೀಯಕ್ಕೆ ಅನ್ವಯಿಸಿ ನೋಡೋ! ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಗಡಿ ಕ್ರಾಸ್ ಮಾಡಿ ಆಚಿಗೋಗರು, ಅಕ್ರಮವಾಗಿ ಒಳಿಕ್ಕೆ ಬರರು ಇದ್ದೇ ಇರತರೆ. ಬಂದೋರು ನಿಗರಾಡಬಾರದು ಅಂತ ಒಳಗಿರೋರು ಇಡ ಮಾಡಕ್ಕೆ ರೆಡಿಯಾತಾ ಇರತರೆ! ರಾಜಕೀಯ ಯುದ್ಧದಲ್ಲಿ ಯಾರೂ ಸತ್ರು-ಮಿತ್ರರಿಲ್ಲ ಕಲಾ! ಈಗ ನೀನೆ ನೋಡಪ್ಪ, ಡಿಕೆಶಿ ಮನೆ ಮಗ್ಗುಲಿಗೆ ಬಂದಿರೋ ಕುಂದಾ ಸಾವುಕಾರ್‍ರು ಏನು ಬೀಜಗಣಿತ ತಂದವ್ರೋ ನಾನು ಕಾಣೆ’ ಅಂತ ವಿಶ್ಲೇಷಣೆ ಮಾಡಿದರು.

ADVERTISEMENT

‘ಸಾ, ಪಕ್ಷಾಂತರ ಪಕ್ಷಿಗಳ ಕಥೆ ಹ್ಯಂಗೆ?’ ಅಂತ ಕೇಳಿದೆ.

‘ಹೇಳಗಂಟ ಅಮಿಕ್ಕ್ಯಂಡಿರ್ಲಾ ಪಾಪರಾ! ಪಕ್ಷಿ ಮರದ ಮ್ಯಾಲೆ ಕುಂತು ದೊರೆತನದ ಕನಸಲ್ಲಿ ಗೀಗೀ ಅಂತ ಶಕುನ ನುಡೀತಿತ್ತಾ, ಯಾವನೋ ಒಬ್ಬ ಆಗದೋನು ತೀತರ್ ಬಿರಿಯಾನಿ ಆಸೆಗೆ ಹಕ್ಕಿಗೆ ಕಲ್ಲೊಡದು ವಯಕ್ ಅನ್ನಿಸಿಬುಡ್ತನೆ’ ಅಂತಂದರು. ಈ ಕೆಲಸಕ್ಕೆ ಪುರೋಯಿತರು ಯಾರು ಅಂತ ಕೇಳನ ಅಂದ್ರೆ ಬೈದುಗಿಯ್ದಾರು ಅಂತ ಸುಮ್ಮಗಾದೆ.

‘ಹಕ್ಕಿ ಕಥೆ ಅಷ್ಟೀಯೆ ಅಂತೀರಾ?’ ಅಂತ ಕೇಳಿದ್ದಕ್ಕೆ ತುರೇಮಣೆ ಮುಂದುವರಿಸಿದರು.

‘ತಡ್ಲಾ, ಹಕ್ಕಿ ವಯಕ್ ಅಂದುದ್ದ ನೋಡಿ ನಾಲಿಗೆ ಮ್ಯಾಲೆ ನಡೆಯೋ ಋಷಿ-ಮುನಿಗಳಿಗೆ ರೋಸ ಬಂದು ರಾಮಾಣ್ಯ ಹೇಳ್ತರೆ. ಅದ ನೋಡಿ ಯಾರ‍್ಯಾರೋ ಯಾಕ್ಯಾಕೋ ಸಂತೋಸ ಪಟ್ಟುಕತರೆ’ ಅಂತ ಅಂದ್ರು.

ಎಲ್ಲೀ ಚೀನಾ, ಎಲ್ಲೀ ಹಕ್ಕಿ, ಎಲ್ಲೀ ರಾಮಾಣ್ಯ! ತುರೇಮಣೆಯ ಕಥೆಯ ಸೂತ್ರದ ದಾರ ಸಿಕ್ಕದೆ ರಾವು ಹಿಡದೋದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.