ADVERTISEMENT

ಅಭಿನವ ಸರ್ವಜ್ಞ!

ಬಿ.ಎನ್.ಮಲ್ಲೇಶ್
Published 9 ಜನವರಿ 2020, 20:00 IST
Last Updated 9 ಜನವರಿ 2020, 20:00 IST
churumari
churumari   

‘ಗುರೂ, ಪೇಪರ್ ನೋಡಿದ್ಯಾ? ಅದ್ಯಾರಿಗೋ ‘ಅಭಿನವ ಬೇಂದ್ರೆ’ ಅಂತ ಬಿರುದು ಕೊಟ್ಟಾರಂತೆ. ನಾವ್ಯಾಕೆ ನಮ್ಮ ಕುಟುಕು ಕವಿ ತೆಪರೇಸಿಗೆ ‘ಅಭಿನವ ಸರ್ವಜ್ಞ’ ಅಂತ ಬಿರುದು ಕೊಡಬಾರ‍್ದು?’ ಪರ್ಮೇಶಿ ಮುಂದೆ ದುಬ್ಬೀರ ಪ್ರಸ್ತಾವ ಮಂಡಿಸಿದ.

‘ಪಾಪ ಸರ್ವಜ್ಞನ ಹೆಸರ‍್ಯಾಕೆ ಹಾಳು ಮಾಡ್ತೀರಿ ಬಿಡ್ರಲೆ, ಅಷ್ಟಕ್ಕೂ ಸಾಹಿತ್ಯದಲ್ಲಿ ಈ ತೆಪರ ಏನು ದಬ್ಬಾಕಿದಾನೆ?’ ಪರ್ಮೇಶಿ ನಕ್ಕ.

ತೆಪರೇಸಿಗೆ ಸಿಟ್ಟು ಬಂತು. ‘ಯಾಕಲೆ, ನಾನೂ ನೂರಾರು ಚುಟುಕ ಬರೆದಿದೀನಿ. ಇದೇ ಹರಟೆಕಟ್ಟೇಲಿ ಎಷ್ಟು ಚುಟುಕ ಓದಿದೀನಿ. ನೀವೆಲ್ಲ ವಾವ್ಹಾ ವಾವ್ಹಾ ಅಂದಿಲ್ವಾ?’

ADVERTISEMENT

‘ಅಂದಿದೀವಿ ಬಿಡಲೆ, ಆದ್ರೆ ಅವು ನಿನ್ನವೇ ಒರಿಜಿನಲ್ಲು ಅಂತ ಯಾರಿಗ್ಗೊತ್ತು? ಹೋಗ್ಲಿ ಎಷ್ಟು ರೊಕ್ಕ ಕೊಡ್ತೀಯ ಹೇಳು, ನಾವೇ ಒಂದು ಕಾರ್ಯಕ್ರಮ ಮಾಡಿ ಯಾರಾದ್ರು ದೊಡ್ಡೋರ ಕೈಲಿ ನಿಂಗೆ ಬಿದುರು... ಸ್ಸಾರಿ, ಬಿರುದು ಕೊಡಿಸ್ತೀವಿ...’ ಗುಡ್ಡೆ ರಾಜಿಯ ಮಾತಾಡಿದ.

‘ಏನು? ರೊಕ್ಕ ಕೊಟ್ಟು ಬಿರುದು ತಗಾಬೇಕಾ? ಹೋಗ್ರಲೆ, ನಂಗೇನ್ ಬೇಕಿಲ್ಲ’.

‘ಅಲೆ ಇವ್ನ, ಮತ್ತೆ ಕಾರ್ಯಕ್ರಮದ ಖರ್ಚಿಗೆ ಏನ್ಮಾಡಬೇಕು? ಹೋಗ್ಲಿ ಬುಕ್ ಏನಾದ್ರು ಬರೆದಿದೀಯ ಹೇಳು...’ ಗುಡ್ಡೆ ಸವಾಲು ಹಾಕಿದ.

‘ಮಲೆಗಳಲ್ಲಿ ಮಲಮಗಳು’ ಅಂತ ಬರೆದಿದೀನಿ. ಆಮೇಲೆ ‘ಐದುತಂತಿ’ ಅಂತ ಅರ್ಧ ಆಗೇತಿ...’

ದುಬ್ಬೀರನಿಗೆ ಗಾಬರಿಯಾಯಿತು. ‘ಲೇಯ್, ಕೃತಿಚೌರ್ಯ ಮಾಡ್ತೀಯ? ‘ಮಲೆಗಳಲ್ಲಿ ಮದುಮಗಳು’ ಕುವೆಂಪುದು. ‘ನಾಕುತಂತಿ’ ಬೇಂದ್ರೇದು’ ಎಂದ.

‘ನಂದು ಬೇರೆ ಕಣ್ರಲೆ, ಕುವೆಂಪುದು ಮದುಮಗಳಾದ್ರೆ ನಂದು ಮಲಮಗಳು. ಬೇಂದ್ರೇದು ನಾಕುತಂತಿ ಆದ್ರೆ ನಂದು ಐದುತಂತಿ...’ ತೆಪರೇಸಿ ವಾದಿಸಿದ.

ತಕ್ಷಣ ಗುಡ್ಡೆ ‘ಓ, ಇದು ಕೃತಿಚೌರ್ಯ ಅಲ್ಲ ಕಣ್ರಲೆ, ಕೃತಿ ಚೌರ! ಸರ್ವಜ್ಞ ತಾನು ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದೆ ಅಂದಿದ್ದ. ಆದ್ರೆ ಇವನು ಸರ್ವರ ಒಂದೊಂದು ನುಡಿ ಕದ್ದು ಅಭಿನವ ಸರ್ವಜ್ಞ ಆಗೋಕೆ ಹೊಂಟಿದಾನೆ...’ ಎಂದಾಗ ಎಲ್ಲರೂ ಗೊಳ್ಳನೆ ನಕ್ಕರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.