ADVERTISEMENT

‘ಸ್ಕಿಲ್ ಇಂಡಿಯಾ’ ಸೂತ್ರಗಳು

ಸುಮಂಗಲಾ
Published 5 ಮೇ 2019, 20:15 IST
Last Updated 5 ಮೇ 2019, 20:15 IST
.
.   

ಗೆಳತಿಯ ಮಗಳು ಮತ್ತೆ ಸಿಕ್ಕಿದಳು. ‘ಏನವಾ... ಶುದ್ಧ ಸಾಹಿತ್ಯದ ಸಂಶೋಧನೆ ಹೆಂಗ ನಡೆದದ?’ ಕೇಳಿದೆ. ‘ಮಸ್ತ್ ನಡದದರೀ. ಸಂಶೋಧನೆ ವ್ಯಾಪ್ತಿ ವಿಸ್ತಾರ ಆಗೇದ. ಆ ಅಂಬೇಡ್ಕರ್ ಸಂವಿಧಾನ ವಿದೇಶಿ ಆಮದು... ಮೇಡ್ ಇನ್ ಇಂಡಿಯಾ ಸಂವಿಧಾನ ರಚಿಸಾಕ ನಮ್ಮ ಧರ್ಮಶಾಸ್ತ್ರ ಅಭ್ಯಾಸ ನಡೆಸೀವ್ರಿ. ಮತ್ತ ನಿಮ್ಮಂಗ ಒಂದೇ ಕೆಲಸ ಮಾಡೂ ಜಮಾನ ಅಲ್ರೀ ಆಂಟಿ. ಸ್ಕಿಲ್ ಇಂಡಿಯಾ, ಅಂದ್ರ ಕುಶಲ ಭಾರತದಾಗ ಅದೀವ್ರಿ... ಬ್ಯಾರೆ ಕೆಲಸದ ಸ್ಕಿಲ್ ಗೊತ್ತಿರಬೇಕ್ರಿ’ ಹೆಮ್ಮೆಯಿಂದ ಬೀಗುತ್ತ ಮುಂದುವರಿಸಿದಳು.

‘ನನ್ನ ಫ್ರೆಂಡ್‌ ಜೊತಿಗಿ ಫಾರ್ಮುಲಾಸ್ ಮ್ಯಾಗ ಕೆಲಸ ಮಾಡ್ತಿದೀನ್ರಿ. ಕಮಲ-ಕುದುರೆ ಸೂತ್ರ ಕಂಡುಹಿಡಿದೇವಿ. ಯಾವ ರಾಜ್ಯ, ಎಷ್ಟು ಜನ ಶಾಸಕರು, ಯಾವ ಪಕ್ಷದಿಂದ, ಹಿಂಗೆ ಸೀಕ್ರೆಟ್ ಡೇಟಾಪಾಯಿಂಟ್ ಹಾಕಿ ಲೆಕ್ಕ ಮಾಡಿದ್ರೆ ಒಂದು ಕುದುರೆ ಬೆಲೆ ಸಿಕ್ಕುತ್ತೆ’.

‘ಅಂತೂ ನೀ ಪೂರಾ ‘ಕಮಲ’ನಯನೆ ಆಗೀ ಬಿಡವ್ವ’ ಎಂದು ಚುಚ್ಚಿದೆ. ‘ಬರೀ ಕಮಲ ನೆಚ್ಚಿಕಂಡ್ರ ಕಾಲು ಕೆಸರಾಗ ಮುಳಗತಾವ್ರಿ ಆಂಟಿ. ಯಾವ ಜಮಾನದಾಗ ಅದೀರಿ ನೀವು... ಬ್ಯಾರೆ ಫಾರ್ಮುಲಾನೂ ಕಂಡ್ ಹಿಡಿದೀವ್ರಿ’ ಎಂದು ಕಣ್ಣು ಮಿಟುಕಿಸಿದಳು. ‘ಏನ್ ಬೆರಕಿ ಅದೀಯವ್ವ’ ಮೂಗಿನ ಮೇಲೆ ಬೆರಳಿಟ್ಟೆ ನಾ!

ADVERTISEMENT

‘ಇನ್ನೊಂದು ರೇವಣಾಯ ಸೂತ್ರ ಅಂತ. ಲಿಂಬೆಹಣ್ಣು, ಭವಾನಿಕಟಾಕ್ಷ, ಹಿಂತಾ ದತ್ತಾಂಶ ಹಾಕಿದರೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಎಷ್ಟು ಏರಿಕೆಯಾಗುತ್ತೆ, ಅದ್ರ ಬದ್ಲಿಗೆ ಕಮಲದಳ, ಚೌಕೀದಾರರ ದತ್ತಾಂಶ ಹಾಕಿದರೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಎಷ್ಟು ಕುಸಿಯುತ್ತೆ ಅಂತ ಕಂಡುಹಿಡೀಬೌದು. ಭವಾನಿಕಟಾಕ್ಷದ ಮುಂದ ಉಡುಪಿ ಕೃಷ್ಣನೂ ಲೆಕ್ಕಕ್ಕಿಲ್ಲರೀ’ ನಕ್ಕಳು.

‘ಹಂಗಾರೆ ಜರಾ ಯಾದಗಿರಿ ಕಡಿಗಿ ಲಿಂಬೆಹಣ್ಣು ಎಸೆದು, ಭವಾನೀಕಟಾಕ್ಷ ತಿರುಗಿಸಕ್ಕೆ ಹೇಳವಾ... ಮುಂದಿನ ವರ್ಷನಾರು ನಾಕ್ ಹುಡ್ರು ಹೆಚ್ಚಿಗಿ ಪಾಸಾಗ್ತರೇನು ನೋಡಾಮು’ ಎಂದೆ. ‘ಅಂತಾ ಕಡಿಗಿ ಸಿಂಧೂರಿಯವ್ರಂಥ ಅಧಿಕಾರಿಗಳೇ ಬೇಕ್ರಿ’ ಎಂದು ಹುಳ್ಳಗೆ ನಕ್ಕಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.