ADVERTISEMENT

ಮದ್ವೆಯಾಗಿ ತಪ್ಪು ಮಾಡ್ದೆ!

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 20:00 IST
Last Updated 5 ನವೆಂಬರ್ 2019, 20:00 IST
.
.   

‘ನಾನ್ ಮದ್ವೆಯಾಗಿ ತಪ್ಪು ಮಾಡಿದೆ ಅನ್ನಿಸ್ತಿದೆ’ ವೈರಾಗ್ಯದಲ್ಲಿ ಹೇಳ್ದ ವಿಜಿ. ‘ಮದ್ವೆಯಾಗಿ ನೂರು ದಿನ ಆಯ್ತು. ಸೆಂಚುರಿ ಹೊಡೆದ ಖುಷೀಲಿರೋದು ಬಿಟ್ಟು ಹಿಟ್ ವಿಕೆಟ್ ಆದವ ರಂಗೆ ಮಾತಾಡ್ತಿದೀಯಲ್ಲ’ ಕೇಳಿದ್ರು ರಿಲೇಷನ್ಸ್.

‘ನನ್ ಕಂಡ್ರೆ ನನ್ ಫ್ರೆಂಡ್ಸ್‌ಗೆಲ್ಲ ಅಕ್ಕರೆ–ಸಕ್ಕರೆ. ನನ್ ಮದ್ವೆ ಮಾಡಿಸೋಕೆ ಅದೆಷ್ಟ್ ಓಡಾಡಿದ್ರು. ನಮ್ ಶಾಣ್ಯಾ ಮಾವನನ್ನೂ ಒಪ್ಪಿಸಿ ಮದ್ವೆ ಮಾಡಿದ್ರು’ ಫ್ಲ್ಯಾಶ್‌ಬ್ಯಾಕ್ ಮೋಡ್‌ಗೆ ಜಾರಿದ ವಿಜಿ. ‘ರಿವೈಂಡ್ ರಾಗ ಯಾಕೀಗ...?’ ಸಂಬಂಧಿಯೊಬ್ಬ ಕೇಳ್ದ.

‘ನಿಮ್ಮ ಫ್ರೆಂಡ್ಸ್ ಸಹವಾಸ ಬಿಟ್ಟುಬಿಡಿ. ಅವರೆಲ್ಲ ಅನರ್ಹರು ಅಂತಾಳೆ ರಾಕ್ಷಸಿ. ನನ್ ಫ್ರೆಂಡ್ಸ್‌ಗೆ ಇದೆಲ್ಲ ಗೊತ್ತಾದ್ರೆ ಏನ್ ಗತಿ...’ ತಲೆ ಮೇಲೆ ಕೈ ಹೊತ್ತ ವಿಜಿ. ಇವನ ಗೋಳು ಇದ್ದದ್ದೇ ಎಂದು ಜಾಗ ಖಾಲಿ ಮಾಡಿದರು ಸಂಬಂಧಿಕರು.

ADVERTISEMENT

ಮನೆಯೊಳಗೆ ಕಾಲಿಡುತ್ತಿದ್ದಂತೆ, ‘ಯಾವಾಗಲೂ ಶೋಕಗೀತೆ ಕೇಳ್ತೀರಲ್ಲ... ಇದೊಂದ್ ಹಾಡು ನೋಡಿ’ ಎಂದು ಮೊಬೈಲ್ ಕೈಗಿಟ್ಟಳು ಹೆಂಡ್ತಿ. ‘ಮದ್ವೆಯಾಗಿ ತಪ್ಪು ಮಾಡ್ದೆ...’ ತಾಸಿನ ಹಿಂದಷ್ಟೇ ಆಡಿದ ಮಾತುಗಳು ವಾಟ್ಸ್‌ಆ್ಯಪ್ ವಿಡಿಯೊದಲ್ಲಿ ಪ್ರತಿಧ್ವನಿಸತೊಡಗಿದವು!

ಆ ವಿಡಿಯೊ ನೋಡಿ ಹೆಂಡತಿಗಿಂತ ಹೆಚ್ಚು ಶಾಕ್‌ ಆಗಿದ್ದು ವಿಜಿಯ ‘ಅನರ್ಹ’ ಗೆಳೆಯರಿಗೆ. ‘ನಮ್ಮ ಮೇಲಿನ ಪ್ರೀತಿಗೆ ಇವನು ಈ ಮಾತು ಆಡಿದಾನೋ, ಅರ್ಥ ಮಾಡಿಕೊಂಡು ನಾವೇ ದೂರ ಹೋಗ್ಲಿ ಅಂತಾ ನಾಟಕಾನೋ ಗೊತ್ತಾಗ್ತಿಲ್ಲ’ ಅಂತ ಮಾತಾಡಿಕೊಂಡರು ಗೆಳೆಯರು. ವಿನಾಕಾರಣ ವಿಲನ್ ಆದ ವಿಜಿ, ಸಹಾಯಕ್ಕಾಗಿ ಶಾಣ್ಯಾ ಮಾವನಿಗೆ ಫೋನ್ ಮಾಡಿದ, ‘ನೋಡಪ್ಪ ನಿನ್ನ ಸಂಸಾರ, ನಿನ್ನ ಫ್ರೆಂಡ್ಸು, ನೀನೇ ಸರಿ ಮಾಡ್ಕೊ’ ಎಂದು ಅಮಿತ ಆನಂದದಲ್ಲಿ ಫೋನ್ ಕಟ್ ಮಾಡಿದ ಮಾವ.

ಇತ್ತೀಚೆಗಷ್ಟೇ ಕ್ಲೋಸ್ ಫ್ರೆಂಡ್ ಆದ ಕುಮ್ಮಿಗೆ ಫೋನ್ ಮಾಡಿ ‘ಅಂದು ಬಂದ ಸಂಬಂಧಿಕರಲ್ಲಿ ವಿಡಿಯೊ ಮಾಡಿದ್ದು ಯಾರು?’ ಅಂತ ಕೇಳ್ದ ವಿಜಿ. ‘ನಿನ್ ಮದ್ವೆಗೂ ಮುನ್ನ ನಿನ್ನ ಹುಡುಗಿಯನ್ನು ನಿಮ್ಮ ರಿಲೇಷನ್ಸ್‌ನಲ್ಲೇ ತುಂಬಾ ಜನ ಇಷ್ಟಪಡ್ತಿದ್ರು. ಅವರಲ್ಲಿ ಯಾರಾದ್ರೂ ಇರಬಹುದು...’

‘ಯಾರಿರಬಹುದು?’

‘ಸಂತೋಷ, ಸಿದ್ಧೇಶ, ಜಗದೀಶ, ಲಕ್ಷ್ಮೀಶ ನೂರಾರು ಹೆಸರು ಶಿವನೀಗೆ...’ ಹಾಡತೊಡಗಿದ ಕುಮ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.