ADVERTISEMENT

ಚುರುಮುರಿ| ಎಮ್ಮೆಗೆ ಮಾಸ್ಕ್!

​ಪ್ರಜಾವಾಣಿ ವಾರ್ತೆ
Published 20 ಮೇ 2020, 22:13 IST
Last Updated 20 ಮೇ 2020, 22:13 IST
ಚುರುಮುರಿ
ಚುರುಮುರಿ   

ಮೊಬೈಲಿನೊಳಗೇ ಮುಳುಗಿಹೋಗಿದ್ದ ಮೊಮ್ಮಗ ಮಂಜನಿಗೆ ‘ಮೂರೊತ್ತೂ ಮೊಭಿಲ್ಲಿನ್ಯಾಗೆ ಮೂತಿ ಇಳೆ ಬಿಟ್ಕಂಡಿರ್ತಿ ಮಂಗ್ಯಂತಗಂಬಂದು?’ ಎಂದು ಬೈದಳು ದ್ಯಾಮವ್ವ.

ಆಗ ಮಂಜ ‘ಅಜ್ಜಿ ಅದು ಮೊಭಿಲ್ಲಲ್ಲ, ಮೊಬೈಲು’ ಅಂದ.

‘ಎಂತದೋ ಒಂದೈಲು! ನಿನ್ ವಯಸ್ಸಿನ್ಯಾಗೆ ನಾನ್ ನೂರೆಮ್ಮಿ ಮೇಯುಸ್ತುದ್ದೆ. ಅಟ್ಟಿಯೊಳ್ಗೆ ನಂಗೆ ಎಮ್ಮಿದ್ಯಾಮಿ ಅಂತ್ಲೆ ಯೆಸುರಿತ್ತು’.

ADVERTISEMENT

‘ಅಜ್ಜಿ ನೀನು ಎಮ್ಮೆ ಸ್ಪೆಷಲಿಸ್ಟು. ನಾನು ಎಂಬೆಡೆಡ್ ಅನಲಿಸ್ಟು. ನಿನ್ ಜಾಬು ಈ ಕಾಲಕ್ಕೆ ವರ್ಕೌಟ್ ಆಗಲ್ಲ’.

‘ನೀನ್ಯೇನ್ ಕಡದು ದಬ್ಬಾಕಿದ್ರು ಆಲ್ ಕುಡಿಯಕ್ ಎಮ್ಮಿನೇ ಸಾಕ್ಬಕು. ಉಂಬಕ್ಕ ವಲದೊಳಿಕ್ ಗೈಮೆನೇ ಮಾಡ್ಬಕು. ಎಪ್ಪತ್ವರ್ಸಾದ್ರು ಇವತ್ಗೂ ನಾಕೆಮ್ಮಿ ಕಟ್ಟದನಿ ನಾನು’ ಅಂದಳು. ಆಗ ಮಾತು ಮರೆಸಿದ ಮಂಜ ‘ಅಜ್ಜಿ, ಅಂದ್ಹಂಗೆ ನೀನ್ಯಾಕೆ ಮಾಸ್ಕ್ ಹಾಕ್ಕೊಳಲ್ಲ?’ ಅಂದ. ಆಗ ದ್ಯಾಮವ್ವ ‘ನಮ್ತರ ಎಮ್ಮಿ ಚಾಕ್ರಿ ಮಾಡೋರ್ಗೆ ಯಾವ್ ವೈರಾಣಿ- ಆವ್ರಾಣಿನೂ ಅಂಟಲ್ಲ’ ಅಂದಳು.

ಅದಕ್ಕೆ ಮಂಜ ‘ಅಜ್ಜಿ ಹಾವ್ರಾಣಿ ಅಂಟಲ್ಲ, ಆದ್ರೆ ವೈರಾಣಿ- ಸ್ಸಾರಿ ವೈರಸ್ ಅಂಟಲ್ಲ ಅನ್ನೋದು ತಪ್ಪು’ ಎಂದ.

‘ಮುದ್ದೆ ಉಳ್ಳಿಕಾಳ್ಸಾರ್ ತಿನ್ನೊ ನಂಗೆ ಕ್ವರಾನ್ವೂ ಬರಲ್ಲ ಗಿರಾನ್ವೂ ಬರಲ್ಲ. ಅಷ್ಟಕ್ಕು ನನ್ ಎಮ್ಮಿಗೊಳ್ಗಿಲ್ಲದ್ ಮಾಸ್ಕು- ಮುಸ್ಕೆಲ್ಲ ನನಿಗ್ಯಾಕಿಪ್ಪಟ್ಟು?’ ಎಂದಳು.

ಅಜ್ಜಿಯ ಮುಗ್ಧತೆಗೆ ಮರುಗಿದ ಮಂಜ, ಅವಳು ಮಾಸ್ಕ್ ಹಾಕಿಕೊಳ್ಳುವಂತೆ ಎಷ್ಟೆಲ್ಲಾ ಮನವರಿಕೆ ಮಾಡಿದರೂ ಒಪ್ಪದಿದ್ದಾಗ ಕೊನೆಗೆ ‘ಅಜ್ಜಿ ನಿನ್ ನಾಕೆಮ್ಮೆಗಳಿಗೂ ಆರ್ಡರ್ ಕೊಟ್ಟು ರೇಷ್ಮೆ ಮಾಸ್ಕ್‌ಗಳನ್ನ ಮಾಡಿಸಿಕೊಡ್ತೀನಿ. ಆಗಲಾದರೂ ನೀನು ಮಾಸ್ಕ್ ಹಾಕ್ಕೊಳ್ತಿಯಾ?’ ಎಂದ.

ತನ್ನ ಎಮ್ಮೆಗಳ ಬಗೆಗೆ ಮೊಮ್ಮಗನ ಕಾಳಜಿ ಕಂಡ ದ್ಯಾಮವ್ವನ ಮುಖವರಳಿ ‘ನನ್ನ ಎಮ್ಗೋಳ್ಗೆ ಮುಸ್ಗು ಮಾಡಿಸ್ಕೊಟ್ರೆ, ನಾನೂ ಮುಸ್ಗು ಆಕ್ಯಂತನಿ’ ಅಂದಳು ಖುಷಿಯಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.