ADVERTISEMENT

ಖರ್ಚಿಲ್ಲದೇ ಆರೋಗ್ಯ!

ಬಿ.ಎನ್.ಮಲ್ಲೇಶ್
Published 6 ಮೇ 2019, 19:57 IST
Last Updated 6 ಮೇ 2019, 19:57 IST
.
.   

ತಲೆ ತಿರುಗುತ್ತೆ ಎಂದು ಆಸ್ಪತ್ರೆಗೆ ಬಂದ ತೆಪರೇಸಿಯನ್ನು ಪರೀಕ್ಷಿಸಿದ ವೈದ್ಯರು ‘ಏನ್ರಿ ಇದೂ ಶುಗರ್ ನಾಲ್ಕುನೂರಿದೆ? ಬಹಳ ಡೇಂಜರ್, ನೀವು ಡಯಟ್ ಮಾಡ್ಲೇಬೇಕು’ ಎಂದು ಎಚ್ಚರಿಸಿ ಮಾತ್ರೆ, ಟಾನಿಕ್ಕು ಇತ್ಯಾದಿ ಬರೆದುಕೊಟ್ಟರು.

ಆ ಪಟ್ಟಿ ನೋಡಿ ಹೌಹಾರಿದ ತೆಪರೇಸಿ, ‘ಸರ್, ಮೋದಿಯವರು ಖರ್ಚಿಲ್ಲದೆ ಚುನಾವಣಾ ಪ್ರಚಾರ ಹೆಂಗೆ ಮಾಡಬೇಕು ಅಂತ ಹೇಳಿಕೊಟ್ಟಿದ್ದಾರೆ. ಅದೇ ತರ, ಖರ್ಚಿಲ್ಲದೆ ಹೇಗೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ನೀವು ಹೇಳಿಕೊಟ್ರೆ ಉಪಕಾರವಾಗುತ್ತೆ’ ಎಂದ.

‘ಖರ್ಚಿಲ್ಲದೆ ಪ್ರಚಾರನಾ? ಏನದು? ಮೋದಿ ಏನು ಹೇಳಿಕೊಟ್ಟಿದ್ದಾರೆ?’ ವೈದ್ಯರಿಗೆ ಕುತೂಹಲ.

ADVERTISEMENT

‘ಏನಿಲ್ಲ ಸಾರ್. ಚುನಾವಣಾ ಪ್ರಚಾರ ಮಾಡುವಾಗ ಮೊದಲು ಒಬ್ಬರ ಮನೆಗೆ ಹೋಗಿ. ಅವರು ‘ಟೀ ಕುಡೀತೀರಾ?’ ಅಂತ ಕೇಳ್ತಾರೆ. ಹೂಂ ಅನ್ನಿ. ಅಲ್ಲಿಗೆ ಟೀ ಖರ್ಚು ಮುಗೀತು. ನಂತರ ಇನ್ನೊಂದು ಮನೆಗೆ ಹೋದಾಗ ಅವರು ‘ತಿಂಡಿ ತಗೊಳ್ಳಿ’ ಅಂತಾರೆ. ತಗೊಳ್ಳಿ. ಅಲ್ಲಿಗೆ ತಿಂಡಿ ಖರ್ಚು ಮುಗೀತು. ನಂತರ ಇನ್ನೊಂದು ಮನೆ. ಹಾಗೇ ಅಲ್ಲಿದ್ದ ದಿನಪತ್ರಿಕೆ ಓದಿ ಬನ್ನಿ. ಅಲ್ಲಿಗೆ ಆ ಖರ್ಚೂ ಉಳೀತು...!’ ತೆಪರೇಸಿ ವಿವರಿಸಿದ.

‘ಓ ಹಾಗೋ... ಸರಿ ಅದೇ ತರ ಖರ್ಚಿಲ್ಲದೆ ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಅಂತ ನಾನು ಹೇಳಿಕೊಡ್ತೀನಿ’ ಎಂದ ವೈದ್ಯರು, ‘ನೀವು ಹಸಿ ತರಕಾರಿ ಹೆಚ್ಚು ತಿನ್ನಬೇಕು. ಒಂದು ಕೆಲ್ಸ ಮಾಡಿ, ನಾಳೆ ಮಾರ್ಕೆಟ್‍ಗೆ ಹೋಗಿ ‘ಹೆಂಗಮ್ಮ ಕ್ಯಾರೆಟ್?’ ಅಂತ ಕೇಳ್ತಾ ಕೇಳ್ತಾ ಒಂದು ಕ್ಯಾರೆಟ್ ಮುರಿದು ಬಾಯಿಗೆ ಹಾಕ್ಕೊಳ್ಳಿ. ನಂತರ ಸೌತೇಕಾಯಿ ಮಾರೋರ ಹತ್ರ ಹೋಗಿ ‘ಎಳೇದೇನಮ್ಮ’ ಅಂತ ಕೇಳ್ತಾ ಅರ್ಧ ಮುರಿದು ತಿನ್ನಿ. ಹಾಗೇ ಮುಂದಕ್ಕೆ ಹೋಗಿ ಬೀನ್ಸ್, ಬೆಂಡೆಕಾಯಿ ಇತ್ಯಾದಿ ಹಸಿ ತರಕಾರಿನೆಲ್ಲ ಸ್ವಲ್ಪ ಸ್ವಲ್ಪ ತಿಂದು ಮನೆಗೆ ಹೋಗಿ. ಅಲ್ಲಿಗೆ ಆ ದಿನದ ಡಯಟ್ ಮುಗೀತು. ಮರುದಿನ ಇನ್ನೊಂದು ಮಾರ್ಕೆಟ್‍ಗೆ ಹೋಗಿ. ಖರ್ಚೇ ಇಲ್ಲದೆ ಶುಗರ್ ಇಳಿಯುತ್ತೆ. ಈಗ ನನ್ನ ಫೀಸು ಕೊಡಿ’ ಎಂದರು.

‘ವಾಹ್! ಎಂಥ ಐಡಿಯಾ ಸಾರ್’ ಎಂದು ತೆಪರೇಸಿ ವೈದ್ಯರ ಕೈ ಕುಲುಕಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.