ADVERTISEMENT

ಕೇಸರಿ ‘ಬಾತ್’!

ಬಿ.ಎನ್.ಮಲ್ಲೇಶ್
Published 21 ಅಕ್ಟೋಬರ್ 2021, 21:10 IST
Last Updated 21 ಅಕ್ಟೋಬರ್ 2021, 21:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಂಜಮ್ಮನ ಚಾದಂಗಡಿ ಮುಂದೆ ಎರಡೂ ಕೆನ್ನೆ ಊದಿಸಿಕೊಂಡು ಕೂತಿದ್ದ ದುಬ್ಬೀರನನ್ನ ಕಂಡ ತೆಪರೇಸಿ ‘ಇದೇನೋ ದುಬ್ಬೀರ, ಎರಡೂ ಕೆನ್ನೆ ಬಾತುಕೊಂಡಾವಲ್ಲ, ಯಾಕೆ ಏನಾತು?’ ಎಂದು ವಿಚಾರಿಸಿದ. ದುಬ್ಬೀರ ಮಾತಾಡಲಿಲ್ಲ.

ಮಂಜಮ್ಮನಿಗೆ ಕನಿಕರ. ‘ಏನಾತೋ? ಬಾಳ ನೋವೈತಾ?’ ಎಂದು ಕಕ್ಕುಲಾತಿ ತೋರಿದಳು. ಆಗಲೂ ದುಬ್ಬೀರ ಪಿಟಕ್ಕನ್ನಲಿಲ್ಲ.

‘ಅವನು ಮಾತಾಡಲ್ಲ, ಆದ್ರೆ ಅವನ ಕೆನ್ನೆ ಯಾಕೆ ಬಾತುಕೊಂಡಾವೆ ಅಂತ ನಂಗೊತ್ತು’ ಎಂದ ಗುಡ್ಡೆ ನಗುತ್ತ.

ADVERTISEMENT

‘ಹೌದಾ? ಯಾಕೆ ಏನಾತು?’ ಕೊಟ್ರೇಶಿಗೆ ಕುತೂಹಲ.

‘ಏನಾತು ಅಂದ್ರೆ, ಮೊನ್ನೆ ಏನಕ್ಕೋ ದುಬ್ಬೀರ ಪೊಲೀಸ್ ಸ್ಟೇಶನ್ ಮುಂದೆ ಹೊಂಟಿದ್ನಂತೆ. ಅಲ್ಲಿ ಬಹಳ ಜನ ಕೇಸರಿ ಶಲ್ಯ ಹಾಕ್ಕಂಡು ಕುಂತಿದ್ದು ನೋಡಿ ‘ನೀವು ಸಂಘದೋರಾ? ದೀಕ್ಷೆ ಕೊಡೋರಾ?’ ಅಂತ ಕೇಳಿದ್ನಂತೆ. ಅದಕ್ಕೆ ಅವರು ದುಬ್ಬೀರನ ಕೆನ್ನೆಗೆ ಪಟಾರ್ ಅಂತ ಬಾರಿಸಿ ‘ಏಯ್, ಕಣ್ ಕಾಣ್ಸಲ್ವ? ಇದು ಪೊಲೀಸ್ ಸ್ಟೇಶನ್ನು. ನಾವೆಲ್ಲ ಪೊಲೀಸ್ರು’ ಅಂದ್ರಂತೆ.

ಕಕ್ಕಾಬಿಕ್ಕಿಯಾದ ದುಬ್ಬೀರ ಕೆನ್ನೆ ಉಜ್ಜಿ ಕೊಂಡು ಮನೆ ಕಡೆ ಬರೋವಾಗ ರಸ್ತೇಲಿ ಕೇಸರಿ ಶಲ್ಯ ಹಾಕ್ಕಂಡೋರು ಇಬ್ರು ಯಾರದೋ ಜಗಳ ನೋಡ್ಕಂಡು ಸುಮ್ನೆ ನಿಂತಿದ್ದನ್ನು ನೋಡಿ
‘ರೀ... ಇಬ್ರೂ ಪೊಲೀಸ್ ಆಗಿ ಜಗಳ ನೋಡ್ಕಂಡ್ ನಿಂತಿದೀರಲ್ಲ, ಬಿಡ್ಸೋಕಾಗಲ್ವ?’ ಅಂದ್ನಂತೆ. ಅವರು ದುಬ್ಬೀರನ ಇನ್ನೊಂದ್ ಕೆನ್ನೆಗೆ ಪಟೀರ್ ಅಂತ ಬಾರಿಸಿ ‘ಏಯ್,
ನಾವು ಪೊಲೀಸರಲ್ಲ, ಸಂಘದೋರು. ನೀನ್ಯಾವನು ಇದನ್ನ ಕೇಳಾಕೆ’ ಅಂದ್ರಂತೆ. ಅಲ್ಲಿಗೆ ಎರಡೂ ಕೆನ್ನೆ ಢಮಾರ್! ಇದು ಕತೆ’ ಎಂದ ಗುಡ್ಡೆ.

‘ಹೌದಾ? ಪಾಪ ದುಬ್ಬೀರ, ಬೆಳಗ್ಗಿಂದ ಏನಾದ್ರು ತಿಂದಿದಾನೋ ಇಲ್ವೋ... ಮಂಜಮ್ಮ ತಿಂಡಿ ಏನೈತೆ?’ ತೆಪರೇಸಿ ಕೇಳಿದ.

‘ತಿಂಡಿ ಖಾಲಿ, ಕೇಸರಿಬಾತೈತೆ ಕೊಡ್ಲಾ?’ ಎಂದಳು ಮಂಜಮ್ಮ. ‘ಅಯ್ಯೋ ಬ್ಯಾಡಪ್ಪಾ ಬ್ಯಾಡ’ ಅನ್ನೋತರ ತಲೆ ಆಡಿಸಿ ಕೈಮುಗಿದ ದುಬ್ಬೀರ. ಎಲ್ಲರೂ ಒಳಗೇ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.