ADVERTISEMENT

ಮಾನವ ಬಾಂಬು!

ಬಿ.ಎನ್.ಮಲ್ಲೇಶ್
Published 23 ಜನವರಿ 2020, 19:53 IST
Last Updated 23 ಜನವರಿ 2020, 19:53 IST
ಚುರುಮುರಿ
ಚುರುಮುರಿ   

ಬೆಳ್ಳಂಬೆಳಿಗ್ಗೆ ಪೊಲೀಸ್ ಠಾಣೆಗೆ ನುಗ್ಗಿ ಬಂದ ವ್ಯಕ್ತಿಯೊಬ್ಬ ಇನ್‌ಸ್ಪೆಕ್ಟರ್ ಮುಂದೆ ನಿಂತು ಏದುಸಿರು ಬಿಡುತ್ತ ‘ಸರ್ ಬಾಂಬು...’ ಎಂದ!

ಬಾಂಬು ಎಂಬ ಶಬ್ದ ಕೇಳಿದ ತಕ್ಷಣ ನಡುಗಿ ಹೋದ ಇನ್‌ಸ್ಪೆಕ್ಟರ್‌ ‘ಬಾಂಬಾ? ಎಲ್ಲಿ? ಯಾರು? ಯಾವಾಗ?’ ಎಂದು ಗಾಬರಿಗೊಂಡರಲ್ಲದೆ, ತಮ್ಮ ಸಿಬ್ಬಂದಿಗೆ ‘ಲೇಯ್ ಯಾರಿದೀರೋ ಅಲ್ಲಿ? ಬೇಗ ಬಾಂಬ್ ನಿಷ್ಕ್ರಿಯ ದಳದವರಿಗೆ ಫೋನ್ ಮಾಡಿ...’ ಎಂದು ಕೂಗಿ ಹೇಳಿದರು.

ಹೊರಗಿದ್ದ ಸಿಬ್ಬಂದಿಗೆ ಬರೀ ‘ದಳ’ ಅಂದಿದ್ದಷ್ಟೇ ಕೇಳಿಸಿ ‘ಯಾರು ಜನತಾದಳದವರಿಗೆ ಫೋನ್ ಮಾಡ್ಬೇಕಾ ಸಾರ್?’ ಎಂದು ಪ್ರಶ್ನಿಸಿದರು.

ADVERTISEMENT

‘ನಿನ್ ತಲೆ, ಜನತಾದಳ ಅಲ್ಲ, ಬಾಂಬ್ ನಿಷ್ಕ್ರಿಯ ದಳಕ್ಕೆ ಫೋನ್ ಮಾಡು’ ಎಂದವರೇ ಆ ವ್ಯಕ್ತಿಯ ಕಡೆ ತಿರುಗಿ ‘ಎಲ್ಲಿದೆ ಬಾಂಬು?’ ಎಂದು ಪ್ರಶ್ನಿಸಿದರು.

ಆ ವ್ಯಕ್ತಿ ‘ಸರ್ ನಾನು ತೆಪರೇಸಿ ಅಂತ. ಮೊದ್ಲು ನನ್ನ ಲಾಕಪ್‍ಗೆ ಹಾಕಿ, ಆಮೇಲೆ ಎಲ್ಲ ಹೇಳ್ತೀನಿ’ ಎಂದ.

ಇನ್‌ಸ್ಪೆಕ್ಟರ್‌ ಆತನನ್ನು ಲಾಕಪ್‍ಗೆ ಹಾಕಿ ಬೀಗ ಜಡಿದರು. ಇದ್ದಕ್ಕಿದ್ದಂತೆ ಹೊರಗಡೆ ಏನೋ ಗಲಾಟೆ. ‘ಎಲ್ಲಿದೀಯೋ ನನ್ ಗಂಡಾ... ತಪ್ಪಿಸ್ಕಂಡ್ ಓಡಿ ಬರ್ತೀಯಾ? ರಾತ್ರಿ ಎಲ್ಲ ಯಾರ ಮನೇಲಿದ್ದೆ ಹೇಳದಿದ್ರೆ ಇವತ್ತು ನಿನ್ನ ಹುಟ್ಟಿಲ್ಲ ಅನ್ನಿಸಿಬಿಡ್ತೀನಿ...’ ಎಂದು ಕೂಗಾಡುತ್ತ ಕೈಯಲ್ಲಿ ಮಚ್ಚು ಹಿಡಿದ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಪ್ರವೇಶಿಸಿದಳು.

ಲಾಕಪ್‍ನಲ್ಲಿದ್ದ ತೆಪರೇಸಿ ಥರಥರ ನಡುಗುತ್ತ ‘ಸಾರ್ ಅವಳೇ ಸಾ ಮಾನವ ಬಾಂಬು, ನನ್ ಹೆಂಡ್ತಿ... ನೀವು ಲಾಕಪ್ ತೆಗೆದ್ರೆ ನನ್ನ ಕೊಂದೇಬಿಡ್ತಾಳೆ...’ ಎಂದ!

ಇನ್‌ಸ್ಪೆಕ್ಟರ್‌ಗೆ ಎಲ್ಲ ಅರ್ಥವಾಗಿ ಹೋಯಿತು. ತಮ್ಮ ಸಿಬ್ಬಂದಿಗೆ ಕೂಗಿ ಹೇಳಿದರು ‘ಲೇಯ್, ಲಾಕಪ್ ಬೀಗ ತೆಗೆದು ಆಯಮ್ಮನ್ನ ಒಳಗಡೆ ಬಿಡ್ರೋ. ಹಂಗೇ ಒಂದು ದಪ್ಪನೆ ಲಾಠಿ ಕೊಡಿ ಇಲ್ಲಿ. ಅವನ್ಯಾರೋ ಮಂಗಳೂರಲ್ಲಿ ಬಾಂಬ್ ಇಟ್ಟ ಅಂತ ಇವನು ನಂಗೇ ಬಾಂಬ್ ಇಡೋಕೆ ಬಂದವ್ನೆ. ಎಷ್ಟು ಕೊಬ್ಬಿರಬೇಕು ಇವನಿಗೆ...’ ಎನ್ನುತ್ತಾ ಎದ್ದು ನಿಂತರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.