ADVERTISEMENT

ಸಿಲಿಂಡರ್ ಸಾಂತ್ವನ

ಮಣ್ಣೆ ರಾಜು
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST
   

‘ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗ್ತಾ ಇದ್ದೀನಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗ್ತೀನಿ’ ಎಂದ ಶಂಕ್ರಿ.

‘ನರಿ ಕೂಗು ಗಿರಿಗೆ ಮುಟ್ಟುತ್ತೇನ್ರೀ...? ಬೆಲೆ ಏರಿಕೆ ಅಂತ ಕೂಗಾಡಿದರೆ ಬಿ.ಪಿ ಏರುತ್ತೆ ಅಷ್ಟೇ’ ಎಂದಳು ಸುಮಿ.

‘ಜನರ ಹೋರಾಟಕ್ಕೆ ಸರ್ಕಾರಗಳೇ ಉರುಳಿವೆ, ಇನ್ನು ಸಿಲಿಂಡರ್ ಬೆಲೆ ಇಳಿಯುವುದಿಲ್ಲವಾ?’

ADVERTISEMENT

‘ಬೆಲೆ ಏರಿಕೆ ವಿರುದ್ಧ ಹೋರಾಡಿ ಸರ್ಕಾರದ ಬೆಲೆ ಕಳೆಯುವುದು ದೇಶದ್ರೋಹವಂತೆರೀ. ಹೋರಾಟ ಮಾಡಬೇಡಿ, ಅದರ ಬದಲು ಗ್ಯಾಸ್ ಉಳಿಸುವುದನ್ನು ತಿಳಿಯಿರಿ ಅಂತ ಜನಹಿತ ಸಂಘಟನೆಯವರು ಮಹಿಳೆಯರಿಗೆ ಏರ್ಪಡಿಸಿದ್ದ ‘ಸಿಲಿಂಡರ್ ಸಾಂತ್ವನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ಯಾಸ್ ಉಳಿತಾಯದ ಟಿಪ್ಸ್ ಕಲ್ತುಕೊಂಡಿದ್ದೀನಿ’ ಅಂದಳು ಸುಮಿ.

‘ಅದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾರ್ಯಕ್ರಮ. ಗ್ಯಾಸ್ ಉರಿಯದೆ ಯಾವ ಮನೆಯ ಬೇಳೆಯೂ ಬೇಯದು’ ಅಂದ ಶಂಕ್ರಿ.

‘ಹಾಗಲ್ಲರೀ, ಮನೆಗೆ ಬಂದ ಸ್ನೇಹಿತರಿಗೆ ಕಾಫಿ, ಟೀ ಕೊಡಲು ಸ್ಟೌ ಹಚ್ಚುವ ಬದಲು ಹಣ್ಣು ಹೆಚ್ಚಿಕೊಟ್ಟರೆ ಸಾಕಂತೆ. ವಾರದಲ್ಲಿ ಎರಡು ದಿನ ಮನೆಮಂದಿಯೆಲ್ಲಾ ಉಪವಾಸವಿದ್ದು ಒಲೆ ಹಚ್ಚದೆ, ದೇವರಿಗೆ ದೀಪ ಹಚ್ಚಿದರೆ ಗ್ಯಾಸೂ ಉಳಿಯುತ್ತೆ, ದೇವರ ಕೃಪೆನೂ ಸಿಗುತ್ತಂತೆ’.

‘ಅಡುಗೆ ಮಾಡದೆ ಹೆಂಡತಿ ಮುನಿಸಿಕೊಂಡರೂ ಗ್ಯಾಸ್ ಉಳಿಯುತ್ತದೆ ಅಲ್ವಾ?’

‘ಹೌದು ರೀ, ಗಂಡ-ಹೆಂಡ್ತಿ ಜಗಳವಾದಾಗ ಹೋಟೆಲ್‍ನಲ್ಲಿ ಊಟ-ತಿಂಡಿ ತಿಂದರೆ ಸಾಮರಸ್ಯ ಬೆಳೆಯುತ್ತಂತೆ. ಗ್ಯಾಸೂ ಸೇವ್ ಆಗುತ್ತೆ. ವಾರಕ್ಕೆರಡು ಜಗಳ ಇರಲಿ ಅಂತ ಸಲಹೆ ಕೊಟ್ಟಿದ್ದಾರೆ. ಮದುವೆ, ನಾಮಕರಣ, ಗೃಹಪ್ರವೇಶಗಳನ್ನು ಮಿಸ್‍ ಮಾಡಿಕೊಳ್ಳದೆ ಮನೆಮಂದಿಯೆಲ್ಲಾ ಹೋಗಿ ಉಂಡು ಬನ್ನಿ, ಸಂಬಂಧ ಸುಧಾರಿಸುತ್ತೆ ಅಂತನೂ ಹೇಳಿದ್ದಾರೆ’.

‘ಒಲೆ ಹಚ್ಚದೆ ಗೆಡ್ಡೆ-ಗೆಣಸು ತಿಂದುಕೊಂಡಿದ್ರೆ ಹೆಚ್ಚಿನ ಗ್ಯಾಸ್ ಉಳಿತಾಯವಾಗುತ್ತೆ’.

‘ನಿಜರೀ, ಹಸಿ ತರಕಾರಿ ಆರೋಗ್ಯಕ್ಕೆ ಒಳ್ಳೆಯದಂತೆ. ಇವತ್ತು ಎಲ್ಲರೂ ಹಸಿ ತರಕಾರಿ ತಿನ್ನೋಣ’ ಎಂದು ಸುಮಿ ಬ್ಯಾಗ್ ಹಿಡಿದು ತರಕಾರಿ ಅಂಗಡಿಗೆ ಹೊರಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.