ADVERTISEMENT

ಕಟ್ಟುವೆವು ವಾಲೊಂದನು

ಗುರು ಪಿ.ಎಸ್‌
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
   

‘ರೀ, ನಾಳೆ ನಮ್ಮನೆಗೆ ನೆಂಟರು ಬರ್ತಿದ್ದಾರೆ’.

‘ಅದಕ್ಕೇನ್ ಮಾಡಬೇಕೀಗ?’

‘ಕಟ್ಟಿಗೆ ಮಂಚ ಇಷ್ಟಿಷ್ಟೇ ಸೀಳು ಬಿಡ್ತಿದೆ. ವಾಷಿಂಗ್‌ ಮಷೀನ್‌ ಮೇಲಿನ ಹೊದಿಕೆ ಕಿತ್ಕೊಂಡು ಬರ್ತಿದೆ. ಗೋಡೆ ಬಣ್ಣವೆಲ್ಲ ಮಾಸಿ ಓಬೀರಾಯನ ಕಾಲದ ಮನೆ ಕಂಡಂಗೆ ಕಾಣ್ತಿದೆ’.

ADVERTISEMENT

‘ಅವರು ಬರ್ತಿರೋದು ನಮ್ಮನ್ನ ನೋಡೋಕೊ, ನಮ್ಮ ಮನೇಲಿರೊ ವಸ್ತುಗಳನ್ನ ನೋಡೋಕೊ?’

‘ನಮ್ಮನ್ನ ನೋಡೋಕೆ... ಬಂದಾಗ ಮನೇನ, ಮನೇಲಿರೊ ವಸ್ತುಗಳನ್ನ ನೋಡೋದಿಲ್ವ?’

‘ನೆಂಟರಿಗೆ ಬರಬೇಡಿ ಅಂತ ಹೇಳಿಬಿಡೋಣ ಬಿಡು’.

‘ನಮ್ಮನೆ ಕಡೆಯವರಾಗಿದ್ದಕ್ಕೆ ಹೀಗೆ ಹೇಳ್ತಿ ದ್ದೀರಿ. ನಿಮ್‌ ಕಡೆಯವರಾಗಿದ್ರೆ ಎಲ್ಲ ವ್ಯವಸ್ಥೆ ಮಾಡ್ತಿದ್ರಿ’.

‘ಆಯ್ತು ಬಿಡು... ಮಂಚದ ಮೇಲೆ ಮೊನ್ನೆ ತಂದಿದ್ದ ಹೊಸ ಬೆಡ್‌ಸ್ಪ್ರೆಡ್‌ ಹಾಕು. ನಿನ್ನದು ಯಾವುದಾದರೂ ಚೆಂದ ಇರೋ ಹಳೇ ಸೀರೇನ ಹರಿದು, ಡಿಸ್‌ ಡಿಸೈನ್‌ ಆಗಿ ಕಟ್‌ ಮಾಡಿ ವಾಷಿಂಗ್‌ ಮಷೀನ್‌ ಮೇಲೆ ಹಾಕು. ಮನೆ ಗೋಡೆ ಮೇಲೆ ಅಲ್ಲಲ್ಲಿ ಬಲೂನು ಕಟ್ಟಿಬಿಡು’.

ನನ್ನ ಐಡಿಯಾ ಕೇಳಿ ಹೆಂಡತಿ ಕಣ್ಸನ್ನೆಯಲ್ಲೇ ಮೆಚ್ಚುಗೆ ಸೂಚಿಸುತ್ತಿರುವಾಗಲೇ, ನಮ್ಮ ಮಾತುಕತೆಯನ್ನೆಲ್ಲ ವಿಡಿಯೊ ಮಾಡಿದ್ದ ಮಗಳು, ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದಳು!

‘ನೋಡು, ಸುಮ್ಮನಿದ್ದಿದ್ರೆ ನೆಂಟರು ಬಂದು, ತಿಂದು ಎದ್ದು ಹೋಗಿರೋರು. ಇಲ್ಲದ್ದೆಲ್ಲ ಮಾಡೋಕೆ ಹೋಗಿ ನಮ್ ಸ್ಥಿತಿ ಜಗತ್ತಿಗೆಲ್ಲ ಗೊತ್ತಾದಂಗಾಯ್ತು’ ಸಿಟ್ಟಿನಲ್ಲಿ ಪತ್ನಿಗೆ ಬೈಯುತ್ತಲೇ ಟಿ.ವಿ ಆನ್‌ ಮಾಡಿದೆ. ‘ಟ್ರಂಪ್‌ ಆಗಮನ: ಕೊಳೆಗೇರಿ ಕಾಣದಂತೆ ಗೋಡೆ ನಿರ್ಮಾಣ’ ಸುದ್ದಿ ಬಿತ್ತರವಾಗತೊಡಗಿತ್ತು. ‘ಬಡತನವನ್ನು ಅಡಗಿಸಿಡೋದು ನಾನೊಬ್ಬನೇ ಅಲ್ಲ’ ಅಂತ ಸಮಾಧಾನ ಪಟ್ಟುಕೊಂಡೆ.

ಅದೇ ಖುಷಿಯಲ್ಲಿ ಶಾಲಾ ವಾರ್ಷಿಕೋತ್ಸವಕ್ಕೆ ಮಗಳಿಗೊಂದು ಕವನ ಬರೆದುಕೊಟ್ಟೆ. ‘ಕಟ್ಟುವೆವು ನಾವು ಹೊಸ ವಾಲೊಂದನು, ಗಟ್ಟಿ ಗೋಡೆಯೊಂದನು... ಎನ್‌ಆರ್‌ಸಿ ಜಾರಿಯಾಗುವ ಮುನ್ನ, ಪೊರಕೆ ಬಲಿಷ್ಠವಾಗುವ ಮುನ್ನ’.

ಸ್ಕೂಲ್‌ ಟೀಚರ್‌ ಫೋನ್‌ನಿಂದ ಮಗಳು ಕರೆ ಮಾಡಿದಳು. ‘ಅಪ್ಪಾ, ನೀನು ಬರೆದಿದ್ದ ಕವನ ಓದಿ ಹೇಳಿದೆ. ಇಲ್ಲೊಬ್ಬ ಪೊಲೀಸಪ್ಪ ಬಂದು ಏನೇನೋ ಕೇಳಿ ಹೆದರಿಸ್ತಿದಾನೆ’. ಎದ್ದೆನೋ, ಬಿದ್ದೆನೋ ಎಂದು ಶಾಲೆಯತ್ತ ಓಡಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.