ADVERTISEMENT

ಬಂದ ಮೇಲೆ ಹೋಗಲ್ಲ

ಮಣ್ಣೆ ರಾಜು
Published 1 ಮೇ 2020, 20:00 IST
Last Updated 1 ಮೇ 2020, 20:00 IST
   

ಕಾಲಿಂಗ್ ಬೆಲ್ ರಿಂಗ್ ಆಯ್ತು. ಶಂಕ್ರಿ ಹೋಗಿ ಬಾಗಿಲು ತೆರೆದ.

‘ಓಹ್!...ಆಶಾ ಮೇಡಂ ಬನ್ನಿ ಒಳಗೆ...’ ಬರಮಾಡಿಕೊಂಡ.

‘ಆಶಾ ಮೇಡಂ, ಆರೋಗ್ಯವಾಗಿದ್ದೀರಾ?’ ಸುಮಿ ಕಾಫಿ ಕೊಟ್ಟಳು.

ADVERTISEMENT

‘ನಮ್ಮದಿರಲಿ, ನಿಮ್ಮ ಆರೋಗ್ಯ ವಿಚಾರಿಸಲು ಬಂದೆ. ಬಾಗಿಲಲ್ಲೇ ಮಾಹಿತಿ ಕೊಟ್ಟಿದ್ದರೆ ಸಾಕಾಗಿತ್ತು’ ಅಂದ್ರು ಮೇಡಂ.

‘ಮನೆ ಬಾಗಿಲಿಗೆ ಬರುವ ಆಶಾ
ಕಾರ್ಯಕರ್ತೆಯರಿಗೆ ಗೌರವ ಕೊಡಬೇಕು, ಸರಿಯಾದ ಮಾಹಿತಿ ಕೊಡಬೇಕು ಅಂತ ಸರ್ಕಾರ ಹೇಳಿದೆ’ ಅಂದ ಶಂಕ್ರಿ.

‘ಗೌರವದ ಜೊತೆಗೆ ಕಾಫಿಯನ್ನೂ ಕೊಟ್ರಿ, ಥ್ಯಾಂಕ್ಸ್... ನಿಮ್ಮ ಮನೆಯಲ್ಲಿ ಯಾರಿಗಾದ್ರೂ ಜ್ವರ ಇದೆಯಾ?’

‘ನನ್ನ ಗಂಡ ಜ್ವರ ಅಂತ ಎರಡು ದಿನ ಮಲಗಿದ್ದರು’ ಅಂದಳು ಸುಮಿ.

‘ಅಯ್ಯಯ್ಯೋ! ಇಲ್ಲ, ನನಗೆ ಆರೋಗ್ಯ ಇಲಾಖೆ ಜ್ವರ ಬಂದಿರಲಿಲ್ಲ, ಫ್ಯಾಮಿಲಿ ಜ್ವರ, ಹೆಂಡ್ತಿ ಜಾಸ್ತಿ ಕೆಲ್ಸ ಹೇಳ್ತಾಳೆ ಅಂತ ಜ್ವರದ ನೆಪ ಹೇಳಿ ಮಲಗಿದ್ದೆ...’ ಶಂಕ್ರಿ ಸಿಕ್ಕಿಬಿದ್ದ.

‘ಯಾರಿಗಾದ್ರೂ ಕೆಮ್ಮು ಇದೆಯೇ?’

‘ಇಲ್ಲ, ಗಂಡನಾಗಲಿ, ಮಕ್ಕಳಾಗಲಿ ಮನೇಲಿ ಕೆಮ್ಮಲು ನಾನು ಬಿಟ್ಟಿಲ್ಲ’ ಸುಮಿ ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡಳು.

‘ಹೌದು ಮೇಡಂ, ಹೆಂಡ್ತಿ ತುಂಬಾ ಸ್ಟ್ರಿಕ್ಟು. ಕೆಮ್ಮಬೇಕು ಅನಿಸಿದಾಗ ಹೊರಗೆ ಹೋಗಿ ಕೆಮ್ಮಿ ಬರ್ತೀನಿ’ ಅಂದ ಶಂಕ್ರಿ.

‘ಹೊರಗೆ ಕೆಮ್ಮುವುದು, ಉಗುಳುವುದು ದಂಡಾರ್ಹ ತಪ್ಪು’.

‘ತಮಾಷೆಗೆ ಹೇಳಿದೆ ಮೇಡಂ, ಯಾರಿಗೂ ಕೆಮ್ಮು, ಜ್ವರ ಇಲ್ಲ’.

‘ಲಾಕ್‍ಡೌನ್‍ನಲ್ಲೂ ತಮಾಷೆಯಾಗಿದ್ದೀರಿ ಎಂದರೆ ನಿಮ್ಮದು ಆರೋಗ್ಯವಂತ ಕುಟುಂಬ’ ಮೇಡಂ ಹೊಗಳಿದರು.

‘ನಮ್ಮ ಮನೆಯಲ್ಲಿ ಒಂದು ಕಾಯಿಲೆ ಇದೆ... ಮಕ್ಕಳು ಸದಾ ಮೊಬೈಲ್ ಹಿಡಿದಿರುತ್ತಾರೆ, ಮೊಬೈಲ್ ಕಾಯಿಲೆಗೆ ಮದ್ದು ಇಲ್ಲವೇ?’

‘ಮೊಬೈಲ್ ಕಾಯಿಲೆಯು ಬಿ.ಪಿ, ಶುಗರ್ ಥರಾ, ಬಂದ ಮೇಲೆ ಹೋಗಲ್ಲ, ನಿಮಗೆ ನೀವೇ ಕಂಟ್ರೋಲ್ ಮಾಡಿಕೊಳ್ಳಬೇಕಷ್ಟೇ...’ ಎನ್ನುತ್ತಾ ಆಶಾ ಮೇಡಂ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.