ADVERTISEMENT

ಚುರುಮುರಿ: ಬೇತಾಳದ ಪ್ರಶ್ನೆಗಳು

ಸುಮಂಗಲಾ
Published 7 ಡಿಸೆಂಬರ್ 2020, 18:31 IST
Last Updated 7 ಡಿಸೆಂಬರ್ 2020, 18:31 IST
ಚುರುಮುರಿ
ಚುರುಮುರಿ   

‘ಚಂದಮಾಮ’ ಓದುತ್ತಿದ್ದ ಬೆಕ್ಕಣ್ಣ ಹುರುಪಿನಲ್ಲಿತ್ತು. ‘ಒಂದ್ ಹೊಸ ಆಟ ಆಡೂಣು. ನಾ ಬೇತಾಳ, ನೀ ವಿಕ್ರಮಾದಿತ್ಯ. ನಾ ಕೇಳಿದ ಪ್ರಶ್ನಿಗೆಲ್ಲ ಸರೀ ಉತ್ತರ ಹೇಳಲಿಲ್ಲ ಅಂದ್ರ ನೋಡ್ ಮತ್ತ... ನೀ ಇಲ್ಲಿಟ್ಟಿರೂ ಗಿಡಗಳ ಕುಂಡ ಎಲ್ಲ ಬೀಳಿಸಿ ಹಾಕ್ಕೀನಿ’ ಎಂದು ಬೆದರಿಸಿತು.

‘ಬೀಗಗಳಲ್ಲಿ ಅತಿ ಶ್ರೇಷ್ಠ, ಸುಭದ್ರ, ಒಮ್ಮೆ ಹಾಕಿದರೆ ಮತ್ತೆ ತೆರೆಯಲು ಹಾಕಿದವರೇ ಬರಬೇಕು, ಮುರಿಯಲಾಗದ ಆ ಬೀಗ ಯಾವುದು?’ ಎಂದು ಮೊದಲ ಪ್ರಶ್ನೆ ಒಗೆಯಿತು.

‘ಕರುನಾಡಿನ ಕಮಲಕ್ಕನ ಮಕ್ಕಳ ಬಾಯಿ ಬೊಂಬಾಯಿ ಆಗಿಹುದು, ಇದ ಕಂಡು ಮೇಲಿರುವ ‘ಶಾ’ಣೇ ಯಜಮಾನರು, ಇವರೆಲ್ಲರ ಬಾಯಿಗೆ ಬಡಿದಿಹ ಬೀಗವೇ ಅತಿಸುಭದ್ರ’ ಎಂದೆ.

ADVERTISEMENT

‘ಶಭಾಶ್! ಪ್ರಜಾಪ್ರಭುತ್ವ ಅಂದ್ರ ಏನು?’

‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಸರ್ಕಾರ’ ಫಟ್ಟನೆ ವದರಿದೆ.

‘ಯಾವತ್ತೋ ಸಾಲೀವಳಗ ಉರು ಹೊಡೆದಿದ್ ಹೇಳಬ್ಯಾಡ. ಅದು 20ನೇ ಶತಮಾನದ್ದು, ಈಗ 21ನೇ ಶತಮಾನದ ವ್ಯಾಖ್ಯಾನ ಬ್ಯಾರೆ ಐತಿ. ಹೋಗ್ಲಿಬಿಡ್... ಸರ್ಕಾರ ನಡೆಸೋರು ಯಾರು?’ ನಾನು ಕಕಮಕ ಕಣ್ಣುಬಿಟ್ಟೆ.‌

‘ಪ್ರಜೆಗಳಂತೂ ಅಲ್ಲ ಅನ್ನೂದು ನನಿಗೂ ಗೊತ್ತೈತೆ, ನಿನಗೂ ಗೊತ್ತೈತೆ. ಜನಪ್ರತಿನಿಧಿಗಳಾ ಅಧಿಕಾರಿಗಳಾ ಅಧಿಕಾರದಲ್ಲಿರುವ ಪಕ್ಷದವರಾ ಮಠಗಳಾ ಅಥವಾ ‘ಅ’ದಿಂದ ‘ಅಂ’ವರೆಗಿನೋರಾ’ ಎಂದು ಬಹುಆಯ್ಕೆ ಪ್ರಶ್ನೆ ಮುಂದಿಟ್ಟು, ‘ಮತ್ತ ‘ಅ’ದಿಂದ ‘ಅಂ’ವರೆಗಿನೋರು ಅಂದ್ರ ‘ಅದಾನಿಯಿಂದ ಅಂಬಾನಿ’ವರೆಗಿನೋರು ಅಂತ ಬ್ರ್ಯಾಕೆಟ್ಟಿನಾಗೆ ಬರ್ಕೋ’ ಎಂದಿತು.

‘ನೀ ಇನ್ನೊಂದು ಆಯ್ಕೆ ಇಟ್ಟಿಲ್ಲ. ಈ ಮೇಲಿನ ಎಲ್ಲರೂ ಅನ್ನೂದು ಸರಿಯಾದ ಉತ್ತರ’ ಎಂದೆ.

ಬೆಕ್ಕಣ್ಣ ಇನ್ನೇನೋ ನಾನು ಉತ್ತರಿಸಲಾಗದ ಪ್ರಶ್ನೆ ಕೇಳಿ, ಕುಂಡಗಳನ್ನು ಒಡೆದರೆ ಗತಿಯೇನೆಂದು ‘ನಾನೇ ಬೇತಾಳನಾಗಿ, ಪ್ರಶ್ನೆ ಕೇಳ್ತೀನೀಗ. ಈ ಮೇಲಿನ ಐವರಲ್ಲಿ ಯಾರು, ಎಷ್ಟು ಪರ್ಸೆಂಟೇಜ್ ಸರ್ಕಾರ ನಡೆಸುತ್ತಾರೆ? ಯಾರು ಯಾರನ್ನು ಅವಲಂಬಿಸ್ಯಾರೆ?’ ಎಂದು ಕೇಳಿದೆ.

ಬೇತಾಳನಂತೆ ಪ್ರಶ್ನಿಸುತ್ತಿದ್ದ ಬೆಕ್ಕಣ್ಣ ಬಾಲ ಮುದುರಿ ಕೂತಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.