ADVERTISEMENT

ಚುರುಮುರಿ: ಕೊರೊನಾ ನಿಗಮ

ಮಣ್ಣೆ ರಾಜು
Published 29 ಡಿಸೆಂಬರ್ 2020, 19:30 IST
Last Updated 29 ಡಿಸೆಂಬರ್ 2020, 19:30 IST
   

‘ಮಂತ್ರಿಗಳೇ, ಕೊರೊನಾ ಅಪಾಯದಿಂದ ಪಾರಾಗುವ ಉಪಾಯ ಹೇಳಿ...’ ದೊರೆ ಕೇಳಿದರು.

‘ಹುಲಿ, ಸಿಂಹ ಹಿಡಿಯುವಷ್ಟು ಸುಲಭ ಅಲ್ಲ ಪ್ರಭು ಕೊರೊನಾ ಹಿಡಿಯುವುದು’ ಎಂದರು ಮಂತ್ರಿ.

‘ರಾತ್ರಿ ಕರ್ಫ್ಯೂ ವಾಪಸ್ ಪಡೆಯಬಾರದಾಗಿತ್ತು ಪ್ರಭು’ ಮತ್ತೊಬ್ಬ ಮಂತ್ರಿ ಹೇಳಿದರು.

ADVERTISEMENT

‘ಹಗಲು ಹೊತ್ತಿನಲ್ಲೇ ಕೊರೊನಾ ಕಣ್ಣಿಗೆ ಕಾಣುವುದಿಲ್ಲ, ಇನ್ನು ರಾತ್ರಿ ಹೊತ್ತು ಕರ್ಫ್ಯೂ ಹಾಕಿ ಕೊರೊನಾ ಕಂಟ್ರೋಲ್ ಮಾಡೋದು ಅಂದ್ರೆ, ಕತ್ತಲಲ್ಲಿ ಕರಡಿ ಹಿಡಿಯಲು ಹೊರಟಂತೆ ಆಗುತ್ತದೆ ಪ್ರಭು’.

‘ಹಾಗೇನಿಲ್ಲ, ಈಗಲೂ ಕರ್ಫ್ಯೂ ಜಾರಿ ಮಾಡಿ ತಾವು ಅಪ್ಪಣೆ ಕೊಟ್ಟರೆ ಸಾಕು, ನಮ್ಮ ಸೈನಿಕರು ಲಾಠಿ ಹಿಡಿದು, ಬಡಿದು ಓಡಿಸ್ತಾರೆ’ ಭದ್ರತಾ ಅಧಿಕಾರಿ ಹೇಳಿದರು.

‘ಲಾಠಿ ಹಿಡಿದು ಕೊರೊನಾ ಓಡಿಸ್ತೀರಾ?’ ದೊರೆ ಕೇಳಿದರು.

‘ಇಲ್ಲ ಪ್ರಭು, ರಸ್ತೆಯಲ್ಲಿ ಓಡಾಡುವ ಜನರನ್ನು ಹೊಡೆದು ಮನೆಗೆ ಓಡಿಸಿ ಕೊರೊನಾ ಹರಡುವುದನ್ನು ಕಂಟ್ರೋಲ್ ಮಾಡ್ತೀವಿ’.

‘ಹಿಂದೆ ಅದ್ಯಾರೋ ರಾಜ ರಾಜಧಾನಿಯನ್ನ ದೆಹಲಿಯಿಂದ ದೇವಗಿರಿಗೆ, ನಂತರ ದೇವಗಿರಿಯಿಂದ ದೆಹಲಿಗೆ ಬದಲಾಯಿಸಿದ
ನಂತಲ್ಲ, ಹಾಗಾಗುತ್ತದೆ ಅಷ್ಟೆ. ಪ್ರಭು, ಕೊರೊನಾಗೆ ಪ್ರತ್ಯೇಕ ಇಲಾಖೆ ಮಾಡಿಬಿಡಿ’ ಎಂದರು ಮತ್ತೊಬ್ಬ ಮಂತ್ರಿ.

‘ಕೆಮ್ಮಿಗೊಂದು, ನೆಗಡಿಗೊಂದು ಅಂತ ಕಾಯಿಲೆಗೊಂದೊಂದು ಇಲಾಖೆ ಮಾಡಲಾಗುತ್ತೇನ್ರೀ?’

‘ಪ್ರಭು, ಇಲಾಖೆ ವ್ಯವಹಾರವೇ ಬೇಡ, ಕೊರೊನಾ ನಿಗ್ರಹ ನಿಗಮ ಸ್ಥಾಪನೆ ಮಾಡಿ ಒಂದು ಲಕ್ಷ ಕೋಟಿ ರೂಪಾಯಿ ಅನುದಾನ ಕೊಟ್ಟು, ಕೊರೊನಾ ನಿಯಂತ್ರಣದ ಜವಾಬ್ದಾರಿ ವಹಿಸಿ. ತಾವು ಕೊರೊನಾ ಕಾಟವಿಲ್ಲದೆ ನಿರಾಳವಾಗಿ ರಾಜ್ಯಭಾರ ಮಾಡಬಹುದು’ ಇನ್ನೊಬ್ಬ ಮಂತ್ರಿಯ ಸಲಹೆ.

‘ಭೇಷ್! ಇಂತಹ ಒಳ್ಳೆಯ ಸಲಹೆ ಕೊಟ್ಟ ನಿಮಗೆ ಯಾವ ಬಹುಮಾನ ಕೊಡಲಿ?’ ಖುಷಿಯಿಂದ ಕೇಳಿದರು ದೊರೆ.

‘ದೊಡ್ಡದೇನೂ ಬೇಡ ಪ್ರಭು, ಕೊರೊನಾ ನಿಗ್ರಹ ನಿಗಮಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿಬಿಡಿ ಅಷ್ಟೆ...’ ಎಂದರು ಮಂತ್ರಿ.

ಸಭೆ ಗಪ್‍ಚುಪ್ ಆಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.