ADVERTISEMENT

‘ಹೊಡಿಮಗಾ’ ಕಾಲೇಜು

ಲಿಂಗರಾಜು ಡಿ.ಎಸ್
Published 28 ಜನವರಿ 2019, 20:28 IST
Last Updated 28 ಜನವರಿ 2019, 20:28 IST
   

‘ಸರಾ, ಅಡ್ಡಬಿದ್ದನ್ರೀ’ ಅಂದಿದ್ದು ಕೇಳಿ ತಲೆ ಎತ್ತಿದೆ. ನಾನು ಅಧ್ಯಾಪಕನಾಗಿದ್ದ ಮಿಡಲ್ ಸ್ಕೂಲಿನ ಖತರ್ನಾಕ್ ಶಿಷ್ಯ ಬಂಡ್ಯಾ ನಿಂತಿದ್ದ. ‘ಏನು ಬಂಡ್ಯಾ ಬಂದದ್ದು?‍’ ಅಂದೆ.

‘ಒಂದು ಕಾಲೇಜು ಆರಂಭ ಮಾಡಬೇಕು ಅಂತಾ ಅದೀನಿ ಸರ. ತಾವು ದಯವಿಟ್ಟು ಅದಕ್ಕ ಪ್ರಿನ್ಸಿಪಾಲರಾಗಬೇಕು’ ಅಂದ. ಎದೆ ಉಬ್ಬಿ 56 ಇಂಚಾಯಿತು. ಖುಷಿಯಿಂದ ಒಪ್ಪಿಕೊಂಡು ‘ಯಾವ ಥರದ ಕಾಲೇಜು?’ ಅಂದೆ.

‘ಸರಾ, ಅದರ ಹೆಸರು ಬಂಡ್ಯಾ ಬಡಿದಾಡಿಕೆ ಕಾಲೇಜು ಅಂತ್ರಿ. ಹೊಡಿಮಗಾ ಹೊಡಿಮಗಾ ಅನ್ನೂದು ನಮ್ಮ ಟ್ಯಾಗ್‌ಲೈನ್. ಅಲ್ಲಿ ನಮ್ಮ ಶಾಸಕರಿಗೆ ಮಾರ್ಶಲ್ ಆರ್ಟ್ಸ್‌ ತರಬೇತಿ ಕೊಡಬೇಕಂತ ವಿಚಾರೈತಿ. ಆತ್ಮರಕ್ಷಣೆ ಕಲೀಲಿಲ್ಲಂದ್ರ ಹೊಡತ ತಿಂದು ಹೊಯ್ಕೊಂತಾ ಆಸ್ಪತ್ರಿಗೆ ಬಂದು ಸೇರತಾರ. ನಾವು ಹೊಡದ್ರೂ ಗುರುತಿರದಂಗ ಹೊಡೆಯೋದೆಂಗೆ ಅಂತ ಪ್ರೊಫೆಶನಲ್ ಆಗಿ ಹೇಳಿಕೊಡಬೇಕ್‍ ಸರ. ಈಗ ಅಡ್ಮಿಶನ್ ಚಲೋ ನಡೆದೈತ್ರಿ’ ಅಂದ.

ADVERTISEMENT

‘ಸರಾ, 3 ವರ್ಷದ ಮಕ್ಕಳಿಗೆ ಅಡ್ಮಿಶನ್ನಿಗೆ ಒಂದು ಕಾಮನ್ ಎಂಟ್ರೆನ್ಸ್ ಟೆಸ್ಟ್ ಇರತದ. ಕಾನ್ಫರೆನ್ಸ್‌ ಹಾಲಿನ್ಯಾಗ ಒಂದು ಕಡೆ ಲಾಂಗು-ಪೆನ್ನು ಮಡಗಿರತೀವಿ. ಮಗು ಲಾಂಗು ಎತ್ತಿದ್ರೆ ಅದನ್ನು ಮಾರ್ಶಲ್ ಆರ್ಟ್ಸ್‌ ಕಡೆಗೆ ಕಳಿಸತೀವಿ. ಅದು ಮುಂದೆ ಶಾಸಕನಾಗ ಲಕ್ಷಣಾರಿ. ಅದು ಬಂದು ಪೆನ್ನು ತಗಂಡ್ರೆ ನಿಮ್ಮಂಗೆ ಮೇಷ್ಟ್ರೋ ಇಲ್ಲ ಅಧಿಕಾರಿಯೋ ಆಗ್ತದಂತ ಮಾಮೂಲಿ ಶಾಲೆ ಕಡೀಗೆ ಕಳಸತೇವಿ. ಮಕ್ಕಳು ಓದಾದ್ರೂ ಬದುಕ್ಲಿ ಇಲ್ಲ ತಿವಿದಾದ್ರೂ ಬದುಕ್ಲಿ’ ಅಂದ. ನನಗೆ ಮಾತು ನಿಂತು ಹೋಗಿದ್ದವು.

‘ಬಂಡ್ಯಾ ನನ್ನನ್ನೇ ಯಾಕೆ ಪ್ರಿನ್ಸಿಪಾಲ್ ಆಗಿ ಆಯ್ಕೆ ಮಾಡಿಕಂಡೆ. ಬಳ್ಳಾರಿಗನ್ನಾ ಹೋಗಿದ್ರೆ ನಿನಗೆ ವೈಸ್‍ಚಾನ್ಸಲರ‍್ರೆ ಸಿಕ್ಕೋರಲ್ಲೋ!’ ಅಂದೆ.

‘ಅವರು ನಮ್ಮ ಫ್ಯಾಕಲ್ಟಿ ಬಿಡ್ರಿ ಸರಾ. ನೀವು ಲೆಕ್ಕಾ ಹೇಳಿಕೊಡುವಾಗ, ಗದ್ದಲಾ ಮಾಡಿದಾಗ ನನಗ ತೊಡಿಮ್ಯಾಲೆ ಒಳಶುಂಠಿ ಕೊಡತೀನಂತ ಜಿಗುಟತಿದ್ರಿ. ಮುಷ್ಟಿಯಾಗ ಕುತ್ತಿಗೀ ಮ್ಯಾಲೆ ಮಿದೀತಿದ್ರಿ, ನೆನಪೈತ್ರಿ? ನನಗ ಪ್ರಾಣ ಹೋಕ್ಕತಿ ಅನ್ನಿಸುವಷ್ಟು ನೋವಾಗತಿತ್ತು. ಆದರೆ ಮ್ಯಾಲೇನೂ ಕಾಣಂಗಿರಲಿಲ್ಲ! ಹೊಡದ್ರೂ ಹೊರಕ್ಕ ಕಾಣಬಾರದು ಅನ್ನೋಥರಾ ಹೊಡೆಯೋಕೆ ನಿಮ್ಮನ್ನ ಬಿಟ್ರೆ ಇಲ್ಲ ಬಿಡ್ರಿ. ಹಿಂಗಾಗಿ ನೀವೇ ಪ್ರಿನ್ಸಿಪಾಲ್ ಪೋಸ್ಟಿಗೆ ಫಿಟ್’ ಅಂದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.