ADVERTISEMENT

ಬಜೆಟ್ಟು ಹಿಂಗಿರಬೇಕಿತ್ತು!

ಲಿಂಗರಾಜು ಡಿ.ಎಸ್
Published 18 ಫೆಬ್ರುವರಿ 2019, 20:30 IST
Last Updated 18 ಫೆಬ್ರುವರಿ 2019, 20:30 IST
   

ನನ್ನ ಹಳೇ ಶಿಷ್ಯ ಎಂಎಲ್‍ಎ ಸುಬ್ರ ಬಜೆಟ್ ಬಗ್ಗೆ ಏನಂತಾನೆ ಅಂತ ಕೇಳಿಕೊಂಡು ಬರೋಕೆ ಹೋಗಿದ್ದೆ. ಮುಖ, ಸ್ಕ್ರ್ಯಾಚಾಗಿರೋ ಸೀಡಿ ಥರಾ ಇತ್ತು.

‘ಬುಡಿ ಸಾ ಮೋನ-ಮಾರಣ್ಣ ಇಬ್ರೂ ಸಪೋರ್ಟು ತಗಂಡದ್ದು ಬುಟ್ರೆ ನಮ್ಗೇನೂ ಅನುಕೂಲ ಮಾಡಿಕೊಡ್ನಿಲ್ಲ. ಎಲ್ಲಾ ನಿಮಗೇ ಮಾಡಿಬುಟ್ಟರೆ, ನಮಗೆ ಬಂದ ಭಾಗ್ಯ ಏನು ಸಾ? ನಾವಿದ್ರೇ ನೀವಲ್ಲವರಾ? ನಾವು ಹಗಲು-ರಾತ್ರಿ ಅನ್ನದೇ ಎಲೆಕ್ಷನ್ನಲ್ಲಿ ನಿಮಗೆ ಕೊಡಕೆ ಅಂತಾ ದುಡ್ಡ ಹುಡಿಕ್ಕಂಡು ಸುತ್ತತೀವಿ. ನೀವು ನಮ್ಮನ್ನೇ ಕಳ್ಳ-ಕಳ್ಳ ಅಂತ ಕ್ಯಾಕರಿಸಿ ಉಗೀತೀರಾ!’ ಅಂದ.

‘ನಿನಗೇನು ಮಾಡಬೇಕಪ್ಪಾ ಹೇಳು ಬರಕತೀನಿ, ಮೋನನಿಗೆ-ಮಾರಣ್ಣನಿಗೆ ಒಂದು ಮನವಿ ಕೊಡಮು’ ಅಂದೆ ತಮಾಷೆಗೆ. ‘ಒಳ್ಳೆ ಐಡಿಯಾ ಸಾ, ಇದನ್ನ ಶಾಸಕ ಬಜೆಟ್ ಅಂತ ಮಾಡಬಹುದು. ನಾನು ಏಳ್ತಾ ಹೋಯ್ತಿನಿ ಬರಕಳಿ’ ಅಂದ ಸುಬ್ರ ಸೀರಿಯಸ್ ಆಗಿ. ನಾನು ಪೆನ್ನು-ಪೇಪರ್ ತಗಂಡು ಚಿತ್ರಗುಪ್ತನ ಥರಾ ಕುತಗಂಡೆ.

ADVERTISEMENT

‘ಸಾ ನಮಗೆ ಜನರ ಬಗ್ಗೆ ಯೋಚ್ನೆ ಮಾಡಕೆ ಪ್ರತೀ ತಿಂಗಳೂ ಸರ್ಕಾರದ ಖರ್ಚೇಲಿ ಪಾರಿನ್ ಟ್ರಿಪ್ಪು, ರೆಸಾರ್ಟು ವ್ಯವಸ್ಥೆ ಮಾಡ್ಬೇಕು. ಇದನ್ನ ತಿಂಗಳ ಮಾಮ ಕಾರ್ಯಕ್ರಮ ಅಂತ ಕರೀಬೋದು’.

‘ಕ್ಯಾಬಿನೆಟ್ ಮಂತ್ರಿ ಆಗಕೆ ಆನ್‍ಲೈನ್ ಬಿಡ್ಡಿಂಗ್ ನಡೀಬೇಕು. ಇದುನ್ನ ಇ-ಮಂತ್ರಿ ಭಾಗ್ಯ ಅಂತ ಕರೀರಿ’.
‘ನಾವು ನಿಮಗೋಸ್ಕರ ಬ್ಯಾರೆಬ್ಯಾರೆ ಪಾರ್ಟಿಗೆ ಹಾರಿಕೊಂಡು-ಗೋರಿಕೊಂಡು ಇರತೀವಿ. ಆಗ ನಡೆಯೋ ಡ್ರಾಮಾನೆಲ್ಲಾ ಪಕ್ಷಾಂತರ ಪಕ್ಷಿ ಯೋಜನೆ ಅಂತ ಕರೀಬೇಕು’.

‘ನಾವು ಸಾಮೂಹಿಕ ಕೃಷಿ ಮಾಡಕೆ ಬೇನಾಮಿ ಹೆಸರಲ್ಲಿ ಮಾಡಿರಾ ಜಮೀನೆಲ್ಲಾ ಸಕ್ರಮ ಮಾಡಬೇಕು. ಫಾರಿನ್ ಕಾರುಗಳ ಗೋವಾ, ಪಾಂಡಿಚೇರಿ, ಡೆಲ್ಲಿನಾಗೆ ರಿಜಿಸ್ಟ್ರು ಮಾಡಿಕಂಡಿರತೀವಿ. ಅವೆಲ್ಲಾ ಸಬ್‍ಕಾ ಸಾತ್ ಬೇನಾಮಿ ಹಾತ್ ಅನ್ನೋ ಯೋಜನೇಲಿ
ಸಕ್ರಮವಾಗಬೇಕು’.

‘ನಮ್ಮನ್ನ ಉಟ್ಟು ಓರಾಟಗಾರರು ಅಂತ ಘೋಷಿಸ್ಬೇಕು. ಇದುನ್ನ ಸುತಂತ್ರ ಭಾಗ್ಯ ಅಂತ ಕರೀರಿ. ಹೇಳಿದ್ದನ್ನೆಲ್ಲಾ ಚೆನ್ನಾಗಿ ಬರಕಂಡು ಬನ್ನಿ ಸಾ. ಹಂಗೇ ಸೈನೂ ಹಾಕಿಬುಡಿ’ ಅಂದ. ಇನ್ನು ದೇಶ ಉದ್ಧಾರವಾದ ಹಾಗೇ ಅಂತ ನಾನು ಅಲ್ಲಿಂದ ಕಡದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.