ADVERTISEMENT

ರೇವಣಾಯ ಉವಾಚ

ಸುಮಂಗಲಾ
Published 10 ಮಾರ್ಚ್ 2019, 19:41 IST
Last Updated 10 ಮಾರ್ಚ್ 2019, 19:41 IST
ಚುರುಮುರಿ
ಚುರುಮುರಿ   

ಕೂಚು ಭಟ್ಟರು ಮನೆಯಲ್ಲಿ ಇದ್ದಬದ್ದ ಸಂಸ್ಕೃತ ಗ್ರಂಥಗಳನ್ನೆಲ್ಲ ಹರಡಿಕೊಂಡು ಕೂತಿದ್ದರು. ರಾತ್ರಿಯಿಂದ ನಿದ್ದೆಗೆಟ್ಟು ಹುಡುಕಿ ಹುಡುಕೀ ಕಣ್ಣು ಬಾಡಿದವೇ ವಿನಾ ಏನೂ ಸಿಗಲಿಲ್ಲ. ಗೂಗಲಿಸಿ ನೋಡೋಣವೆಂದು ಕಂಪ್ಯೂಟರ್ ಆನ್ ಮಾಡಿದರು. ಅಷ್ಟರಲ್ಲಿಯೇ ಫೋನು.

‘ನೀವ್ಹೇಳಿದಂಗೆ ಆಗ್ನೇಯ ದಿಕ್ಕಿಗೆ ಮುಖಾ ಮಾಡಿ ಕೂತು, ಮಂತ್ರಿಸಿದ ನಿಂಬೆಹಣ್ಣು ಜೇಬಲ್ಲಿಟ್ಕಂಡು, ಕೈಗೆ ಕೆಂಪುದಾರ ಕಟ್ಕಂಡೇ ಆ ಹೇಳಿಕೆ ಕೊಟ್ಟಿದ್ರು, ಆದ್ರೂ ಎಡವಟ್ಟಾಯಿತು. ಕೊಡಗಿನವ್ರಿಗೆ ಬಿಸ್ಕೀಟು ಪಾಕೀಟು ಎಸೆದ್ರು ಅಂತ ಆವಾಗ ನೆಟ್ಟಿಗರು ಎಗರಾಡಿದ್ರು. ತಾಯತ ಕಟ್ಕಂಡ ಕೈಯಿಂದ ಕೊಟ್ರೂ ಆ ಪಾಟಿ ಗಲಾಟೆ ಆಯ್ತು. ಈಗ ‘ಮಂಡ್ಯದ ಗಂಡು’ ಅಭಿಮಾನಿಗಳು ಎಗರಾಡತವ್ರೆ. ನೀವೆಂಗೆ ಶಾಸ್ತ್ರ ನೋಡ್ತೀರ‍್ರೀ... ಸಾಯೇಬ್ರು ಫುಲ್ ರಾಂಗ್ ಆಗವ್ರೆ’ ಬೈಗುಳಗಳ ಸುರಿಮಳೆ.

‘ಗಂಡ ಸತ್ತ ಎಂಗುಸ್ರು ಏನೇನು ಮಾಡಬಾರದು ಅಂತ ನಮ್ಮ ಸಂಸ್ಕೃತಿವಳಗೆ ಸ್ಟ್ರಾಂಗಾಗಿ ಬರೆದೈತೆ ಅನ್ನೋದನ್ನ ಬೇಗ ಹುಡುಕಿ ಕಳುಸ್ರೀ’ ಅತ್ತ ಕಡೆಯಿಂದ ಫೋನು ಕುಕ್ಕಿದ ಸದ್ದು. ಅದೇ ವೇಳೆ ಮನೆಗೆ ಬಂದ ಶಿಷ್ಯೋತ್ತಮನೊಬ್ಬ ಭಟ್ಟರ ಪಡಿಪಾಟಲು ಕೇಳಿದ.

ADVERTISEMENT

‘ಗಂಡ ಸತ್ತ ಐದು-ಆರು ತಿಂಗಳವರೆಗೆ ಭಾರತೀಯ ನಾರೀಮಣಿಯರು ಹೊಸ್ತಿಲು ದಾಟತಕ್ಕುದಲ್ಲ, ಕ್ಷೇತ್ರಪ್ರವಾಸ ಮಾಡತಕ್ಕುದಲ್ಲ, ರಾಜಕೀಯ ಪ್ರವೇಶವಂತೂ ಪೂರ್ಣ ನಿಷಿದ್ಧವು. ತೆನೆ ಹೊತ್ತ ಮಹಿಳೆ ಬಿಟ್ಟು, ಇನ್ನುಳಿದ ಮಹಿಳೆಯರಿಗೆ ಇದು ಅನ್ವಯವು. ಇದನ್ನು ಸಂಸ್ಕೃತದಲ್ಲಿ ಬರೀರಿ ಭಟ್ಟರೇ’ ಎಂದ. ಸಂಸ್ಕೃತ ಪರೀಕ್ಷೆಯಲ್ಲಿ ನೂರು ಬಾರಿ ಫೇಲ್ ಆಗಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ’ ಖ್ಯಾತಿಯ ಭಟ್ಟರು ಅಂತೂ ಗೂಗಲ್ ಟ್ರಾನ್ಸ್‌ಲೇಟ್ ಸಹಾಯ ತೆಗೆದುಕೊಂಡು ಸಂಸ್ಕೃತಕ್ಕೆ ಅನುವಾದಿಸಿದರು.

‘ಇದು ನಿಂಗೆಲ್ಲಿ ಸಿಕ್ತು ಮಾರಾಯ, ನಂಗೆ ಇಷ್ಟೆಲ್ಲ ಜಾಲಾಡಿದರೂ ಸಿಗಲಿಲ್ಲ’ ಬೆವರೊರೆಸಿಕೊಳ್ಳುತ್ತ ಕೇಳಿದರು. ‘ನವಮನುಸ್ಮೃತಿ ಸಂಹಿತೆಯಲ್ಲಿ ‘ರೇವಣಾಯ ಉವಾಚ’ ಅಂತ ಈ ಸ್ತೋತ್ರ ಇದೆ. ಮೊದ್ಲು ನಿಮ್ಮ ಸಾಯೇಬ್ರಿಗೆ ಕಳಿಸಿ’ ಎನ್ನುತ್ತ ಶಿಷ್ಯೋತ್ತಮ ನಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.