ADVERTISEMENT

ತಟ್ಟೆ ಆಸನ!

ಬಿ.ಎನ್.ಮಲ್ಲೇಶ್
Published 27 ಜೂನ್ 2019, 19:30 IST
Last Updated 27 ಜೂನ್ 2019, 19:30 IST
   

‘ಏನಯ್ಯ ತೆಪರೇಸಿ, ವಾರದಿಂದ ನಾಪತ್ತೆ... ಎಲ್ಲೋಗಿದ್ದೆ ಏನ್ಕತೆ...?’ ‘ಯೋಗಾಸನ ಮಾಡೋಕೋಗಿ ಸುಸ್ತಾಗಿತ್ತು ಸಾ. ನಾನೂ ಯಡ್ಯೂರಪ್ಪೋರ ಜೊತೆ ಯೋಗಾಸನ ಮಾಡಿದೆ ಗೊತ್ತಾ?’

‘ಹೌದಾ? ಯಡ್ಯೂರಪ್ಪ ಸಾಹೇಬ್ರು ಯಾವ್ಯಾವ ಆಸನ ಹಾಕಿದ್ರು?’ ‘ಅವರು ಪದೇ ಪದೇ ‘ವೀರಭದ್ರಾಸನ’ ಒಂದೇ ಹಾಕ್ತಿದ್ರು ಸಾ. ಯಾಕೆ ಅಂತ ಕೇಳಿದೆ, ಕಾರಣ ‘ಸಿಂಹಾಸನ’ ಅಂತ ಗೊತ್ತಾತು’.

‘ಹೌದಾ? ನಮ್ಮ ಜಗದೀಶ್ ಶೆಟ್ಟರು ಯಾವ ಆಸನ ಹಾಕಿದ್ರು?’ ‘ಅವರದು ‘ಧನುರಾಸನ’ ಸಾ. ಆಡಳಿತ ಪಕ್ಷದೋರ ಮೇಲೆ ಬಾಣ ಬಿಟ್ಟಿದ್ದೇ ಬಿಟ್ಟಿದ್ದು. ಆದ್ರೆ ಒಂದೂ ನಾಟ್ತಾ ಇರಲಿಲ್ಲ’.

ADVERTISEMENT

‘ರೇಣುಕಾಚಾರ್ಯ ಸಾಹೇಬ್ರು ಯೋಗ ಕಲ್ತಿದಾರಂತೆ?’ ‘ಹ್ಞೂಂ ಸಾ... ಅವರದು ‘ಸರ್ವಾಂಗಾಸನ! ಎಲ್ಲ ಅಂಗಗಳಲ್ಲೂ ಒಂದೇ ಸಲ ಆಸನ ಹಾಕಿಬಿಡೋಷ್ಟು ಎಕ್ಸ್‌ಪರ್ಟು’.

‘ವೆರಿಗುಡ್, ನಮ್ಮ ಶೋಭಕ್ಕ ಅವರದು?’ ‘ಅವರದು ಸದಾ ‘ಮಂದ ಸ್ಮಿತಾಸನ’ ಸಾ, ಲೋಡ್ ಶೆಡ್ಡಿಂಗ್‍ನಲ್ಲೂ ಹೈವೋಲ್ಟೇಜ್ ನಗು...’

‘ಸರಿಯಪ್ಪ, ನಮ್ ಪ್ರಧಾನ ಸೇವಕರು ಯಾವ ಆಸನ ಹಾಕಿದ್ರು?’ ‘ಅವರು ‘ಏಕಚಕ್ರಾಧಿ ಪತ್ಯಾಸನ’ ಹಾಕಿದ್ರು. ಒಂದು ದೇಶ, ಒಂದು ಚುನಾವಣೆ, ಒಬ್ಬನೇ ನಾಯಕ...’

‘ವಂಡರ್‌ಫುಲ್... ಆಮೇಲೆ ನಮ್ಮ ಬಿಸಿಬಿಸಿ ಪಾಟೀಲರು?’ ‘ಅವರದು ‘ಭಿನ್ನ ಭುಜಂಗಾಸನ’ ಸಾ. ಮಂತ್ರಿ ಮಾಡ್ತೀವಿ ಅಂದ್ರೆ ಹಂಗೆ, ಮಾಡದಿದ್ರೆ ಹಿಂಗೆ...’

‘ಆಯ್ತಪ್ಪ, ಮತ್ತೆ ಯಾರ್‍ಯಾರು ಏನೇನು ಆಸನ ಹಾಕ್ತಿದ್ರು ಒಟ್ಟಿಗೇ ಹೇಳಿಬಿಡು, ಕೇಳಿ ಪಾವನ ಆಗ್ತೀನಿ’. ‘ಪಕ್ಷೇತರರದು ಮಂತ್ರಿಗಿರಿಗಾಗಿ ‘ಹಸ್ತ ಪಾದಾಸನ’ ಸಾ. ನಮ್ಮ ದೊಡ್ಡಗೌಡ್ರುದು ಎಚ್ಚರದಲ್ಲೂ ‘ಗಾಢ ನಿದ್ರಾಸನ’. ಸಣ್ಣಗೌಡ್ರುದು ಸದಾ ‘ಕುರ್ಚಿ ಭದ್ರಾಸನ’ ಮತ್ತು ಗ್ರಾಮ ವಾಸ್ತವ್ಯದಲ್ಲಿ ‘ಅರೆ ನಿದ್ರಾಸನ’... ಸಿದ್ದರಾಮಯ್ಯ ಅವರದು ‘ಏಕಪಾದ ಬ್ಯಾಲೆನ್ಸಾಸನ ಸಾ...’

‘ಒಳ್ಳೆಕತೆ, ಸಾಕುಬಿಡಪ್ಪ. ಹೋಗ್ಲಿ ನೀನ್ಯಾವ ಆಸನ ಹಾಕಿದ್ದೆ?’ ‘ಅವತ್ತು ಶವಾಸನ ಸಾ, ಈಗ ನೀವು ಕೈಬಿಟ್ರೆ ಮನೆಗೆ ಹೋಗಿ ಹೊಟ್ಟೆ ಮುಂದೆ ತಟ್ಟೆ ಆಸನ ಹಾಕ್ತೀನಿ ಸಾ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.