ADVERTISEMENT

ಬಯ್ಯೋ ಎಲೆಕ್ಷನ್‌!

ಲಿಂಗರಾಜು ಡಿ.ಎಸ್
Published 23 ಸೆಪ್ಟೆಂಬರ್ 2019, 19:46 IST
Last Updated 23 ಸೆಪ್ಟೆಂಬರ್ 2019, 19:46 IST
   

ನಾನು, ತುರೇಮಣೆ ವಾಕಿಂಗ್ ಹೊಂಟಿದ್ದೋ. ದಾರಿಯಲ್ಲಿ ಒಂದು ದೊಡ್ಡ ಫ್ಲೆಕ್ಸ್ ಕಾಣಿಸಿತು! ದೀಪಾವಳಿ ಧಮಾಕ, ಅತೀ ಕಡಮೆ ಬೆಲೆಯಲ್ಲಿ ಮಾರಾಟ, ಖಚಿತ ಕ್ಯಾಶ್ ಬ್ಯಾಕ್! ನಕಲಿಗಳ ಬಗ್ಗೆ ಎಚ್ಚರವಿರಲಿ! ಅಂತ ಇತ್ತು. ಯಾವುದಕ್ಕೆ ಡಿಸ್ಕೌಂಟು? ಏನು ಮಾರಾಟ ಅನ್ನೋ ಬಗ್ಗೆ ಮಾಹಿತಿ ಕಾಣಿಸಲಿಲ್ಲ.

‘ಇದೇನ್ಸಾರ್ ಹಿಂದಿಲ್ಲ ಮುಂದಿಲ್ಲ ಯಾವುದರ ಬಗ್ಗೆ ಈ ಜಾಹೀರಾತೂ!’ ಅಂತ ಕೇಳಿದೆ. ಆಲೋಚಿಸಿದ ತುರೇಮಣೆ ಉತ್ತರ ಕೊಟ್ಟರು. ‘ಲೋ ಇದು ಬಹುಶಃ ವನವಾಸದಿಂದ ಬಂದ ಅನರ್ಹ ಶಾಸಕರದ್ದಿರಬೇಕು ಕಣೋ! ಬಯ್ಯ ಎಲೆಕ್ಷನ್ ಬಂತಲ್ಲ ಅದುಕ್ಕೆ ಸತ್ಯಹರಿಶ್ಚಂದ್ರನ ಥರಾ ಡಿಸ್ಕೌಂಟ್ ಸೇಲಾಕಿರಬೇಕು’ ಅಂದ್ರು.

‘ಹಂಗಾದ್ರೆ ನಕ್ಷತ್ರಿಕ ಯಾರಿರಬಹುದು ಸಾರ್?’ ಅಂತ ನನ್ನ ಅನುಮಾನ ಕೇಳಿದೆ. ‘ಸುಮ್ಮಗಿರಪ್ಪ ಸಾಕು. ನನ್ನ ಬಾಯಲ್ಲಿ ಯಾವ್ಯಾವ ಹೆಸರೋ ಕಡದು ಎಡವಟ್ಟಾದತ್ತು. ಮೊನ್ನೆ ಈ 14 ಹೈಕ್ಳು ಕಣ್ಣೀರಾಕಾದನ್ನ ಕಂಡು ‘ನಿಮಗೆ ಇಲ್ಲದಿದ್ದರೆ ನಿಮ್ಮ ಕಳ್ಳು-ಬಳ್ಳಿಗೆ ಟಿಕೆಟ್ ಗ್ಯಾರೆಂಟಿ! ಈಗ ಮುದ್ದೆ-ಉಪ್ಪೆಸರು ರೆಡಿಯಾಗದೆ ಉಂಡುಕೋಗಿರ್ಲಾ’ ಅಂದರಂತೆ ಸಿಎಮ್ಮು. ‘ನಮ್ಮ ತಟ್ಟೆಗೆ ಮಣ್ಣು ಬಿದ್ದದೆ ಈಗ ಉಪ್ಪೆಸರು ಉಣ್ಣಕ ಬನ್ನಿ ಅಂತ ಕರೀತಿದ್ದರಿಯಾ! ಮಂತ್ರಿಯಾಗದಿದ್ದಮ್ಯಾಲೆ ಈ ಜಲ್ಮ ಯಾಕೆ, ಪಿತೃಪಕ್ಸದೇಲಿ ನಮಗೂ ಎಡೆ ಇಟ್ಟುಬುಡಿ’ ಅಂತ ಅನರ್ಹರ ರೋದನೆಯಂತೆ’ ಅಂದರು.

ADVERTISEMENT

‘ಮತ್ತೀನ್ನೇನು ಸಾರ್, ಉಪ್ಪೆಸರು ಉಣ್ಣಿ ಅಂದರೆ ಸಿಟ್ಟು ಬರದಿಲ್ವೆ! ಉಪ್ಪು ತಿಂದೋರು ನೀರು ಕುಡಿಬೇಕು ಅಂತ ಆಡಿಕತ್ತಾವರೆ. ಪಾಪ ಯಡುರಪ್ಪಾರು ನ್ಯಾಯ ಕೊಡಿಸಕ್ಕೆ ಡೆಲ್ಲಿ-ಬೆಂಗಳೂರು ಅಂತ ಎಷ್ಟು ಸಾರಿ ಓಡಾಡಾರು! ಆಷಾಢದಲ್ಲಿ ಅಧಿಕ ಮಾಸ ಅಂದಂಗೆ ಎಲೆಕ್ಷನ್ನು ಬಂದದೆ’ ಅಂದೆ.

‘ಆದರೂ ಈ ಬಯ್ಯೋ ಎಲೆಕ್ಷನ್ನಗೆ ಏನೋ ಟ್ವಿಸ್ಟದೆ ಅಂತ ನನ್ನ ಅನುಮಾನ ಕನೋ! ನಮ್ಮ ದೇಸದ ಗೃಹಮಂತ್ರಿಗಳು ಎರಡೇ ಪಕ್ಸ ಇರಬೇಕು ಅಂತಾವರೆ. ಅವರದ್ದು ಸಿಬಿಎಸ್‍ಇ ಸೆಂಟ್ರಲ್ ಸಿಲಬಸ್ಸು. ಕಾಂಗ್ರೆಸ್ಸು ಜೇಡಿಎಸ್ಸು ಸ್ಟೇಟ್ ಸಿಲಬಸ್ಸು ಓದಿಕತಾವೆ. ಎಗ್ಸಾಮು ಹೆಂಗಾದದೋ!’ ಅಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.