ADVERTISEMENT

ಚೆಡ್ಡಿ ಪುರಾಣ

ಬಿ.ಎನ್.ಮಲ್ಲೇಶ್
Published 26 ಸೆಪ್ಟೆಂಬರ್ 2019, 20:01 IST
Last Updated 26 ಸೆಪ್ಟೆಂಬರ್ 2019, 20:01 IST
   

‘ಗುರೂಜಿ, ಅಡ್ಡಬಿದ್ದೆ. ನೀವು ಗಿಳಿಶಾಸ್ತ್ರ ಹೇಳ್ತೀರಲ್ಲ... ಗಿಳಿಗಳು ಹದ್ದಾಗೋದು ನಿಜಾನಾ?’

‘ಲೋ ಮುಂಡೇದೆ, ನಾನು ಗಿಳಿಶಾಸ್ತ್ರ, ಕವಡೆಶಾಸ್ತ್ರ ಹೇಳೋನಲ್ಲ. ನಾನು ತ್ರಿಕಾಲ ಜ್ಞಾನಿ ತಿಳ್ಕೋ...’

‘ತ್ರಿಕಾಲ ಜ್ಞಾನಿ ಅಂತೀರಾ ಮತ್ತೆ ರಾಜ್ಯದಲ್ಲಿ ಭಾರೀ ಮಳೆ, ನೆರೆ ಯಾವಾಗ ಬರುತ್ತೆ ಅಂತ ಮೊದ್ಲೇ ಹೇಳೋಕಾಗಲ್ವ? ಹೋಗ್ಲಿ ಈಗ ಕೇಂದ್ರದಿಂದ ನೆರೆ ಪರಿಹಾರ ಯಾವಾಗ ಬರುತ್ತೆ ಹೇಳಿ ನೋಡೋಣ...’

ADVERTISEMENT

‘ಅದು ರೆಡಿ ಇದೆ ಕಣೋ ಪೆದ್ದು ಮುಂಡೇದೆ, ಉಪಚುನಾವಣೆ ಕಾಲಕ್ಕೆ ಸರಿಯಾಗಿ ಪರಿಹಾರ ಒದ್ಕಂಡ್ ಬರದ್ರಲ್ಲಿತ್ತು. ಆದರೆ, ಈಗ ಉಪಚುನಾವಣೆ ಮುಂದಕ್ಕೆ ಹೋಗಿರೋದ್ರಿಂದ ಏನ್ಮಾಡ್ತಾರೋ ನೋಡ್ಬೇಕು...’

‘ಅರ್ಥವಾಯ್ತು ಬಿಡಿ, ಈಗ ಇನ್ನೊಂದ್ ಪ್ರಶ್ನೆ. ‘ಬಂಡೆ’ಗೆ ಮೊದ್ಲು ಜಾಮೀನು ಸಿಗುತ್ತೋ ‘ಪಂಚೆ’ಗೆ ಮೊದ್ಲು ಸಿಗುತ್ತೋ?’

‘ಪಂಚೆ ಮೇಲೆ ಬಂಡೆ ಬಿದ್ದಿರೋದ್ರಿಂದ ಇಬ್ರಿಗೂ ಜಾಮೀನು ಕಷ್ಟ. ಅದಕ್ಕೆಲ್ಲ
‘ಚಾಣಕ್ಯ’ಗಳಿಗೆ, ‘ಅಮಿತ’ ಮುಹೂರ್ತ ಕೂಡಿ ಬರಬೇಕು...’

‘ನಮ್ಮ ದೊಡ್ಡಗೌಡ್ರು ಜಾಮೀನು ಪ್ರಾಪ್ತಿ ಹೋಮ, ಸಣ್ಣಗೌಡ್ರು ನಿಂಬೇಹಣ್ಣಿನ ಬೇಲ್‍ಮಂತ್ರ ಮಾಡಿಸಿದ್ರೆ ಏನಾದ್ರೂ ಕೆಲ್ಸ ಆಗಬಹುದಾ?’

‘ನಿಂಬೆಹಣ್ಣೂ ಇಲ್ಲ, ಬೇಲ್‍ಪುರೀನೂ ಇಲ್ಲ. ಸದ್ಯ ಪ್ರಧಾನ ಸೇವಕರ ಮಾಯಾಜಾಲದ ಮುಂದೆ ಯಾವುದೂ ನಡೆಯಲ್ಲ’.

‘ಹೋಗ್ಲಿ ಬಿಡಿ, ನಾನು ಆಗ್ಲೇ ಕೇಳಿದ್ನಲ್ಲ... ಗಿಳಿ ಹದ್ದಾಗೋದು ನಿಜಾನಾ?’

‘ದಡ್ಡ ಮುಂಡೇದೆ, ಯಾರೂ ಗಿಳಿ ಅಲ್ಲ. ಎಲ್ಲರ ಎದೆ ಬಗೆದು ನೋಡು, ಇರೋದೆಲ್ಲ ಬರೀ ಹದ್ದುಗಳೇ’.

‘ಹಂಗಂತೀರಾ? ಆಮೇಲೆ ಇನ್ನೊಂದ್ ಮರೆತಿದ್ದೆ. ಇಬ್ರು ಮಾಜಿ ಮಂತ್ರಿಗಳ ಚೆಡ್ಡಿ ಪುರಾಣದ ಬಗ್ಗೆ ಒಂದು ಪ್ರಶ್ನೆ ಕೇಳ್ಬೇಕಿತ್ತು...’

‘ಮುಂಡಾಮೋಚ್ತು... ಈ ಲಂಗೋಟಿಯವನ ಹತ್ರ ಚೆಡ್ಡಿ ಬಗ್ಗೆ ಕೇಳ್ತೀಯೇನೋ... ನಿಂತ ನಿಲುವಿನಲ್ಲೇ ನಿನ್ನ ಸುಟ್ಟು ಭಸ್ಮ ಮಾಡಿಬಿಟ್ಟೇನು, ಎದ್ದು ನಡಿ ಅತ್ಲಾಗೆ...!’ ಬ್ರಹ್ಮಾಂಡ ಗುರುಗಳು ಕೆಂಡಾಮಂಡಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.