ADVERTISEMENT

ಆಯುಧಪೂಜೆ

ಲಿಂಗರಾಜು ಡಿ.ಎಸ್
Published 8 ಅಕ್ಟೋಬರ್ 2019, 20:00 IST
Last Updated 8 ಅಕ್ಟೋಬರ್ 2019, 20:00 IST
   

ನಾನು, ತುರೇಮಣೆ ಮನೆಗೆ ಬಂದಾಗ ಅವರು ಎಲ್ಲಿಗೋ ಹೊರಟು ನಿಂತಿದ್ದರು. ‘ಏನ್ಸಾರ್ ಎಲ್ಲೋ ಹೊರಟಿದ್ದೀರಿ?’ ಅಂದೆ.

‘ರಾಜಕೀಯದೋರ ಆಯುಧಪೂಜೆ ಹೆಂಗೆ ನಡೆದದೆ ನೋಡಿಕ್ಯಂಡು ಬರಮು ಬಾ’ ಅಂದರು. ಇಬ್ಬರೂ ಯಡುರಪ್ಪ ಸಾಹೇಬ್ರ ಮನೆ ತಾವ್ಕೆ ಬಂದೊ. ಮನೆ ಮುಂದೆ ಅಡ್ಡಕ್ಕೆ- ಉದ್ದಕ್ಕೆ ಕಟ್ಟಿದ್ದ ತಂತಿಗಳಿಗೆ ಸಾಯೇಬ್ರು ತಂತಿ ಪೂಜೆ ಮಾಡ್ತಾ ‘ಕೆಳೀಕ್ಕೆ ಕೆಡವಬ್ಯಾಡ ತಂತ್ಯವ್ವ ತಾಯೆ’ ಅಂತ ಕೈ ಮುಗಿದು ತಂತಿ ಮ್ಯಾಲಕ್ಕೆ ಹತ್ತಿದರು.

ಕಮಲದ ಆಫೀಸಲ್ಲಿ ಅಲ್ಲಿಟ್ಟಿದ್ದ ಲಗಾಮು- ಚಾಟಿಗೆ ಪೂಜೆ ಮಾಡ್ತಿದ್ದ ಕಟೀಲಣ್ಣ ನಮ್ಮನ್ನ ನೋಡಿ ಸಂತೋಷದಿಂದ ‘ದಾನೆ ಮಾಸ್ಟ್ರೆ ಈರು ಎಂಕ್ಲ ಜನವಾ?’ ಅಂತ ಕೇಳಿ ಟೀ-ಬನ್ಸ್ ಕೊಟ್ಟರು. ಅಲ್ಲಿದ್ದ ಟೀವಿಲಿ ಮೋದಿ ಮಾರಾಜರು ‘ಅಚ್ಛೆ ದಿನ್ ಆಗಯಾ’ ಅಂತ ಹೇಳ್ತಾ ಹೊಸಾ ಬೋಯಿಂಗ್ 777, ರಫೇಲ್‌ ವಿಮಾನಗಳಿಗೆ ಪೂಜೆ ಮಾಡತಿದ್ದ ಲೈವ್ ಶೋ ಬರತಿತ್ತು.

ADVERTISEMENT

ಮನೆ ಮುಂದೆ ವಿರೋಧ ಪಕ್ಷದ ನಾಯಕ, ಸಿಎಲ್‍ಪಿ ನಾಯಕ ಅಂತ ಬರೆದಿದ್ದ ಎರಡು ಕುರ್ಚಿಗಳನ್ನ ಸಿದ್ದರಾಮಣ್ಣ ತಬ್ಬಿಕೊಂಡು ‘ಮುರಿದೋಗಿರಾ ಮನೇಲಿ ಕಿತ್ತೋಗಿರಾ ಕುರ್ಚಿ ತಾಯಂದ್ರಾ ಇಬ್ಬರೂ ನನ್ನ ಬುಟ್ಟೊಗಬ್ಯಾಡಿ’ ಅಂತ ಕೈ ಮುಗಿದು ಟಗರು ಬಿರಿಯಾನಿ ಕೊಡ್ಸಿದ್ರು.

ಜೆಡಿಎಸ್ ಆಫೀಸ್ ತಾವ ದೊಡ್ಡಗೌಡರ ಪೌರೋಹಿತ್ಯದಲ್ಲಿ ವೋಟಿಂಗ್ ಮೆಶೀನ್ ಪೂಜೆ ನಡೆದಿತ್ತು. ರೇವಣ್ಣಾರು ನಮ್ಮನ್ನ ನೋಡಿ ‘ಬನ್ನಿ ಸಾ, ಮುಂದಿನ ಸಾರಿ ನಮ್ಮದೇ ಸರ್ಕಾರ’ ಅಂದು ನಿಂಬೆಹಣ್ಣು ಕೈಗಿಟ್ಟರು. ಕುಮಾರಣ್ಣ ‘ತಪ್ಪು ತಿಳೀಬೇಡಿ ಬ್ರದರ್, ಹೊಗೆ ಜಾಸ್ತಿ’ ಅಂತ ಕಣ್ಣೀರು ಒರೆಸಿಕ್ಯಳದೇ ಆಗಿತ್ತು.

ಅನರ್ಹ ಜಾಮಾತೃ ಸಪ್ತಾದಶಗ್ರಹಗಳು ಕಾನೂನು ದೇವಿಗೆ ಪೂಜೆ ಮಾಡ್ತಿದ್ದೋ. ರಾಜಕೀಯ ಪಚನಶೂರರು ‘ಸ್ವಿಸ್ ಬ್ಯಾಂಕ್ ತಾಯೆ ನಮ್ಮನ್ನ ಚೆನ್ನಾಗಿ ಕಾಪಾಡವ್ವ’ ಅಂತ ಉರುಳುಸೇವೆ ಮಾಡ್ತಿದ್ರು. ಇವರೆಲ್ಲರ ಕಡೆಯಿಂದ ಎರಡು ಬಿಳಿ-ಒಂದು ಕೆಂಪು ನಾಮ ಇಕ್ಕಿಸಿಕೊಂಡ ಜನ, ಗಾಂಧಿ ಮಹಾತ್ಮನ ಪ್ರತಿಮೆ ಕೆಳಗೆ ಕೂತು, ತಮ್ಮ ಹಣೆಬರಹವೇ ಸರಿಯಿಲ್ಲ ಅಂತಿದ್ದುದೇ ಈ ಸಾರಿಯ ಆಯುಧಪೂಜೆ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.