ADVERTISEMENT

ಪತಿ–ಪತ್ನಿ– ಎಕಾನಮಿ!

ಗುರು ಪಿ.ಎಸ್‌
Published 15 ಅಕ್ಟೋಬರ್ 2019, 20:00 IST
Last Updated 15 ಅಕ್ಟೋಬರ್ 2019, 20:00 IST
.
.   

ಧಡ್‌... ಭಡ್‌... ಧಡಾರ್‌... ಅಡುಗೆ ಮನೆಯಲ್ಲಿ ಪಾತ್ರೆಗಳ ಹಾರಾಟ. ಸೌಟು, ಚಮಚೆಗಳು ರಾಕೆಟ್‌ ವೇಗದಲ್ಲಿ ವರಾಂಡಕ್ಕೂ ಬಂದು ಬೀಳುತ್ತಿದ್ದವು. ಯುದ್ಧಭೂಮಿಯಂತಿದ್ದ ಮನೆಯೊಳಗೆ ಬಂದ ಪ್ರಭಣ್ಣ, ‘ಇದೇನು ಅಡುಗೆ ಮನೆ ಇಷ್ಟೊಂದು ನಿರ್ಮಲವಾಗಿದೆಯಲ್ಲ‘ ಎಂದು ಹೆಂಡತಿಯನ್ನು ಕಿಚಾಯಿಸಿದ.

‘ಬಂದ್ರಾ.. ಬನ್ನಿ, ಬನ್ನಿ... ಎಲ್ಲರ ಮುಂದೆ ನನ್ನ ಮರ್ಯಾದೆ ತೆಗೆದ್ರಲ್ಲ, ಖುಷಿಯಾಯ್ತಾ ಈಗ?’

‘ಏನಾಯ್ತು? ನಾನೇನ್ಮಾಡಿದೆ ಅಂತ ರೇಗಾಡ್ತಿದೀಯ?’

ADVERTISEMENT

‘ನಮ್ಮ ಕಂಪನಿ ಹಣಕಾಸು ಸ್ಥಿತಿ ಸರಿಯಿಲ್ಲ, ಬಿಸಿನೆಸ್‌ನಲ್ಲಿ ಲಾಸ್‌ ಆಗ್ತಿದೆ ಅಂತೆಲ್ಲ ಪೇಪರ್‌ನಲ್ಲಿ ದೊಡ್ಡ ಲೇಖನ ಬರೆದಿದೀರಲ್ಲ. ಎಷ್ಟು ಧೈರ್ಯ ನಿಮಗೆ?’

‘ಇರೋದನ್ನು ಬರೆದಿದ್ದೀನಪ್ಪ..
ಪೇಪರ್‌ನಲ್ಲಾದರೂ ಸತ್ಯ ಬರಬೇಕಲ್ವ?’

‘ಬಾಯ್ಮುಚ್ಚಿ. ಆ ಕಂಪನಿ ಫೈನಾನ್ಸ್‌ ಆಫೀಸರ್‌ ನಾನೇ ಅಂತಾ ಗೊತ್ತಿಲ್ವ ನಿಮಗೆ. ಅದೂ ಅಲ್ಲದೆ, ಹಿಂದೆ ಇದ್ದ ರಾವು–ಸಿಂಗು ಅವರಿಂದೆಲ್ಲ ಕಲಿತುಕೊಳ್ಳಿ ಅಂತಾ ನನಗೆ ಇನ್‌ಸಲ್ಟ್‌ ಬೇರೆ ಮಾಡ್ತೀರಾ?’ ಹೆಂಡತಿಯ ರಫೇಲ್‌ ದಾಳಿ ನಿಲ್ಲಲಿಲ್ಲ.‘ನಮ್ಮ ಕಂಪನಿ ಉದ್ಯೋಗಿಗಳು ವಾರಕ್ಕೆರಡು ಸಿನಿಮಾ ನೋಡ್ತಾರೆ. ಕಂಪನಿ ಲಾಸ್‌
ನಲ್ಲಿ ಇದ್ದಿದ್ರೆ ಸಿನಿಮಾ ನೋಡೋಕೆ ಹೋಗ್ತಿದ್ದರೇನ್ರೀ’ ಎಂದು ಲಾ ಪಾಯಿಂಟ್‌ ಹಾಕಿದಳು.

‘ದೇಶದಲ್ಲಿ ಒಂದು ದಿನಕ್ಕೆ ‘ಪೇ ಆ್ಯಂಡ್‌ ಯೂಸ್‌ ಪಬ್ಲಿಕ್‌ ಟಾಯ್ಲೆಟ್‌’ ಬಳಕೆದಾರರಿಂದ ಬರೋ ಹಣವೇ ಎಷ್ಟೋ ನೂರು ಕೋಟಿ ರೂಪಾಯಿ ಆಗುತ್ತೆ ಕಣೆ. ಹಾಗಂತ, ದೇಶ ಭಾರಿ ಉದ್ಧಾರ ಆಗ್ತಿದೆ ಅಂತಾ ಅನ್ನೋಕಾಗುತ್ತಾ’ ನಕ್ಕ ಪ್ರಭಣ್ಣ.

‘ನಿಮ್ಮಂಥ ‘ಗೃಹದ್ರೋಹಿ’ನ ನಾನು ಜನ್ಮದಲ್ಲಿಯೇ ನೋಡಿಲ್ಲ. ಹಿಂಗೆಲ್ಲ ಬರೆದರೂ ನಿಮಗಂತೂ ನೊಬೆಲ್‌ ಪ್ರಶಸ್ತಿ ಬರಲ್ಲ’.

‘ಪ್ರಶಸ್ತಿ ಹಾಗಿರಲಿ. ಮೊದಲು ಒಂದ್‌ ಲೋಟ ಕಾಫಿ ಕೊಡು’.

‘ಕಾಫಿ ಪುಡಿ ಕೆ.ಜಿಗೆ ನಾನೂರು ರೂಪಾಯಿ ಆಗಿದೆ. ಸಕ್ಕರೆ ಮೂವತ್ತೈದು ದಾಟಿದೆ. ಗ್ಯಾಸ್ ಮುಗಿದೋಗಿದೆ. ಮನೆ ನಡೆಸೋ ಕಷ್ಟ ನಿಮಗೇನ್‌ ಗೊತ್ತು’.

‘ಇದನ್ನೇ ಕಣೆ ನಾನು ಪೇಪರ್‌ನಲ್ಲಿ ಬರೆದಿದ್ದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.