ADVERTISEMENT

ಚುರುಮುರಿ: ಮೂಳೆ ಮಹತ್ವ!

ನಾರಾಯಣ ರಾಯಚೂರ್
Published 29 ಡಿಸೆಂಬರ್ 2023, 0:39 IST
Last Updated 29 ಡಿಸೆಂಬರ್ 2023, 0:39 IST
   

‘ರೀ, ಇಲ್ನೋಡಿ... ಮದುವೆ ಊಟದಲ್ಲಿ ಮೂಳೆ ಇರಲಿಲ್ಲ ಅಂತ ಮದುವೇನೇ ಮುರಿದು ಬಿದ್ದಿದೆಯಂತೆ!’

‘ಮತ್ತೆ?! ಮೂಳೆ, ಮಾನವನ ದೇಹದಲ್ಲಿ ಎಂಥ ಸ್ಟ್ರಾಂಗ್ ಅಂಗ ಅಂತ ಓದಿಲ್ವಾ? ನಿನಗೆ ಗೊತ್ತಾ, ದಧೀಚಿ ಋಷಿಯ ಬೆನ್ನಮೂಳೆಯಿಂದ ಆಯುಧ ತಯಾರಿಸಿ ದೇವ- ರಾಕ್ಷಸ ಯುದ್ಧದಲ್ಲಿ ಬಳಸಿ ದೇವತೆಗಳು ಗೆದ್ದರಂತೆ. ಅಷ್ಟೇ ಅಲ್ಲ, ಮಾತೆತ್ತಿದರೆ ‘ರೈತ ನಾಡಿನ ಬೆನ್ನೆಲುಬು’ ಅಂತ ಉದ್ದುದ್ದ ಭಾಷಣ ಬಿಗಿಯೋದು ಕೇಳಿಲ್ವಾ?’

‘ಪುರಾಣ ಬಿಡಿ, ವರ್ತಮಾನಕ್ಕೆ ಬನ್ನಿ. ವರ್ತಮಾನ ಪತ್ರಿಕೆಯಲ್ಲಿ ಏನು ಬಂದಿದೆ ನೋಡಿ’.

ADVERTISEMENT

‘ವರ್ತಮಾನದ್ದೇ ಹೇಳ್ತೀನಿ ಕೇಳು. ಸಚಿವರೊಬ್ಬರು ರೈತರ ಬಗ್ಗೆ ಎಲುಬಿಲ್ಲದ ನಾಲಿಗೆ ಹರಿಯಬಿಟ್ಟು, ಮುಖ್ಯಮಂತ್ರಿ
ಅವರಿಂದಲೂ ಮಂಗಳಾರತಿ ಮಾಡಿಸಿಕೊಂಡಿ
ದ್ದಾರಲ್ಲ, ಅದೂ ಬಂದಿದೆ ನೋಡು’.

‘ನಾಲಿಗೇನೆ ರೀ ಎಲ್ಲದಕ್ಕೂ ಮೂಲ, ಮಾತಿಗೂ- ಚಪಲಕ್ಕೂ... ಈಗ  ಮಾಂಗಲ್ಯ ಮಹಾತ್ಮೆ ಕೇಳಿ. ಬೀಗರ ಊಟೋಪಚಾರಕ್ಕೆ ಮೂಳೆ ಬಡಿಸಿಲ್ಲ ಅಂತ ಹುಡುಗನ ಕಡೆಯವರು ಗಲಾಟೆ ಮಾಡಿ, ಪೊಲೀಸರ ಆಗಮನವಾಗಿ ಪರಿಸ್ಥಿತಿ ಹತೋಟಿಗೆ ಬಂತಂತೆ’.

‘ಹೆಣ್ಣು ಕೊಟ್ಟ ಮಾವನ ಮನೆಗೆ ಹೋಗುವ ಬದಲಾಗಿ ಕೇಸು, ಅರೆಸ್ಟು ಅಂತೆಲ್ಲ ಪೊಲೀಸ್‌ ‘ಮಾವ’ನ ಮನೆ ಸೇರುವಂತೆ ಆಗಲಿಲ್ಲವಲ್ಲ’.

‘ಮದುವೇನೇ ಬಂಧನ ಅಲ್ಲವೇ?! ಮತ್ತಿನ್ನೇನು ಬಂಧನ?’.

‘ಅದ್ಸರಿ... ಕಾರು, ಸೈಟು, ಫ್ಲ್ಯಾಟು, ದುಡ್ಡು, ಚಿನ್ನ ಕೊಟ್ಟಿಲ್ಲ ಅಂತೆಲ್ಲ ಮದುವೆ ಮುರಿದು ಬೀಳೋದು ನೋಡಿದೀವಿ. ಸಾಮಾನ್ಯವಾಗಿ ಅಂದವಾದ ಹುಡುಗಿಯ ‘ಬೋನ್’ಗೆ ಹುಡುಗ ಬೀಳೋದು ಸಹಜ. ಈ ಕೇಸಲ್ಲಿ ‘ಬೋನೇ’ ಸಂಬಂಧಾನ ಬೀಳಿಸಿಬಿಟ್ಟಿದೆ’.

‘ರಕ್ತ ಸಂಬಂಧದಲ್ಲಿ ಮದುವೆ ಮಾಡಿಕೊಳ್ಳೋದನ್ನ ವಿಜ್ಞಾನ ಒಪ್ಪದೆ ಇರೋ ಬಗ್ಗೆ ಕೇಳಿದ್ದೆ, ಆದರೆ ಈಗ ಮೂಳೆ ಸಂಬಂಧದ ಬಗ್ಗೆಯೂ ಎಚ್ಚರ ವಹಿಸಬೇಕಾಗಿದೆ’.

‘ಮಾನವಾ, ದೇಹವು ಮೂಳೆ ಮಾಂಸದ ತಡಿಕೆ’- ಎಫ್.ಎಂ.ನಲ್ಲಿ ‘ಭಕ್ತ ಕುಂಬಾರ’ ಚಿತ್ರದ ಹಾಡು ಜೋರಾಗಿ ಕೇಳಿಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.